ಶಿಕಾರಿಪುರ: ತಾಲೂಕು ಮಟ್ಟದ 8 ನೇ ಕನ್ನಡ ಸಾಹಿತ್ಯ ಸಮ್ಮೇಳನ

Update: 2018-02-25 17:54 GMT

ಶಿಕಾರಿಪುರ,ಫೆ.25: ಜಿಲ್ಲೆ ,ರಾಜ್ಯದಲ್ಲಿ ಶಿಕಾರಿಪುರ ತಾಲೂಕು ಸಮೃದ್ದ ಸಂಸ್ಕೃತಿಯ ಅಕ್ಷಯ ನಿಧಿಯ ಕಣಜವಾಗಿದ್ದು, ತಾಲೂಕಿನ ಹಲವು ಸ್ಥಳಗಳು ಅವಿಸ್ಮರಣೀಯವಾಗಿ ಗುರುತಿಸಿಕೊಂಡಿದ್ದು, ಈ ಮಣ್ಣಿನ ಶ್ರೇಷ್ಟತೆಯನ್ನು ತಿಳಿಸುತ್ತದೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.

ಭಾನುವಾರ ತಾಲೂಕಿನ ಚುರ್ಚುಗುಂಡಿ ಗ್ರಾಮದ ಬಯಲು ರಂಗಮಂದಿರದಲ್ಲಿ ನಡೆದ ತಾಲೂಕು ಮಟ್ಟದ 8 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕಾರಿಪುರ ತಾಲೂಕು ಕನ್ನಡದ ಪ್ರಥಮ ರಾಜ ವಂಶಸ್ಥ ಕದಂಬರ ಜನ್ಮ ಸ್ಥಳವಾಗಿದ್ದು, ತಾಲೂಕಿನ ತಾಳಗುಂದ ಗ್ರಾಮದಲ್ಲಿನ ಅತ್ಯಂತ ಪುರಾತನ ಪ್ರಣವೇಶ್ವರ ದೇವಾಲಯ, ದೇಶದಲ್ಲಿಯೇ ಪ್ರಥಮ ಸಾಮಾಜಿಕ ಚಳುವಳಿಯನ್ನು ಹುಟ್ಟಿಹಾಕಿದ ಅಲ್ಲಮಪ್ರಭು, ಅಕ್ಕಮಹಾದೇವಿ, ಅಜಗಣ್ಣ, ಮುಕ್ತಾಯಕ್ಕ, ಸತ್ಯಕ್ಕ ಸಹಿತ ಮನುಷ್ಯನ ಉದ್ದಾರಕ್ಕಾಗಿ ಶ್ರಮಿಸಿದ ಹಲವು ಶರಣ ಶರಣೆಯರಿಗೆ ಜನ್ಮ ನೀಡಿದ ಶ್ರೇಷ್ಟ ಸ್ಥಳವಾಗಿದೆ ಎಂದ ಅವರು, ಬಳ್ಳಿಗಾವಿ, ಬಂದಳಿಕೆ ವಾಸ್ತುಶಿಲ್ಪದ ಶ್ರೇಷ್ಟತೆಯ ಪ್ರತೀಕವಾಗಿದೆ ಎಂದರು.

ತಾಲೂಕಿನಾದ್ಯಂತ ಸಹಸ್ರಾರು ಶಾಸನ ವೀರರ ತ್ಯಾಗಿಗಳ ನೆನಪಿಗಾಗಿ ವೀರಗಲ್ಲು, ಮಾಸ್ತಿಕಲ್ಲುಗಳು ಸಾಕ್ಷಿಯಾಗಿದ್ದು ತಾಲೂಕಿನ ಹಲವು ಗ್ರಾಮಗಳು ಪುರಾತನ ವಸ್ತು ಸಂಗ್ರಹಾಲಯಗಳನ್ನು ಜ್ಞಾಪಿಸುತ್ತದೆ. ಕನ್ನಡದ ಪ್ರಥಮ ಶಾಸನ ಹಲ್ಮಿಡಿಗಿಂತ ಪುರಾತನ ಸಿಂಹ ಕಟಾಂಜನ ಶಾಸನ ತಾಳಗುಂದದಲ್ಲಿ ದೊರೆತಿದ್ದು ತಾಲೂಕಿನ ಹಿರಿಮೆಯ ಸಂಕೇತವಾಗಿದೆ ಎಂದು ತಿಳಿಸಿದರು.

ಋಷಿ ಮುನಿಗಳ ತಪಸ್ಸಿನ ಸ್ಥಳವಾಗಿ ಚುರ್ಚುಗುಂಡಿಯ ಸಂಗಮೇಶ್ವರ ದೇವಾಲಯ ಪ್ರಸಿದ್ದವಾಗಿದ್ದು, ಬ್ರಿಟೀಷರ ಆಳ್ವಿಕೆಯ ಅವಧಿಯಲ್ಲಿಯೇ ಸಂಪೂರ್ಣ ಸ್ವರಾಜ್ಯ ಎಂದು ಘೋಷಿಸಿಕೊಂಡ ಈಸೂರು ಗ್ರಾಮ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿನ ಪುರಾತನ ಹಲವು ಕೆರೆಗಳು ಪ್ರಸಿದ್ದವಾಗಿ ಮಣ್ಣಿನ ಶ್ರೇಷ್ಟತೆಯನ್ನು ತಿಳಿಸುತ್ತಿದೆ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ದೋಂಡಿಯಾವಾಲಾ ಶ್ರೀ ಹುಚ್ಚುರಾಯಸ್ವಾಮಿಗೆ ಅರ್ಪಿಸಿದ ಖಡ್ಗ ದೇವಾಲಯದಲ್ಲಿ ತಾಲೂಕಿನ ವೀರ ಇತಿಹಾಸವನ್ನು ಸಾಕ್ಷೀಕರಿಸುತ್ತಿದೆ ಎಂದು ತಿಳಿಸಿದರು.

ಸಮಗ್ರ ಕನ್ನಡ ನಾಡು ಸಂಸ್ಕೃತಿಯ ಬೀಡಾಗಿದ್ದು ಅಖಂಡ ಕರ್ನಾಟಕ ಪರಿಕಲ್ಪನೆ ಪ್ರತಿಯೊಬ್ಬರಲ್ಲಿ ಜಾಗೃತವಾಗಬೇಕಾಗಿದೆ ಎಂದ ಅವರು ಕಾವೇರಿ, ಮಹದಾಯಿ ಬಗೆಗಿನ ನೀರಾವರಿ ಹೋರಾಟ ಇಡೀ ರಾಜ್ಯದ ಸಮಸ್ಯೆ ಎಂಬ ವಿಶಾಲ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ರಾಜ್ಯದ ನೆಲ ಜಲದ ಬಗ್ಗೆ ಸರ್ವರೂ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ ಎಂದು ತಿಳಿಸಿದರು.

ಕನ್ನಡ ಬಾಷೆ ಬಗ್ಗೆ ಅಂದಾಭಿಮಾನ ಸಲ್ಲದು,ದುರಭಿಮಾನ ಸಲ್ಲದು ಸದಾಭಿಮಾನ ಅಗತ್ಯ, ಪ್ರತಿಯೊಬ್ಬರಿಗೂ ಪ್ರಾಥಮಿಕ ಹಂತದಲ್ಲಿ ಕನ್ನಡ ಮಾತೃಬಾಷೆಯ ಶಿಕ್ಷಣ ಕಡ್ಡಾಯವಾಗಿಸಿ ಪ್ರೌಡಶಿಕ್ಷಣ ದಲ್ಲಿ ತಂತ್ರಜ್ಞಾನದ ಬಳಕೆಯಾಗಬೇಕು ಎಂದ ಅವರು ತಾಲೂಕು ಸತತ 3 ವರ್ಷದ ಬರಗಾಲದಿಂದ ತತ್ತರಿಸಿದ್ದು ಶಾಶ್ವತ ನೀರಾವರಿ ಅತ್ಯಗತ್ಯವಾಗಿದೆ. ಈ ದಿಸೆಯಲ್ಲಿ ಹೊಸೂರು,ಉಡುಗಣಿ,ತಾಳಗುಂದ, ಅಂಜನಾಪುರ ಹೋಬಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ಪಡೆದು ಪರಿಹರಿಸುವ ಪ್ರಯತ್ನ ಚಾಲ್ತಿಯಲ್ಲಿದೆ. ಈ ಬಗ್ಗೆ ಕೇಂದ್ರ ನೀರಾವರಿ ಸಚಿವ ನಿತಿನ್ ಗಡ್ಕರಿ ಹಣಕಾಸಿನ ನೆರವು ನೀಡುವ ಬರವಸೆ ನೀಡಿದ್ದಾರೆ ಎಂದು ತಿಳಿಸಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಶಿಕಾರಿಪುರ ಕೃಷ್ಣಮೂರ್ತಿ ಮಾತನಾಡಿ, ಮಾತೃಬಾಷೆಯ ಶಿಕ್ಷಣ ಪ್ರಾಥಮಿಕ ಹಂತದಲ್ಲಿ ಕಡ್ಡಾಯಗೊಳಿಸಿದಲ್ಲಿ ಮಾತ್ರ ಬಾಷೆಗೆ ಭದ್ರ ಬುನಾದಿ ದೊರೆತು ಮಕ್ಕಳಲ್ಲಿ ಸೃಜನಶೀಲತೆ ಬೆಳೆಯಲಿದೆ ಎಂದು ತಿಳಿಸಿದರು. ಕಳೆದ ಸಮ್ಮೇಳನದಲ್ಲಿನ ನಿರ್ಣಯ ಅಂಗೀಕಾರಕ್ಕೆ ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಡಿ.ಬಿ ಶಂಕ್ರಪ್ಪ ಮಾತನಾಡಿ, ಕಸಾಪ ಕೇವಲ ಮಕ್ಕಳು,ಶಿಕ್ಷಕರಿಗೆ ಸೀಮಿತವಾಗಿದೆ ಗ್ರಾಮೀಣ ಭಾಗದಲ್ಲಿ ಬಾಷೆ ಬಗೆಗಿನ ಅಭಿಮಾನ ನಗರದಲ್ಲಿಲ್ಲ ಕೇವಲ ಕನ್ನಡದ ಹೆಸರಿನಲ್ಲಿ ಸರ್ಕಾರದ ಹಣ ಲೂಟಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ, ಹಿರಿಯ ಪರ್ತಕರ್ತ ಎಸ್.ಬಿ ಮಠದ್‌ರನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ವೇದಿಕೆಯಲ್ಲಿ ಶಾಸಕ ರಾಘವೇಂದ್ರ, ತಾ.ಪಂ ಅಧ್ಯಕ್ಷ ಪರಮೇಶ್ವರಪ್ಪ,ರೂಪಾ, ಸದಸ್ಯ ಜಯಣ್ಣ,ಗ್ರಾ.ಪಂ ಅಧ್ಯಕ್ಷ ಮಲ್ಲೇಶಪ್ಪ, ಕಸಾಪ ಅಧ್ಯಕ್ಷ ಕಾನೂರು ಮಲ್ಲಿಕಾರ್ಜುನ, ಕೆ.ಶೇಖರಪ್ಪ,ಮಂಜಾಚಾರ್,ಹಾಲೇಶ್ ನವುಲೆ,ಸಿ ಪಿ ಹೆಗಡೆ,ಶಶಿಧರ ಚುರ್ಚುಗುಂಡಿ, ಗುರುರಾಜ ಜಕ್ಕಿನಕೊಪ್ಪ,ಎಸ್.ಆರ್ ಕೃಷ್ಣಪ್ಪ,ಪುಟ್ಟಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News