ಹಾಸನ: ಕಾನೂನು ಅರಿವು ಇಲ್ಲವಾದರೆ ಜೀವನದಲ್ಲಿ ಸಮಸ್ಯೆಯೇ ಹೆಚ್ಚು; ವಿಜಯಕುಮಾರ್ ರೈ

Update: 2018-02-20 11:47 GMT

ಹಾಸನ,ಫೆ.20: ಮನುಷ್ಯನಿಗೆ ಕಾನೂನಿನ ಅರಿವು ಇಲ್ಲವಾದರೆ ಆತನು ಜೀವನದಲ್ಲಿ ಸಮಸ್ಯೆಯನ್ನು ಹೆಚ್ಚು ಎದುರಿಸಬೇಕಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ್ ರೈ ತಿಳಿಸಿದರು.

ನಗರದ ನೂತನ ಜಿಲ್ಲಾ ನ್ಯಾಯಾಲಯ ಆವರಣ ಬಳಿ ಚನ್ನಪಟ್ಟಣ ಬಡಾವಣೆಯಲ್ಲಿರುವ ಜ್ಞಾನಧಾರೆ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಲಯನ್ಸ್ ಕ್ಲಬ್ ಹಾಗೂ ಕಾಲೇಜು ಶಿಕ್ಷಣ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನದ ಅಂಗವಾಗಿ ಮಂಗಳವಾರ ಬೆಳಿಗ್ಗೆ ವಿದ್ಯಾರ್ಥಿಗಳಿಗಾಗಿಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನು ನೆಮ್ಮದಿಯಿಂದ ಜೀವನ ಸಾಗಿಸಲು ಮುಖ್ಯವಾಗಿ ಅವರಲ್ಲಿ ಕಾನೂನು ಅರಿವು ಇದ್ದರೆ ಮಾತ್ರ ಸಾಧ್ಯ ಎಂದರು. ಒಂದು ಮಗು ಹುಟ್ಟಿದ ದಿನದಿಂದ ಮರಣ ಹೊಂದಿದ ಕೊನೆಯವರೆಗೂ ಕಾನೂನಿನ ಅಡಿಯಲ್ಲೆ ಇರುತ್ತಾನೆ. ಈ ಭೂಮಿಯ ಮೇಲಿರುವ ಅನೇಕರಿಗೆ ಕಾನೂನು ಅಂದರೆ ಏನೆಂದು ಅರಿಯದೆ ಅನೇಕ ಸಮಸ್ಯೆಗಳಿಗೆ ಗುರಿಯಾಗುತ್ತಾನೆ. ಜೀವನದಲ್ಲಿ ಯಾವುದಾದರೂ ತೊಡಕು ಉಂಟಾದಾಗ ಅಲ್ಲಿ ಕಾನೂನು ಅವಶ್ಯಕವಾಗಿರುತ್ತದೆ. ಕಾನೂನು ಬಗೆ ಅರಿವು ಇಲ್ಲವಾದರೆ ಎದುರಾಳಿಗಳಿಂದ ಸಮಸ್ಯೆ ಹೆಚ್ಚಾಗಿ ಸಂಕಷ್ಟದಲ್ಲಿ ಸಿಲುಕಬೇಕಾಗುತ್ತದೆ ಎಂದು ಸಲಹೆ ನೀಡದರು.

ವಿದ್ಯಾರ್ಥಿಗಳು ಇತರೆ ಕೆಟ್ಟ ವಿಷಯದ ಬಗ್ಗೆ ಕಿವಿಗೊಡದೆ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕು. ಮನಸ್ಸಿನಲ್ಲಿ ಒಂದು ಗುರಿಯನ್ನಿಟ್ಟುಕೊಂಡು ಮುಂದೆ ನಡೆದರೆ ನಿಮ್ಮ ಭವಿಷ್ಯ ಉಜ್ವಲವಾಗುವುದಲ್ಲದೆ ತಂದೆ-ತಾಯಿಯ ಆಸೆ ಈಡೇರಿಸಿದಂತಾಗುತ್ತದೆ. ನಮ್ಮ ದೇಶವು ಪ್ರಜಾಪ್ರಭುತ್ವ ಹೊಂದಿದೆ. ಭಾರತದ ಸಂವಿಧಾನವು ನಮ್ಮ ದೇಶದ ಮೂಲ ಕಾನೂನು ಆಗಿದೆ. ಅದರಂತೆ ಪ್ರತಿಯೊಬ್ಬರೂ ಸಾಮಾಜಿಕ ಭದ್ರತೆ ನೀಡಲಾಗಿದೆ ಎಂದು ಹೇಳಿದರು.

ನೀರು, ಗಾಳಿ, ಬೆಳಕು ಇವೆಲ್ಲಾ ನೈಸರ್ಗಿಕ ಸಂಪತ್ತು ಆಗಿದೆ. ಇದರಲ್ಲಿ ವಿದ್ಯಾರ್ಥಿಗಳ ಪಾತ್ರ ಏನೆಂಬುದನ್ನು ಮೊದಲು ತಿಳಿಯಬೇಕು. ಸುತ್ತ ಮುತ್ತಲ ವಾತವರಣ ಉತ್ತಮವಾಗಿರಲು ಬಹು ಮುಖ್ಯವಾಗಿ ಮಾನವನ ಪಾತ್ರ ಕೂಡ ಸೇರಿರುತ್ತದೆ. ಆದರೇ ಇಂದಿನ ದಿವಸಗಳಲ್ಲಿ ನಮ್ಮ ಕರ್ತವ್ಯವನ್ನು ಮರೆಯುತ್ತಿದ್ದೇವೆ. ಭಾರತದ ಸಂವಿದಾನದಲ್ಲಿ ತಿಳಿಸಿರುವಂತೆ ಮಾತನಾಡುವುದು ನಮ್ಮ ಹಕ್ಕು. ಇತರೆ ನಾನಾ ಹಕ್ಕುಗಳಿದ್ದು, ಈ ಬಗ್ಗೆ ಅನೇಕರಿಗೆ ಅರಿವು ಇಲ್ಲದೆ ವಂಚಿತರಾಗುತ್ತಿದ್ದಾರೆ ಎಂದು ಆತಂಕವ್ಯಕ್ತಪಡಿಸಿದರು. ಪ್ರತಿ ತಾಲ್ಲೂಕು, ಜಿಲ್ಲೆ ಹಾಗೂ ಎಲ್ಲಾ ರಾಜ್ಯಗಳಲ್ಲಿ ಕಾನೂನು ಸೇವಾ ಪ್ರಾಧಿಕಾರವಿದೆ. ಬಡವರಿಗಾಗಿ ಸರ್ಕಾರವೇ ವಕೀಲರನ್ನು ನೇಮಕ ಮಾಡಿ ಉಚಿತ ಕಾನೂನು ನೀಡಲಾಗುತ್ತದೆ ಎಂದರು. ಸಂವಿಧಾನವು ಮೂಲಭೂತವಾದ 11 ಕರ್ತವ್ಯಗಳನ್ನು ನೀಡಿದೆ. ನಂತರ ಹಕ್ಕುಗಳು ಬರುತ್ತದೆ ಎಂದು ತಿಳಿಸಿದರು. ಇದೆ ವೇಳೆ ಕರ್ತವ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿ ಸರಿ ಉತ್ತರ ಕೊಟ್ಟವರಿಗೆ ಕಾನೂನು ಪುಸ್ತಕ ನೀಡಿ ಪ್ರೋತ್ಸಹಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಬಿ. ಸೋಮೇಶ್ ಮಾತನಾಡುತ್ತಾ, ಕ್ಯಾನ್ಸರ್ ಮತ್ತು ಏಡ್ಸ್ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಇದ್ದರೇ ಒಳ್ಳೆಯದು. ಇಂದಿನ ದಿನಗಳಲ್ಲಿ ಓದುವ ಮಕ್ಕಳು ಕೆಟ್ಟ ಸಹವಾಸಕ್ಕೆ ಗಮನ ನೀಡಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ಭವಿಷ್ಯ ಉಜ್ವಲವಾಗಬೇಕಾದರೇ ಇಂತಹ ಅರಿವು ಕಾರ್ಯಕ್ರಮವು ಹೆಚ್ಚು ಹಮ್ಮಿಕೊಳ್ಳುವುದು ಒಳ್ಳೆಯದು ಎಂದರು. ಅಪಘಾತದ ಮೇಲೆ ರಕ್ತದ ಅವಶ್ಯಕತೆ ಹೆಚ್ಚು ಇದ್ದು, ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದರ ಮೂಲಕ ಮತ್ತೊಬ್ಬರ ಪ್ರಾಣ ಉಳಿಸಲು ಕಾರಣರಾಗಿ ಎಂದು ಕರೆ ನೀಡದರು.

ವಕೀಲರ ಸಂಘದ ಅಧ್ಯಕ್ಷ ಎಂ.ಡಿ. ವೆಂಕಟೇಶ್ ಮಾತನಾಡಿ, ಸಾಮಾಜಿಕ ನ್ಯಾಯವು ಸಂವಿಧಾನ ಬಂದ ದಿನದಿಂದಲೇ ಜಾರಿಗೆ ಬಂದಿದೆ. ಗುರು ಮತ್ತು ದೇವರು ಮಾರ್ಗದರ್ಶಕರು. ಒಂದು ಗುರಿ ತಲುಪಬೇಕಾದರೇ ದೀರ್ಘ ಅಧ್ಯಾಯನ ಮತ್ತು ಶ್ರಮ ಇರಬೇಕು ಎಂದು ಕಿವಿಮಾತು ಹೇಳಿದರು. 

ಜ್ಞಾನಧಾರೆ ವಿದ್ಯಾಸಂಸ್ಥೆ ಪ್ರಾಂಶುಪಾಲ ಜೆ. ಜವರೇಗೌಡ ಮಾತನಾಡಿ, ಗುರು ಕೃಪೆ ಇಲ್ಲದೆ ಸಾಧನೆ ಮಾಡಲು ಸಾಧ್ಯವಿಲ್ಲ. ತಾಯಿಯೇ ಮೊದಲ ಗುರುವಾಗಿ ಮಕ್ಕಳನ್ನು ಜ್ಞಾನದೆಡೆ ಕರೆದೊಯ್ಯುತ್ತಾರೆ ಎಂದರು.

ಇದೇ ವೇಳೆ ಜ್ಞಾನಧಾರೆ ವಿದ್ಯಾಸಂಸ್ಥೆ ಪ್ರಾಂಶುಪಾಲ ಜೆ. ಜವರೇಗೌಡ, ಸಂಸ್ಥಾಪಕ ಕಾರ್ಯದರ್ಶಿ ಲಯನ್ ಎಸ್.ವಿ. ಪ್ರಕಾಶ್, ವಕೀಲರ ಸಂಘದ ಅಧ್ಯಕ್ಷ ಎಂ.ಡಿ. ವೆಂಕಟೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಬಿ. ಸೋಮೇಶ್ ಹಾಗೂ ವೈದ್ಯರು ಸಿ.ಎನ್. ಜಗದೀಶ್ ಇತರರು ಪಾಲ್ಗೊಂಡಿದ್ದರು.
    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News