ಹಕ್ಕುಪತ್ರ ನೀಡದಿದ್ದರೆ ಪ್ರತಿಭಟನೆ : ವಿರಾಜಪೇಟೆ ಯುವ ಜೆಡಿಎಸ್ ಎಚ್ಚರಿಕೆ

Update: 2018-02-22 11:38 GMT

ಮಡಿಕೇರಿ,ಫೆ.22:ವೀರಾಜಪೇಟೆ ತಾಲ್ಲೂಕು ಕಾಕೋಟುಪರಂಬು ಗ್ರಾ.ಪಂ ವ್ಯಾಪ್ತಿಯ ಕಡಂಗಮರೂರು ಗ್ರಾಮದ ಚೌಕಿ ಪೈಸಾರಿಯ ಹರಿಶ್ಚಂದ್ರ ಕಾಲೋನಿಯ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿರುವ ವೀರಾಜಪೇಟೆ ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ಅಮ್ಮಂಡ ವಿವೇಕ್ ತಹಸೀಲ್ದಾರ್ ಕಛೇರಿಯ ಎದುರು ಪಕ್ಷದ ವತಿಯಿಂದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಶ್ಚಂದ್ರ ಕಾಲೋನಿಯಲ್ಲಿ 40 ರಿಂದ 45 ಕುಟುಂಬಗಳು ಕಳೆದ ಮೂರು ದಶಕಗಳಿಂದ ಸಂಕಷ್ಟದ ಬದುಕು ನಡೆಸುತ್ತಿವೆ. ಇವರಲ್ಲಿ ಅಂದಾಜು 20 ಕುಟುಂಬಗಳಿಗೆ ಹಕ್ಕುಪತ್ರ ದೊರಕಿದ್ದರೆ, ಉಳಿದ 25 ಕುಟುಂಬಗಳಿಗೆ ಇಲ್ಲಿಯವರೆಗೆ ಜನಪ್ರತಿನಿಧಿಗಳಿಂದ ಭರವಸೆಗಳು ದೊರಕಿದೆಯೇ ಹೊರತು ಹಕ್ಕುಪತ್ರ ದೊರಕಿಲ್ಲ. ಇದರಿಂದ ಸರಕಾರದ ಮೂಲಭೂತ ಸೌಲಭ್ಯಗಳಿಂದ ಈ ಕುಟುಂಬಗಳು ವಂಚಿತವಾಗಿರುವುದಾಗಿ ಬೇಸರ ವ್ಯಕ್ತಪಡಿಸಿದರು.

ಈ ವಿಭಾಗವನ್ನು ಪ್ರತಿನಿಧಿಸುವ ಜಿಲ್ಲಾ ಪಂಚಾಯತ್ ಸದಸ್ಯ ಅಚ್ಚಪಂಡ ಮಹೇಶ್, ವೀರಾಜಪೇಟೆ ತಾಲ್ಲೂಕು ಪಂಚಾಯ್ತಿ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ ಸೇರಿದಂತೆ ಜನಪ್ರತಿನಿಧಿಗಳಿಗೆ, ತಹಸೀಲ್ದಾರರಿಗೆ ಕಾಲೋನಿ ನಿವಾಸಿಗಳ ಸಮಸ್ಯೆಗಳ ಬಗ್ಗೆ ಮನದಟ್ಟುಮಾಡಿಕೊಡಲಾಗಿದೆ. ಹೀಗಿದ್ದೂ, ಸೂಕ್ತ ಸ್ಪಂದನ ಅವರಿಂದ ದೊರಕಿಲ್ಲವೆಂದು ಟೀಕಿಸಿದರು,

ಚುನಾವಣೆಗಳು ಸಮೀಪಿಸುವ ಹಂತದಲ್ಲಿ ಈ ವಿಭಾಗಕ್ಕೆ ಬರುವ ರಾಜಕಾರಣಿಗಳು, ಕಾಲೋನಿಯ ಸಮಸ್ಯೆಗಳನ್ನು ಬಗೆಹರಿಸಿಕೊಡುವ ಹುಸಿಭರವಸೆಗಳನ್ನಷ್ಟೆ ನೀಡಿ ತೆರಳುತ್ತಾರೆ. ಆದರೆ, ಇಂತಹ ಭರವಸೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಇಲ್ಲಿನ ನಿವಾಸಿಗಳು ಯಾರ ಬಳಿ ತಮ್ಮ ಅಳಲು ತೋಡಿಕೊಳ್ಳಬೇಕೆಂದು ಕಟುವಾಗಿ ಪ್ರಶ್ನಿಸಿದ ಅಮ್ಮಂಡ ವಿವೇಕ್, ಶೀಘ್ರ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಪಕ್ಷದಿಂದ ಹೋರಾಟಕ್ಕೆ ಇಳಿಯುವುದಾಗಿ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಹಿಂದುಳಿದ ವರ್ಗಗಳ ಘಟಕದ ಕಾಕೋಟುಪರಂಬು ವಲಯಾಧ್ಯಕ್ಷ ಹೆಚ್.ಎಂ. ಶಂಭು, ಸದಸ್ಯರುಗಳಾದ ಹೆಚ್.ಸಿ. ರಾಜ ಹಾಗೂ ಹೆಚ್.ಸಿ.ರಾಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News