ನೂತನ ನೋಕಿಯಾ 6 ಸ್ಮಾರ್ಟ್‌ಫೋನ್ ಬಿಡುಗಡೆ
ನೋಕಿಯಾ ತನ್ನ ಇನ್ನೊಂದು ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಇದು ಅದರ ಹಾಟ್‌ಸೆಲ್ಲರ್ ನೋಕಿಯಾ 6ರ ಮೇಲ್ದರ್ಜೆ ಗೇರಿಸಿದ ಆವೃತ್ತಿಯಾಗಿದೆ.
ಹೊಸ ನೋಕಿಯಾವನ್ನು ಫ್ಲಿಪ್‌ಕಾರ್ಟ್ ಮೂಲಕ ಮಾತ್ರ ಮಾರಾಟ ಮಾಡಲು ಎಚ್‌ಎಂಡಿ ಗ್ಲೋಬಲ್ ನಿರ್ಧರಿಸಿದೆ. ನೋಕಿಯಾ 6ರ ಹೊಸ ಆವೃತ್ತಿಯಲ್ಲಿ ರ್ಯಾಮ್ ಮತ್ತು ಇಂಟರ್ನಲ್ ಮೆಮರಿಯನ್ನು ಹೆಚ್ಚಿಸಲಾಗಿದೆ.
ನೂತನ ಫೋನ್ ಫೆ.20ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ ಮತ್ತು ಆರಂಭಿಕ ರಿಯಾಯಿತಿಯಿಂದಾಗಿ ಹೆಚ್ಚಿನವರನ್ನು ಆಕರ್ಷಿಸಬಹುದು.
4ಜಿಬಿ ರ್ಯಾಮ್ ಮತ್ತು 64 ಜಿಬಿ ಇಂಟರ್ನಲ್ ಮೆಮೊರಿ ಹೊಂದಿರುವ ಹೊಸ ನೋಕಿಯಾ 6ನ್ನು ಖರೀದಿಸಲು ಬಯಸುವವರು ಫ್ಲಿಪ್‌ಕಾರ್ಟ್‌ನ ನೋಕಿಯಾ 6(4ಜಿಬಿ) ಪೇಜ್‌ಗೆ ಹೋಗಿ ‘ನೋಟಿಫೈ ಮಿ’ ಲಿಸ್ಟ್‌ನಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಅಂದ ಹಾಗೆ ನೋಕಿಯಾ 6 ಮ್ಯಾಟೆ ಬ್ಲ್ಯಾಕ್ ಬಣ್ಣದಲ್ಲಿ ಮಾತ್ರ ಲಭ್ಯವಾಗಲಿದೆ.
ನೋಕಿಯಾ 6ರ ಮೂಲಬೆಲೆಯನ್ನು 18,499 ರೂ.ಗೆ ನಿಗದಿಗೊಳಿಸಲಾಗಿದ್ದು, ಫ್ಲಿಪ್‌ಕಾರ್ಟ್ 1500 ರೂ.ಗಳ ರಿಯಾಯಿತಿಯನ್ನು ನೀಡಲಿದೆ. ಹೀಗಾಗಿ ಈ ಫೋನ್ 16,999 ರೂ.ಗೆ ಲಭ್ಯವಾಗಲಿದೆ. ಇದರ ಜೊತೆಗೆ ಗ್ರಾಹಕರು 2,000 ರೂ.ಗಳ ವಿನಿಮಯ ರಿಯಾಯಿತಿಯನ್ನೂ ಪಡೆಯಬಹುದು. 3ಜಿಬಿ ರ್ಯಾಮ್‌ನೊಂದಿಗಿ ನೋಕಿಯಾ 6 ಈಗ ಫ್ಲಿಪ್‌ಕಾರ್ಟ್‌ನಲ್ಲಿ 14,999 ರೂ.ಗೆ ದೊರೆಯುತ್ತಿದೆ.
ವೈಶಿಷ್ಟಗಳು: 5.5 ಇಂಚ್ ಫುಲ್ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ, ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗಾಜು ಹೊಂದಿರುವ ಹೊಸ ನೋಕಿಯಾ 6 ಆ್ಯಂಡ್ರಾಯ್ಡ್ 7.1.1 ನೋಗಟ್ ಮತ್ತು ಒಕ್ಟಾ ಕೋರ್ 1.4 ಗಿಗಾಹರ್ಟ್ಜ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 430 ಬೆಂಬಲ ಹೊಂದಿದೆ. ಸಾಧನದಲ್ಲಿಯ ಮೆಮರಿಯನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 128 ಜಿಬಿಗೆ ವಿಸ್ತರಿಸಬಹುದಾಗಿದೆ. ಹಿಂಬದಿಯಲ್ಲಿ 16 ಎಂಪಿ ಮತ್ತು ಮುಂಬದಿಯಲ್ಲಿ 8 ಎಂಪಿ ಕ್ಯಾಮರಾಗಳನ್ನು ಹೊಂದಿದೆ.