ಹಳತಾಗಿಹೋಗಿರುವ ಟೆಂಪ್ಲೇಟ್ ಮತ್ತು ಮ್ಯಾಕ್ರೋಗಳು:ಕನ್ನಡಕ್ಕೆ ಕೊನೆಗೊಂಡ ಸುತ್ತುಬಳಸು ಮಾರ್ಗಗಳು
ಕನ್ನಡ ಲೇಖಕರ ಹೆಸರು ಮತ್ತಿತರ ವಿವರಗಳ ಪಟ್ಟಿಯನ್ನು ಹಿರಿಯ ಮಿತ್ರರೊಬ್ಬರು ನುಡಿ ಫಾಂಟ್ ಬಳಸಿ ಮೈಕ್ರೋಸಾಫ್ಟ್ ಎಕ್ಸೆಲ್‌ನಲ್ಲಿ ಟೈಪ್ ಮಾಡಿದ್ದರು. ಹೆಸರುಗಳನ್ನು ಅಕಾರಾದಿಯಲ್ಲಿ ವಿಂಗಡಿಸಲು ಸಹಾಯವನ್ನು ಕೋರಿದರು. ನುಡಿಯಲ್ಲಿ ಇರುವ ಟೆಂಪ್ಲೇಟ್‌ನ್ನು ಬಳಸಿ ವಿಂಗಡಣೆಯನ್ನು ಮಾಡಿಕೊಳ್ಳುವ ಕ್ರಮವನ್ನು ದೂರವಾಣಿಯಲ್ಲಿಯೇ ವಿವರಿಸಲಾಯಿತು. ಹಲವು ಕಸರತ್ತುಗಳನ್ನು ಮಾಡಿದ ಅವರು ಕಾರ್ಯಸಾಧನೆಯಲ್ಲಿ ವಿಫಲರಾದರು. ವೈಫಲ್ಯದ ಕಾರಣಗಳನ್ನು ತಿಳಿಯಲು ಅವರಿಗೆ ಹಲವು ಪ್ರಶ್ನೆಗಳನ್ನು ಹಾಕಲಾಯಿತು. ಟೈಪ್ ಮಾಡಲು ಬಳಸಿರುವ ಫಾಂಟ್‌ನ ಹೆಸರೇನು? ಎಂ.ಎಸ್.ಆಫೀಸ್‌ನ ಆವೃತ್ತಿ (ವರ್ಷನ್) ಯಾವುದು? 'ನುಡಿ' ತಂತ್ರಾಂಶದ ಆವೃತ್ತಿ ಯಾವುದು? ನೀವು ಬಳಸುತ್ತಿರುವ ವಿಂಡೋಸ್ ಆಪರೇಟಿಂಗ್ ಸಿಸ್ಟಂ 32 'ಬಿಟ್'ನದೋ ಅಥವಾ 64 'ಬಿಟ್'ನದೋ?
ನಿವೃತ್ತ ಪ್ರಾಂಶುಪಾಲರಾದ ಮಿತ್ರರು ಪ್ರಶ್ನೆಗಳ ಸರಮಾಲೆ ಕೇಳಿ ಕಕ್ಕಾಬಿಕ್ಕಿಯಾದರು. ಫಾಂಟ್‌ನ ಹೆಸರು ಮಾತ್ರವಷ್ಟೇ ಗೊತ್ತು ಎಂದ ಅವರು ಮಾಹಿತಿ ವಿಂಗಡಣೆಯ ವೈಫಲ್ಯವನ್ನು ತಿಳಿಯಲು ಇಷ್ಟೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕೇ? ಎಂದು ಮರುಪ್ರಶ್ನೆಯನ್ನು ಹಾಕಿದರು. ಆಸ್ಕಿ-ಫಾಂಟುಗಳ ವಿಷಯದಲ್ಲಿ ಕನ್ನಡಕ್ಕೆ ಇರುವುದು ಹಲವು ಸ್ತರಗಳ ತಂತ್ರಾಂಶಗಳ ವ್ಯವಸ್ಥೆ. ಯಾವುದಾದರೊಂದು ಸ್ತರದಲ್ಲಿ ಸಮಸ್ಯೆ ಇದ್ದರೆ ಕೆಲಸ ಕೈಗೂಡುವುದಿಲ್ಲ. ಸಮಸ್ಯೆಯನ್ನು ವಿಶ್ಲೇಷಿಸಿದಾಗ ಮಾತ್ರವೇ ಪರಿಹಾರ ಗೋಚರಿಸುವುದಾಗಿ ಅವರಿಗೆ ಮನವರಿಕೆ ಮಾಡಲಾಯಿತು. ಕೊನೆಗೆ, ಅವರು ಸೃಷ್ಟಿಸಿದ್ದ ಎಕ್ಸೆಲ್ ಕಡತವನ್ನು ಮೇಯ್ಲೆ ಮೂಲಕ ತರಿಸಿಕೊಂಡು, ಪಠ್ಯದ ಫಾಂಟ್‌ನ್ನು ಯುನಿಕೋಡ್‌ಗೆ ಪರಿವರ್ತಿಸಿ, ಅಕಾರಾದಿ ವಿಂಗಡಿಸಿ ಮತ್ತೆ ಮೇಯ್ಲೆ ಮೂಲಕ ವಾಪಸ್ ಕಳುಹಿಸಲಾಯಿತು.
ಎಂ.ಎಸ್. ಎಕ್ಸೆಲ್‌ನ ಎಲ್ಲಾ ಸವಲತ್ತುಗಳನ್ನು (ಫೀಚರ್ಸ್) ಬಹು ಜಾಣ್ಮೆಯಿಂದ ಕನ್ನಡದಲ್ಲಿಯೂ ಪಡೆಯಲು ಎಂ.ಎಸ್.ಎಕ್ಸೆಲ್ ಬಳಕೆಯಲ್ಲಿ ಪರಿಣಿತಿ ಆವಶ್ಯಕ. ಸ್ಪ್ರೆಡ್‌ಶೀಟ್ ತಂತ್ರಾಂಶದ ಎಲ್ಲಾ ಉಪಯೋಗಗಳನ್ನು ಕನ್ನಡ ಲಿಪಿಯಲ್ಲಿ ಪಡೆಯಲು ಕಂಪ್ಯೂಟರಿನಲ್ಲಿ ಅಳವಡಿಸಲಾಗಿರುವ ಕನ್ನಡ ಲಿಪಿವ್ಯವಸ್ಥೆಯಲ್ಲಿ ಸೂಕ್ತ ರೀತಿಯ ಆಯ್ಕೆಗಳನ್ನು ಮಾಡಿ ಟೈಪ್‌ಮಾಡುವ ಜಾಣ್ಮೆಯೂ ಅಗತ್ಯ. ತಾಂತ್ರಿಕವಾಗಿ ಸಮರ್ಥವಾದ ಕನ್ನಡ ಲಿಪಿವ್ಯವಸ್ಥೆ ಕಂಪ್ಯೂಟರುಗಳಲ್ಲಿ ಅಳವಡಿಕೆ, ಅದರ ಬಳಕೆಯ ಪೂರ್ಣ ಪರಿಜ್ಞಾನ ಮತ್ತು ಎಕ್ಸೆಲ್ ಬಳಕೆಯಲ್ಲಿ ಅನುಭವ ಇದ್ದಾಗ ಮಾತ್ರ ಎಕ್ಸೆಲ್‌ನಲ್ಲಿ ಕನ್ನಡದ ಬಳಕೆ ಯಶಸ್ವಿಯಾಗುತ್ತದೆ. ಇವೆಲ್ಲವೂ ಆಸ್ಕಿ-ಎನ್‌ಕೋಡಿಂಗ್ ಉಳ್ಳ ಕನ್ನಡ ಪಠ್ಯವನ್ನು ಸೃಜಿಸುವ ಕನ್ನಡ ಲಿಪಿವ್ಯವಸ್ಥೆಗಳಿಗೆ ಅನ್ವಯಿಸುತ್ತವೆ (ನುಡಿ, ಬರಹ, ಕುವೆಂಪು ತಂತ್ರಾಂಶ ಇತ್ಯಾದಿ) ಎಂ.ಎಸ್.ಎಕ್ಸೆಲ್‌ನಲ್ಲಿ ಕನ್ನಡದ ಫಾಂಟ್ ನಿಗದಿಪಡಿಸಿ ಟೈಪ್‌ಮಾಡುವ ಸೌಲಭ್ಯವಿದೆ. ಆದರೆ, ಸಾರ್ಟಿಂಗ್ (ವಿಂಗಡಣೆ) ಮಾಡಲು ಪ್ರತ್ಯೇಕ ವ್ಯವಸ್ಥೆಯನ್ನು ಬಳಸಬೇಕಾಗುತ್ತದೆ. 'ನುಡಿ' ತಂತ್ರಾಂಶವು ಕೆಲವು ಮ್ಯಾಕ್ರೋ ರೂಪದ ಟೆಂಪ್ಲೇಟ್‌ನ್ನು ಒದಗಿಸುತ್ತದೆ. ಅದನ್ನು ಆಯ್ದುಕೊಂಡು 'ನುಡಿ' ಬಳಸಿ ಎಕ್ಸೆಲ್‌ನಲ್ಲಿ ಸಿದ್ಧಪಡಿಸಿದ ಮಾಹಿತಿಯನ್ನು ಕನ್ನಡದ ಅಕ್ಷರಾನುಕ್ರಮಣಿಕೆಯಲ್ಲಿ ವಿಂಗಡಿಸಬಹುದು. ಈ ಮ್ಯಾಕ್ರೋ ಬಳಸಿ ಕಾರ್ಯಸಾಧಿಸಲು 'ಡ್ರಾವಿಡ ಪ್ರಾಣಾಯಾಮವನ್ನೇ ಮಾಡಬೇಕಾಗುತ್ತದೆ ಎಂಬುದು ಅತಿಶಯೋಕ್ತಿಯಲ್ಲ. ಮೊದಲು, ಮ್ಯಾಕ್ರೋ ಬಳಕೆಯ ಅನುಮತಿಯನ್ನು ಸಕ್ರಿಯಗೊಳಿಸಿಕೊಳ್ಳಬೇಕು. ವಿಂಗಡಿಸಬೇಕಾದ ಮಾಹಿತಿಗಳನ್ನು ಎಚ್ಚರಿಕೆಯಿಂದ ಆಯ್ದುಕೊಳ್ಳಬೇಕು. ಯಾವ ಕಾಲಂ ಆಧರಿಸಿ ಮಾಹಿತಿ ವಿಂಗಡಣೆ ಮಾಡಬೇಕು ಮತ್ತು ಮೊದಲ ಸಾಲು ಶೀರ್ಷಿಕೆಯೇ ಅಲ್ಲವೇ ಎಂದು ಸೂಕ್ತ ಆಯ್ಕೆಗಳನ್ನು ಕ್ಲಿಕ್‌ಮಾಡಿ ತಿಳಿಸಬೇಕು. ಇವುಗಳಲ್ಲಿ ಏನಾದರೊಂದು ವ್ಯತ್ಯಾಸವಾದರೂ ಸಹ ಹಲವು ತೊಡಕುಗಳ ಸಂದೇಶಗಳು ಪ್ರಕಟವಾಗುತ್ತವೆ. ತೊಡಕಿನ ಸಂದೇಶಗಳು ಹಲವು ಸಂದರ್ಭಗಳನ್ನು ಆಧರಿಸಿರುತ್ತವೆ. ನುಡಿ 4.0 ಆವೃತ್ತಿಯ ಟೆಂಪ್ಲೇಟ್‌ನ್ನು ಹಳೆಯ ಆವೃತ್ತಿಯ (32 ಬಿಟ್) ವಿಂಡೋಸ್, ಎಂಎಸ್.ಆಫೀಸ್‌ಗಳಲ್ಲಿ ಬಳಸಬಹುದು. 64 ಬಿಟ್‌ಗಳ ಆವೃತ್ತಿಗಳಲ್ಲಿ ನುಡಿ ಟೆಂಪ್ಲೇಟ್ ಹೆಚ್ಚಿನ ಸಂದರ್ಭಗಳಲ್ಲಿ ವಿಫಲವಾಗುತ್ತದೆ. ನುಡಿಯ 64ಬಿಟ್‌ನ ಆವೃತ್ತಿಯು ಬಳಕೆಗೆ ಲಭ್ಯವಿಲ್ಲ. ''ನುಡಿ 64 ಬಿಟ್ ಆವೃತ್ತಿ ಸದ್ಯಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ'' ಎಂದು ಕನ್ನಡ ಗಣಕ ಪರಿಷತ್ತಿನ ಜಾಲತಾಣವು ಒಂದು ವರ್ಷದಿಂದಲೂ ಹೇಳುತ್ತಲೇ ಇದೆ. ತಂತ್ರಾಂಶಗಳ ವಿಷಯದಲ್ಲಿ ಕನ್ನಡಕ್ಕೆ ಹಲವು ಬೈಪಾಸ್ ರಸ್ತೆಗಳನ್ನು ನಮ್ಮ ತಂತ್ರಜ್ಞರು ರೂಪಿಸಿದ್ದರು. ಇಂದು ಕೆಲವು ನಿರುಪಯುಕ್ತಗೊಂಡಿವೆ. ಕೆಲವನ್ನು ಮುಚ್ಚಲಾಗಿದೆ. ಮತ್ತೆ ಕೆಲವು ಕೊನೆಗೊಂಡು ರಾಜಮಾರ್ಗಕ್ಕೆ ಸೇರ್ಪಡೆಗೊಂಡಿವೆ. ಕನ್ನಡಕ್ಕೆ ಯೂನಿಕೋಡ್ ಎಂಬ ರಾಜಮಾರ್ಗ ದೊರೆತ ಮೇಲೆ ನಾವೇ ಸೃಷ್ಟಿಸಿಕೊಂಡಿರುವ ಒಳಹಾದಿಗಳು ಮತ್ತು ಬೈಪಾಸ್ ರಸ್ತೆಗಳ ಆವಶ್ಯಕತೆ ಇಲ್ಲ. ರಾಜಮಾರ್ಗದ ಬಳಕೆ ತಿಳಿಯದ ಮತ್ತು ಹಳೆಯ ಬೈಪಾಸ್ ರಸ್ತೆಗಳು ಮುಚ್ಚಿಹೋಗಿರುವುದು ತಿಳಿಯದ ಕನ್ನಡ ಕಂಪ್ಯೂಟರ್ ಬಳಕೆದಾರರ ಪರದಾಟ ಇನ್ನೂ ನಿಂತಿಲ್ಲ.
ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರ ಆನ್ವಯಿಕ ತಂತ್ರಾಂಶಗಳಿಗೆ ಹೊರಗಿನಿಂದ ಅಳವಡಿಸಿಕೊಳ್ಳಬಹುದಾದ, ಕನ್ನಡದ ತಂತ್ರಾಂಶ ಪರಿಕರಗಳನ್ನು ರಾಷ್ಟ್ರೀಯ ಮತ್ತು ಸ್ಥಳೀಯ ತಂತ್ರಾಂಶ ತಯಾರಕರು ಸಿದ್ಧಪಡಿಸಿದ್ದರು. ಇಂಗ್ಲಿಷ್‌ನಲ್ಲಿ ಮಾಡಬಹುದಾದ ಎಲ್ಲಾ ಕೆಲಸಗಳನ್ನು ಕನ್ನಡದಲ್ಲಿಯೂ ನಿರ್ವಹಿಸಲು ಹಲವಾರು ಬಳಸು ಮಾರ್ಗಗಳನ್ನು ಅನ್ವೇಷಿಸಲಾಗಿತ್ತು. ಹಲವಾರು ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಲಾಗಿತ್ತು. ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಒಂದು ಟೆಂಪ್ಲೇಟ್‌ನ್ನು ರಚಿಸಿ, ಪ್ಲಗ್‌ಇನ್, ಅ್ಯಡ್-ಇನ್ಸ್ ರೂಪದಲ್ಲಿ ಅವುಗಳನ್ನು ಸೇರ್ಪಡೆಮಾಡಿಕೊಂಡು ಹಲವು ಉದ್ದೇಶಗಳಿಗೆ ಬಳಸಲಾಗುತ್ತಿದೆ. ಮೈಕ್ರೋಸಾಫ್ಟ್ ಎಕ್ಸೆಲ್‌ನಲ್ಲಿ ಅವುಗಳನ್ನು ಮ್ಯಾಕ್ರೋಗಳು ಎಂದು ಕರೆಯಲಾಗಿದೆ. ಎಂ.ಎಸ್.ವರ್ಡ್ ತಂತ್ರಾಂಶದಲ್ಲಿ ಇಂಗ್ಲಿಷ್‌ಗಾಗಿ ನೀಡಲಾಗಿರುವ ವ್ಯವಸ್ಥೆಗಳನ್ನು ಬೈಪಾಸ್ ಮಾಡಿ ನಮ್ಮದೇ ರೀತಿನೀತಿಗಳು ಮತ್ತು ಕ್ರಮಗಳನ್ನು ವ್ಯಾಖ್ಯಾನಿಸಲು ಅವಕಾಶವಿದೆ. 'ನುಡಿ' ತಂತ್ರಾಂಶದಲ್ಲಿ ತಜ್ಞರು ಕನ್ನಡದ ಒಂದು ಟೆಂಪ್ಲೇಟ್ ಸೃಷ್ಟಿಸಿ ಅಳವಡಿಸಿದ್ದಾರೆ. ಅದು ಕನ್ನಡದ ಬಳಕೆಯ ಸಂದರ್ಭಕ್ಕೆ ಅಗತ್ಯವಿರುವ ಬಹುತೇಕ ಸೌಲಭ್ಯಗಳನ್ನು ನೀಡಿದೆ. 'ಕನ್ನಡ ಟೆಂಪ್ಲೇಟ್' ಎಂದರೆ, ಬಳಸಲು ಒಂದು ಫಾಂಟ್‌ನ ಆಯ್ಕೆ, ಮಾಹಿತಿ ವಿಂಗಡಣೆಯ ಕ್ರಮ, ಪದಪರೀಕ್ಷೆಗಾಗಿ ಪ್ರತ್ಯೇಕ ಪದಕೋಶದ ನಿಗದಿ, ಟೈಪ್‌ಮಾಡುತ್ತಿದ್ದಂತೆಯೇ ತಪ್ಪಾದ ಪದಗಳನ್ನು ತಾನಾಗಿಯೇ ಸರಿಪಡಿಸಿಕೊಳ್ಳುವ 'ಆಟೋಕರೆಕ್ಷನ್' ಸೌಕರ್ಯ ಇತ್ಯಾದಿ ಸವಲತ್ತುಗಳನ್ನು ನಮ್ಮ ರೀತಿಯಲ್ಲಿಯೇ ನಾವೇ (ತಂತ್ರಜ್ಞರು) ವ್ಯಾಖ್ಯಾನಿಸಿಕೊಳ್ಳಬಹುದಾದ ಒಂದು ವ್ಯವಸ್ಥೆ.
'ನುಡಿ' ತಂತ್ರಾಂಶ ಅನುಸ್ಥಾಪನೆಯಾದ ಕಂಪ್ಯೂಟರಿನಲ್ಲಿ, ಎಂ.ಎಸ್.ವರ್ಡ್ ಅಪ್ಲಿಕೇಷನ್‌ನ್ನು ತೆರೆದು, 'ಮೈ ಟೆಂಪ್ಲೇಟ್ಸ್' ವಿಭಾಗದಲ್ಲಿ ದೊರೆಯುವ 'ಕನ್ನಡ ಎಂಬ ಹೆಸರಿನ ಟೆಂಪ್ಲೇಟ್‌ನ್ನು ಆಯ್ಕೆಮಾಡಿಕೊಂಡು ಹಲವು ಕನ್ನಡದ ಸವಲತ್ತುಗಳನ್ನು ಬಳಸಬಹುದು. ಇಲ್ಲಿ ಹಲವು ಒತ್ತುಗುಂಡಿಗಳಿವೆ. ಎಂ.ಎಸ್.ವರ್ಡ್‌ನ ಕೋಷ್ಟಕದಲ್ಲಿ (ಟೇಬಲ್) ಟೈಪಿಸಲಾದುದನ್ನು ಅಕಾರಾದಿಯಲ್ಲಿ ವಿಂಗಡಿಸಿಕೊಳ್ಳಲು; 'ಕನ್ನಡ-ಟೈಪಿಂಗ್' -ಸ್ಥಿತಿಯಿಂದ 'ಇಂಗ್ಲಿಷ್-ಟೈಪಿಂಗ್'-ಸ್ಥಿತಿಗೆ ತಕ್ಷಣದಲ್ಲಿಯೇ ಸ್ಥಿತ್ಯಂತರಗೊಳ್ಳಲು (ಟಾಗಲ್); ಪದ ಹುಡುಕಿ ಬದಲಿಸಲು; ಪದಪರೀಕ್ಷೆ ಮಾಡಲು ಮತ್ತು ಪದಕೋಶವನ್ನು ಬಳಸಲು - ಇಲ್ಲಿ ಒತ್ತುಗುಂಡಿಗಳಿವೆ. ಇವನ್ನು ಹಳೆಯ ಆವೃತ್ತಿಗಳಲ್ಲಿ ಮಾತ್ರವೇ ಬಳಸಬಹುದು. ಹೊಸ 64 ಬಿಟ್ ವಿಂಡೋಸ್ ಆವೃತ್ತಿಯಲ್ಲಿ (ಯೂನಿಕೋಡ್ ಪರಿವರ್ತನೆ ಸೌಲಭ್ಯವನ್ನು ಹೊರತುಪಡಿಸಿ) ಇವುಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಕನ್ನಡದ ಈ ಹಳೆಯ ಟೆಂಪ್ಲೇಟ್‌ಗಳು ಮತ್ತು ಮ್ಯಾಕ್ರೋಗಳನ್ನು ಬಳಸಲು ಪ್ರಯತ್ನಿಸಿದರೆ ಹಲವು ದೋಷಸಂದೇಶಗಳು ಪ್ರಕಟವಾಗುತ್ತವೆ. ಸಂದೇಶಗಳು ಇಂಗ್ಲಿಷ್‌ನಲ್ಲಿದ್ದರೆ ಅವುಗಳು 'ಅಪ್ಲಿಕೇಷನ್ ಸಾಫ್ಟ್ ವೇರ್'ನ ಸಂದೇಶಗಳಾಗಿರುತ್ತವೆ. ಸಂದೇಶಗಳು ಕನ್ನಡದಲ್ಲಿದ್ದರೆ, ಅವುಗಳು ಟೆಂಪ್ಲೇಟ್‌ನಿಂದ ಬಂದ ಸಂದೇಶಗಳಾಗಿರುತ್ತವೆ.
ಯೂನಿಕೋಡ್ ಫಾಂಟ್ ಬಳಕೆಗೆ ಬಂದ ನಂತರದಲ್ಲಿ ಕಂಪ್ಯೂಟರಿನಲ್ಲಿ ಮತ್ತು ಸ್ಮಾರ್ಟ್‌ಫೋನುಗಳಲ್ಲಿ ಕನ್ನಡಕ್ಕೆ ರಾಜಮಾರ್ಗ ದೊರೆತಿದೆ. ಆಸ್ನಿ-ಫಾಂಟ್ ಆಧಾರಿತ ಬಳಸು ದಾರಿಗಳನ್ನು ಇನ್ನು ಉಪಯೋಗಿಸಬೇಕಾಗಿಲ್ಲ. ಎಂ.ಎಸ್.ವರ್ಡ್ ಮತ್ತು ಎಕ್ಸೆಲ್ ನೀಡುವ ಸಾರ್ಟಿಂಗ್ ಸೌಲಭ್ಯವನ್ನು ನೇರವಾಗಿ ಬಳಸಬಹುದು. 'ಯೂನಿಕೋಡ್' ಅಕ್ಷರ ಸಂಕೇತೀಕರಣ ಹೊಂದಿರುವ ಕನ್ನಡವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದರಿಂದ 'ಆಪರೇಟಿಂಗ್ ಸಿಸ್ಟಂ ಮತ್ತು 'ಅಪ್ಲಿಕೇಷನ್ ಸಾಫ್ಟ್‌ವೇರ್' ಮಟ್ಟದಲ್ಲಿ ಎಲ್ಲ ರೀತಿಯಲ್ಲಿ ಸಮರ್ಥವಾಗಿ ಪ್ರತಿನಿಧಿಸಲ್ಪಟ್ಟಿದೆ. ಹೀಗಾಗಿ, ಈಗ ಕನ್ನಡ ಲಿಪಿತಂತ್ರಾಂಶಗಳ ಟೆಂಪ್ಲೇಟ್ ಮತ್ತು ಮ್ಯಾಕ್ರೋಗಳ ಹೊಸ ಆವೃತ್ತಿಗಳನ್ನು ರೂಪಿಸುವ ಅಗತ್ಯವೇ ಇಲ್ಲದಂತಾಗಿದೆ. ಆದರೂ, ಕನ್ನಡ ಗಣಕ ಪರಿಷತ್ತಿನ ಜಾಲತಾಣವು ''ನುಡಿ ಟೆಂಪ್ಲೇಟ್'' ತೊಂದರೆಗಳನ್ನು ನಿವಾರಿಸಲಾಗುವುದು ಎಂದು ಭರವಸೆಯನ್ನು ನೀಡುತ್ತಲೇ ಇದೆ.