ಹೈದರಾಬಾದ್ ವಿವಿಯ ಪರಿಹಾರಧನ ಸ್ವೀಕರಿಸಿದ ವೇಮುಲಾ ತಾಯಿ

Update: 2018-02-21 13:52 GMT

ಹೈದರಾಬಾದ್, ಫೆ.21: ಎರಡು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾರ ತಾಯಿ, ಹೈದರಾಬಾದ್ ವಿವಿ ನೀಡಿರುವ 8 ಲಕ್ಷ ರೂ. ಮೊತ್ತದ ಪರಿಹಾರಧನವನ್ನು ಸ್ವೀಕರಿಸಿದ್ದಾರೆ. ಆದರೆ ವಿವಿ ಆಡಳಿತ ವರ್ಗದ ಜೊತೆ ತಾನು ರಾಜಿಯಾಗಿದ್ದೇನೆ ಎಂದು ಭಾವಿಸಬಾರದು ಎಂದವರು ಹೇಳಿದ್ದಾರೆ. ತನ್ನ ಬೆಂಬಲಿಗರು ಹಾಗೂ ವಕೀಲರ ಸಲಹೆ ಮೇರೆಗೆ ಪರಿಹಾರ ಧನವನ್ನು ಸ್ವೀಕರಿಸಲು ಒಪ್ಪಿರುವುದಾಗಿ ರಾಧಿಕಾ ವೇಮುಲಾ ತಿಳಿಸಿದ್ದಾರೆ.

ವಿವಿ ಅಧಿಕಾರಿಗಳ ಆದೇಶದ ಮೇರೆಗೆ ಪರಿಹಾರ ಧನ ನೀಡಲಾಗುತ್ತಿದೆ ಎಂಬ ತಪ್ಪು ತಿಳುವಳಿಕೆಯ ಕಾರಣ ಈ ಹಿಂದೆ ಪರಿಹಾರ ಧನವನ್ನು ನಿರಾಕರಿಸಿದ್ದೆ. ಆದರೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಆದೇಶದನ್ವಯ ಪರಿಹಾರ ಧನ ನೀಡಲಾಗುತ್ತಿದೆ ಎಂದು ತಿಳಿದ ಬಳಿಕ ಪರಿಹಾರಧನವನ್ನು ಸ್ವೀಕರಿಸಿದ್ದೇನೆ. ತಾನು ಎಲ್ಲವನ್ನೂ ಪಾರದರ್ಶಕವಾಗಿ ಮಾಡುತ್ತೇನೆ ಎಂದವರು ತಿಳಿಸಿದ್ದಾರೆ. ವಿವಿಯೊಂದಿಗೆ ಗುಪ್ತ ಒಪ್ಪಂದ ಮಾಡಿಕೊಂಡಿದ್ದೇನೆ ಎಂದು ಯಾರೂ ಭಾವಿಸಬಾರದು. ತನ್ನ ಮಗನ ಸಾವಿಗೆ ದೊರಕಬೇಕಿರುವ ಹಕ್ಕಿನ ಪರಿಹಾರಧನವಿದು ಎಂದು ತಾನು ಭಾವಿಸಿರುವುದಾಗಿ ರಾಧಿಕಾ ವೇಮುಲಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News