ಆದಿತ್ಯನಾಥ್ ನಿವಾಸದ ಬಳಿಯ ಮರಕ್ಕೆ ಹತ್ತಿ ಆತ್ಮಹತ್ಯೆ ಮಾಡುತ್ತೇನೆಂದ ರೈತ!

Update: 2018-02-17 13:54 GMT

ಲಕ್ನೋ,ಫೆ.17: ಸಾಲದ ಶೂಲಕ್ಕೆ ಸಿಲುಕಿರುವ ಲಲಿತಪುರ ಜಿಲ್ಲೆಯ ರೈತನೋರ್ವ ಇಲ್ಲಿಯ ಅತ್ಯಂತ ಬಿಗುಭದ್ರತೆಯ ಕಾಳಿದಾಸ ಮಾರ್ಗದಲ್ಲಿನ ಮುಖ್ಯಮಂತ್ರಿ ಆದಿತ್ಯನಾಥ್ ಅವರ ನಿವಾಸದ ಬಳಿಯ ಮರವೊಂದನ್ನು ಹತ್ತಿ ಸಾಲಮನ್ನಾ ಮತ್ತು ಬಿಪಿಎಲ್ ಯೋಜನೆಯಡಿ ಮನೆಗಾಗಿ ಆಗ್ರಹಿಸಿ ಭಾರೀ ಗೊಂದಲವನ್ನು ಸೃಷ್ಟಿಸಿದ ಸಿನಿಮೀಯ ಘಟನೆ ಶುಕ್ರವಾರ ನಡೆದಿದೆ. ಪೊಲೀಸರು ತನ್ನನ್ನು ಕೆಳಗಿಳಿಸಲು ಪ್ರಯತ್ನಿಸಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನೂ ಆತ ಒಡ್ಡಿದ್ದ.

ಅಗ್ನಿಶಾಮಕ ದಳದ ಸಿಬ್ಬಂದಿ ಬತ್ಲಾಪುರ ಗ್ರಾಮದ ನಿವಾಸಿ ರಾಜಾರಾಮ್ನ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ನಾಲ್ಕು ಗಂಟೆಗಳ ಬಳಿಕ ಹೈಡ್ರಾಲಿಕ್ ಏಣಿಯ ಮೂಲಕ ಆತನನ್ನು ಮರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು.

ಬಿಪಿಎಲ್ ಯೋಜನೆಯಡಿ ಮನೆಯನ್ನು ಪಡೆಯಲು ಹಿರಿಯ ಸರಕಾರಿ ಅಧಿಕಾರಿ ಗಳ ಭೇಟಿಗಾಗಿ ತಾನು ಲಕ್ನೋಕ್ಕೆ ಬಂದಿದ್ದೆ. ಬಹಳಷ್ಟು ಪ್ರಯತ್ನಗಳ ಬಳಿಕವೂ ಕೆಳವರ್ಗದ ಸಿಬ್ಬಂದಿಗಳ ಉದಾಸೀನದಿಂದಾಗಿ ತನಗೆ ಮನೆಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಯಾಗುವಲ್ಲಿ ವೈಫಲ್ಯದ ಬಳಿಕ ತನಗೆ ಮರ ಹತ್ತಿ ಪ್ರತಿಭಟಿಸುವ ಹೊರತು ಅನ್ಯದಾರಿಯಿರಲಿಲ್ಲ ಎಂದು ರಾಜಾರಾಮ್ ಸುದ್ದಿಗಾರರಿಗೆ ತಿಳಿಸಿದ.

ತನಗೆ ಒಂದೂವರೆ ಲ.ರೂ.ಸಾಲವಿದೆ ಮತ್ತು ತನ್ನ ಕುಟುಂಬ ಕಷ್ಟದಲ್ಲಿ ಬೇಯುತ್ತಿದೆ ಎಂದ ಆತ, ಸಾಲವನ್ನು ಮನ್ನಾ ಮಾಡುವಂತೆ ಸರಕಾರವನ್ನು ಆಗ್ರಹಿಸಿದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News