ಬಡಜನರ ಕಲ್ಯಾಣಕ್ಕಾಗಿ ದುಡಿದ ಸಿದ್ದರಾಮಯ್ಯ ಸರ್ಕಾರ: ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2018-02-25 15:15 GMT

ಮೈಸೂರು,ಫೆ.25: ಸಂವಿಧಾನ ಹಾಗೂ ಜನರ ಹಕ್ಕು ರಕ್ಷಣೆಯ ಮೂಲಕ ಬಡಜನರ ಕಲ್ಯಾಣಕ್ಕಾಗಿ ಸಮಾಜದ ಸುಸ್ಥಿರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಹರ್ನಿಶಿ ದುಡಿದಿದೆ ಎಂದು ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ನಗರದ ಹಿನಕಲ್ ಗ್ರಾಮದಲ್ಲಿ ರವಿವಾರ ಮೂಡಾ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕ್ಷೇಮಾಭಿವೃದ್ಧಿಗೆ ನಿರ್ಮಿಸಿರುವ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನದ ಆಶಯದಂತೆ ಬಡವರ ಕಲ್ಯಾಣವಾಗದ ಹೊರತು ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಸಂವಿಧಾನದ ರಕ್ಷಣೆ, ಬಡಜನರ ಕಲ್ಯಾಣ ನಮ್ಮ ಮುಖ್ಯ ಉದ್ದೇಶವಾಗಬೇಕು. ಸರ್ಕಾರದ ಯೋಜನೆಗಳು ಕೆಳಮಟ್ಟದ ಜನರಿಗೂ ಸಹ ತಲುಪಬೇಕು ಎಂಬ ಸದುದ್ದೇಶದಿಂದ ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿದೆ. ಇದರ ಸಮರ್ಪಕ ಬಳಕೆ ಅಗತ್ಯವಾಗಿದೆ ಎಂದರು.

ಈ ಸಮುದಾಯ ಭವನ ನಿರ್ಮಾಣಕ್ಕಾಗಿ ಸರ್ಕಾರ 1 ಕೋಟಿ ರೂ ಹಣ ನೀಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ದೇಶದ ಸಂಪತ್ತು, ಸಮಾನವಾಗಿ ಹಂಚಿಕೆಯಾಗಬೇಕು ಎಂಬ ಆಶಯದಿಂದ ಕೆಲವೊಂದು ಸೌಲಭ್ಯಗಳನ್ನು ನೀಡಿದ್ದಾರೆ. ಆ ಸೌಲಭ್ಯಗಳ ಪ್ರಕಾರ ಶೇ.24.10 ರಷ್ಟು ಅನುದಾನ ಈ ಜನಾಂಗಕ್ಕೆ ಸಿಗಲಿದೆ. ಇದಕ್ಕಾಗಿ ಸರ್ಕಾರ ಹಣವನ್ನು ಮೀಸಲಿಟ್ಟಿದೆ. ಪ್ರಸ್ತುತ ರಾಜ್ಯದಲ್ಲಿರುವ ಎಲ್ಲಾ ಎಸ್ಸಿ, ಎಸ್ಟಿ ಜನಾಂಗದ ಕಾಲೋನಿಗಳಲ್ಲಿ ಡಾಂಬರ್ ಹಾಗೂ ಕಾಂಕ್ರೀಟ್ ರಸ್ತೆ, ಒಳ ಚರಂಡಿ, ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದೆ. ಜೊತೆಗೆ ಈ ಜನಾಂಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ಹಾಗೂ ಉಚಿತ ಬಸ್ ಸಂಚಾರ, ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಉಚಿತ ಅವಕಾಶ ನೀಡಿವೆ. ಇದೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಜನಾಂಗದ ಅಭಿವೃದ್ಧಿಗೆ ನೀಡಿದ ಕೊಡುಗೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು.

ಯುವಕರ ನಿರುದ್ಯೋಗ ನಿವಾರಣೆಗಾಗಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದರ ಜೊತೆಗೆ ಗುತ್ತಿಗೆಯಲ್ಲಿ ಮೀಸಲಾತಿಯನ್ನು ನೀಡಲಾಗುತ್ತಿದೆ. ಇಂತಹ ಯೋಜನೆ ಈ ದೇಶದಲ್ಲಿಯೇಪ್ರಥಮವಾಗಿದ್ದು, ರಾಷ್ಟ್ರಪತಿಗಳು ಕೂಡಾ ಶ್ಲಾಘಿಸಿದ್ದಾರೆ. ಅಂಬೇಡ್ಕರ್ ಹಾಗೂ ಅಭಿವೃದ್ಧಿ ನಿಗಮದ ವತಿಯಿಂದ ಶೇ.18ರಷ್ಟು ಹಣವನ್ನು ಈ ಜನಾಂಗಕ್ಕೆ ಸಾಲ ಸೌಲಭ್ಯ ನೀಡಲಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಗುಂಪುಗಾರಿಕೆ, ಭ್ರಷ್ಟಾಚಾರ, ಹಗರಣ ರಹಿತ ಆಡಳಿತ ನೀಡಿದ್ದಾರೆ. 6 ಬಜೆಟ್ ಮಂಡಿಸಿ ಜನಸಾಮಾನ್ಯರ ಬದುಕಿಗೆ ಪೂರಕವಾದ ಯೋಜನೆಗಳನ್ನು ಪ್ರಕಟಿಸಿ ಅನುಷ್ಟಾನಗೊಳಿಸಿದ್ದಾರೆ. ಆದರೂ ವಿರೋಧ ಪಕ್ಷಗಳು ವಿನಾಕಾರಣ ಟೀಕಿಸುತ್ತಿವೆ. ಟೀಕೆಗಳು ಸಕಾರಾತ್ಮಕವಾಗಿರಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹಾಗಾಗಿ ರಾಜಕಾರಣಿಗಳು ಬದ್ಧತೆಯಿಂದ ನಡೆದುಕೊಳ್ಳುವುದು ಒಳ್ಳೆಯದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ, ಧ್ರುವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News