ಜೆಡಿಎಸ್ ಅಧಿಕಾರಕ್ಕೆ ಬಂದರೆ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿ: ಕುಮಾರಸ್ವಾಮಿ

Update: 2018-02-15 18:34 GMT

ಬಾಗೇಪಲ್ಲಿ,ಫೆ.15: ರಾಜ್ಯದಲ್ಲಿ ಜೆಡಿಎಸ್ ಪಕ್ಷ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದರೆ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ರಾಜಾದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರೈತರ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ 24 ಗಂಟೆಯಲ್ಲಿ ರೈತರ ಸು.51 ಸಾವಿರ ಕೋಟಿ ರೂ.ಗಳನ್ನು ಮನ್ನಾ ಮಾಡುತ್ತೇನೆ, ರಾಜ್ಯದಲ್ಲಿ ಸುಮಾರು 3500ಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುವಂತಹ ತೀರ್ಮಾನವನ್ನು ತೆಗೆದುಕೊಳ್ಳಲು ಮೀನಾ-ಮೇಷ ಎಣಿಸುತ್ತಿವೆ ಎಂದು ಸರ್ಕಾರಗಳ ವಿರುದ್ದ ವಾಗ್ದಾಳಿ ನಡೆಸಿದರು.

2017ರ ಜೂನ್ ತಿಂಗಳಲ್ಲಿ ನಮ್ಮ ಒತ್ತಡಗಳಿಗೆ ಮಣಿದ ರಾಜ್ಯ ಸರ್ಕಾರ 6800ಕೋಟಿ ರೂ.ಗಳ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದೆ. 22ಲಕ್ಷ ರೈತ ಕುಟುಂಬಗಳಿಗೆ ತಲಾ 50 ಸಾವಿರ ರೂ.ಗಳಂತೆ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿ 8 ತಿಂಗಳು ಕಳೆದರೂ ಇದುವರೆಗೂ ಒಂದು ನಯಾಪೈಸೆ ಕೂಡಾ ಬಿಡುಗಡೆಗೊಳಿಸಿಲ್ಲ. ಆದರೆ ಇತ್ತೀಚಿಗೆ ರಾಜ್ಯಕ್ಕೆ ಬೇಟಿ ನೀಡಿದ್ದ ರಾಹುಲ್ ಗಾಂಧಿಯವರು ಇನ್ನೂ 2ಸಾವಿರ ಕೋಟಿ ರೂ.ಗಳ ಸಾಲಮನ್ನಾ ಘೋಷಣೆ ಮಾಡುವಂತೆ ತಿಳಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತ ಎಂದು ವ್ಯಂಗ್ಯವಾಡಿದ ಅವರು, ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕ ಬಂದರೆ ಸುಮಾರು 51 ಸಾವಿರ ಕೋಟಿ ರೂ.ಗಳ ರೈತರ ಸಾಲ ಮನ್ನಾ ಮಾಡುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಎತ್ತಿನ ಹೊಳೆ ಯೋಜನೆಯನ್ನು ರದ್ದುಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಪಪ್ರಚಾರ ಮಾಡುತ್ತಿದ್ದಾರೆ. ಎತ್ತಿನಹೊಳೆ ಯೋಜನೆಗೆ ನನ್ನ ವಿರೋಧವಿಲ್ಲ, ನಾನು ಎಲ್ಲಿಯೂ ಸಹ ಈ ಯೋಜನೆಯನ್ನು ರದ್ದುಗೊಳಿಸುವುದಾಗಿ ಹೇಳಿಕೆ ನೀಡಿಲ್ಲ. ಈ ಯೋಜನೆಯ ಹೆಸರಿನಲ್ಲಿ ಮೋಸ ಮಾಡಿ ಹಣವನ್ನು ಲೂಟಿ ಮಾಡುತ್ತಿರುವುದನ್ನು ರದ್ದುಗೊಳಿಸುತ್ತೇನೆ ಎಂಬುದಾಗಿ ಹೇಳಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

2018ರ ಚುನಾವಣೆಯಲ್ಲಿ ಅತಂತ್ರವಲ್ಲದ ಸ್ವತಂತ್ರ ಸರ್ಕಾರ ಬಂದರೆ ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಒದಗಿಸಲು ಬದ್ದ ಎಂದ ಅವರು, ಈ ಕ್ಷೇತ್ರದ ಶಾಸಕರು ಈ ಹಿಂದಿನ ಚುನಾವಣೆಯ ಸಮಯದಲ್ಲಿ ಜೆಡಿಎಸ್ ಪಕ್ಷದಿಂದ ನೀವು ಸ್ಪಧಿಸಬೇಕೆಂದು ತಿಳಿಸಿದಾಗ ಕಾಲಾವಕಾಶ ಬೇಕೆಂದು ಹೇಳಿ, ನಿಮ್ಮ ಪಕ್ಷದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಡಿ, ನಾನು ಪಕ್ಷೇತರರಾಗಿ ಗೆದ್ದ ನಂತರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ತಿಳಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಹರಿನಾಥರೆಡ್ಡಿ ರವರಿಗೆ ಟಿಕೆಟ್ ಖಚಿತಪಡಿಸಿದ ನಂತರ ನಾನು ಜೆಡಿಎಸ್ ಪಕ್ಷದಲ್ಲಿ ಸ್ಪರ್ಧಿಸುತ್ತೇನೆಂದು ಹಾಲಿ ಶಾಸಕರು ಕೇಳಿದಾಗ ಸಮಯ ಮೀರಿಹೋಗಿತ್ತು. ಇಂತಹ ಸಮಯ ಸಾಧಕ ರಾಜಕಾರಣಿಗಳು ಬೇಕೇ? ನಿಮ್ಮ ಜೊತೆ ಸದಾ ಇರುವ ರಾಜಕಾರಣಿಗಳು ಬೇಕೇ? ನೀವೇ ತೀರ್ಮಾನಿಸಿ ಎಂದರು. 

ಬಹುತೇಕ ಎಲ್ಲಾ ರಾಜಕೀಯ  ಪಕ್ಷದಲ್ಲಿ ಹಲವಾರು ಆಕಾಂಕ್ಷಿಗಳು ಇದ್ದೇ ಇರುತ್ತಾರೆ. ಅದರಂತೆ ನಮ್ಮ ಪಕ್ಷದಲ್ಲಿಯೂ ಸಹ 3-4 ಜನ ಆಕಾಂಕ್ಷಿಗಳಿದ್ದಾರೆ. ಎಲ್ಲಾ ಗೊಂದಲಗಳು ನಿವಾರಣೆಯಾದ ನಂತರ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡುವುದಾಗಿ ತಿಳಿಸಿದ ಅವರು, ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ರಾಜಣ್ಣ, ವಿಧಾನ ಪರಿಷತ್ ಸದಸ್ಯ ತೂಪ್ಪಳ್ಳಿ ಚೌಡರೆಡ್ಡಿ, ಮಾಜಿ ಶಾಸಕ ಬಚ್ಚೇಗೌಡ, ಡಿ,ಜೆ.ನಾಗರಾಜರೆಡ್ಡಿ ಈ ಭಾಗದ ಉಸ್ತವಾರಿ ಕೋನಪರೆಡ್ಡಿ, ತಾಲೂಕು ಅಧ್ಯಕ್ಷ ಹರಿನಾಥರೆಡ್ಡಿ,ಜೆಪಿ ಚಂದ್ರಶೇಖರರೆಡ್ಡಿ,ಪ್ರಭಾ ನಾರಾಯಣಗೌಡ, ಗೊಟ್ಟಗೆಮಂಜು, ತಾ.ಪಂ ಸದಸ್ಯ ಕೆ.ವೆಂಕಟೇಶ್, ಅಲ್ಪಸಂಖ್ಯಾತರ ಅಧ್ಯಕ್ಷ ಮಹಮ್ಮದ್ ನೂರುಲ್ಲಾ, ಮಂಜುನಾಥರೆಡ್ಡಿ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News