ನಾಗಮಂಗಲ: ಹಾಲಿ-ಮಾಜಿ ಶಾಸಕರ ಬೆಂಬಲಗರ ನಡುವೆ ಮಾತಿನ ಚಕಮಕಿ

Update: 2018-02-23 18:25 GMT

ನಾಗಮಂಗಲ, ಫೆ.23: ತಾಲೂಕಿನ ಕದಬಹಳ್ಳಿ ರಂಗನಾಥಸ್ವಾಮಿ ಸಮುದಾಯ ಭವನ ಉದ್ಘಾಟನೆ ವೇಳೆ ಹಾಲಿ ಶಾಸಕ ಎನ್.ಚಲುವರಾಯಸ್ವಾಮಿ ಮತ್ತು ಮಾಜಿ ಶಾಸಕ ಸುರೇಶ್‍ಗೌಡ ಬೆಂಬಲಿಗರ ನಡುವೆ ಶುಕ್ರವಾರ ತಳ್ಳಾಟ, ನೂಕಾಟವಾದ ಘಟನೆ ನಡೆದಿದೆ.

ಘಟನೆಯ ವಿವರ: ಸಮುದಾಯ ಭವನ ಉದ್ಘಾಟನೆ ಹಿನ್ನೆಲೆಯಲ್ಲಿ ಜಿಪಂ ಸದಸ್ಯ ಶಿವಪ್ರಕಾಶ್, ವಿಎಸ್‍ಎಸ್ ಸೋಸೈಟಿ ಮಾಜಿ ಅಧ್ಯಕ್ಷ ಶಿಖರನಹಳ್ಳಿ ದೊರೆಸ್ವಾಮಿ ತಿಟ್ಟನಹೊಸಹಳ್ಳಿ ಪುನೀತ್, ನಾಗೇಶ್ ಮುಂದಾಳತ್ವದ ಜೆಡಿಎಸ್ ಕಾರ್ಯಕರ್ತರ ಗುಂಪು ಬೆಳಗ್ಗೆಯಿಂದಲೇ ಸಮುದಾಯದ ಗೇಟ್‍ಗೆ ಅಡ್ಡಲಾಗಿ ಕುಳಿತಿದ್ದು, ಮತ್ತೊಂದೆಡೆ, ಚಲುವರಾಯಸ್ವಾಮಿ ಬೆಂಬಲಿಗರು ಮತ್ತು ಕಾಂಗ್ರೆಸ್‍ನವರ ಗುಂಪು ಚಲುವರಾಯಸ್ವಾಮಿ ಭವನ ಉದ್ಘಾಟನೆಗೆ ಆಗಮಿಸುವುದನ್ನು ಕಾಯುತ್ತಾ ಕುಳಿತಿತ್ತು. ಈ ವೇಳೆ ಪೊಲೀಸರು ಮುನ್ನಚ್ಚರಿಕೆ ಕ್ರಮ ವಹಿಸಿದ್ದರು. ನಂತರ ಮಧ್ಯಾಹ್ನ ವೇಳೆ ಆಗಮಿಸಿದ ಶಾಸಕ ಚಲುವರಾಯಸ್ವಾಮಿ ಕಟ್ಟಡ ಉದ್ಘಾಟನೆಗೆ ಮುಂದಾದಾಗ ಜೆಡಿಎಸ್ ಕಾರ್ಯಕರ್ತರು ಅಡ್ಡಿಪಡಿಸಿದರು. ಈ ವೇಳೆ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ, ಮಾತಿನ ಚಕಮಕಿ ನಡೆಯಿತು.

ಪಟ್ಟುಬಿಡದ ಶಾಸಕ ಚಲುವರಾಯಸ್ವಾಮಿ ಪೊಲೀಸರ ರಕ್ಷಣೆಯಲ್ಲಿ ಸಮುದಾಯ ಭವನ ಪ್ರವೇಶಿಸಿ ಉದ್ಘಾಟನೆ ನೆರವೇರಿಸಿದರು. ನಂತರ, ಆವರಣದಲ್ಲಿ ಕಾರ್ಯಕರ್ತರ ಸಭೆಯನ್ನೂ ನಡೆಸಿದರು.

ಪ್ರಚಾರಕ್ಕಾಗಿ ಸಣ್ಣತನಕ್ಕೆ ಇಳಿದಿದ್ದಾರೆ:ಸಿ.ಆರ್.ಎಸ್
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ ಚಲುವರಾಯಸ್ವಾಮಿ, ಚುನಾವಣೆ ಸಂದರ್ಭದಲ್ಲಿ ಬಿಂಡಿಗನವಿಲೆ ಭಾಗದಲ್ಲಿ ಇಂತಹ ಗಲಾಟೆ ಸಾಮಾನ್ಯವಾಗಿದೆ. ನಮ್ಮ ವಿರೋಧಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ಚಲುವರಾಯಸ್ವಾಮಿಗೂ ಕ್ಷೇತ್ರದಲ್ಲಿ ವಿರೋಧವಿದೆ ಎಂದು ಪ್ರಚಾರಗಿಟ್ಟಿಸಿಕೊಳ್ಳಲು ಇಂತಹ ಸಣ್ಣತನದ ಕೆಲಸಗಳನ್ನು ಮಾಡುತ್ತಿದ್ದಾರೆ. ಇವುಗಳನ್ನು ಕಾರ್ಯಕರ್ತರು ಪರಿಗಣಿಸದೆ ಸಂಘಟನೆಯಲ್ಲಿ ತೊಡಗಬೇಕು ಎಂದು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News