ಪ್ರಧಾನಿ ಮೋದಿಯ ಮೈಸೂರು ಸಮಾವೇಶಕ್ಕೆ ಈಶ್ವರಪ್ಪ ಗೈರು!

Update: 2018-02-20 16:54 GMT

ಶಿವಮೊಗ್ಗ, ಫೆ.20: ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ, ತವರೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಬಣಗಳ ನಡುವಿನ ಹಗ್ಗಜಗ್ಗಾಟ ತೀವ್ರಗೊಂಡಿದೆ. ಇನ್ನೊಂದೆಡೆ ಈ ಇಬ್ಬರು ನಾಯಕರ ನಡುವೆ ನಡೆಯುತ್ತಿರುವ 'ಶೀತಲ ಸಮರ' ಮತ್ತೊಮ್ಮೆ ಭುಗಿಲೇಳುವ ಲಕ್ಷಣಗಳು ಗೋಚರವಾಗುತ್ತಿದೆ.

ಬಿ.ಎಸ್.ಯಡಿಯೂರಪ್ಪ ಮೇಲಿನ ಮುನಿಸಿನ ಕಾರಣದಿಂದಲೇ ಸೋಮವಾರ ಮೈಸೂರು ನಗರದಲ್ಲಿ ನಡೆದ, ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಕೆ.ಎಸ್.ಈಶ್ವರಪ್ಪ ಗೈರು ಹಾಜರಾಗಿದ್ದಾರೆ ಎಂಬ ಮಾತುಗಳು ಅವರ ಆಪ್ತ ಮೂಲಗಳಿಂದ ಕೇಳಿಬರುತ್ತಿವೆ. 

ಮೋದಿ ಸಮಾರಂಭಕ್ಕೆ ಈಶ್ವರಪ್ಪ ಗೈರು ಹಾಜರಾಗಿದ್ದು ಬಿಜೆಪಿ ಪಾಳೆಯದಲ್ಲಿ ನಾನಾ ರೀತಿಯ ಚರ್ಚೆ, ವಿಶ್ಲೇಷಣೆಗೆ ಎಡೆ ಮಾಡಿಕೊಟ್ಟಿದೆ. ಬಿಎಸ್‍ವೈ ವಿರುದ್ಧ ಅಸಮಾಧಾನ ಹೊರಹಾಕುವ ಉದ್ದೇಶದಿಂದಲೇ ಗೈರು ಹಾಜರಾಗುವ ಮೂಲಕ, ಈಶ್ವರಪ್ಪ ಪಕ್ಷದ ವರಿಷ್ಠರಿಗೆ ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟರಲ್ಲಿಯೇ ಬಿಎಸ್‍ವೈ ವಿರುದ್ಧ ಈಶ್ವರಪ್ಪ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗುತ್ತಿರುವ ಲಕ್ಷಣಗಳು ಗೋಚರವಾಗುತ್ತಿದ್ದು, ಇದರ ಪೂರ್ವಭಾವಿ ಬೆಳವಣಿಗೆಯೆಂಬಂತೆ ಹೈ ವೋಲ್ಟೇಜ್ ಸಮಾರಂಭವೆಂದೇ ಬಿಂಬಿತವಾಗಿದ್ದ ಮೈಸೂರು ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.

ಬ್ರಿಗೇಡ್ ಕಲಹ: ಬಿಎಸ್‍ವೈ ಪಕ್ಷದ ರಾಜ್ಯಾಧ್ಯಕ್ಷರಾಗಿ ನಿಯೋಜನೆಗೊಂಡ ನಂತರ ತವರೂರು ಶಿವಮೊಗ್ಗದಲ್ಲಿ ತಮ್ಮ ಆಪ್ತರಿಗೆ ಪಕ್ಷದ ಪ್ರಮುಖ ಸ್ಥಾನಗಳು ಸಿಗುವಂತೆ ಮಾಡಿದ್ದರು. ಜೊತೆಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಆಪ್ತ ರುದ್ರೇಗೌಡರನ್ನು ಕಣಕ್ಕಿಳಿಸುವ ಉದ್ದೇಶದಿಂದಲೇ, ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನಿಯೋಜಿಸಿದ್ದರೆಂಬ ಮಾತುಗಳು ಸ್ವತಃ ಬಿಜೆಪಿ ಪಾಳಯದಿಂದಲೇ ಕೇಳಿಬಂದಿದ್ದವು.

ಇದು ಈಶ್ವರಪ್ಪ ಕೋಪಕ್ಕೆ ಕಾರಣವಾಗಿತ್ತು. ಈ ಕಾರಣದಿಂದಲೇ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿದ್ದರು. ಶಿಸ್ತುಕ್ರಮದ ಎಚ್ಚರಿಕೆಗೂ ಮಣಿದಿರಲಿಲ್ಲ. ಬ್ರಿಗೇಡ್ ಚಟುವಟಿಕೆಯಿಂದ ದೂರ ಉಳಿಯುವಂತೆ ಬಿಎಸ್‍ವೈ ನೀಡಿದ್ದ ಎಚ್ಚರಿಕೆಗೆ ಕ್ಯಾರೇ ಎಂದಿರಲಿಲ್ಲ. ಇದರ ನೇರ ಪರಿಣಾಮ ಈ ಇಬ್ಬರು ನಾಯಕರ ತವರೂರು ಶಿವಮೊಗ್ಗ ನಗರದಲ್ಲಿ ಕಂಡುಬಂದಿತ್ತು.

ಎರಡೂ ಬಣಗಳ ಕಾರ್ಯಕರ್ತರು ಪಕ್ಷದ ಕಚೇರಿ ಆವರಣದಲ್ಲಿ ಹೊಡೆದಾಡಿಕೊಂಡಿದ್ದರು. ಸುದ್ದಿಗೋಷ್ಠಿಯಲ್ಲಿಯೇ ಎರಡು ಬಣಗಳ ನಾಯಕರು ಆರೋಪ - ಪ್ರತ್ಯಾರೋಪ ಮಾಡಿಕೊಂಡಿದ್ದರು. ಒಂದು ಹೆಜ್ಜೆ ಮುಂದೆ ಹೋಗಿದ್ದ ಆಯನೂರು ಮಂಜುನಾಥ್‍ ಈಶ್ವರಪ್ಪ ವಿರುದ್ಧ ಭಾರೀ ಟೀಕಾಪ್ರಹಾರ ನಡೆಸಿ, ವಿಧಾನಪರಿಷತ್ ಅವಧಿ ಇನ್ನೂ ಪೂರ್ಣಗೊಳ್ಳದ ಕಾರಣದಿಂದ ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ. ತಾವು ಕೂಡ ಸ್ಪರ್ಧಾಕಾಂಕ್ಷಿ ಎಂದು ಹೇಳಿದ್ದರು.

ಮಣಿದಿರಲಿಲ್ಲ: ಬ್ರಿಗೇಡ್ ರಾಜಕಾರಣದ ಕುರಿತಂತೆ ಪಕ್ಷದ ರಾಷ್ಟ್ರೀಯ ವರಿಷ್ಠರಿಗೆ ಬಿಎಸ್‍ವೈ ಬಣದವರು ದೂರು ನೀಡಿದ್ದರೆ, ಕೆಎಸ್‍ಇ ಬಣವು ಬಿಎಸ್‍ವೈ ನಾಯಕತ್ವದ ವಿರುದ್ಧ ಪ್ರತಿ ದೂರು ನೀಡಿತ್ತು. ಬಿಎಸ್‍ವೈ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದು, ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕೆಜೆಪಿ ಮೂಲದವರಿಗೆ ಒತ್ತು ನೀಡುತ್ತಿದ್ದಾರೆ . ಮೂಲ ಕಾರ್ಯಕರ್ತರು - ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ವಿರೋಧಿ ಬಣ ದೂರಿತ್ತು.

ಅಂತಿಮವಾಗಿ ದಿಲ್ಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರೇ ಬಿಎಸ್‍ವೈ - ಈಶ್ವರಪ್ಪ ಜೊತೆ ಸಂಧಾನ ಸಭೆ ನಡೆಸಿ, ವೈಮನಸ್ಸು ತಿಳಿಗೊಳಿಸುವ ಕೆಲಸ ಮಾಡಿದ್ದರು. ಇದಾದ ನಂತರ ಈ ಇಬ್ಬರು ನಾಯಕರ ನಡುವಿನ ಸಂಬಂಧ ಒಂದು ಹಂತಕ್ಕೆ ಬಂದಿತ್ತು. ವೈಮನಸ್ಸು - ಭಿನ್ನಮತ ಸೃಷ್ಟಿಸುವ ಘಟನೆಗಳು ನಡೆದಿರಲಿಲ್ಲ.

ಮತ್ತೆ ಬಿರುಕು: ಇತ್ತೀಚೆಗೆ ಬಿಎಸ್‍ವೈಯವರ ಶಿವಮೊಗ್ಗದ ನಿವಾಸದಲ್ಲಿ ಸ್ಥಳೀಯ ಬಿಜೆಪಿ ನಾಯಕರ ತಂಡವೊಂದು ಶಿವಮೊಗ್ಗ ನಗರ ಕ್ಷೇತ್ರದಿಂದ ರುದ್ರೇಗೌಡರನ್ನೇ ಕಣಕ್ಕಿಳಿಸಬೇಕು. ಯಾವುದೇ ಕಾರಣಕ್ಕೂ ಈಶ್ವರಪ್ಪರಿಗೆ ಟಿಕೆಟ್ ನೀಡಬಾರದು ಎಂದು ಬಿಎಸ್‍ವೈಗೆ ಆಗ್ರಹಿಸಿತ್ತು. ಈ ವೇಳೆ ಕೆಲ ನಾಯಕರು ಮಾತನಾಡಿ, 'ಈಶ್ವರಪ್ಪರಿಗೆ ಟಿಕೆಟ್ ನೀಡಿದರೆ ಠೇವಣಿಯೂ ಸಿಗುವುದಿಲ್ಲ' ಎಂದು ಟೀಕಿಸಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇದು ಈಶ್ವರಪ್ಪ ಕೆರಳುವಂತೆ ಮಾಡಿದ್ದು, ಅವರು ಸುದ್ದಿಗೋಷ್ಠಿಯಲ್ಲಿಯೇ ಕಣ್ಣೀರಿಟ್ಟಿದ್ದರು.

ತಮ್ಮ ವಿರುದ್ಧ ಹೇಳಿಕೆ ನೀಡಿದ್ದ ನಾಯಕರ ವಿರುದ್ಧ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ ಅವರ ಬೆಂಬಲಿಗರು ಪಕ್ಷದ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿ, ಈಶ್ವರಪ್ಪ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಬಿಎಸ್‍ವೈ ಬಣದ ನಾಯಕರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿದ್ದರು.

ಇದು ಬಿಎಸ್‍ವೈ ಹಾಗೂ ಈಶ್ವರಪ್ಪ ನಡುವೆ ಮತ್ತೆ ವೈಮನಸ್ಸು ಸೃಷ್ಟಿಯಾಗುವಂತೆ ಮಾಡಿತ್ತು. ಇದರ ಮುಂದಿನ ಬೆಳವಣಿಗೆ ಎಂಬಂತೆ ಮೋದಿ ಸಮಾವೇಶಕ್ಕೆ ಈಶ್ವರಪ್ಪ ಗೈರು ಹಾಜರಾಗಿದ್ದಾರೆ ಎನ್ನಲಾಗಿದೆ. ಈ ಮೂಲಕ ಬಿಎಸ್‍ವೈ ವಿರುದ್ಧ ಮತ್ತೊಮ್ಮೆ ತೊಡೆ ತಟ್ಟಲು ಮುಂದಾಗಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

'ಪುರಾನೇ ಸಾಥಿ...' ಎಂದು ಪರಿಚಯಿಸಿದ್ದ ಮೋದಿ

ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿಯವರು ತಮ್ಮ ಭಾಷಣದ ವೇಳೆ ಕೆ.ಎಸ್.ಈಶ್ವರಪ್ಪರನ್ನು 'ಮೇರಾ ಪುರಾನೇ ಸಾಥಿ...' (ನನ್ನ ಹಳೆಯ ಸ್ನೇಹಿತ) ಎಂದು ಹೇಳಿದ್ದರು. ಜೊತೆಗೆ ವೇದಿಕೆಗೆ ಆಗಮಿಸುವ ವೇಳೆ ಈಶ್ವರಪ್ಪ ಬಳಿ ತೆರಳಿ, ಅವರ ಬೆನ್ನಿಗೆ ಗುದ್ದು ನೀಡಿದ್ದರು.

ಇದು ಸಹಜವಾಗಿಯೇ ಕೆಎಸ್‍ಇ ಹಾಗೂ ಅವರ ಬೆಂಬಲಿಗರ ಸಂತಸಕ್ಕೆ ಕಾರಣವಾಗಿತ್ತು. ಮೋದಿಯವರೇ 'ನನ್ನ ಹಳೆಯ ಸ್ನೇಹಿತ' ಎಂದು ಪರಿಚಯಿಸಿದ್ದು, ಈಶ್ವರಪ್ಪರ ಪ್ರಭಾವಕ್ಕೆ ಸಾಕ್ಷಿಯಾಗಿದೆ ಎಂದು ಬೆಂಬಲಿಗರು ಮಾತನಾಡಿಕೊಂಡಿದ್ದರು. ಜೊತೆಗೆ ಮೋದಿಯವರು ಈಶ್ವರಪ್ಪ ಬಗ್ಗೆ ಹೇಳಿದ ಮಾತು ಹಾಗೂ ಅವರ ಬಳಿ ಆಗಮಿಸಿದ ವೀಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು.

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News