ಜಮೀನುದಾರ ಕೇಂದ್ರಿತ ಸಮಾಜದಿಂದ ರೈತ ಕೇಂದ್ರಿತ ಸಮಾಜದೆಡೆಗೆ ನಮ್ಮ ನಡಿಗೆ

Update: 2018-02-24 18:15 GMT

ಭಾಗ-1

ಉತ್ಪಾದನೆ ಮಾಡದವರು ಉತ್ಪಾದನೆ ಮಾಡುವವರನ್ನು ಹೇಗೆ ಶೋಷಣೆಗೆ ಒಳಪಡಿಸಬೇಕೆಂಬುದನ್ನು ಸೂಚಿಸುವುದೇ ಪುರುಷಸೂಕ್ತವನ್ನು ಎತ್ತಿ ಹಿಡಿದ ಮನುಸ್ಮೃತಿಯ ಉದ್ದೇಶವಾಗಿದೆ.

ಪುರಿ ಜಗನ್ನಾಥ ಮಂದಿರಕ್ಕೆ ಹೋದಾಗ ನನಗೊಂದು ಆಶ್ಚರ್ಯ ಕಾದಿತ್ತು. ಒಡಿಶಾ ರಾಜ್ಯದಲ್ಲಿ ಬೋಡೆ ಠಾಕೂರ (ದೊಡ್ಡ ಠಾಕೂರ) ಎಂದರೆ ಜಗನ್ನಾಥ. ಠಾಕೂರ ಮತ್ತು ಜಮೀನುದಾರ ಪದಗಳು ಸಮಾನಾರ್ಥವನ್ನು ಕೊಡುವಂಥವು. ಜಮೀನುದಾರಿ ಪದ್ಧತಿಯಲ್ಲಿ ದೇವರು ಎಲ್ಲಕ್ಕಿಂತ ದೊಡ್ಡ ಜಮೀನುದಾರ. ತದನಂತರದ ದೊಡ್ಡ ಜಮೀನುದಾರ ಎಂದರೆ ರಾಜ. ಅವನು ಕ್ಷತ್ರಿಯ (ಕ್ಷೇತ್ರಪಾಲ) ಆಗಿದ್ದರಿಂದ ಅವನಿಗೆ ಭೂಪತಿ ಎಂದು ಕರೆಯುತ್ತಾರೆ. ಆಧ್ಯಾತ್ಮಿಕಾಗಿ ದೇವರೇ ದೊಡ್ಡ ಜಮೀನುದಾರ. ಲೌಕಿಕವಾಗಿ ರಾಜನೇ ದೊಡ್ಡ ಜಮೀನುದಾರ. ಒಂದು ರಾಜ್ಯದ ಜಮೀನಿಗೆ ಭೂಪತಿಯಾದ ರಾಜನೇ ಒಡೆಯ. ಅವನ ಕೈಕೆಳಗಿನ ಜಮೀನುದಾರರು ರೈತರ ಶೋಷಣೆ ಮಾಡುತ್ತ ರಾಜನಿಗೆ ವಿಧೇಯರಾಗಿ ಅವರಿಗೆ ಸಲ್ಲಬೇಕಾದುದನ್ನು ಸಲ್ಲಿಸುವವರು. ಈ ಜಮೀನುದಾರರು, ಪಾಳೆಯಗಾರರು, ಗೌಡ, ಪಾಟೀಲ, ದೇಸಾಯಿ, ದೇಶಮುಖ, ನಾಮದಾರ, ಜಹಗೀರದಾರ ಮುಂತಾದ ರೂಪದಲ್ಲಿ ಇರುತ್ತಾರೆ. ಈ ಜಮೀನುದಾರಿ ವ್ಯವಸ್ಥೆಗೆ ಊಳಿಗಮಾನ್ಯ ಪದ್ಧತಿ ಎಂದು ಹೆಸರು. ಊಳಿಗ ಎಂದರೆ ಸೇವೆ. ಇವರೆಲ್ಲರ ಸೇವೆ ಮಾಡುವವರೇ ರೈತರು, ಕೃಷಿಕಾರ್ಮಿಕರು, ಜೀತದಾಳುಗಳು ಮತ್ತು ಇತರ ಕಾಯಕಜೀವಿಗಳು.

ಈ ಜಮೀನುದಾರಿ ಪದ್ಧತಿಯ ರಕ್ಷಣೆಗಾಗಿ ಪುರುಷಸೂಕ್ತ ಸೃಷ್ಟಿಯಾಯಿತು. ಪುರುಷಸೂಕ್ತದ ಪ್ರಕಾರ ಬ್ರಾಹ್ಮಣನು ವಿರಾಟಪುರುಷನ ಬಾಯಿಯಿಂದ ಹುಟ್ಟುತ್ತಾನೆ. ಕ್ಷತ್ರಿಯನು ಪಾದದಿಂದ ಹುಟ್ಟುತ್ತಾನೆ. ವೈಶ್ಯನು ತೊಡೆಯಿಂದ ಹುಟ್ಟುತ್ತಾನೆ. ಶೂದ್ರರು ಪಾದದಿಂದ ಹುಟ್ಟುತ್ತಾರೆ. ಮೇಲಿನ ಮೂರು ವರ್ಣದವರು ಸವರ್ಣೀಯರು ಎಂದು ಕರೆಯಿಸಿಕೊಳ್ಳುತ್ತಾರೆ.

ಪಾದದಲ್ಲಿ ಜನಿಸಿದ ಶೂದ್ರನನ್ನು ಸವರ್ಣೀಯರು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಮೇಲಿನ ಮೂರೂ ಅನುತ್ಪಾದಕ ವರ್ಣದವರಿಗೆ ಯಜ್ನೋಪವೀತ ಅಂದರೆ ಜನಿವಾರ ಇದೆ. ಆದರೆ ಸೇವೆ ಮತ್ತು ಉತ್ಪಾದನೆಯಲ್ಲಿ ತೊಡಗುವ ಶೂದ್ರರಿಗೆ ಜನಿವಾರ ಇಲ್ಲ.
ಹೀಗೆ ಪುರುಷಸೂಕ್ತ ಬಹುಸಂಖ್ಯಾತರಾದ ದುಡಿಯುವ ವರ್ಗದ ಶೂದ್ರರನ್ನು ಹಾಗೂ ಬ್ರಾಹಣ, ಕ್ಷತ್ರಿಯ ಮತ್ತು ವೈಶ್ಯ ವರ್ಣಗಳೆಂಬ ಅಲ್ಪಸಂಖ್ಯಾತರಾದ ಸವರ್ಣೀಯರ ದುಡಿಸಿಕೊಳ್ಳುವ ವರ್ಗವನ್ನು ನಿರ್ಮಿಸಿತು. ಪುರುಷಸೂಕ್ತದ ಆಧಾರದ ಮೇಲೆಯೇ ಮನುಸ್ಮತಿ ವರ್ಣವ್ಯವಸ್ಥೆಯನ್ನು ಗಟ್ಟಿಗೊಳಿಸಿತು. ಆಗ ಮನುವಾದಿ ವ್ಯವಸ್ಥೆ ಎಂಬುದು ಭರತಖಂಡದ ಸಾಮಾಜಿಕ ವ್ಯವಸ್ಥೆಯಾಯಿತು. ಉತ್ಪಾದನೆ ಮಾಡದವರು ಉತ್ಪಾದನೆ ಮಾಡುವವರನ್ನು ಹೇಗೆ ಶೋಷಣೆಗೆ ಒಳಪಡಿಸಬೇಕೆಂಬುದನ್ನು ಸೂಚಿಸುವುದೇ ಪುರುಷಸೂಕ್ತವನ್ನು ಎತ್ತಿ ಹಿಡಿದ ಮನುಸ್ಮತಿಯ ಉದ್ದೇಶವಾಗಿದೆ.

ಚಾತುರ್ವರ್ಣ ಪದ್ಧತಿಗೆ ತನ್ನದೇ ಆದ ಶೋಷಣಾ ಸಿದ್ಧಾಂತದ ಅರ್ಥಶಾಸ್ತ್ರವಿದೆ. ಆ ಅರ್ಥಶಾಸ್ತ್ರವನ್ನು ಗಟ್ಟಿಗೊಳಿಸುವಂಥ ವರ್ಣವ್ಯವಸ್ಥೆಯ ಸಮಾಜವಿದೆ. ಈ ವರ್ಣವ್ಯವಸ್ಥೆ ಪ್ರತೀ ವರ್ಣದಲ್ಲಿ ಜಾತಿ ಮತ್ತು ಉಪಜಾತಿಗಳನ್ನು ನಿರ್ಮಿಸಿದೆ. ಈ ಎಲ್ಲ ಬೆಳವಣಿಗೆಯಲ್ಲಿ ನಾಲ್ಕು ವರ್ಣಗಳ ಜೊತೆ ಪಂಚಮ ವರ್ಣವೂ ಸೇರಿಕೊಂಡಿದೆ. ಅಸ್ಪಶ್ಯರು ಈ ಪಂಚಮವರ್ಣಕ್ಕೆ ಸೇರುತ್ತಾರೆ. ಶೂದ್ರರು ಮತ್ತು ಅತಿಶೂದ್ರರಾದ ಪಂಚಮರು ಸೇರಿ ‘ಬಹುಜನಸಮಾಜ’ ಎನಿಸಿಕೊಂಡಿದ್ದಾರೆ. ಈ ಬಹುಜನರು ಸಹಸ್ರಾರು ವರ್ಷಗಳಿಂದ ಅಲ್ಪಸಂಖ್ಯಾತರಾದ ಮಹಾಜನರ ಸೇವೆ ಮಾಡಿಕೊಂಡು ಬಂದಿದ್ದಾರೆ. ಹೀಗೆಬಹುಜನರು ಅಲ್ಪಜನರಿಂದ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಧಾರ್ಮಿಕವಾಗಿ ಶೋಷಣೆಗೆ ಒಳಗಾಗುವ ವ್ಯವಸ್ಥೆಗೆ ಮನುವಾದಿ ವ್ಯವಸ್ಥೆ ಎಂದು ಕರೆಯುತ್ತಾರೆ.

ಶೂದ್ರನಿಗೆ ಬುದ್ಧಿ ಹೇಳಬಾರದು (ಓದು ಕಲಿಸಬಾರದು), ಯಜ್ಞದ ಹವಿಸ್ಸಿನ ಶೇಷವನ್ನು ಹಾಗೂ ಎಂಜಲನ್ನು ಕೊಡಬಾರದು. ಧರ್ಮೋಪದೇಶ ಮಾಡಬಾರದು.
ವ್ರತಾಚರಣೆಯನ್ನು ಹೇಳಿಕೊಡಬಾರದು.

(ಮನುಸ್ಮೃತಿ ಅಧ್ಯಾಯ 4, ಶೋಕ 80)
ಚಂಡಾಲರು ಮತ್ತು ಶ್ವಪಚರು ಒಡಕು ಮಣ್ಣಿನ ಪಾತ್ರೆಯಲ್ಲಿ ಉಣ್ಣಬೇಕು. ಹೆಣದ ಮೇಲಿನ ಬಟ್ಟೆಯನ್ನು ಉಡಬೇಕು. ಕಬ್ಬಿಣದ ಬಳೆ ಇತ್ಯಾದಿಗಳೇ ಇವರಿಗೆ ಆಭರಣಗಳು. ಇವರು ಸದಾ ಅಂಡಲೆಯುತ್ತಿರಬೇಕು.
 (ಮನುಸ್ಮೃತಿ ಅಧ್ಯಾಯ 10 ಶ್ಲೋಕ 52)
ಈ ಭೂಮಿಯಲ್ಲಿ ಇರುವುದೆಲ್ಲವೂ ಬ್ರಾಹ್ಮಣನದ್ದಾಗಿದೆ. ಶ್ರೇಷ್ಠವಾದ ಜನ್ಮವನ್ನು ಪಡೆದದ್ದರಿಂದ ಇದೆಲ್ಲವನ್ನೂ ಹೊಂದಲು ಅವನು ಅರ್ಹನಾಗುತ್ತಾನೆ.
 (ಮನುಸ್ಮೃತಿ ಅಧ್ಯಾಯ 1 ಶ್ಲೋಕ 100)
ಜ್ಞಾನಾರ್ಜನೆ ಮಾಡುವ ಶಕ್ತಿ ಸಾಮರ್ಥ್ಯಗಳಿದ್ದರೂ ಶೂದ್ರನು ಧನವನ್ನು ಗಳಿಸಬಾರದು. ಹಣ ಸಂಪಾದನೆ ಮಾಡಿದರೆ ಶೂದ್ರನು ಬ್ರಾಹ್ಮಣರನ್ನು ಕಡೆಗಣಿಸುತ್ತಾನೆ.
 (ಮನುಸ್ಮೃತಿ ಅಧ್ಯಾಯ 10 ಶ್ಲೋಕ 129)

ಬಹುಜನರ ಶೋಷಣೆ ಮಾಡುವ ಮತ್ತು ಅಲ್ಪಜನರಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸುವ ಇಂಥ ಶ್ಲೋಕಗಳಿಂದ ಮನುಸ್ಮತಿ ತುಂಬಿಕೊಂಡಿದೆ. ಮೇಲಿನ ಮೂರೂ ವರ್ಣದವರು ಸಹಜವಾಗಿ ಊಳಿಗಮಾನ್ಯ ಅಂದರೆ ಜಮೀನುದಾರಿ ಪದ್ಧತಿಯನ್ನು ರಕ್ಷಿಸುವವರಾಗಿದ್ದಾರೆ. ವೈದಿಕರು, ಕ್ಷತ್ರಿಯರು ಮತ್ತು ವೈಶ್ಯರು ಮನುವಾದದ ಸಂರಕ್ಷಕರಾಗುವ ಮೂಲಕ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡಿದ್ದಾರೆ. ಕರ್ಮವಾದವನ್ನು ಒತ್ತಿ ಹೇಳುವ ಮನುಸ್ಮತಿ ಶೂದ್ರರು ಮತ್ತು ಪಂಚಮರನ್ನು ಸಂಚಿತ, ಪ್ರಾರಬ್ಧ ಮತ್ತು ಮುಂದಿನ ಜನ್ಮದಲ್ಲಿ ಕಳೆದುಕೊಳ್ಳಬೇಕಾದ ಆಗಾಮಿ ಕರ್ಮಗಳಲ್ಲಿ ಸಿಲುಕಿಸಿದೆ. ಈ ಷಡ್ಯಂತ್ರ ಸಹಸ್ರಾರು ವರ್ಷಗಳಿಂದ ಮುನ್ನಡೆದು ಪ್ರಬಲ ಜಮೀನುದಾರ ಕೇಂದ್ರಿತ ಸಮಾಜವಾಗಿ ರೂಪುಗೊಂಡಿತು.

ಶೂದ್ರರು ಮತ್ತು ಪಂಚಮರು ಈ ವರ್ಣಚಕ್ರದಲ್ಲಿ ಸಿಲುಕಿ ತಮಗರಿಯದಂತೆಯೇ ಮನುವಾದಿ ವ್ಯವಸ್ಥೆಯ ಗುಲಾಮರಾಗಿದ್ದನ್ನು ಬುದ್ಧ್ದ, ಬಸವರು ಕಂಡುಹಿಡಿದು ಅವರನ್ನು ಮೇಲೆತ್ತಲು ಶ್ರಮಿಸಿದರು. ಮನುವಾದಿ ವೈದಿಕ ವ್ಯವಸ್ಥೆಯನ್ನು ವಿರೋಧಿಸಿದ ಬುದ್ಧ ‘ಬಹುಜನ ಸುಖಾಯ, ಬಹುಜನ ಹಿತಾಯ’ಎಂದು ಹೇಳುವ ಮೂಲಕ ಶೂದ್ರ ಮತ್ತು ಪಂಚಮ ವರ್ಣದವರನ್ನು ಎತ್ತಿ ಹಿಡಿದ. ತಾನೊಬ್ಬ ಸದ್ಗುಣಗಳನ್ನು ಬೆಳೆಯುವ ಕೃಷಿಕ ಎಂದುಳಿಸಿದ. ‘ನಾನು ಆರಂಭವ (ಕೃಷಿ) ಮಾಡುವೆನಯ್ಯಿ ಗುರುಪೂಜೆಗೆಂದು’ ಎಂದು ಬಸವಣ್ಣನವರು ತಿಳಿಸಿದರು. ಆಗ ಭರತಖಂಡ ಸ್ವಯಂ ಪರಿಪೂರ್ಣ ಹಳ್ಳಿಗಳಿಂದ ತುಂಬಿತ್ತು. ಹಳ್ಳಿಗರ ಬದುಕಿಗೆ ಬೇಕಾದ ಪ್ರತಿಯೊಂದು ವಸ್ತುಗಳ ಉತ್ಪಾದನೆ ಹಳ್ಳಿಗಳಲ್ಲೇ ಆಗುತ್ತಿತ್ತು. ಬೇಕಾದ ಎಲ್ಲ ಸೇವೆಗಳು ಕೂಡ ಹಳ್ಳಿಗಳಲ್ಲೇ ಲಭಿಸುತ್ತಿದ್ದವು. ಭರತಖಂಡದ ಇಡೀ ಸಾಮಾಜಿಕ ವ್ಯವಸ್ಥೆ ಅನೇಕ ವ್ಯತ್ಯಾಸಗಳ ಮಧ್ಯೆ ಕೂಡ ಜಮೀನುದಾರ ಕೇಂದ್ರಿತ ವ್ಯವಸ್ಥೆಯಾಗಿಯೇ ಉಳಿದಿತ್ತು. ಜಾತಿ, ಅಸ್ಪಶ್ಯತೆ, ಮೇಲು ಕೀಳು ಮುಂತಾದವು ಈ ವ್ಯವಸ್ಥೆಗೆ ಪೂರಕವಾಗಿದ್ದವು.

ಜಮೀನುದಾರ ಕೇಂದ್ರಿತ ವ್ಯವಸ್ಥೆಯನ್ನು ರೈತಕೇಂದ್ರಿತ ವ್ಯವಸ್ಥೆಯನ್ನಾಗಿ ಮಾಡಲು ದೇಶದಲ್ಲಿ ಮೊದಲಿಗೆ ಪ್ರಯತ್ನಿಸಿದವರೆಂದರೆ ಬಸವಣ್ಣನವರು. ಕಲ್ಯಾಣ ದೇಶದಲ್ಲಿ ಜಮೀನುದಾರ ಕೇಂದ್ರಿತ ವ್ಯವಸ್ಥೆಗೆ ಬಿಜ್ಜಳ ರಾಜ ಪ್ರಮುಖನಾಗಿದ್ದರೆ, ರೈತಕೇಂದ್ರಿತ ವ್ಯವಸ್ಥೆಗೆ ಬಸವಣ್ಣನವರು ಪ್ರಮುಖರಾಗಿದ್ದರು. ರೈತರು ಜಮೀನುದಾರರ ಮೇಲೆ ಅವಲಂಬಿತರಾಗಿರುವುದಿಲ್ಲ. ಆದರೆ ಜಮೀನುದಾರರು ರೈತರ ಮೇಲೆ ಅವಲಂಬಿತರಾಗಿರುತ್ತಾರೆ ಎಂಬ ಸತ್ಯವನ್ನು ಬಸವಣ್ಣನವರು ಅರಿತಿದ್ದರು.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News