ಮೂಲಭೂತ ಹಕ್ಕುಗಳ ರಕ್ಷಣೆಗೆ ಸುಪ್ರೀಂ ಮೆಟ್ಟಿಲೇರಿದ ಚಿದಂಬರಂ

Update: 2018-02-24 15:50 GMT

ಹೊಸದಿಲ್ಲಿ, ಫೆ.24: ಏರ್‌ಸೆಲ್-ಮ್ಯಾಕ್ಸಿಸ್ ಮತ್ತು ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿ ತನ್ನ ಪುತ್ರ ಕಾರ್ತಿ ಚಿದಂಬರಂಗೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ಹಾಗೂ ನಡೆಸಿರುವ ದಾಳಿಗಳ ನಡುವೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಖಾಸಗಿತನದ ಹಕ್ಕು ಸೇರಿದಂತೆ ಮೂಲಭೂತ ಹಕ್ಕುಗಳ ರಕ್ಷಣೆ ಕೋರಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಸ್ವಯಂ ಹಿರಿಯ ನ್ಯಾಯವಾದಿಯಾಗಿರುವ ಚಿದಂಬರಂ, ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸಿಬಿಐ ಮತ್ತು ಇಡಿ, ಪ್ರಕರಣಕ್ಕೆ ಸಂಬಂಧಿಸಿ ಪದೇಪದೆ ದಾಳಿ ಮತ್ತು ಸಮನ್ಸ್‌ಗಳನ್ನು ಕಳುಹಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ರಿಟ್ ಅರ್ಜಿಯನ್ನು ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಅರ್ಜಿದಾರರ ಮೂಲಭೂತ ಹಕ್ಕುಗಳಾದ ಕಾನೂನಿನ ಮುಂದೆ ಸಮಾನತೆ (ವಿಧಿ 14), ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ (ವಿಧಿ 19) ಮತ್ತು ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರದ ಹಕ್ಕು) ವಿಧಿ 21ಯ ಜೊತೆಗೆ ಖಾಸಗಿತನದ ಹಕ್ಕು ಹಾಗೂ ಕುಟುಂಬ ಸದಸ್ಯರೊಂದಿಗೆ ಘನತೆಯಿಂದ ಜೀವಿಸುವ ಹಕ್ಕನ್ನು ರಕ್ಷಿಸುವ ಸಲುವಾಗಿ ಹಾಕಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

pಈ ಪ್ರಕರಣಗಳಲ್ಲಿ ತಾನು ಮತ್ತು ತನ್ನ ಪುತ್ರ ವಿದೇಶಿ ಹೂಡಿಕೆ ಪ್ರೋತ್ಸಾಹ ಮಂಡಳಿಯ ಮಂಜೂರಾತಿಗಳಲ್ಲಿ ಯಾವುದೇ ತಪ್ಪೆಸಗಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರಾಗಿರುವ ಚಿದಂಬರಮ ತಿಳಿಸಿದ್ದಾರೆ. ಇಡಿ ಮತ್ತು ಸಿಬಿಐ ವಿಚಾರಣೆ ನಡೆಸಿರುವ ಪ್ರತಿಯೊಬ್ಬ ಸರಕಾರಿ ಅಧಿಕಾರಿ ಕೂಡಾ ಈ ಪ್ರಕರಣಗಳಲ್ಲಿ ನೀಡಲಾಗಿರುವ ಮಂಜೂರಾತಿಗಳು ಕ್ರಮಬದ್ಧವಾಗಿವೆ ಎಂದು ತಿಳಿಸಿರುವುದಾಗಿ ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ವರ್ಷ ಮೇ 15ರಂದು ಎಫ್‌ಐಆರ್ ದಾಖಲಿಸಿದ್ದ ಸಿಬಿಐ, 2007ರಲ್ಲಿ ಚಿದಂಬರಂ ಕೇಂದ್ರ ವಿತ್ತ ಸಚಿವರಾಗಿದ್ದ ಸಂದರ್ಭದಲ್ಲಿ ಐಎನ್‌ಎಕ್ಸ್ ಮೀಡಿಯಾ 305 ಕೋಟಿ ರೂ. ವಿದೇಶಿ ಹೂಡಿಕೆಯನ್ನು ಪಡೆದಿರುವ ಪ್ರಕರಣದಲ್ಲಿ ಎಫ್‌ಐಪಿಬಿ ನೀಡಿರುವ ಮಂಜೂರಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News