ಜನ ಗಣ ಮನ: ಜನ ಮನಕ್ಕೊಬ್ಬಳೇ ಅಧಿನಾಯಕಿ!

Update: 2018-02-18 07:45 GMT

ಮತ್ತೊಂದು ಆ್ಯಕ್ಷನ್ ಚಿತ್ರದ ಮೂಲಕ ವಾಪಸಾಗಿದ್ದಾರೆ ಆಯಿಷಾ ಹಬೀಬ್. ಈ ಬಾರಿ ಅವರಿಗೆ ಆ್ಯಕ್ಷನ್ ಕಟ್ ಹೇಳಿರುವುದು ನವ ನಿರ್ದೇಶಕ ಶಶಿಕಾಂತ್ ಆನೇಕಲ್. ಹಾಗಂತ ಚಿತ್ರದಲ್ಲಿ ಯಾವುದೇ ಹೊಸತನ ನಿರೀಕ್ಷಿಸುವಂತಿಲ್ಲ.

 ಕತೆಯ ಆರಂಭದಲ್ಲೇ ಹಣಕ್ಕಾಗಿ ಒಂದು ಕುಟುಂಬವನ್ನೇ ನಾಶಮಾಡಬಲ್ಲ ಕ್ರೂರಿ ನೀಲಕಂಠನ ಪರಿಚಯ ಮಾಡಲಾಗುತ್ತದೆ. ಆತನ ಅನಾಚಾರಗಳ ಬಗ್ಗೆ ತಿಳಿದಿದ್ದರೂ ಸಾಕ್ಷ್ಯಗಳ ಕೊರತೆಯಿಂದ ಪೊಲೀಸರು ಕ್ರಮಕೈಗೊಳ್ಳಲು ಸಾಧ್ಯವಾಗಿರುವುದಿಲ್ಲ. ಮಾತ್ರವಲ್ಲ, ಆತನ ವಿರುದ್ಧ ಕಾರ್ಯಾಚರಣೆ ನಡೆಸುವುದಕ್ಕೂ ಪೊಲೀಸರು ಭಯಪಡುತ್ತಿರುತ್ತಾರೆ. ಇಂಥ ಸಂದರ್ಭದಲ್ಲಿ ಹೊಸದಾಗಿ ಬಂದು ಅದೇ ಹಳೆಯ ರೀತಿಯಲ್ಲಿ ಅಧಿಕಾರ ಸ್ವೀಕರಿಸುವವರೇ ಕಥಾ ನಾಯಕಿ ಝಾನ್ಸಿ ಐಪಿಎಸ್.

ಶ್ರೀನಿವಾಸ ಮೂರ್ತಿ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳ ಸಾವಿನ ಕುರಿತಾದ ಸಂದೇಹಗಳಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದ ತನಿಖೆಯನ್ನು ಮೊದಲು ಝಾನ್ಸಿ ಕೈಗೆತ್ತಿಕೊಳ್ಳುತ್ತಾಳೆ. ತನಿಖೆಯ ಪ್ರಕಾರ ಶ್ರೀನಿವಾಸ ಮೂರ್ತಿಯ ಹಿರಿಯ ಮಗಳು ಐಶ್ವರ್ಯಾಳನ್ನು ನೀಲಕಂಠನ ಪುತ್ರ ವಿಕ್ಕಿ ಯಾನೇ ವಿಕಾಸ್ ವಿವಾಹವಾಗಿರುತ್ತಾನೆ. ಆರಂಭದಲ್ಲಿ ಆತ ಐಶ್ವರ್ಯಾಳನ್ನು ಪ್ರೀತಿ ಯಿಂದಲೇ ನೋಡಿಕೊಳ್ಳುತ್ತಾನೆ. ಆದರೆ ಆತ ಶ್ರೀನಿವಾಸಮೂರ್ತಿಯ ಅಪಾರವಾದ ಆಸ್ತಿಗಾಗಿ ಈ ವಿವಾಹಕ್ಕೆ ಮುಂದಾಗಿರುತ್ತಾನೆ ಎಂದು ಆಮೇಲೆ ಅರಿವಾಗುತ್ತದೆ. ಆದರೆ ಎರಡನೇ ಪುತ್ರಿಯನ್ನು ವಿವಾಹವಾದರೆ ಮಾತ್ರ ಪೂರ್ತಿ ಆಸ್ತಿ ಕೈ ಸೇರುತ್ತದೆ ಎಂಬ ಸತ್ಯ ಅವರಿಗೆ ಅರಿವಾದಾಗ ಅದಕ್ಕೂ ಯೋಜನೆ ಹಾಕುತ್ತಾರೆ. ಇದರ ನಡುವೆ ಯಾರೆಲ್ಲ ಕೊಲೆಯಾಗುತ್ತಾರೆ? ಯಾರೆಲ್ಲ ನಾಪತ್ತೆಯಾಗುತ್ತಾರೆ? ಅವರನ್ನು ಝಾನ್ಸಿ ಪತ್ತೆ ಹಚ್ಚುವ ರೀತಿ ಯಾವುದು ಎಂದು ತಿಳಿಯಬೇಕಾದರೆ ನೀವು ಸಿನೆಮಾ ನೋಡಬೇಕು.

ಝಾನ್ಸಿಯ ವೃತ್ತಿ ಬದುಕನ್ನು ಬಿಟ್ಟರೆ ವೈಯಕ್ತಿಕ ಬದುಕನ್ನು ಕೂಡ ಸ್ವಲ್ಪಮಟ್ಟಿಗೆ ತೆರೆದಿರಿಸಲಾಗಿದೆ. ಝಾನ್ಸಿಯ ತಂದೆ ಮೇಜರ್ ಸುರೇಂದ್ರನಾಥ್. ಆಕೆಯ ನಿಶ್ಚಿತಾರ್ಥ ಕಾರ್ತಿಕ್‌ನೊಂದಿಗೆ ನಡೆದಿರುತ್ತದೆ. ವೃತ್ತಿಯಲ್ಲಿ ಗಂಭೀರವಾಗಿರುವ ಝಾನ್ಸಿ, ರಾತ್ರಿಯಾಗುತ್ತಲೇ ಭಾವೀ ಪತಿಯೊಂದಿಗೆ ಫೋನಲ್ಲಿ ಚೆಲ್ಲುಚೆಲ್ಲಾಗಿ ಮಾತನಾಡುತ್ತಾಳೆ! ಪೂರ್ತಿ ಚಿತ್ರ ಝಾನ್ಸಿ ಪಾತ್ರ ನಿರ್ವಹಿಸಿರುವ ಆಯಿಷಾ ಹೆಗಲಲ್ಲಿದೆ. ಆ್ಯಕ್ಷನ್ ಪಾತ್ರ ಮಾಡುವ ನಾಯಕಿಯರು ಅಪರೂಪವಾಗಿರುವಾಗ ನಟನೆ, ಸೌಂದರ್ಯ ಮತ್ತು ಆ್ಯಕ್ಷನ್ ಮೂಲಕ ಆಯಿಷಾ ಅಚ್ಚರಿ ಮೂಡಿಸುತ್ತಾರೆ.

ಲೇಡಿ ಬ್ರೂಸ್ಲಿ ಎಂಬ ತಮಗಿರುವ ಬಿರುದಿಗೆ ತಕ್ಕಂತೆ ತಮ್ಮ ಕಾಲನ್ನು ನೂರಿಪ್ಪತ್ತು ಡಿಗ್ರಿಗೆ ವಿಸ್ತರಿಸಿ ಹೊಡೆದಾಟ, ಸಾಹಸ ಸನ್ನಿವೇಶಗಳಲ್ಲಿ ಕಾಣಿಸಿದ್ದಾರೆ.ಝಾನ್ಸಿಯೊಂದಿಗೆ ನಿಶ್ಚಿತಾರ್ಥಗೊಂಡ ಹುಡುಗನಾಗಿ ನಟಿಸಿರುವ ನಿರಂಜನ್ ಕಂಠ, ಮ್ಯಾನರಿಸಂಗಳಲ್ಲಿ ಸುದೀಪ್‌ರನ್ನು ನೆನಪಿಸುತ್ತಾರೆ. ಆದರೆ ಝಾನ್ಸಿಯ ಬಳಿಕ ಚಿತ್ರವನ್ನು ಆವರಿಸಿ ನಿಲ್ಲುವುದು ರವಿಕಾಳೆ ನಿರ್ವಹಿಸಿರುವಂಥ ನೀಲಕಂಠ ಎಂಬ ಖಳನ ಪಾತ್ರ. ಶ್ರೀನಿವಾಸ ಮೂರ್ತಿಯಾಗಿ ರಾಮಕೃಷ್ಣ ಮತ್ತು ಐಶ್ವರ್ಯಾ ಪಾತ್ರ ಮಾಡಿದಂಥ ಹುಡುಗಿ ಗಮನ ಸೆಳೆಯುತ್ತಾರೆ. ಉಳಿದಂತೆ ಚಿತ್ರದಲ್ಲಿ ಹಾಸ್ಯಕ್ಕಾಗಿ, ಮುಖ್ಯ ಕತೆಗಿಂತ ಸಪರೇಟಾಗಿರುವ ಟ್ರ್ಯಾಕ್ ಬಳಸಲಾಗಿದೆ. ಮಧ್ಯಂತರದ ಬಳಿಕ ತುರುಕಲಾಗಿರುವ ಅನಗತ್ಯ ಐಟಂ ಸಾಂಗ್ ಮತ್ತು ಹಾಸ್ಯದೃಶ್ಯಗಳನ್ನು ಕೂಡ ಎಂಜಾಯ್ ಮಾಡುವಂಥ ಕನ್ನಡ ಪ್ರೇಕ್ಷಕರು ಇನ್ನೂ ಇದ್ದರೆ ವಿಪರ್ಯಾಸ ಎಂದೇ ಹೇಳಬೇಕು.

‘ಜನ ಗಣ ಮನ’ ಎನ್ನುವುದು ಚಿತ್ರದ ಹೆಸರು. ಚಿತ್ರದಲ್ಲೊಂದು ಕಡೆ ರಾಷ್ಟ್ರಗೀತೆ ಪ್ರದರ್ಶನಗೊಳ್ಳುತ್ತದೆ ಎನ್ನುವುದನ್ನು ಹೊರತುಪಡಿಸಿ ಚಿತ್ರಕ್ಕೂ ಆ ಹೆಸರಿಗೂ ಬೇರೆ ಸಂಬಂಧ ಕಾಣಿಸುವುದಿಲ್ಲ. ಆದರೆ ‘‘ರಾಷ್ಟ್ರಗೀತೆಗೆ ಹೇಗೆ ಎಲ್ಲ ಭಾರತೀಯರು ಒಂದಾಗಿ ಗೌರವ ನೀಡುತ್ತಾರೆಯೋ, ಅದೇ ರೀತಿ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿಯೂ ಎಲ್ಲರೂ ಒಂದಾಗಿ ಪಾಲ್ಗೊಳ್ಳಬೇಕು’’ ಎಂಬ ಸಂಭಾಷಣೆಯನ್ನು ಝಾನ್ಸಿಯ ಮೂಲಕ ಹೇಳಿಸಿರುವ ನಿರ್ದೇಶಕರು ಸಂದೇಹಗಳಿಗೆ ತಾರ್ಕಿಕ ಅಂತ್ಯ ನೀಡಿ ಬುದ್ಧಿವಂತರಾಗಿದ್ದಾರೆ. ಆದರೆ ನಮ್ಮ ಪ್ರೇಕ್ಷಕರು ಕೂಡ ಬುದ್ಧಿವಂತರೇ ಎನ್ನುವುದನ್ನು ಯಾವ ನಿರ್ದೇಶಕರು ಕೂಡ ಮರೆಯಬಾರದು.

ತಾರಾಗಣ: ಆಯಿಷಾ, ರವಿಕಾಳೆ
ನಿರ್ದೇಶಕ: ಶಶಿಕಾಂತ್ ಆನೇಕಲ್
ನಿರ್ಮಾಪಕ: ಪಿ ಸಾಂಬಶಿವ ರೆಡ್ಡಿ

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News