ಬಿಜೆಪಿಯದ್ದು ಶೇ.90ರಷ್ಟು ಕಮಿಷನ್ ಸರಕಾರ : ಮುಖ್ಯಮಂತ್ರಿ

Update: 2018-02-22 14:21 GMT

"ಕೇಂದ್ರದ ಅನುದಾನದಲ್ಲಿ 10,500 ಕೋಟಿ ರೂ.ಖೋತಾ"

ಬೆಂಗಳೂರು, ಫೆ.22: ನಮ್ಮ ಸರಕಾರವನ್ನು ಬಿಜೆಪಿಯವರು 10 ಪರ್ಸೆಂಟ್ ಸರಕಾರ ಎಂದು ಆರೋಪಿಸುತ್ತಿದ್ದಾರೆ. ಮುಖ್ಯಮಂತ್ರಿ, ಸಚಿವರು ಸೇರಿದಂತೆ ಸಾಲು ಸಾಲಾಗಿ ಜೈಲಿಗೆ ಹೋದ ಇವರ ಅವಧಿಯ ಸರಕಾರವನ್ನು ಶೇ.90ರಷ್ಟು ಕಮಿಷನ್ ಸರಕಾರ ಎಂದು ಕರೆಯಲೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಅವರು, ನಮ್ಮ ಸರಕಾರದ ವಿರುದ್ಧ ಆರೋಪ ಮಾಡುವವರು ಈ ಬಗ್ಗೆ ದಾಖಲೆಗಳಿದ್ದರೆ ಅದನ್ನು ಜನತೆಯ ಮುಂದಿಡಲಿ. ಆರೋಪ ಮಾಡಬೇಕಾದರೆ ಏನು ಬೇಕಾದರೂ ಮಾಡಬಹುದು. ದಾಖಲೆಗಳಿಲ್ಲದೆ ಆರೋಪ ಮಾಡುವುದು ಹಿಟ್ ಅಂಡ್ ರನ್ ಕೇಸಿನಂತೆ ಆಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಸದನದಲ್ಲಿ ಯಾರು ಏನು ಹೇಳುತ್ತಿದ್ದಾರೆ ಎಂಬುದೇ ಗೊತ್ತಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ಸಂದರ್ಭದಲ್ಲಿ ಸ್ಪೀಕರ್ ಕೆ.ಬಿ.ಕೋಳಿವಾಡ, ರಾಜ್ಯಪಾಲರ ವಂದನಾ ನಿರ್ಣಯವನ್ನು ಮತಕ್ಕೆ ಹಾಕಿ ಸಭೆಯ ಅಂಗೀಕಾರ ಪಡೆದುಕೊಂಡರು.

ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ, ಬಂಡವಾಳ ಹೂಡಿಕೆಯಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಇದರಿಂದ 13 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಇದು ಗುಜರಾತ್‌ನಲ್ಲಿ ಏಕೆ ಸಾಧ್ಯವಾಗಿಲ್ಲ. ನಮಗೆ ಬಂದಿರುವ ಹೂಡಿಕೆಯಲ್ಲಿ ಶೇ.50ರಷ್ಟೂ ಗುಜರಾತ್‌ನಲ್ಲಿ ಆಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ನಮ್ಮ ಸರಕಾರವನ್ನು ಇನ್ನೂ ಟೇಕಾಫ್ ಆಗದ ಸರಕಾರ ಎಂದಿದ್ದಾರೆ. ಟೇಕ್ ಆಫ್ ಆಗದ ಸರಕಾರ ಇಷ್ಟೆಲ್ಲ ಕೆಲಸ ಮಾಡಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.

ಸಾರಿಗೆ ಇಲಾಖೆಯಲ್ಲಿ 105ಕ್ಕೂ ಹೆಚ್ಚು ಪ್ರಶಸ್ತಿಗಳು ಕೇಂದ್ರದಿಂದಲೇ ಬಂದಿವೆ. ಟೇಕಾಫ್ ಆಗದ, ನಿಷ್ಕ್ರಿಯ ಸರಕಾರಕ್ಕೆ ಇಷ್ಟು ಪ್ರಶಸ್ತಿ ಬರಲು ಹೇಗೆ ಸಾಧ್ಯ. ಜಿಡಿಪಿ ಬೆಳವಣಿಗೆ ಕಳೆದ ಸಾಲಿನಲ್ಲಿ 7.5 ರಷ್ಟಿತ್ತು. ಈ ಸಾಲಿನಲ್ಲಿ ಶೇ.8.5ಕ್ಕೆ ಏರಿಕೆಯಾಗಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಸರಕಾರ ಹೆಚ್ಚು ಸಾಲ ಮಾಡಿದೆ, ರಾಜ್ಯ ದಿವಾಳಿ ಆಗಿದೆ ಎನ್ನುತ್ತಾರೆ. ಆದರೆ, ನಾವು ವಿತ್ತೀಯ ಶಿಸ್ತು ಮೀರಿಲ್ಲ. ಸಾಲ ಶೇ.25 ಮೀರಬಾರದು ಎಂದಿದೆ. ನಾವು ಮಾಡಿರುವ ಸಾಲದ ಪ್ರಮಾಣ ಶೇ.19ಕ್ಕಿಂತ ಕಡಿಮೆ ಇದೆ. ಹೀಗಿರುವ ಸರಕಾರ ದಿವಾಳಿ ಆಗಲು ಹೇಗೆ ಸಾಧ್ಯ. ಆರ್ಥಿಕ ತಜ್ಞರೂ ಆಗಿರುವ ಮಾಜಿ ಪ್ರಧಾನಿ ಡಾ. ಮನಮೋಹನ್‌ಸಿಂಗ್, ರಾಜ್ಯದ ಹಣಕಾಸು ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಕೇಂದ್ರ ದುಡ್ಡು ಕೊಟ್ಟಿದೆ ಲೆಕ್ಕ ಕೊಡಿ ಎನ್ನುತ್ತಾರೆ. ಈಗ ಲೆಕ್ಕ ಕೊಡುತ್ತಿಲ್ಲವೇ. ನಾನು ಶಾಸಕಾಂಗ ಹಾಗೂ ಜನರಿಗೆ ಉತ್ತರದಾಯಿ. ಕೇಂದ್ರದ ಅನುದಾನವನ್ನು ರಾಜ್ಯ ತಿಂದು ಹಾಕಿದೆ ಎಂದು ಸುಳ್ಳು ಹೇಳಬಾರದು. ಕೇಂದ್ರ ಸರಕಾರ ಕೊಡುವುದು ನಮ್ಮ ತೆರಿಗೆ ಹಣವನ್ನೇ. ಯಾರೂ ಕೈನಿಂದ ಕೊಡುವುದಿಲ್ಲ. ಕೇಂದ್ರದಿಂದ 14ನೆ ಹಣಕಾಸು ಆಯೋಗದ ಪ್ರಕಾರ ನಮಗೆ ಬರಬೇಕಾದ ಅನುದಾನದಲ್ಲಿ 10,500 ಕೋಟಿ ರೂ.ಖೋತಾ ಆಗಿದೆ ಎಂದು ಅವರು ಹೇಳಿದರು.
  
ಕೆಲವರು ನನ್ನನ್ನು ರಾಜಕೀಯವಾಗಿ ಟಾರ್ಗೆಟ್ ಮಾಡುತ್ತಾರೆ. ಪರವಾಗಿಲ್ಲ ನಾನು ಅದನ್ನು ಎದುರಿಸಬಲ್ಲೆ. ಸಮರ್ಥವಾಗಿ ಉತ್ತರಿಸಬಲ್ಲೆ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ ಇದ್ದಂತೆ. ಮಾತ್ತೆತ್ತಿದರೆ ಅದು ಯಾವುದೋ ಡೈರಿ ಬಗ್ಗೆ ಕೂಗುತ್ತಾರೆ. ಹಾಗಾದರೆ, ಜೈನ್ ಹವಾಲಾ ಡೈರಿ ಪ್ರಕರಣ, ಸಹಾರಾ ಡೈರಿ ಪ್ರಕರಣ ಏನಾಯಿತು. ಇನಿಷಿಯಲ್‌ಗಳ ಆಧಾರದ ಮೇಲೆ ಆರೋಪ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಅದು ಯಾರೋ ನೀರವ್ ಮೋದಿ ಎಂಬಾತ ಪಂಜಾಬ್ ನ್ಯಾಷನಲ್ ಬ್ಯಾಂಕಿನ 11 ಸಾವಿರ ಕೋಟಿ ರೂ.ನುಂಗಿ ಓಡಿ ಹೋದ, ಕ್ರಿಕೆಟ್ ಲೋಕದ ಲಲಿತ್ ಮೋದಿ ಈಗ ರಾಜಸ್ಥಾನದ ಮುಖ್ಯಮಂತ್ರಿಯಾಗಿರುವ ವಸುಂಧರ ರಾಜೆಯ ಆಪ್ತ, ಆತನು ಕೋಟ್ಯಂತರ ರೂ.ವಂಚಿಸಿ ಓಡಿ ಹೋದ, ವಿಜಯ ಮಲ್ಯ 9 ಸಾವಿರ ಕೋಟಿ ರೂ.ನುಂಗಿ ಓಡಿ ಹೋದ. ಇದಕ್ಕೆಲ್ಲ ಯಾರು ಜವಾಬ್ದಾರರು ಎಂದು ಕೇಂದ್ರ ಸರಕಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News