‘ಎದುರಾಳಿ’ಗಳ ದಾಳಿಗೆ 21 ಡಾಲ್ಫಿನ್‌ಗಳು ಬಲಿ
ಉತ್ತರ ಮೆಕ್ಸಿಕೊದ ಲಾ ಪಾಝ್ ನಗರದ ಸಮೀಪದ ಕಡಲಕಿನಾರೆಯಲ್ಲಿ 21 ಡಾಲ್ಫಿನ್ ಮೀನುಗಳು ಸತ್ತುಬಿದ್ದಿದ್ದರೆ, ಉಳಿದ 33 ಮೀನುಗಳ ಸಾವುಕಂಡು ಸ್ಥಳೀಯ ನಿವಾಸಿಗಳು ಗಾಬರಿಗೊಂಡಿದ್ದರು. ಈ ಡಾಲ್ಫಿನ್ ಮೀನುಗಳು, ಇನ್ನೊಂದು ತಳಿಯ ಡಾಲ್ಫಿನ್‌ಗಳಿಂದ ದಾಳಿಗೊಳಗಾಗಿ, ತೀವ್ರಗಾಯಗೊಂಡು ಸಾವನ್ನಪ್ಪಿರುವುದಾಗಿ ಸಾಗರಜೀವಿ ತಜ್ಞರು ತಿಳಿಸಿದ್ದಾರೆ.
ಮೆಕ್ಸಿಕೊದ ಬಾಜಾ ಕ್ಯಾಲಿಫೋರ್ನಿಯಾ ಪರ್ಯಾಯ ದ್ವೀಪದಲ್ಲಿ ಬಹಿಯಾ ಡ ಲಾ ಪಾಝ್‌ನ ಬಂಡೆಗಲ್ಲುಗಳಿಂದಾ ವೃತವಾದ ಕಡಲಕಿನಾರೆಯಲ್ಲಿ ಕಳೆದವಾರ 54 ಡಾಲ್ಫಿನ್ ಮೀನುಗಳು ಬಂದು ಬಿದ್ದಿದ್ದವು. ಅವುಗಳಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ 33 ಸಣ್ಣ ಮೂತಿಯ ಡಾಲ್ಫಿನ್‌ಗಳಿಗೆ ಚಿಕಿತ್ಸೆ ನೀಡಿ ಅವುಗಳನ್ನು ಮತ್ತೆ ಸಮುದ್ರಕ್ಕೆ ಬಿಡಲಾಯಿತು. ಉಳಿದ ಡಾಲ್ಫಿನ್ ಮೀನುಗಳು ಕಡಲತೀರದಲ್ಲಿ ಅಸು ನೀಗಿದವು.
ಈ ಡಾಲ್ಫಿನ್‌ಗಳ ಮೈಯಲ್ಲಿ ಕಡಿತದ ಗಾಯಗಳಿದ್ದು, ಅವುಗಳು ಬಾಟಲ್‌ನೋಸ್ ಎಂದು ಕರೆಯಲಾಗುವ ದೊಡ್ಡ ಗಾತ್ರದ ಡಾಲ್ಫಿನ್ ಮೀನುಗಳಿಂದ ದಾಳಿಗೊಳಗಾಗಿರ ಬಹುದೆಂದು ರಕ್ಷಣಾ ಕಾರ್ಯಕರ್ತರು ಶಂಕೆ ವ್ಯಕ್ತಪಡಿಸಿದ್ದಾರೆ.
ಬಹುತೇಕ ಡಾಲ್ಫಿನ್‌ಗಳು ಚುರುಕು ಹಾಗೂ ಸ್ನೇಹಜೀವಿಗಳಾಗಿದ್ದರೂ, ಬಾಟಲ್‌ನೋಸ್ ಸೇರಿದಂತೆ ಕೆಲವು ಜಾತಿಯ ಡಾಲ್ಫಿನ್‌ಗಳು, ಇತರ ತಳಿಯ ಡಾಲ್ಫಿನ್‌ಗಳ ಮೇಲೆ ಆಕ್ರಮಣ ನಡೆಸಿ, ಅವನ್ನು ಕೊಂದುಹಾಕುತ್ತವೆಯೆಂದು ಸಾಗರಜೀವಿ ತಜ್ಞರು ಹೇಳುತ್ತಾರೆ.