ನಾಟ್ಯ ವಿಶಾರದೆ ನಾಗರತ್ನ ನಾಗರಾಜ ಹಡಗಲಿ

Update: 2018-02-24 18:04 GMT

ಧಾರವಾಡದ ರತಿಕಾ ನೃತ್ಯ ನಿಕೇತನ ಸ್ಥಾಪಕಿ, ಭರತನಾಟ್ಯ ಕಲಾವಿದೆ ವಿದುಷಿ ನಾಗರತ್ನ ಎನ್. ಹಡಗಲಿ 1971ರಲ್ಲಿ ಜನಿಸಿದರು. ಬಿ.ಕಾಂ. ಪದವೀಧರೆ ಆಗಿರುವ ಇವರು ಗಂಧರ್ವ ಮಹಾವಿದ್ಯಾಲಯ ಪ್ರವೇಶಿಕ ದಿಂದ ವಿಶಾರದವರೆಗಿನ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ.

1995ರಲ್ಲಿ ನೃತ್ಯ ಸಂಸ್ಥೆ ಸ್ಥಾಪನೆ ಮಾಡಿದರು. ಕೇವಲ ಇಬ್ಬರು ವಿದ್ಯಾರ್ಥಿಗಳಿಂದ ಪ್ರಾರಂಭ ವಾದ ರತಿಕಾ ನೃತ್ಯ ನಿಕೇತನ ಭರತನಾಟ್ಯ ಶಾಲೆ, ಈಗ 1000 ವಿದ್ಯಾರ್ಥಿಗಳಿಗೆ ನೃತ್ಯಾಭ್ಯಾಸ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ. ಕೇವಲ ಧಾರವಾಡವಷ್ಟೇ ಅಲ್ಲದೆ ಗ್ರಾಮಾಂತರ ಪ್ರದೇಶದ ಮಕ್ಕಳಿಗೂ ತಲುಪಬೇಕೆಂಬ ಅಸೆಯಿಂದ ನಾಗರತ್ನ ಅವರು ಗೋಕಾಕ, ಬೈಲಹೊಂಗಲ, ಘಟಪ್ರಭಾ, ಯರಗಟ್ಟಿ, ರಾಯದುರ್ಗ, ಹೀಗೆ ವಾರದ 7 ದಿನಗಳಲ್ಲಿ 9 ಶಾಖೆಗಳನ್ನು ನಡೆಸುತ್ತಾ, ನೃತ್ಯಕಲೆಧಾರೆ ಎರೆಯುತ್ತಿದ್ದಾರೆ. ತಮ್ಮ ಪ್ರಾರಂಭಿಕ ನೃತ್ಯಾಭ್ಯಾಸವನ್ನು ಬೆಳಗಾವಿಯ ವಿದುಷಿ ಶ್ರೀಮತಿ ಸಂಧ್ಯಾ ಹೊಸಮನಿಯವರಲ್ಲಿ ಪೂರೈಸಿ, ಮೈಸೂರು ರವೀಂದ್ರ ಶರ್ಮಾ, ಕುಮುದಿನಿ ರಾವ್, ರಮ್ಯ ಪ್ರಸಾದ್‌ರಲ್ಲಿ ಹೆಚ್ಚಿನ ನೃತ್ಯಾಭ್ಯಾಸ ಮಾಡಿದ್ದಾರೆ. ಕರ್ನಾಟಕ ಸರಕಾರ ನಡೆಸುವ ಭರತನಾಟ್ಯ ಪರೀಕ್ಷೆ ಹಾಗೂ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ನಡೆಸುವ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಯಕವೇ ಕೈಲಾಸವೆಂಬ ಬಸವಣ್ಣನ ತತ್ತ್ವ ವನ್ನು ನಂಬುವ ಇವರು, ಶಿವಶರಣ, ಶರಣೆಯರ ವಚನಗಳಿಗೆ ನೃತ್ಯ ಸಂಯೋಜನೆಯನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಮಠಗಳಲ್ಲಿ ಪ್ರಸ್ತುತ ಪಡಿಸುತ್ತಿರುವ ಇವರಿಗೆ ಉತ್ತರ ಕರ್ನಾಟಕದಲ್ಲಿ ವಚನಗಳಿಗೆ ನೃತ್ಯ ಸಂಯೋಜಿಸಿದ ಪ್ರಥಮ ನೃತ್ಯ ಶಿಕ್ಷಕಿ ಎಂಬ ಹೆಗ್ಗಳಿಕೆ ಮುಡಿಗೇರಿದೆ.

ವಚನ ನೃತ್ಯಾಭಿನಯದಲ್ಲಿ ವಿಶೇಷ ಆಸಕ್ತಿ ಇರುವ ಇವರು 2014ರಲ್ಲಿ ಬಸವ ಜಯಂತಿ ಅಂಗವಾಗಿ ಶರಣ, ಶರಣೆಯರ 111 ವಚನಗಳಿಗೆ ನೃತ್ಯ ಸಂಯೋಜಿಸಿ, 211 ವಿದ್ಯಾರ್ಥಿಗಳಿಂದ ಒಂದೇ ದಿನ 14 ಗಂಟೆಗಳ ಸುದೀರ್ಘ ಕಾಲ ನೃತ್ಯ ಪ್ರದರ್ಶಿಸಿದ ಹೆಮ್ಮೆಯ ಸಾಧಕಿ ಇವರು. ನಾಗರತ್ನ ಅವರು ತಮ್ಮ ತಂಡದೊಂದಿಗೆ ಚಂದನ ದೂರದರ್ಶನದಲ್ಲಿ ನೇರ ಪ್ರಸಾರಗೊಂಡ ‘ವಚನ ವೈಭವ’, ‘ತತ್ತ್ವ ರಸಾನುಭವ’ ಕಾರ್ಯಕ್ರಮ ನೀಡಿದ್ದು, ಇವರ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿ. ಚಂದನ ವಾಹಿನಿಯ ಪ್ರತಿಷ್ಠಿತ ‘ಮಧುರ ಮಧುರವೀ ಮಂಜುಳ ಗಾನ’, ಸುವರ್ಣ ಲೇಡೀಸ್ ಕ್ಲಬ್‌ನಲ್ಲೂ ಇವರ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನಗೊಂಡಿದೆ.

ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನ, ಮೈಸೂರು ದಸರಾ ಉತ್ಸವ, ಮಡಿಕೇರಿ ದಸರಾ ಉತ್ಸವ, ಆನೆಗುಂದಿ ಉತ್ಸವ, ರನ್ನ ಉತ್ಸವ, ಕಿತ್ತೂರು ಉತ್ಸವ, ಧಾರವಾಡ ಉತ್ಸವ, ಸಂಗೊಳ್ಳಿ ರಾಯಣ್ಣ ಉತ್ಸವ, ವಿವಿಧ ಜಿಲ್ಲಾ ಉತ್ಸವ, ಮೌಂಟ್ ಅಬುವಿನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನ, ಗೋವಾದಲ್ಲಿ ಗಡಿನಾಡು ಕನ್ನಡಿಗರ ಸಮಾವೇಶ, ಮಂತ್ರಾಲಯ, ಮುಂಬೈ, ದಿಲ್ಲಿ, ಕೊಚ್ಚಿನ್, ತಿರುಪತಿ, ಹೈದರಾಬಾದ್, ಪಣಜಿ ಅಲ್ಲದೇ ಕರ್ನಾಟಕದ ಬಹುತೇಕ ಹಳ್ಳಿ ಪಟ್ಟಣಗಳಲ್ಲಿ ಸುಮಾರು 800ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿ ಸೈ ಎನ್ನಿಸಿಕೊಂಡಿರುವ ‘‘ಕನ್ನಡ ನಾಡಿನ ಹೆಮ್ಮೆಯ ವಿದುಷಿ’’ ಎಂದರೆ ಅತಿಶಯೋಕ್ತಿಯಾಗುವುದಿಲ್ಲ. ಇವರ ಶಿಷ್ಯ ವೃಂದ ಕೂಡ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ವಿಶಿಷ್ಟ ಕಾರ್ಯಕ್ರಮಗಳು:

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರಗೊಂಡ ವಚನ ವೈಭವ 2007ರ ಕಾರ್ಯಕ್ರಮದಲ್ಲಿ ವಚನಗಳಿಗೆ ನೃತ್ಯ ಸಂಯೋಜಿಸಿ, ಪ್ರದರ್ಶಿಸಿರುವುದು ದೂರದರ್ಶನದ ಮೂಲಕ 52 ರಾಷ್ಟ್ರಗಳಿಗೆ ನೇರಪ್ರಸಾರ ತತ್ತ್ವ ರಸಾನುಭವ 2009 ಶಿಶುನಾಳ ಷರೀಫರ ತತ್ವ ಪದಗಳಿಗೆ ನೃತ್ಯ ಸಂಯೋಜನೆ, ದೂರದರ್ಶನದಿಂದ 52 ರಾಷ್ಟ್ರಗಳಿಗೆ ನೇರ ಪ್ರಸಾರ, ಖ್ಯಾತ ಕೊಳಲು ವಾದಕ ರೋಣು ಮಜುಂದಾರ ಹಾಗೂ ಸಂಗೀತಗಾರ ಪಂಡಿತ ಶ್ರೀಮಾಧವ ಗುಡಿಯವರ ಸಮ್ಮುಖದಲ್ಲಿ ರತಿಕಾ ನೃತ್ಯ ನಿಕೇತನ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ.

ಇದಲ್ಲದೆ ಕುವೆಂಪುರವರ ಭಾವಗೀತೆಗೆ ನೃತ್ಯ ಸಂಯೋಜನೆ ಹಾಗೂ 60 ವಿದ್ಯಾರ್ಥಿಗಳನ್ನೊಳಗೊಂಡ ದೀಪ ನೃತ್ಯ ಪ್ರದರ್ಶನ.

ನೃತ್ಯ ಸಂಯೋಜನೆಗಳು:

ನವರಸ ಅಭಿನಯ ನೃತ್ಯ, ದುರ್ಗಾಶಕ್ತಿ ದಶಾವತಾರ, ಜಾನಪದ ನೃತ್ಯ, ವಚನ ವೈಭವ, ದಾಸರ ಪದಗಳಿಗೆ ಮತ್ತು ತತತ್ವೃಪದಗಳಿಗೆ ನೃತ್ಯ, ಜನಪದ ನೃತ್ಯಗಳ ವಿಶೇಷ ಸಂಯೋಜನೆ, ಕುವೆಂಪು, ಬೇಂದ್ರೆರವರ ಭಾವಗೀತೆಗಳಿಗೆ ನೃತ್ಯ. ನಾಗರತ್ನ ಅವರಿಗೆ ಹಲವಾರು ಪ್ರತಿಷ್ಠೆಯ ಪ್ರಶಸ್ತಿಗಳು ಹುಡುಕಿಕೊಂಡು ಬಂದಿರುವುದು ಅವರ ಸಾಧನೆಗೆ ಸಂದ ಗೌರವವಾಗಿದೆ.

ಸಮಾಜಮುಖಿ ಕಾರ್ಯಗಳು:

ಹುತಾತ್ಮರ ನೆನಪಿಗಾಗಿ ನೃತ್ಯ ಸಂಯೋಜಿಸಿ, ಪ್ರದರ್ಶನ, ನೆರೆ ಸಂತ್ರಸ್ತರ ನೆರವಿಗಾಗಿ ವಿಶಿಷ್ಟ ನೃತ್ಯ ಸಂಯೋಜನೆ ಮತ್ತು ಪ್ರದರ್ಶನ, ಬಡ ವಿದ್ಯಾರ್ಥಿಗಳಿಗೆ ಉಚಿತ ನೃತ್ಯ ತರಬೇತಿ, ಅನೇಕ ವಿದ್ಯಾರ್ಥಿಗಳು ನೃತ್ಯ ಕೌಶಲ್ಯವನ್ನು ಪಡೆದು ಸ್ವಯಂ ಉದ್ಯೋಗ ಹೊಂದಲು ಸಹಕಾರ.

ಇತ್ತೀಚೆಗೆ ಇವರು ಶಾಂತಲಾ ನಾಟ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯೆಯಾಗಿ ನೇಮಕ. ಅಲ್ಲದೆ ಅನೇಕ ಸರಕಾರಿ ಹಾಗೂ ಸರಕಾರೇತರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧ್ಯಕ್ಷೆ, ಕಾರ್ಯದರ್ಶಿ, ಸದಸ್ಯೆಯಾಗಿ 9 ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಂಧರ್ವ ಮಹಾವಿದ್ಯಾನಿಲಯ ಮತ್ತು ಕರ್ನಾಟಕ ಸರಕಾರದ ಸೆಕೆಂಡರಿ ಬೋರ್ಡ್ ನಡೆಸುವ ನೃತ್ಯ ಪರೀಕ್ಷೆಗಳಿಗೆ ನಿರ್ಣಾಯಕಿಯಾಗಿದ್ದಾರೆ. ಸರಳತೆ, ಸಜ್ಜನಿಕೆ ಮತ್ತು ಸಹನೆಗೆ ಪ್ರತೀಕವಾದ ನಾಗರತ್ನ ಅವರು ಸದಾ ಹಸನ್ಮುಖಿ. ಮಕ್ಕಳಿಗೆ ಪ್ರೀತಿಯಿಂದ ನೃತ್ಯ ಬೋಧಿಸುತ್ತಾರೆ. ತಮ್ಮ ಇಷ್ಟೆಲ್ಲಾ ಸಾಧನೆಗೆ ಗುರು, ಹಿರಿಯರ ಆಶೀರ್ವಾದ, ತಂದೆ-ತಾಯಿ, ಅತ್ತೆ-ಮಾವನವರ ಮಾರ್ಗದರ್ಶನ ಅಲ್ಲದೆ ಪ್ರೀತಿಯ ಪತಿ ನಾಗರಾಜ ಅವರ ಪ್ರೋತ್ಸಾಹ ಕಾರಣ ಎಂದು ನಾಗರತ್ನ ವಿನಮ್ರವಾಗಿ ನುಡಿಯುತ್ತಾರೆ.

 ಕಾಯಕವೇ ಕೈಲಾಸವೆಂಬ ಬಸವಣ್ಣನ ತತ್ತ್ವವನ್ನು ನಂಬುವ ಇವರು, ಶಿವಶರಣ, ಶರಣೆಯರ ವಚನಗಳಿಗೆ ನೃತ್ಯ ಸಂಯೋಜನೆಯನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಮಠಗಳಲ್ಲಿ ಪ್ರಸ್ತುತ ಪಡಿಸುತ್ತಿರುವ ಇವರಿಗೆ ಉತ್ತರ ಕರ್ನಾಟಕದಲ್ಲಿ ವಚನಗಳಿಗೆ ನೃತ್ಯ ಸಂಯೋಜಿಸಿದ ಪ್ರಥಮ ನೃತ್ಯ ಶಿಕ್ಷಕಿ ಎಂಬ ಹೆಗ್ಗಳಿಕೆ ಮುಡಿಗೇರಿದೆ.

Writer - ಬಿ.ಬಸವರಾಜು

contributor

Editor - ಬಿ.ಬಸವರಾಜು

contributor

Similar News