ಮೂರ್ಛೆರೋಗವನ್ನು ಔಷಧಿಯ ಮೂಲಕ ಗುಣಪಡಿಸಲು ಸಾಧ್ಯ : ಡಾ.ರವಿ ಮೋಹನ್‍ರಾವ್

Update: 2018-02-22 11:11 GMT

ತುಮಕೂರು,ಫೆ.22:ಚಿಕ್ಕಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂರ್ಛೆರೋಗವನ್ನು ಆರಂಭಿಕ ಹಂತದಲ್ಲಿಯೇ ಸೂಕ್ತ ಔಷಧಿಯ ಮೂಲಕ ಶಸ್ತ್ರ ಚಿಕಿತ್ಸೆ ಇಲ್ಲದೆ ಗುಣಪಡಿಸಬಹುದು ಎಂದು ಬೆಂಗಳೂರಿನ ಶೇಷಾದ್ರಿಪುರಂ ಅಪಲೋ ಆಸ್ಪತ್ರೆಯ ತಜ್ಞ ವೈದ್ಯ ಡಾ.ರವಿ ಮೋಹನ್‍ರಾವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮೂರ್ಛೆ ರೋಗಕ್ಕೆ ತುತ್ತಾದ ವ್ಯಕ್ತಿಯನ್ನು ಸಮಾಜ ಒಂದು ರೀತಿಯಲ್ಲಿ ನೋಡುತ್ತಿದ್ದು,ತಪ್ಪು ತಿಳುವಳಿಕೆಯಿಂದಾಗಿ ಇವರು ಎಲ್ಲರಂತೆ ಮದುವೆಯಾಗಿ ಸುಖಃ ಜೀವನ ನಡೆಸಲು ಸಾಧ್ಯವಿಲ್ಲದಂತಾಗಿದೆ. ಸಮಾಜದಿಂದಲೂ ಬಹಿಷ್ಕೃತರಾದಂತೆ ಬದುಕಬೇಕಾದ ಸ್ಥಿತಿ ಇಂದಿಗೂ ಇದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 10 ಲಕ್ಷ ಜನರು ಈ ರೋಗದಿಂದ ಸಾವನ್ನಪ್ಪುತಿದ್ದು, ಆರಂಭದಲ್ಲಿಯೇ ಸೂಕ್ತ ಔಷಧಿ ನೀಡಿದರೆ ಶೇ.70ರಷ್ಟು ಜನರಿಗೆ ಗುಣಪಡಿಸಬಹುದು. ಉಳಿದವರಿಗೂ ಶಸ್ತ್ರಚಿಕಿತ್ಸೆ ಮೂಲಕ ಖಾಯಿಲೆಯನ್ನು ವಾಸಿ ಮಾಡಬಹುದಾಗಿದೆ. 

ಮನುಷ್ಯ ಒಂದು ಸಣ್ಣ ಕಣದಿಂದ ಉತ್ಪತ್ತಿಯಾಗುವ ಜೀವಿ. ಒಂದು ಅಣು ಸಾವಿರ ಅಣುಗಳಾಗಿ ಬದಲಾಗುವ ಸಮಯದಲ್ಲಿ ಆಗುವ ಸಣ್ಣ ವೆತ್ಯಾಸದಿಂದ ಮೆದುಳಿನ ಎಲೆಕ್ಟ್ರೋ ಮ್ಯಾಗ್ನಟಿಕ್ ಕಣಗಳ ಅಸಮರ್ಪಕ ಕಾರ್ಯ ನಿರ್ವಹಣೆಯಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. ಆಗ ಹುಟ್ಟಿದ ಮಗುವಿನಿಂದ ವಯೋವೃದ್ದರವರೆಗೆ ಈ ರೋಗ ಹರಡಿದೆ. ಒಮ್ಮೆ ಈ ರೋಗ 30 ಸೆಕೆಂಡ್‍ನಿಂದ ಒಂದು ನಿಮಿಷದವರೆಗೆ ಮಾತ್ರ ಇರುತ್ತದೆ. ಕೆಲವರು ಈ ರೋಗಕ್ಕೆ ತುತ್ತಾದವರ ಕೈಗೆ ಕಬ್ಬಿಣ ನೀಡುತ್ತಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಇಂತಹ ರೋಗಕ್ಕೆ ತುತ್ತಾದವರನ್ನು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಸಾಗಿಸಿ, ಪಕ್ಕಕ್ಕೆ ವಾಲಿಸಿ ಮಲಗಿಸುವುದು ಸೂಕ್ತ. ಕೈಕಾಲು ಬಡಿಯದಂತೆ ಅದುಮಿ ಇಟ್ಟುಕೊಳ್ಳದೆ, ಕೈಕಾಲು ಆಡಿಸುವ ಜಾಗದಲ್ಲಿ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ತದನಂತರ ಆಸ್ಪತ್ರೆಗೆ ಸಾಗಿಸಿದರೆ ಬದುಕಿ ಉಳಿಯಲಿದ್ದಾರೆ ಎಂದು ತಿಳಿಸಿದರು.

ಮೂರ್ಛೆ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು.ಜನರಲ್ಲಿರುವ ಮೂಢನಂಬಿಕೆಯನ್ನು ಹೋಗಲಾಡಿಸಬೇಕು ಎಂಬ ಉದ್ದೇಶದಿಂದಲೇ ಅಪಲೋ ಆಸ್ಪತ್ರೆಯ ಗ್ರಾಮೀಣ ಭಾಗಗಳಲ್ಲಿ ಶಿಬಿರಗಳನ್ನು ಆಯೋಜಿಸಿ ಜನರಿಗೆ ತಿಳುವಳಿಕೆ ನೀಡಲಾಗುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಸರಕಾರ ನೀಡುವ ವಿವಿಧ ಆರೋಗ್ಯ ಯೋಜನೆಗಳಲ್ಲಿಯೂ ಈ ರೋಗದ ಶಸ್ತ್ರಚಿಕಿತ್ಸೆ ಸೇರಿದ್ದು, ಇದುವರೆಗೂ ಸುಮಾರು 700 ಶಸ್ತ್ರಚಿಕಿತ್ಸೆ ನಡೆಸಿರುವುದಾಗಿ ಡಾ.ರವಿಮೋಹನ್ ರಾವ್ ನುಡಿದರು.

ಅತಿಯಾದ ಮಧ್ಯಪಾನ, ಸರಿಯಾಗಿ ನಿದ್ದೆ ಇಲ್ಲದಿರುವುದು, ಬೀದಿ ಬದಿಯ ಆಹಾರ ಸೇವನೆ, ಒಳಚರಂಡಿ ನೀರು ಸೇರಿದ ಕುಡಿಯುವ ನೀರು ಸೇರಿದಂತೆ, ಹಲವು ಕಾರಣಗಳಿಂದ ಈ ರೋಗ ಮನುಷ್ಯನಲ್ಲಿ ಕಾಣಿಸಿಕೊಳ್ಳಬಹುದು. ರೋಗಕ್ಕೆ ತುತ್ತಾದ ವ್ಯಕ್ತಿ ಸಂಪೂರ್ಣವಾಗಿ ಗುಣಮುಖರಾಗದೆ ವಾಹನ ಚಲಾವಣೆ ಸೂಕ್ತವಲ್ಲ. ಅಲ್ಲದೆ ಅಪಾಯಕಾರಿ ಯಂತ್ರಗಳ ಬಳಿ ಕೆಲಸ ಮಾಡುವುದು ತರವಲ್ಲ.ರೋಗಕ್ಕೆ ತುತ್ತಾದವರು ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವ್ಯದರಿಂದ ಗುಣಮುಖರಾಗಿ ಸಾಮಾನ್ಯರಂತೆ ಜೀವನ ನಡೆಸಬಹುದು ಎಂದು ಡಾ.ರವಿ ಮೋಹನ್ ರಾವ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಶೇಷಾದ್ರಿಪುರಂ ಅಪಲೋ ಅಸ್ಪತ್ರೆಯ ನರರೋಗ ತಜ್ಞ ಡಾ.ಸುಜೀತ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News