ನಾಣ್ಯಗಳ ಮೂಲಕ ಇತಿಹಾಸ ಹೇಳುವ ‘ಕಾಯಿನ್ ಏಜ್’

Update: 2018-02-22 18:50 GMT

ಲಾಕೃತಿ ಒಂದೇಯಾದರೂ ಇದರಲ್ಲಿ ಬಹುಮುಖ ಚಿಂತನೆಗಳಿವೆ. ನಾಣ್ಯಗಳ ಮೂಲಕ ಇತಿಹಾಸ, ಆರ್ಥಿಕತೆ, ತಂತ್ರಜ್ಞಾನ, ವ್ಯಕ್ತಿ ಪರಿಚಯ, ಭೌಗೋಳಿಕ, ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟಿಕೊಡುತ್ತದೆ. ಇದು ಕುಂದಾಪುರ ತಾಲೂಕಿನ ಕೋಟೇಶ್ವರ ಮೂಲದ ಖ್ಯಾತ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಎಲ್.ಎನ್.ತಲ್ಲೂರು(47) ಕಲ್ಪನೆಯಲ್ಲಿ ಮೂಡಿಬಂದ ‘ಕಾಯಿನ್‌ಏಜ್’ ಶಿಲ್ಪಾ ಕಲಾಕೃತಿಯ ಚಿತ್ರಣ. ಈ ಅಪರೂಪದ ಅತ್ಯಾಕರ್ಷಕ ಶಿಲ್ಪಾಕಲಾ ಕೃತಿಯನ್ನು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿರುವ ಕಂಟ್ರಿ ಇನ್ ಹೊಟೇಲ್‌ನ ಬಳಿ ನಿರ್ಮಿಸಿರುವ ತೋನ್ಸೆ ಟಿ.ಉಪೇಂದ್ರ ಪೈ ಸ್ಮಾರಕ ಸರ್ಕಲ್ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಅಪರೂಪದ ಮಿಲ್ಲಿಂಗ್ ತಂತ್ರಜ್ಞಾನದಲ್ಲಿ ರಚಿಸಿರುವ ಈ ಶಿಲ್ಪ ಕಲಾಕೃತಿಯನ್ನು ಪ್ರಾಚೀನ ನಾಣ್ಯಗಳ ಆಕಾರದಲ್ಲಿ ವಿಶಿಷ್ಟವಾಗಿ ರಚಿಸಲಾಗಿದೆ. ಈ ಕಲಾಕೃತಿ 6.5 ಟನ್ ಭಾರ, 27 ಅಡಿ ಎತ್ತರ ಇದೆ. ಇದರಲ್ಲಿ ಏಳು ವಿವಿಧ ಶಿಲ್ಪಗಳನ್ನು ಬಳಸಿಕೊಳ್ಳಲಾಗಿದೆ. ರಾಜಸ್ಥಾನದ ಸ್ಯಾಂಡ್‌ಸ್ಟೋನ್, ತಮಿಳುನಾಡಿನ ಮಹಾಬಲಿಪುರಂನ ಶಿಲೆ, ಯೆರ್‌ಕಾಡ್ ಬ್ಲೂ ಸ್ಟೋನ್, ಟರ್ಕಿ ಮಾರ್ಬಲ್, ಕಾರ್ಕಳದ ಶಿಲೆಕಲ್ಲು ಹಾಗೂ ಬೆಂಗಳೂರಿನ ಕಪ್ಪು ಶಿಲೆಗಳಲ್ಲಿ ನಾಣ್ಯಗಳ ಆಕಾರದಲ್ಲಿ ಕಲಾಕೃತಿಗಳನ್ನು ಕೆತ್ತಲಾಗಿದೆ.

ಏಳು ನಾಣ್ಯ ಕಲಾಕೃತಿಗಳು ಇದರಲ್ಲಿ ಏಳು ನಾಣ್ಯ ಕಲಾಕೃತಿಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ಇಡಲಾಗಿದೆ. ಕಲಾಕೃತಿಯ ಮೇಲ್ತುದಿಯಿಂದ ಒಟ್ಟೆ ಪಾವಲಿ, ಅಳುಪರ ಕಾಲದಲ್ಲಿ ಬಾರಕೂರಿನ ಟಂಕಶಾಲೆಯಲ್ಲಿ ಮುದ್ರಿಸಿರುವ ನಾಣ್ಯ, ಮೂರು ಪೈಸೆ ನಾಣ್ಯ, ತೆರಿಗೆ ಇಲಾಖೆಯ 150ನೆ ವರ್ಷಾಚರಣೆಯ ಪ್ರಯುಕ್ತ ಹೊರ ತರಲಾದ 50 ರೂ. ನಾಣ್ಯ, ಐದು ಪೈಸೆ ನಾಣ್ಯ, ಅಳುಪರ ಲಾಂಛನ, ಒಂದು ರೂ. ನಾಣ್ಯಗಳ ಪರಿಕಲ್ಪನೆಯಲ್ಲಿ ಕಲಾಕೃತಿ ಮೂಡಿಬಂದಿದೆ. ಇದರಲ್ಲಿ ವಿಜಯನಗರದ ಕಾಲದಲ್ಲಿ ಬಳಕೆ ಮಾಡಿರುವ ಕನ್ನಡ ಅಕ್ಷರ, ಮೀನು ಮತ್ತು ದೇವರ ಛತ್ರಿ, 1934ರಲ್ಲಿ ಗಾಂಧೀಜಿ ಉಡುಪಿಗೆ ಭೇಟಿ, ಚಾಣಕ್ಯ, ಭತ್ತದ ತೆನೆ, ಕೃಷಿ ಸಲಕರಣೆ, ಕೋಣ, ಭರತನಾಟ್ಯದ ಪ್ರಶ್ನಾ ಮುದ್ರೆ, ಪಿಂಗಾರ, ಕವಡೆ ಚಿತ್ರಗಳು ಅಡಕವಾಗಿವೆ. ಇವೆಲ್ಲವೂ ಮೂಲ ರೂಪದ ನಾಣ್ಯಗಳಾಗಿರದೆ, ನಾಣ್ಯಗಳ ಆಕಾರದಲ್ಲಿ ಇತಿಹಾಸ, ಭೌಗೋಳಿಕ, ಸಂಸ್ಕೃತಿ, ಪರಂಪರೆ, ಆರ್ಥಿಕತೆಯನ್ನು ಪ್ರತಿಂಬಿಸುವ ಕಲಾಕೃತಿಗಳಾಗಿವೆ. ಕಲಾಕೃತಿ ತುಳುನಾಡಿನ ಇತಿಹಾಸದ ಜೊತೆಗೆ ಮಣಿಪಾಲದ ಆರ್ಥಿಕತೆಯನ್ನು ಬಿಚ್ಚಿಡುತ್ತದೆ. ಪಿಗ್ಮಿಯನ್ನು ಮೊತ್ತಮೊದಲ ಬಾರಿಗೆ ಆರಂಭಿಸಿದ ತೋನ್ಸೆ ಉಪೇಂದ್ರ ಎ. ಪೈ ಅವರ ವ್ಯಕ್ತಿತ್ವದ ಪರಿಚಯವನ್ನು ಕೂಡ ಈ ಕಲಾಕೃತಿ ಕಟ್ಟಿಕೊಡುತ್ತದೆ. ಪಿಂಗಾರ ಹೂವು, ಕವಡೆಗಳು ಇಲ್ಲಿನ ಸಂಸ್ಕೃತಿ, ಪರಂಪರೆಯ ಬಗ್ಗೆ ಮಾತನಾಡುತ್ತವೆ. ಫೆ.25ರಂದು ಅನಾವರಣ

ಈ ಕಲಾಕೃತಿಯು ಸಂಪೂರ್ಣ ಪ್ರಕೃತಿದತ್ತ ಬಣ್ಣವನ್ನೇ ಹೊಂದಿದೆ. ಇಲ್ಲಿ ಯಾವುದೇ ಕೃತಕ ಬಣ್ಣಗಳ ಬಳಕೆ ಮಾಡಿಲ್ಲ. ಮಣಿಪಾಲ ಟೆಕ್ನಾಲಜೀಸ್ ಪ್ರಾಯೋಜಕತ್ವದ ಸುಮಾರು ಒಂದೂವರೆ ವರ್ಷಗಳ ಯೋಜನೆ ಇದಾಗಿದೆ. ಈಗಾಗಲೇ ಸರ್ಕಲ್‌ನಲ್ಲಿ ಜೋಡಿಸಿ ಮುಚ್ಚಿ ಇಟ್ಟಿರುವ ಈ ಕಲಾಕೃತಿಯು ಫೆ.25ರಂದು ಸಾರ್ವಜನಿಕರ ವೀಕ್ಷಣೆಗೆ ಅನಾವರಣಗೊಳ್ಳಲಿದೆ.

ತಲ್ಲೂರು ಮೊದಲ ಬಾರಿಗೆ ಭಾರತದಲ್ಲಿ ಸಾರ್ವಜನಿಕವಾಗಿ ಸ್ಥಾಪಿಸಿದ ಕಲಾ ಕೃತಿ ಇದಾಗಿದೆ. ಇದಕ್ಕೆ ಮೊದಲು ಅವರು ಮುಂಬೈಯ ಜಿಂದಾಲ್ ಅವರ ಖಾಸಗಿ ಸ್ಥಳದಲ್ಲಿ ಇಂತಹ ಕಲಾಕೃತಿಯನ್ನು ಸ್ಥಾಪಿಸಿದ್ದಾರೆ. ಕೊರಿಯಾದ ಎರಡು ಕಡೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಇದೇ ರೀತಿಯ ಕಲಾಕೃತಿಯನ್ನು ರಚಿಸಿದ್ದಾರೆ. ಇವರು ಪ್ರತಿವರ್ಷ ಪ್ರಪಂಚದ ಬೇರೆ ಬೇರೆ ದೇಶಗಳ ಐದು ಗ್ಯಾಲರಿಗಳಲ್ಲಿ ತನ್ನ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನವನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಮುಂಬೈಯ ಛತ್ರಪತಿ ಶಿವಾಜಿ ವಸ್ತು ಸಂಗ್ರಹಾಲಯದಲ್ಲಿ ಹಮ್ಮಿಕೊಳ್ಳಲಾಗಿರುವ 200 ವಸ್ತುಗಳ ಮೂಲಕ ಭಾರತ ಮತ್ತು ಪ್ರಪಂಚದ ಸಂಬಂಧ ಕುರಿತ ಇತಿಹಾಸದ ಕಥೆ ಹೇಳುವ ಪ್ರದರ್ಶನದಲ್ಲಿ ಎಲ್.ಎನ್.ತಲ್ಲೂರು ಅವರ ಯುನಿಕೋಡ್ ಎಂಬ ಕಲಾಕೃತಿ ಕೂಡ ಒಂದಾಗಿದೆ. ಎಲ್.ಎನ್. ತಲ್ಲೂರು ಪರಿಚಯ

ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿ ಹುಟ್ಟಿ ವಿವಿಧ ಕಡೆ ಶಿಕ್ಷಣ ಪಡೆದು ದಕ್ಷಿಣ ಕೊರಿಯಾದಲ್ಲಿ ನೆಲೆ ಕಂಡು, ಪ್ರಸ್ತುತ ಕುಂದಾಪುರದ ಕೋಟೇಶ್ವರ ಹಾಗೂ ದಕ್ಷಿಣ ಕೊರಿಯಾದ ದೆಗು ನಗರಗಳ ನಡುವೆ ತನ್ನ ಸಮಯವನ್ನು ಹಂಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿರುವ ಕಲಾವಿದ ಲಕ್ಷ್ಮೀನಾರಾಯಣ ತಲ್ಲೂರು. ತಲ್ಲೂರು ಎಲ್.ಎನ್. ಜಗತ್ತಿನ ವಿವಿಧೆಡೆಗಳಲ್ಲಿ ನಡೆದ ಪ್ರಮುಖ ಕಲಾ ಪ್ರದರ್ಶನಗಳಲ್ಲಿ ತಮ್ಮ ಅದ್ಭುತ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. 1992ರಲ್ಲಿ ಮೈಸೂರು ವಿವಿಯ ಚಾಮರಾಜೇಂದ್ರ ಅಕಾಡಮಿ ಆಫ್ ವಿಜುವಲ್ ಆರ್ಟ್ಸ್‌ನ ಪೈಂಟಿಂಗ್‌ನಲ್ಲಿ ಬಿಎಫ್‌ಎ, 1997ರಲ್ಲಿ ಗುಜರಾತ್ ಬರೋಡ ಮಹಾರಾಜ ಸಯ್ಯ್‌ಜಿ ರಾವ್ ವಿವಿಯ ಮ್ಯೂಸಿಯಾಲಜಿಯಲ್ಲಿ ಎಂಎಫ್‌ಎ ಮತ್ತು 2001ರಲ್ಲಿ ಇಂಗ್ಲೆಂಡಿನ ಲೀಡ್ಸ್ ಮೆಟ್ರೋಪಾಲಿಟನ್ ವಿವಿಯಲ್ಲಿ ಎಂ.ಎ.(ಕಂಟೆೆಂಪೊರರಿ ಫೈನ್ ಆರ್ಟ್ ಪ್ರಾಕ್ಟೀಸ್) ಶಿಕ್ಷಣವನ್ನು ಇವರು ಪೂರೈಸಿದ್ದಾರೆ.

ಈ ಅಪ್ರತಿಮ ಕಲಾವಿದ 1999ರಿಂದ 2017ರವರೆಗೆ ಮುಂಬೈ, ದಿಲ್ಲಿ, ದಕ್ಷಿಣ ಕೊರಿಯಾ, ನ್ಯೂಯಾರ್ಕ್, ಚೀನಾ, ಜರ್ಮನ್, ಜಾರ್ಜಿಯ ಸೇರಿದಂತೆ ಜಗತ್ತಿನ ನಾನಾ ಭಾಗಗಳಲ್ಲಿ ಒಟ್ಟು 16 ಏಕವ್ಯಕ್ತಿ ಕಲಾಪ್ರದರ್ಶನ ವನ್ನು ನಡೆಸಿದ್ದಾರೆ. 1997ರಿಂದ ದೇಶ ವಿದೇಶಗಳ ಹಲವು ಗ್ರೂಪ್ ಎಕ್ಸಿಬಿಷನ್‌ನಲ್ಲಿ ತನ್ನ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. 1997ರಲ್ಲಿ ದಿಲ್ಲಿಯ ಇನ್‌ಲ್ಯಾಕ್ಸ್ ಫೈನ್ ಆರ್ಟ್ ಅವಾರ್ಡ್, 1999 ರಲ್ಲಿ ನ್ಯೂಯಾರ್ಕ್‌ನ ಎಮರ್ಜಿಂಗ್ ಆರ್ಟಿಸ್ಟ್ ಅವಾರ್ಡ್, 2003ರಲ್ಲಿ ದಿಲ್ಲಿಯ ಸಂಸ್ಕೃತಿ ಅವಾರ್ಡ್, 2012ರಲ್ಲಿ ಪ್ರತಿಷ್ಠಿತ ಸ್ಕೋಡಾ ಪ್ರೈಝ್‌ನಿಂದ ಇವರು ಪುರಸ್ಕೃತರಾಗಿದ್ದಾರೆ. ಬರೋಡಾದ ಎಂ.ಎಸ್. ವಿವಿಯಲ್ಲಿ ಮ್ಯೂಸಿಯಾಲಜಿ ವಿಭಾಗದ ಎಂ.ಎಫ್.ಎ. ಪದವಿಗಾಗಿ ಮ್ಯೂಸಿಯಂಗಳಲ್ಲಿ ಶಬ್ದೇತರ ಸಂವಹನ, ‘ಪ್ರದರ್ಶನಗಳ ವಿನ್ಯಾಸದಲ್ಲಿ ಬಹು ಜ್ಞಾನೇಂದ್ರಿಯಗಳ ಬಳಕೆಯ ಹಾದಿ’ ಕುರಿತು ಸಂಶೋಧನಾ ಪ್ರಬಂಧವನ್ನು ಇವರು ಸಿದ್ಧಪಡಿಸಿದ್ದರು.

ಪುಸ್ತಕ ಅನಾವರಣ


ಅಂತಾರಾಷ್ಟ್ರೀಯ ಕಲಾವಿದ ಎಲ್.ಎನ್.ತಲ್ಲೂರು ಅವರ ಪರಿಚಯವನ್ನು ಕನ್ನಡಿಗರಿಗೆ ಮಾಡುವ ಉದ್ದೇಶದಿಂದ ಅವರ ಕುರಿತ ‘ತಲ್ಲೂರು ಎಲ್.ಎನ್.’ ಎಂಬ ಕನ್ನಡ ಪುಸ್ತಕ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಫೆ.23ರಂದು ಸಂಜೆ 6 ಗಂಟೆಗೆ ಮಣಿಪಾಲದ ಕಂಟ್ರಿ ಇನ್ ಹೊಟೇಲ್ ಸಭಾಂಗಣದಲ್ಲಿ ಇದರ ಬಿಡುಗಡೆ ನಡೆಯಲಿದೆ.
ತಲ್ಲೂರು ಅವರ ಆರ್ಥಿಕತೆ ಎಂಬ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಅವರ ಕಲಾಕೃತಿಗಳು

, ಅವುಗಳ ವಿವರ ಮತ್ತು ಮೂವರು ಹಿರಿಯ ಕಲಾ ವಿಮರ್ಶಕರಾದ ಪೀಟರ್ ನ್ಯಾಗಿ, ಫಾಯ್ ಹರ್ಷ್, ಡಾ.ಹೊಲಿ ಷಾಫರ್, ತಲ್ಲೂರು ಕಲಾಕೃತಿ ಬಗ್ಗೆ ಬರೆದಿರುವ ವಿಮರ್ಶಾ ಲೇಖನಗಳ ಕನ್ನಡ ಅನುವಾದಗಳು ಈ ಪುಸ್ತಕದಲ್ಲಿ ಇವೆ.
ಇದರಲ್ಲಿ ಜಗತ್ತಿನ ವಿವಿಧ ಭಾಗಗಳ ಹಿರಿಯ ಕಲಾವಿಮರ್ಶಕರು ತಲ್ಲೂರು ಬಗ್ಗೆ ಬರೆದಿರುವ ವಿಮರ್ಶಾ ಲೇಖನಗಳು ಮತ್ತು ಆರ್ಥಿಕತೆಯನ್ನು ವಿಷಯ ವಾಗಿರಿಸಿಕೊಂಡು ತಲ್ಲೂರು ರಚಿಸಿರುವ ಕಲಾಕೃತಿಗಳ ಚಿತ್ರಗಳಿವೆ. ಒಟ್ಟು 120 ಪುಟಗಳ ಸಂಪೂರ್ಣ ಬಹುವರ್ಣ ಪುಸ್ತಕವನ್ನು ಅವರ ಸಹೋದರ ರಾಜಾರಾಮ್ ತಲ್ಲೂರು ಸಂಪಾದಿಸಿದ್ದಾರೆ.

ಏನಿದು ಮಿಲ್ಲಿಂಗ್ ತಂತ್ರಜ್ಞಾನ?


ಈ ಶಿಲ್ಪಕಲಾಕೃತಿಯನ್ನು ಮಿಲ್ಲಿಂಗ್ ತಂತ್ರಜ್ಞಾನದಲ್ಲಿ ರಚಿಸಲಾಗಿದೆ. ಮೊದಲು ಕಲಾಕೃತಿಗೆ ಬೇಕಾದ ನಾಣ್ಯಗಳನ್ನು ಸಂಗ್ರಹಿಸಿ ಅದರ ಅಧ್ಯಯನ ಮಾಡಲಾಗುತ್ತದೆ. ಬಳಿಕ ಅವುಗಳನ್ನು 3ಡಿ ಸ್ಕಾನಿಂಗ್ ಮಾಡಿ, ನಂತರ ಅದರದ್ದೇ ಸಣ್ಣ ಮಾದರಿಯನ್ನು ಆವೆ ಮಣ್ಣಿನಲ್ಲಿ ತಯಾರಿಸಲಾಗುತ್ತದೆ. ಮತ್ತೆ ಅದರಲ್ಲಿ ಬೇಡದ್ದನ್ನು ತೆಗೆದು ಹಾಕಲಾಗುತ್ತದೆ. ನಂತರ ಎರಡನ್ನೂ ಒಟ್ಟಿಗೆ ಮರು ಸ್ಕಾನಿಂಗ್ ಮಾಡಲಾಗುತ್ತದೆ. ಹೀಗೆ ಸಿದ್ಧಪಡಿಸಿದ ಕಲಾಕೃತಿಯನ್ನು ಚೆನ್ನೈಯಲ್ಲಿ ತಯಾರಿಸಲಾಗಿದೆ.
ವಿದೇಶದ ಮಿಲ್ಲಿಂಗ್ ತಂತ್ರಜ್ಞಾನಕ್ಕೂ ಈ ತಂತ್ರಜ್ಞಾನಕ್ಕೂ ಇರುವ ವ್ಯತ್ಯಾಸ ಅಂದರೆ ಇಲ್ಲಿ ಭಾರತೀಯ ಕಲಾ ಭಾಷೆಯನ್ನು ಬಳಸಿಕೊಳ್ಳಲಾಗಿದೆ ಎನ್ನುತ್ತಾರೆ ಕಲಾವಿದ ಎಲ್.ಎನ್.ತಲ್ಲೂರು.

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News

ಜಗದಗಲ
ಜಗ ದಗಲ