ಪ್ರಭಾವಿಸುವ ವರ್ತನೆಗಳು

Update: 2018-02-24 18:43 GMT

ಭಾಗ 5

ಪಾತ್ರಗಳು ಜೀವ ತಳೆದಾಗ

ಆ ಹುಡುಗ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದ. ಆ ಹುಡುಗನ ಕಂಡರೆ ಬೇರೆ ಮಕ್ಕಳಿಂದ ಹಿಡಿದು ಶಿಕ್ಷಕರವರೆಗೂ ಏನೋ ಪ್ರೀತಿ. ಕಾರಣವೆಂದರೆ, ಅವನಿಗೆ ಹಡೆದ ತಾಯಿ ಸಣ್ಣ ವಯಸ್ಸಿನಲ್ಲಿಯೇ ತೀರಿ ಹೋಗಿದ್ದಳು. ಈಗ ಇದ್ದದ್ದು ಮಲತಾಯಿ. ಅವಳೋ ಕಥೆಗಳಲ್ಲಿ ಬರುವ ಮಲತಾಯಿಯ ಹಾಗೆಯೇ ಆ ಹುಡುಗನಿಗೆ ಹರಕಲು ಬಟ್ಟೆ ಕೊಡುತ್ತಿದ್ದಳು. ಹೊಟ್ಟೆಗೆ ಸರಿಯಾಗಿ ಊಟ ಕೊಡುತ್ತಿರಲಿಲ್ಲ. ವಿಪರೀತ ಕೆಲಸ ಮಾಡಿಸುತ್ತಿದ್ದಳು. ಕೆಲಸದಲ್ಲಿ ಸಣ್ಣಪುಟ್ಟ ದೋಷವಾದರೆ ಸಾಕು ಮೈಮೇಲೆ ಗಾಯಗಳಾಗುವಂತೆ ಹೊಡೆಯುತ್ತಿದ್ದಳು. ಓದಲು ಬಿಡುತ್ತಿರಲಿಲ್ಲ. ಇದರಿಂದ ತಪ್ಪಿಸಿಕೊಳ್ಳಲು ಈ ಹುಡುಗನೋ ಎಷ್ಟೋ ಬಾರಿ ತನ್ನ ತಾನು ಕೊಂದುಕೊಳ್ಳಲು ಯತ್ನಿಸಿದ್ದಾನೆ. ಪಾಪ ಹುಡುಗನಿಗೆ ಇಂಕ್ ಕುಡಿದರೆ ಸಾಯುವುದಿಲ್ಲ ಎಂದು ತಿಳಿದಿಲ್ಲ. ಇಂಕು ಕುಡಿದಿದ್ದಾನೆ. ಸೀಮೆ ಎಣ್ಣೆ ಕುಡಿದಿದ್ದಾನೆ. ಇತ್ಯಾದಿ ಅವನ ಕಥೆ. ಪ್ರತೀಸಲ ಹೀಗಾದಾಗಲೂ ಅವನ ಸುತ್ತ ನೆರೆದು ಕೇಳುವ ಮಂದಿ ಇದ್ದರು. ಎಲ್ಲರೂ ಅವನನ್ನು ಸಮಾಧಾನ ಪಡಿಸುತ್ತಿದ್ದರು. ತಮ್ಮ ಕೈಲಾದ ಸಹಾಯ ಮಾಡಲು ಯತ್ನಿಸುತ್ತಿದ್ದರು. ತಾವು ತಂದಿರುವ ತಿಂಡಿಗಳನ್ನು ನೀಡುತ್ತಿದ್ದರು. ಅವನ ಮುಖ, ಕುಳಿತುಕೊಳ್ಳುವ ಭಂಗಿ, ಅವನ ಬರಿಯ ನೋಟ ನೋಡಿದರೇನೇ ಯಾರಿಗಾದರೂ ಕರಗಿ ನೀರಾಗಿಬಿಡಲು ಸಾಧ್ಯವಿತ್ತು. ಎಷ್ಟೋ ಸಲ ಶಿಕ್ಷಕರು ಖುದ್ದು ಮನೆಗೆ ಭೇಟಿ ನೀಡಿ ಆತನ ಮಲತಾಯಿಯನ್ನು ಎಚ್ಚರಿಸಲು, ಮಕ್ಕಳ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಹೆದರಿಸಲು ಹೋಗೋಣ ಎಂದುಕೊಳ್ಳುತ್ತಿದ್ದರು. ಆದರೆ, ಹಾಗಾದ ಮೇಲೆ ಅವನು ಮತ್ತೆ ಆ ಮನೆಯಲ್ಲಿಯೇ ಇರಬೇಕೆಂದೂ, ಅವನ ತಂದೆ, ಅಜ್ಜಿ ಇತರರೂ ಅವನ ಮೇಲೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಾರೆಂದೂ ಅವನು ಹೇಳುತ್ತಿದ್ದುದರಿಂದ ಎಲ್ಲಾ ಸುಮ್ಮನಾಗುತ್ತಿದ್ದರು. ಹೇಗೋ ವಿದ್ಯಾಭ್ಯಾಸ ಮುಗಿಸಿಬಿಡಲಿ ನಂತರ ಈ ಹುಡುಗ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವನೆಂದು ಹಲ್ಲುಕಚ್ಚಿಕೊಂಡು ಸಹಿಸಿಕೊಂಡಿದ್ದರು.

ಒಂದು ಸುಮುಹೂರ್ತದ ಬೆಳಗ್ಗೆ ಆತನ ಮಲತಾಯಿಯ ದಿವ್ಯದರ್ಶನದ ಭಾಗ್ಯ ಶಾಲೆಯವರಿಗೆ ಪ್ರಾಪ್ತಿಯಾಯಿತು. ಅಂತೆಯೇ ಅವರ ಜೊತೆಯಲ್ಲಿ ಬಂದಿದ್ದ ತಂದೆ ಮತ್ತು ತಂದೆಯ ತಾಯಿ, ಅಂದರೆ ಆ ಹುಡುಗನ ಅಜ್ಜಿಯೂ ಕೂಡ ಶಾಲೆಗೆ ಬಂದಿದ್ದರು. ಆಗ ತಿಳಿಯಿತು, ಆಕೆ ಅವನ ಮಲತಾಯಿ ಎಂಬುದಷ್ಟೇ ಸತ್ಯ. ಉಳಿದಿದ್ದೆಲ್ಲವೂ ಸುಳ್ಳು ಎಂದು. ಶಾಲೆಯಲ್ಲಿ ಸಹಾನುಭೂತಿ ಹುಟ್ಟುವಂತೆ ಇರುತ್ತಿದ್ದ ಆ ಹುಡುಗ ಮನೆಯಲ್ಲಿ ಹಾಗಿರಲಿಲ್ಲ. ತೀರಾ ತೀಟೆಯವನಾಗಿದ್ದ. ವಿಪರೀತ ಚೇಷ್ಟೆ ಮಾಡುತ್ತಿದ್ದ. ಅವನು ಹೇಗೇ ಬಿದ್ದರೂ, ತಗುಲಿಸಿಕೊಂಡರೂ, ಗಾಯ ಮಾಡಿಕೊಂಡರೂ, ಬಟ್ಟೆ ಹರಿದುಕೊಂಡರೂ ಅದೆಲ್ಲವನ್ನೂ ಮಲತಾಯಿಯ ಕ್ರೌರ್ಯಕ್ಕೆ ತಿರುಗಿಸಿಬಿಡುತ್ತಿದ್ದ. ಆದರೆ, ಮನೆಯಲ್ಲಿ ಅವರ ವಿರುದ್ಧವಾಗೇನೂ ಇರಲಿಲ್ಲ. ಅವರ ಜೊತೆಗೆ ಚೆನ್ನಾಗಿಯೇ ಇದ್ದ. ಅವರೂ ತಾಯಿ ಇಲ್ಲದ ಮಗುವೆಂದು, ತಾನು ತಾಯಿಯಾಗದೆ ಅವನನ್ನು ಅಗತ್ಯಕ್ಕಿಂತ ಒಂದು ಪಟ್ಟು ಹೆಚ್ಚಾಗಿಯೇ ನೋಡಿಕೊಳ್ಳುತ್ತಿದ್ದರು. ಅಲ್ಲಿ ನಿಮ್ಮನ್ನು ಶಾಲೆಯಲ್ಲಿ ಖಳನಾಯಕಿಯಂತೆ ಚಿತ್ರಿಸುತ್ತಿದ್ದೇನೆಂಬ ಚೂರೂ ಕುರುಹು ನೀಡದೇ ಅವರೊಂದಿಗೆ ಬಹಳ ಚೆನ್ನಾಗಿಯೇ ನಡೆದುಕೊಳ್ಳುತ್ತಿದ್ದ.

ಶಾಲೆಯಲ್ಲಿ ಶಿಕ್ಷಕರ ಮೇಲೆ, ತನ್ನ ಸಹಪಾಠಿಗಳ ಮೇಲೆ ಆಗಾಗ ಮನೆಯಲ್ಲಿ ದೂರು ಹೇಳುತ್ತಿದ್ದ. ತಾನು ಕುಳ್ಳಗಿದ್ದೇನೆಂದು, ತಾಯಿ ಇಲ್ಲವೆಂದು, ಹಾಗೆ ಹೀಗೆ ಎಂದು ಅಪಮಾನಿಸುತ್ತಾರೆ, ಹೀಯಾಳಿಸುತ್ತಾರೆ, ತನ್ನನ್ನು ಬೇರೆ ಇಡುತ್ತಾರೆ; ಎಂದೆಲ್ಲಾ ಹೇಳುತ್ತಿದ್ದ. ಹಾಗೆ ಏಕೆ ಮಾಡುತ್ತಾರೆ? ಹಾಗೆ ಮಾಡಬೇಡಿ ಎಂದು ಹೇಳಲು ತಾವು ಶಾಲೆಗೆ ಬರುತ್ತೇವೆಂದರೆ, ಕೇಳಬೇಡಿ, ಕೇಳಿದರೆ, ಮತ್ತಷ್ಟು ಸೇಡು ಸಾಧಿಸುತ್ತಾರೆ. ಅದರಲ್ಲೂ ಶಿಕ್ಷಕರು ಕಣ್ಣಿಟ್ಟುಬಿಡುತ್ತಾರೆ ಮತ್ತು ಪರೀಕ್ಷೆಯ ಸಮಯಗಳಲ್ಲಿ ಅನುತ್ತೀರ್ಣ ಮಾಡಿಬಿಡುತ್ತಾರೆ ಎಂದೆಲ್ಲಾ ಹೇಳುತ್ತಿದ್ದ ಕಾರಣದಿಂದ ಅವರು ಶಾಲೆಗೆ ಬರುತ್ತಿರಲಿಲ್ಲ. ಕೊನೆಗೊಂದು ದಿನ ಆ ಶಾಲೆಯನ್ನು ಬಿಡಿಸಿದರೂ ಪರವಾಗಿಲ್ಲ, ನಮ್ಮ ಮಗುವಿಗೆ ಈ ಯಾತನೆ ಬೇಡ ಎಂದು ಸರಿಯಾಗಿ ಶಾಲೆಯನ್ನು ತರಾಟೆಗೆ ತೆಗೆದುಕೊಳ್ಳಲು ಬಂದರು. ಆಗಲೇ ಎಲ್ಲರಿಗೂ ಒಬ್ಬರೊಬ್ಬರ ನಿಜವಾದ ಪರಿಚಯವಾದದ್ದು. ಆ ಹುಡುಗನ ಬಣ್ಣ ಬಯಲಾದದ್ದು.

ಇಲ್ಲಿ ವಿಷಯದ ಅಸಲೇನೆಂದರೆ, ಆ ಹುಡುಗನು ಕೇಳಿಕೊಂಡು ಬಂದ ಕಥೆಗಳಲ್ಲಿ ಮಲತಾಯಿಯು ದುಷ್ಟೆ, ಪಕ್ಷಪಾತಿ, ನಿಷ್ಕರುಣಿ ಇತ್ಯಾದಿ. ಅಂತಹ ಗುಣಗಳ ಪಾತ್ರದ ಜೊತೆಗೆ ಹೋರಾಡಿಕೊಂಡು ಬರುತ್ತಿದ್ದ ನಾಯಕಿ ಅಥವಾ ನಾಯಕ ಪಾತ್ರ ಮುಂದೆ ಎಂತಹದ್ದೋ ನಾಟಕೀಯ ತಿರುವುಗಳನ್ನು ಪಡೆದು ಉನ್ನತವಾದುದನ್ನು ಸಾಧಿಸುತ್ತದೆ. ಆದರೆ ಇವನ ಮಲತಾಯಿ ಕತೆಗಳಲ್ಲಿ ಕೇಳಿರುವ ಯಾವುದೇ ಕೆಟ್ಟಪಾತ್ರಕ್ಕಿಂತ ವಿಭಿನ್ನ. ಹಾಗಾಗಿ ತಾನು ಕೇಳುವ ಕತೆಗಳಲ್ಲಿರುವ ಪಾತ್ರದಂತೆ ಅವಳನ್ನು ಚಿತ್ರಿಸುತ್ತಾ, ತಾನು ಕತೆಯಲ್ಲಿನ ಪಾತ್ರಕ್ಕೆ ಮರುಕಪಡುವಂತೆ ತನ್ನ ಮೇಲೆ ಮರುಕವನ್ನು ಹುಟ್ಟಿಸಿಕೊಳ್ಳಲು ಅಂತಹ ವರ್ತನೆಗಳನ್ನು ಪ್ರದರ್ಶಿಸುತ್ತಿದ್ದ. ತಾವು ಈ ಹಿಂದೆ ಓದಿರುವಂತಹ, ಕೇಳಿರುವಂತಹ ಕತೆಗಳು, ನೋಡಿರುವಂತಹ ಸಿನೆಮಾ, ಧಾರಾವಾಹಿ ಇತ್ಯಾದಿಗಳಿಂದ ಕೆಲವು ಪಾತ್ರಗಳನ್ನು ಮಕ್ಕಳು ತಮ್ಮದಾಗಿಸಿಕೊಳ್ಳುತ್ತಾರೆ ಮತ್ತು ಅದರಂತೆಯೇ ತಾವೂ ವರ್ತಿಸಲು ಯತ್ನಿಸುತ್ತಾರೆ. ಪ್ರಭಾವಶಾಲಿಯಾಗಿ ಪಾತ್ರಗಳನ್ನು ಕಟ್ಟಿಕೊಟ್ಟಾಗ ಓದುಗನಲ್ಲಿ ಅಥವಾ ವೀಕ್ಷಕನ ವರ್ತನೆಗಳಲ್ಲಿ ಅವು ಜೀವತಳೆದಿರುತ್ತವೆ.

ಅಪ್ರಾಸಂಗಿಕ ಪಾತ್ರಗಳು

ಬಹಳಷ್ಟು ಬಾರಿ ಆಗುವುದೇನೆಂದರೆ, ಕತೆಗಳಲ್ಲಿರುವಂತಹ ಸಂದರ್ಭ ಮತ್ತು ಸನ್ನಿವೇಶಗಳು ನಿಜಜೀವನದಲ್ಲಿ ಎದುರಾಗದಿದ್ದರೂ ಆ ಪಾತ್ರಕ್ಕೆ ಮಾರು ಹೋಗಿರುವ ಕಾರಣದಿಂದ ಆ ಪಾತ್ರದ ವರ್ತನೆಯನ್ನು ಮಕ್ಕಳು, ಅಷ್ಟೇಕೆ ಕೆಲವು ದೊಡ್ಡವರೂ ಅನುಕರಿಸಲು ಯತ್ನಿಸುತ್ತಾರೆ. ಆ ವರ್ತನೆಯಂತೂ ತೀರಾ ಅಸಹಜವಾಗಿ ಕಾಣುತ್ತದೆ. ಸನ್ನಿವೇಶಕ್ಕೂ, ಅವರು ವರ್ತಿಸುತ್ತಿರುವ ರೀತಿಗೂ ಯಾವ ಹೊಂದಾಣಿಕೆಯೇ ಕಾಣದೇ ವಿಚಿತ್ರವಾಗಿ ತೋರುತ್ತದೆ. ಆದರೆ ಅವರಿಗಾಗಿರುವ ತೊಂದರೆ ಏನೆಂದರೆ ಅವರ ಮೇಲೆ ಪಾತ್ರವು ಉಂಟುಮಾಡಿರುವ ಪ್ರಭಾವ ಮತ್ತು ಅದರ ವರ್ತನೆಗಳನ್ನು ತಾವು ಪ್ರದರ್ಶಿಸಬೇಕೆಂಬ ಉತ್ಕಟ ಹಂಬಲವನ್ನು ಹತ್ತಿಕೊಳ್ಳಲಾಗದೇ ತಮಗೇ ಅರಿವಿಲ್ಲದಂತೆ ಅಂತಹ ವರ್ತನೆಗಳನ್ನು ತೋರಿಸುತ್ತಾರೆ.

ಅದೇ ರೀತಿಯಲ್ಲಿ ತಾವು ಯಾವುದೋ ಪಾತ್ರವನ್ನು ಗಮನಿಸಿದ್ದು, ಆ ಪಾತ್ರದ ನಡೆ, ನುಡಿ, ಕ್ರಿಯೆ ಮತ್ತು ಪ್ರತಿಕ್ರಿಯೆಯನ್ನು ಅಭಿವ್ಯಕ್ತಪಡಿಸಲು ಮಕ್ಕಳು, ಅದರಲ್ಲೂ ಹದಿಹರೆಯದ ಮಕ್ಕಳು ಯತ್ನಿಸುತ್ತಿರುತ್ತಾರೆ. ಅದೂ ಕೂಡ ಸನ್ನಿವೇಶ, ಜೀವನ ಶೈಲಿ, ವಾತಾವರಣ, ಸಾಂಸ್ಕೃತಿಕ ಪರಿಸರ ಇತ್ಯಾದಿಗಳಿಂದ ಭಿನ್ನವಾಗಿರುತ್ತದೆ. ಇದರಿಂದ ಅವರ ವರ್ತನೆಗಳು ತೀರಾ ಅನ್ಯಗ್ರಹವಾಸಿಗಳದ್ದೆಂಬಂತೆ ಕಾಣುತ್ತಿರುತ್ತದೆ.

ಹಿಂದೆ ಪದೇ ಪದೇ ಕೇಳುತ್ತಿದ್ದ ಕಥೆಗಳಲ್ಲಿ ಯಾವುದ್ಯಾವುದೋ ಪಾತ್ರಗಳನ್ನು ಆದರ್ಶವೆಂಬಂತೆ ಸ್ವೀಕರಿಸುತ್ತಿದ್ದ ಜನರು ಆ ಪಾತ್ರಗಳನ್ನು ಅನುಕರಿಸಲು ಯತ್ನಿಸುತ್ತಿದ್ದರು. ಅಂತೆಯೇ ಇಂದೂ ಕೂಡ ಮಕ್ಕಳು, ಹದಿಹರೆಯದವರು ತಮಗೇ ಗೊತ್ತಿಲ್ಲದಂತೆ ಕೆಲವು ಸಿನೆಮಾ ನಾಯಕರ ಭಾವ ಭಂಗಿಗಳನ್ನು, ನೆಚ್ಚಿನ ಧಾರಾವಾಹಿಯ ಪಾತ್ರಗಳನ್ನು ಅನುಕರಿಸುತ್ತಾ ಅಂತೆಯೇ ವರ್ತಿಸುವ ಪ್ರಯತ್ನ ಮಾಡುತ್ತಾರೆ. ಇದರಿಂದಾಗಿ ಅವರ ವರ್ತನೆ ಮತ್ತು ಮಾತುಕತೆಗಳಲ್ಲಿ ಅಸಂಬದ್ಧ ಎನಿಸುವಂತಹ ಲಕ್ಷಣಗಳು ಕಾಣುತ್ತವೆ. ನೈಜ ರೀತಿಯಲ್ಲಿ ಚಿತ್ರಿಸಿರುವ ಕತೆಗಳಲ್ಲಿರುವ ಪಾತ್ರಗಳ ವರ್ತನೆಗಳು ಆ ಸನ್ನಿವೇಶಕ್ಕೆ ಸೂಕ್ತವಾಗಿದ್ದರೂ, ಓದುಗನ ಸನ್ನಿವೇಶಕ್ಕೆ ಸಹಜವಾಗಿದ್ದಿರಬಹುದು. ವಿಷಯ ಹಾಗಿರುವಾಗ, ವಾಣಿಜ್ಯ ಮತ್ತು ಮಸಾಲೆಭರಿತ ಚಿತ್ರಗಳಲ್ಲಿರುವ ನಾಯಕ ಮತ್ತು ನಾಯಕಿಯನ್ನು ಹುಡುಗರು ಮತ್ತು ಹದಿಹರೆಯದವರು ಅನುಕರಿಸುವುದು ಇನ್ನೆಷ್ಟು ಅಸಹಜ ವರ್ತನೆಗಳನ್ನು ತೋರುವುದು!

ವರ್ತನೆಗಳಿಂದ ಸೆಳೆಯಲು ಆವರ್ತನೆಗಳು

ತಮ್ಮ ಕಡೆಗೆ ಗಮನವನ್ನು ಸೆಳೆದುಕೊಳ್ಳಲು, ತಮ್ಮ ಮೇಲೆ ಸಹಾನುಭೂತಿಯನ್ನು ಗಿಟ್ಟಿಸಿಕೊಳ್ಳಲು, ಸಣ್ಣ ಪುಟ್ಟ ಲಾಭವನ್ನು ಪಡೆದುಕೊಳ್ಳಲು ತಮ್ಮ ವರ್ತನೆಗಳಿಂದ ಜನರನ್ನು ಸೆಳೆದುಕೊಳ್ಳಲು ಯತ್ನಿಸುವ ಬಗೆಯೊಂದು ಕಡೆಯಾದರೆ, ತಮಗೇ ಅರಿವಿಲ್ಲದಂತೆ ಕೆಲವು ಪಾತ್ರಗಳನ್ನು ಅವು ತಮ್ಮದಲ್ಲದಿದ್ದರೂ ಹಾಗೆಯೇ ವರ್ತಿಸುವ ಅತಿರೇಕಗಳೂ ಮತ್ತೊಂದು ಕಡೆ.

ಯಾವುದೇ ಅಸಹಜವಾದ ವರ್ತನೆಗಳು, ಅಥವಾ ಅನುಚಿತ ವರ್ತನೆಗಳು, ಅಸ್ವಾಭಾವಿಕ ವರ್ತನೆಗಳು ಮಕ್ಕಳಲ್ಲೇ ಆಗಲಿ, ಹದಿಹರೆಯದವರಲ್ಲೇ ಆಗಲಿ, ದೊಡ್ಡವರಲ್ಲೇ ಆಗಲಿ ಕಂಡಾಗ ಮಾಡಬೇಕಾದ ಮೊದಲ ಕೆಲಸವೆಂದರೆ ಅವರ ಆಸಕ್ತಿ ಮತ್ತು ಅಭಿರುಚಿಗಳನ್ನು ಗುರುತಿಸುವುದು. ಅದರಿಂದ ಕೆಲವು ಪ್ರಭಾವಗಳ ಮೂಲಗಳು ತಿಳಿದುಬರುತ್ತವೆ. ನಂತರ ಅದರಿಂದ ಅವರನ್ನು ಮುಕ್ತಗೊಳಿಸುವ ಬಗೆಯನ್ನು ಆಲೋಚಿಸಬೇಕಾಗುವುದು.

ಕತೆ ಅಥವಾ ಸಿನೆಮಾಗಳಲ್ಲಿರುವ ಒಂದೋ ಅಥವಾ ಮತ್ತೊಂದೋ ವಿಷಯವು ನೋಡುಗರ ನಿಜಜೀವನಕ್ಕೆ ಸಮೀಪವಾಗಿರುತ್ತದೆ ಅಥವಾ ಅದೇ ಎಂದು ನೋಡುಗ ಭಾವಿಸುತ್ತಾನೆ. ಆಗ ಅದು ಸೂಕ್ತವಾಗಿದೆಯೋ ಇಲ್ಲವೋ ತನ್ನ ವರ್ತನೆಯಲ್ಲಿ ಅಳವಡಿಸಿಕೊಳ್ಳಲು ಇಷ್ಟಪಡುತ್ತಾನೆ. ಆ ಉತ್ಕಟವಾದ ಆಸೆಯೂ ಕೂಡ ಪ್ರೇರಣೆ ಉಂಟು ಮಾಡುವಲ್ಲಿ ಅವನಿಗೆ ಅದರ ಅರಿವು ಇರುವುದಿಲ್ಲ. ಸಮಾಲೋಚನೆಗಳಲ್ಲಿ ಅವರ ಆಸಕ್ತಿಯ ಮತ್ತು ಅಭಿರುಚಿಯ ಮನರಂಜನೆಗಳಿಗೂ ಮತ್ತು ನಿಜಜೀವನಕ್ಕೂ ವ್ಯತ್ಯಾಸವಿದೆ ಎಂದು ಗುರುತಿಸುವಂತೆ ಮಾಡಬೇಕು. ನಿಜ ಜೀವನದ ವಿಷಯಗಳು ಕಾಲ್ಪನಿಕ ಜಗತ್ತಿಗಿಂತಲೂ ಹೆಚ್ಚು ಪ್ರಸ್ತುತ ಮತ್ತು ಉನ್ನತ ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಡಬೇಕು.

ಒಮ್ಮೆ ಹೇಳಿದ್ದು ಅಂತಿಮವಲ್ಲ

ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳು ವಿಪುಲವಾಗಿರುವ ಇತ್ತೀಚಿನ ದಿನಗಳಲ್ಲಂತೂ ಆಳ, ಎತ್ತರ, ನೈಜತೆಗಳಿಲ್ಲದಂತಹ ಪಾತ್ರಗಳನ್ನೇ, ವರ್ತನೆಗಳನ್ನೇ ಹೆಚ್ಚು ನೋಡುತ್ತೇವೆ. ಯಾವುದೇ ಒಂದು ಆದರ್ಶದ ಪಾತ್ರದ ಪ್ರಭಾವವು ಗಾಢ ಪರಿಣಾಮವನ್ನು ಬೀರುವುದಕ್ಕಿಂತ ಯಾವುದೋ ಒಂದು ಕ್ರಿಯೆಗೆ ಪ್ರತಿಕ್ರಿಯೆ ನೀಡುವ ಮೂಲಕ ತಮ್ಮ ಪಾತ್ರವನ್ನು ಬಿಂಬಿಸುತ್ತಾರೆ ಅಥವಾ ವರ್ತನೆಯನ್ನು ಪ್ರದರ್ಶಿಸುತ್ತಾರೆ. ಅದು ಸರಿಯೋ ತಪ್ಪೋ ಎಂದು ನೋಡಲು, ಪರಾಮರ್ಶಿಸಲು ಕೂಡ ಆಗದೇ, ತಮ್ಮ ದಾಖಲಾದ ಅಭಿಪ್ರಾಯಗಳನ್ನು ಸಾಧಿಸಲು ಮತ್ತದೇ ವರ್ತನೆಗಳನ್ನು ಪುನರಾವರ್ತಿಸುತ್ತಾ ಇರುತ್ತಾರೆ. ಇದು ಬಹಳ ಅಪಾಯಕಾರಿ ಬೆಳವಣಿಗೆ. ಕ್ಷಮೆ ಕೇಳುವ ಧೈರ್ಯ ಅಥವಾ ಕ್ಷಮೆ ಕೇಳುವುದು ಅಪಮಾನ ಎಂದು ಭಾವಿಸುವ ಮನಸ್ಥಿತಿಗಳು ಉಂಟಾಗಿ ಅದು ಹಾಗೆಯೇ ಅವರ ವ್ಯಕ್ತಿತ್ವವನ್ನು ಗಟ್ಟಿಗೊಳಿಸುತ್ತಾ ಹೋಗುತ್ತದೆ. ಇದು ಹೇಗಾಗುತ್ತದೆ ಎಂದರೆ, ವ್ಯಕ್ತಿಯ ಆಂತರ್ಯದ ಗುಣಗಳು ವ್ಯಕ್ತಿತ್ವವನ್ನು ರೂಪುಗೊಳಿಸುತ್ತಾ ಹೋಗುವುದಕ್ಕಿಂತ, ಹೊರಗಿನ ಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ಸಾಧಿಸುವ ಪದರಗಳು ಆವರಿಸುತ್ತಾ ಗಟ್ಟಿಗೊಳ್ಳುತ್ತಾ ಬರುವುದೇ ವ್ಯಕ್ತಿತ್ವವನ್ನು ನಿರ್ಧರಿಸುವಂತಾಗಿಬಿಡುತ್ತದೆ. ಫೇಸ್‌ಬುಕ್‌ಗಳಲ್ಲಿ ಇದು ಬಹಳ ಸ್ಪಷ್ಟವಾಗಿ ಗೋಚರವಾಗುತ್ತದೆ. ತಾವು ಯಾವುದೋ ಉಮೇದಿನಲ್ಲಿ, ಉನ್ಮಾದದಲ್ಲಿ ವ್ಯಕ್ತಪಡಿಸಿರುವಂತಹ ಅಭಿಪ್ರಾಯ ದಾಖಲಾಗಿರುವ ಕಾರಣದಿಂದ ಅದರ ಸೂಕ್ತತೆ ಅಥವಾ ಅನುಚಿತ ಪ್ರಸ್ತಾಪಗಳನ್ನು ಪರಿಶೀಲನೆ ಮಾಡಲಾಗದೇ, ಈಗಾಗಲೇ ತಮ್ಮಿಂದ ದಾಖಲಾಗಿರುವ ಅಭಿಪ್ರಾಯವನ್ನೇ ಸಾಧಿಸಲು ಮುಂದಿನ ಪೋಸ್ಟ್‌ಗಳನ್ನು ಹಾಕುತ್ತಲೇ ಇರುವುದರಿಂದ ಆತ್ಮಾವಲೋಕನಕ್ಕೆ ಅವಕಾಶವನ್ನೇ ಕಲ್ಪಿಸಿಕೊಳ್ಳಲಾಗುವುದಿಲ್ಲ. ತಾವು ಒಮ್ಮೆ ಹೇಳಿದ್ದು ಅಂತಿಮವಲ್ಲ. ತಾವು ಹೇಳಿದ್ದನ್ನು ತಮ್ಮ ಅರಿವಿಗೆ ಬಂದಂತೆ, ವಿಷಯ ಸ್ಪಷ್ಟತೆಯಾದಂತೆ ಬದಲಿಸಬಹುದು ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧವಿರುವ ಮನಸ್ಥಿತಿಗಳಿಗೆ ಮುಖ್ಯವಾಗಿ ಅಹಂಕಾರವೇ ಕಾರಣವಾಗುತ್ತದೆ. ಮಕ್ಕಳ ವ್ಯಕ್ತಿತ್ವವನ್ನು ಅವರ ವರ್ತನೆಯ ಮೇಲೆ ಅಳೆಯಬೇಡಿ.

 ಮಕ್ಕಳಲ್ಲಿಯೂ ಕೂಡ ಇದೇ ರೀತಿ ಆಗುತ್ತದೆ. ಅವರ ಯಾವುದೋ ಒಂದು ವರ್ತನೆಯನ್ನು ದೊಡ್ಡವರು ತೀವ್ರವಾಗಿ ಗುರುತಿಸಿದಾಗ, ಅದು ಈ ರೀತಿಯದೆಂದು ಪದೇ ಪದೇ ಗುರುತಿಸಲ್ಪಡುತ್ತಲೇ ಇರುವಾಗ ಮಕ್ಕಳು ಆ ವರ್ತನೆಯನ್ನು ಉಚಿತವೋ, ಅನುಚಿತವೋ ಎಂದು ಆಲೋಚಿಸದೇ, ಆತ್ಮಾವಲೋಕನ ಮಾಡಿಕೊಳ್ಳದೇ ತಮ್ಮದಾಗಿಸಿಕೊಂಡಿರುವ ಆ ವರ್ತನೆಗಳನ್ನು ಪ್ರದರ್ಶಿಸುತ್ತಿರುತ್ತಾರೆ. ಅದು ಎಂತಹ ಅಪಾಯಕಾರಿ ವ್ಯಕ್ತಿತ್ವದ ನಿರ್ಮಾಣಕ್ಕೆ ಕಾರಣವಾಗುವುದೆಂದರೆ, ಯಾವುದು ಅವರದ್ದು ಅಲ್ಲವೋ ಅಂತಹ ವ್ಯತಿರಿಕ್ತವಾದಂತಹ ವ್ಯಕ್ತಿತ್ವವನ್ನೂ ಕೂಡ ಕಟ್ಟಿಕೊಳ್ಳುವಂತಾಗುವುದು.

ಎಷ್ಟೋ ವರ್ತನೆಗಳು ಸಾಂದರ್ಭಿಕ ಪ್ರಭಾವಗಳಿಂದ ಉಂಟಾಗುವ ಕಾರಣದಿಂದ ಅದನ್ನು ಸಾಕ್ಷೀಕರಿಸುವವರು ಆ ವರ್ತನೆಯೇ ಅವರ ವ್ಯಕ್ತಿತ್ವವೆಂಬಂತಹ ನಿರ್ಧಾರಕ್ಕೆ ಬರಬಾರದು ಮತ್ತು ಪದೇ ಪದೇ ಹೇಳುತ್ತಾ ಹೇರಲೂಬಾರದು. ಮಕ್ಕಳ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಈ ಅಂಶವನ್ನು ಹೆಜ್ಜೆ ಹೆಜ್ಜೆಗೂ ಪೋಷಕರು ಮತ್ತು ಶಿಕ್ಷಕರು ಗಮನದಲ್ಲಿಟ್ಟುಕೊಂಡಿರಬೇಕು. ಏಕೆಂದರೆ ಅವರ ಸಾಂದರ್ಭಿಕ ವರ್ತನೆಗಳನ್ನು ಗಮನಿಸಿ ಅದೇ ಅವರ ವ್ಯಕ್ತಿತ್ವ, ಆ ಮಗುವಿರುವುದು ಹಾಗೆಯೇ ಎಂಬ ಕಲ್ಪನೆಯನ್ನು ಅವರೇ ಮಗುವಿಗೆ ಕಟ್ಟಿಕೊಟ್ಟುಬಿಡುತ್ತಾರೆ ಮತ್ತು ಮಗುವೂ ಕೂಡ ಅದನ್ನು ಒಪ್ಪಿಕೊಂಡು ಅದೇ ಬಗೆಯಲ್ಲಿ ನಡೆದುಕೊಳ್ಳಲು ಪ್ರಾರಂಭಿಸುತ್ತದೆ. ತತ್ಕಾಲಕ್ಕೆ ಉಂಟಾದ ಪ್ರಭಾವದಿಂದ ತೋರುವ ವರ್ತನೆಗಳನ್ನು ತನ್ನ ನಿಜವಾದ ವ್ಯಕ್ತಿತ್ವ ಮತ್ತು ವ್ಯಕ್ತಿತ್ವದ ಪ್ರದರ್ಶನದ ವರ್ತನೆಗಳು ಎಂಬಂತೆ ಅಳವಡಿಸಿಕೊಳ್ಳುತ್ತದೆ. ಮಕ್ಕಳ ವ್ಯಕ್ತಿತ್ವವನ್ನು ಅದ್ಯಾವುದೋ ತತ್ಕಾಲದ ಪ್ರಭಾವದ ವರ್ತನೆಯ ಆಧಾರದ ಮೇಲೆ ಅಳೆಯಲೂ ಬಾರದು. ಅದು ಅವರದ್ದೆಂದು ಹೇಳುತ್ತಾ ವ್ಯಕ್ತಿತ್ವವನ್ನೇ ಆರೋಪಿಸಿಕೊಳ್ಳಲು ಬಿಡಬಾರದು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News