ಶಿವಮೊಗ್ಗ: ವೀಕ್ಷಕರ ಸಮ್ಮುಖದಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳ ಹೈಡ್ರಾಮಾ!

Update: 2018-02-23 15:21 GMT

ಶಿವಮೊಗ್ಗ, ಫೆ. 23: ವಿಧಾನಸಭೆ ಚುನಾವಣೆಗೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಹಿರಿಯ ನಾಯಕರನ್ನೊಳಗೊಂಡ ವೀಕ್ಷಕರ ತಂಡವು ಶುಕ್ರವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿತು. ಸ್ಪರ್ಧಾಕಾಂಕ್ಷಿಗಳ ಅಹವಾಲು ಆಲಿಸಿತು. ಈ ವೇಳೆ ಸಾಕಷ್ಟು ಹೈಡ್ರಾಮಾಕ್ಕೆ ಕಾಂಗ್ರೆಸ್ ಕಚೇರಿ ಸಾಕ್ಷಿಯಾಯಿತು.

ವಿವಿಧ ಕ್ಷೇತ್ರಗಳ ಸ್ಪರ್ಧಾಕಾಂಕ್ಷಿಗಳ ಬೆಂಬಲಿಗರು ವೀಕ್ಷಕರ ಮುಂಭಾಗ ಶಕ್ತಿ ಪ್ರದರ್ಶನ ನಡೆಸಿದರು. ತಮ್ಮ ನಾಯಕರ ಪರವಾಗಿ ಘೋಷಣೆ ಕೂಗಿದರು. ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದರು. ವಿಶೇಷವಾಗಿ ಶಿವಮೊಗ್ಗ ನಗರ ಹಾಗೂ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಿಂದಲೇ ಅತೀ ಹೆಚ್ಚಿನ ಸಂಖ್ಯೆಯ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರು ಜಮಾಯಿಸಿದ್ದರು. ಇದರಲ್ಲಿ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ಪರ್ಧಾಕಾಂಕ್ಷಿ ಬೆಂಬಲಿಗರ ನಡುವೆ ಭಾರೀ ಹೈಡ್ರಾಮಾವೇ ನಡೆಯಿತು. ನೂಕಾಟ, ತಳ್ಳಾಟ, ಗೊಂದಲ, ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು. ಕೈ ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ತಲುಪಿತ್ತು. ಘೋಷಣೆಗಳು ಮುಗಿಲು ಮುಟ್ಟಿದ್ದವು. ಕಾಂಗ್ರೆಸ್ ಕಚೇರಿ ಮುಂಭಾಗ ನೂರಾರು ಬೆಂಬಲಿಗರು ಜಮಾಯಿಸಿದ್ದರಿಂದ, ಪಿಎಲ್‌ಡಿ ಬ್ಯಾಂಕ್ ರಸ್ತೆಯ ಅರ್ಧ ಭಾಗದಲ್ಲಿ ಪೊಲೀಸರು ವಾಹನ ಸಂಚಾರದ ಮೇಲೆ ನಿಷೇಧ ಹೇರಿದ್ದರು.

ಗೊಂದಲ: ಪಕ್ಷದ ವೀಕ್ಷಕರಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸದಸ್ಯರಾದ ಬಿ.ಎಸ್.ಚಂದ್ರಪ್ಪ, ಮಾಜಿ ಸಂಸದ ಮಂಜುನಾಥ ಕುಕ್ಕನೂರು, ನಾಗಚೌಡಯ್ಯ, ಆಗ ಸುಲ್ತಾನ್, ರಾಮಲಿಂಗಯ್ಯ, ಯೋಗೇಶ್ವರಿ ವಿಜಯ ಆಗಮಿಸಿದ್ದರು. ವೀಕ್ಷಕರ ಸಮ್ಮುಖದಲ್ಲಿ ವಿಧಾನಸಭಾವಾರು ಅಹವಾಲು ಆಲಿಸಿದರು. ಸ್ಪರ್ಧಾಕಾಂಕ್ಷಿಗಳು ತಮಗೆ ಟಿಕೆಟ್ ನೀಡುವಂತೆ ವೀಕ್ಷಕರಿಗೆ ಮನವಿ ಮಾಡಿಕೊಂಡು, ತಮ್ಮ ಸವಿವರದ ಪತ್ರಗಳನ್ನು ನೀಡುತ್ತಿದ್ದರು.
ಈ ವೇಳೆ ಅವರ ಬೆಂಬಲಿಗರು ಫಲಕಗಳನ್ನು ಕೈಯಲ್ಲಿಡಿದು, ಘೋಷಣೆಗಳನ್ನು ಕೂಗುತ್ತಾ ತಂಡೋಪತಂಡವಾಗಿ ವೀಕ್ಷಕರ ಬಳಿ ಆಗಮಿಸಿ ತಮ್ಮ ನಾಯಕರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿದ್ದರು. ಇದು ವೀಕ್ಷಕರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡುವುದರ ಜೊತೆಗೆ, ಸ್ಥಳದಲ್ಲಿ ಗೊಂದಲ-ಗಡಿಬಿಡಿಯ ವಾತಾವರಣ ಸೃಷ್ಟಿಯಾಗುವಂತೆ ಮಾಡಿತ್ತು. ಬೆಂಬಲಿಗರನ್ನು ಸಮಾಧಾನ ಪಡಿಸಲು ಹರಸಾಹಸ ನಡೆಸುವಂತಾಯಿತು.

ಪೈಪೋಟಿ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿಗಳು ಭಾರೀ ಹೈಡ್ರಾಮಾವನ್ನೇ ಸೃಷ್ಟಿಸಿದರು. ಅದರಲ್ಲಿಯೂ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಹಾಗೂ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಬೆಂಬಲಿಗರ ನಡುವೆ ತೀವ್ರ ನೂಕಾಟ, ತಳ್ಳಾಟದಂತಹ ಘಟನೆಗಳು ಕೂಡ ನಡೆದವು. ಘೋಷಣೆ - ಪ್ರತಿ ಘೋಷಣೆಗಳು ಮುಗಿಲು ಮುಟ್ಟಿದ್ದವು. ಪೊಲೀಸರೇ ಮಧ್ಯಪ್ರವೇಶಿಸಿ ಉದ್ರಿಕ್ತ ಬೆಂಬಲಿಗರನ್ನು ಸಮಾಧಾನಗೊಳಿಸುತ್ತಿದ್ದ ದೃಶ್ಯ ಕಂಡುಬಂದಿತು.

ಮತ್ತೊಂದೆಡೆ 11 ಜನರ ನಾಯಕರ ತಂಡವು ಕೂಡ ವೀಕ್ಷಕರನ್ನು ಭೇಟಿಯಾಗಿ ತಮ್ಮ ತಂಡದಲ್ಲಿರುವವರಲ್ಲಿ ಓರ್ವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿತು. ಎಚ್.ಎಂ.ಚಂದ್ರಶೇಖರಪ್ಪ, ಎಲ್. ಸತ್ಯನಾರಾಯಣರಾವ್, ಇಮ್ತಿಯಾಝ್ ಖಾನ್, ಮುಕ್ತಿಯಾರ್ ಅಹ್ಮದ್, ಚಾಲುಕ್ಯ ಸುರೇಶ್‌ಕುಮಾರ್, ಎಲ್. ರುದ್ರೇಶ್, ಎಚ್.ಎಂ.ಸತ್ಯನಾರಾಯಣ ಇತರರಿದ್ದರು. ಈ ತಂಡ ಹಾಗೂ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಬೆಂಬಲಿಗರ ನಡುವೆಯೂ ಪೈಪೋಟಿ ಏರ್ಪಟ್ಟಿದ್ದು ಕಂಡುಬಂದಿತು.

ಭಾರೀ ಸ್ಪರ್ಧೆ: ಉಳಿದಂತೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಪಲ್ಲವಿ, ಬಲದೇವ್ ಕೃಷ್ಣ, ರವಿಕುಮಾರ್, ಶಂಕರ್ ಬೆಂಬಲಿಗರು ಕೂಡ ಕಚೇರಿ ಆವರಣದಲ್ಲಿ ಜಮಾಯಿಸಿ ತಮ್ಮ ನಾಯಕರ ಪರವಾಗಿ ಘೋಷಣೆ ಕೂಗಿದರು. ತಂಡೋಪತಂಡವಾಗಿ ವೀಕ್ಷಕರನ್ನು ಭೇಟಿಯಾಗಿ ತಮ್ಮ ನಾಯಕರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದರು.

ಭದ್ರಾವತಿ ಕ್ಷೇತ್ರದಿಂದ ಮಾಜಿ ಶಾಸಕ ದಿ.ರಾಜಶೇಖರ್ ಪುತ್ರ ಜಿ.ಆರ್.ಪ್ರವೀಣ್ ಪಟೇಲ್ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಬಿ.ಕೆ.ಸಂಗಮೇಶ್, ಬಲ್ಕೀಷ್ ಬಾನು ಇತರ ನಾಯಕರ ಬೆಂಬಲಿಗರು ಕಚೇರಿಯಲ್ಲಿ ಜಮಾಯಿಸಿದ್ದರು. ಸೊರಬ ಕ್ಷೇತ್ರದಿಂದ ಲಕ್ಷ್ಮೀಕಾಂತ ಚಿಮಣೂರು, ಹುಲ್ತಿಕೊಪ್ಪಶ್ರೀಧರ್, ರಾಜು ಹಾಗೂ ಇತರ ಸ್ಪರ್ಧಾಕಾಂಕ್ಷಿಗಳು, ಶಿಕಾರಿಪುರದಿಂದ ನಗರದ ಮಹದೇವಪ್ಪ, ಗೋಣಿ ಮಾಲತೇಶ್ ಮೊದಲಾದ ಸ್ಪರ್ಧಾಕಾಂಕ್ಷಿಗಳು ವೀಕ್ಷಕರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಜನಾಭಿಪ್ರಾಯ ತನ್ನ ಪರವಾಗಿದೆ

ಸುಮಾರು 35 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೆನೆ. ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೆನೆ. ಈ ಬಾರಿ ಸ್ಪರ್ಧೆಗೆ ಅವಕಾಶ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದು, ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕ್ಷೇತ್ರದಲ್ಲಿ ಜನಾಭಿಪ್ರಾಯವು ತನ್ನ ಪರವಾಗಿ ವ್ಯಕ್ತವಾಗುತ್ತಿದೆ. ಕಾರ್ಯಕರ್ತರು ಕೂಡ ಅಭ್ಯರ್ಥಿ ಬದಲಾವಣೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಕಾರಣದಿಂದ ತನಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಶಿವಮೊಗ್ಗ ನಗರ ಕ್ಷೇತ್ರದ ಸ್ಪರ್ಧಾಕಾಂಕ್ಷಿ, ಭದ್ರಾ ಕಾಡಾಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದ್ದಾರೆ.

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಪ್ರವೀಣ್ ಪಟೇಲ್ ಈ ಬಾರಿ ಭದ್ರಾವತಿ ಕ್ಷೇತ್ರದ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರು ಚುನಾವಣಾ ಕಣಕ್ಕಿಳಿಯುವಂತೆ ಒತ್ತಾಯಿಸುತ್ತಿದ್ದಾರೆ. ಈ ಕಾರಣದಿಂದ ಈಗಾಗಲೇ ಪಕ್ಷದ ವರಿಷ್ಠರಿಗೆ ಟಿಕೆಟ್ ಕೋರಿ ಮನವಿ ಮಾಡಿಕೊಂಡಿದ್ದೇನೆ. ಜಿಲ್ಲೆಗೆ ಆಗಮಿಸಿರುವ ವೀಕ್ಷಕರಿಗೂ ಬೆಂಬಲಿಗರ ಜೊತೆ ತೆರಳಿ ತನ್ನ ವಿವರ ನೀಡಿದ್ದೇನೆ. ಈ ಬಾರಿ ತಮಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಿರುವುದಾಗಿ ಭದ್ರಾವತಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಜಿ.ಆರ್.ಪ್ರವೀಣ್ ಪಟೇಲ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಕ್ಷದ ನಿಷ್ಠಾವಂತ ಕಾರ್ಯಕರ್ತ: ಲಕ್ಷ್ಮೀಕಾಂತ ಚಿಮಣೂರು
ತಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷದ ವರಿಷ್ಠರು ನೀಡಿದ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಣೆ ಮಾಡಿಕೊಂಡು ಬಂದಿದ್ದೇನೆ. ಕ್ಷೇತ್ರದ ಮತದಾರರು, ಪಕ್ಷದ ಕಾರ್ಯಕರ್ತರು ಕೂಡ ತನ್ನ ಪರವಾಗಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಸಿಗುವ ನಿರೀಕ್ಷೆಯಿದೆ ಎಂದು ಸೊರಬ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಲಕ್ಷ್ಮೀಕಾಂತ ಚಿಮಣೂರು ತಿಳಿಸಿದ್ದಾರೆ.

ಟಿಕೆಟ್ ಸಿಗುವ ವಿಶ್ವಾಸವಿದೆ: ಪಲ್ಲವಿ
ಈ ಬಾರಿಯ ಚುನಾವಣೆಯಲ್ಲಿ ತಾನು ಗ್ರಾಮಾಂತರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಟಿಕೆಟ್ ಸಿಗುವ ನಿರೀಕ್ಷೆಯಿದೆ. ಪಕ್ಷದ ವರಿಷ್ಠರು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ನಿರ್ದೇಶನ ನೀಡಿದ್ದಾರೆ. ನೂರಾರು ಸಂಖ್ಯೆಯಲ್ಲಿ ಬೆಂಬಲಿಗರು ಸ್ವಯಂ ಪ್ರೇರಿತವಾಗಿ ಆಗಮಿಸಿ ತನಗೆ ಟಿಕೆಟ್ ನೀಡುವಂತೆ ವೀಕ್ಷಕರಿಗೆ ಮನವಿ ಮಾಡಿಕೊಂಡಿದ್ದಾರೆ. ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ತನ್ನ ಸೇವೆಯನ್ನು ಪಕ್ಷ ಗಮನಿಸುವ ವಿಶ್ವಾಸವಿದೆ ಎಂದು ಶಿವಮೊಗ್ಗ ಗ್ರಾಮೀಣ ಕ್ಷೇತ್ರದ ಆಕಾಂಕ್ಷಿ ಪಲ್ಲವಿ ಹೇಳಿದ್ದಾರೆ.

11 ಜನರಲ್ಲಿ ಓರ್ವರಿಗೆ ಟಿಕೆಟ್ ಖಚಿತ : ಎಲ್. ಸತ್ಯನಾರಾಯಣರಾವ್
ಪಕ್ಷದ 11 ನಾಯಕರು ತಂಡ ರಚನೆ ಮಾಡಿಕೊಂಡು ನಮ್ಮಲ್ಲಿ ಓಬ್ಬರಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿಕೊಂಡು ಬಂದಿದ್ದೆವೆ. ಒಟ್ಟಾಗಿ ಪ್ರಯತ್ನ ನಡೆಸುತ್ತಿದ್ದೆವೆ. ಈಗಾಗಲೇ ಬೆಂಗಳೂರು ಹಾಗೂ ದೆಹಲಿಗೆ ತೆರಳಿ ಪಕ್ಷದ ವರಿಷ್ಠರಿಗೆ ಟಿಕೆಟ್ ಕೋರಿ ಮನವಿ ಮಾಡಿಕೊಂಡಿದ್ದೆವೆ. ಎಲ್ಲೆಡೆಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮಲ್ಲಿ ಓಬ್ಬರು ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗಿದೆ' ಎಂದು ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಲ್. ಸತ್ಯನಾರಾಯಣರಾವ್ ತಿಳಿಸಿದ್ದಾರೆ. 

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News