ಸೋಮವಾರಪೇಟೆ: ಅಳುವಾರದಲ್ಲಿ 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಮೆಲುಕು

Update: 2018-02-25 18:06 GMT

• ‘ಅನುಭವ ಮಂಟಪ’ವಾದ ಜ್ಞಾನಕಾವೇರಿ ಸ್ನಾತಕ್ಕೋತ್ತರ ಕೇಂದ್ರ
• ಶರಣ ಸಾಹಿತ್ಯ ಪರಿಷತ್‍ನಿಂದ ವಚನ ಕ್ರಾಂತಿಯ ಪುನರುತ್ಥಾನ ಕಾರ್ಯ

ಸೋಮವಾರಪೇಟೆ,ಫೆ.25: ಅಸಮಾನತೆ, ಅಸ್ಪೃಶ್ಯತೆ, ಅನಾಚಾರ, ಮೂಢನಂಬಿಕೆಗಳು ಮೇಳೈಸುತ್ತಿದ್ದ ಸಂದರ್ಭ ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು 12ನೇ ಶತಮಾನದಲ್ಲಿ ಹುಟ್ಟಿಕೊಂಡ ಬಸವಾದಿಶರಣರ ವಚನ ಕ್ರಾಂತಿಯ ವಿವಿಧ ಮಜಲುಗಳನ್ನು ಮೆಲುಕು ಹಾಕುವ ವೇದಿಕೆಗೆ ಅಳುವಾರದ ಸ್ನಾತಕ್ಕೋತ್ತರ ಕೇಂದ್ರ ಸಾಕ್ಷಿಯಾಯಿತು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಚಿಕ್ಕಅಳುವಾರದ ಜ್ಞಾನಕಾವೇರಿ ಸ್ನಾತಕ್ಕೋತ್ತರ ಕೇಂದ್ರ ಹಾಗೂ ಕೊಡಗು ಪ್ರೆಸ್‍ಕ್ಲಬ್ ಆಶ್ರಯದಲ್ಲಿ ಜ್ಞಾನಕಾವೇರಿ ಸ್ನಾತಕ್ಕೋತ್ತರ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಚನ ಕ್ರಾಂತಿಯ ಪುನರುತ್ಥಾನ-ವಿವಿಧ ವಿಚಾರಗೋಷ್ಠಿಗಳು, 12ನೇ ಶತಮಾನದ ಅನುಭವ ಮಂಟಪದ ಆಶಯಗಳ ಮೇಲೆ ಹೆಚ್ಚಿನ ಬೆಳಕು ಚೆಲ್ಲುವಲ್ಲಿ ಸಫಲವಾಯಿತು.

ಭಾರತ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಪಸರಿಸಿದ ಶರಣರ ವಚನಗಳು, ದೇಶದ ಸಂವಿಧಾನ ರಚನೆಗೆ ಮಾತ್ರವಲ್ಲದೇ ವಿಶ್ವದ ಅನೇಕ ಹೋರಾಟಗಳಿಗೆ ಸ್ಪೂರ್ತಿಯಾದ ಕ್ರಾಂತಿಕಾರಕ ವಚನಗಳ ಸಾರವನ್ನು 21ನೇ ಶತಮಾನದಲ್ಲೂ ಅಳವಡಿಸಿಕೊಳ್ಳಬೇಕಾದ ಅಗತ್ಯತೆ, ವಚನಗಳ ಪ್ರಸ್ತುತತೆಯ ಬಗ್ಗೆ ಹಲವಷ್ಟು ವಿದ್ವಾಂಸರು ತಮ್ಮ ಅಭಿಮತ ವ್ಯಕ್ತಪಡಿಸಿದರು.

ವಚನ ಸಾಹಿತ್ಯ ಸಾರ್ವಕಾಲಿಕ: ಕಾರ್ಯಕ್ರಮವನ್ನು ಉದ್ಘಾಟಿಸಿದ ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಮಾತನಾಡಿ, ವಚನ ಸಾಹಿತ್ಯ ಸಾರ್ವಕಾಲಿಕವಾಗಿದ್ದು, ಇಂದಿನ ಕಾಲಘಟದಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಧಾರ್ಮಿಕತೆಯನ್ನು ಉಳಿಸಿಕೊಂಡು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದ ವಚನ ಸಾಹಿತ್ಯ ಕೇವಲ ಮಡಿವಂತಿಕೆಗೆ ಸೀಮಿತವಾಗದೇ ಎಲ್ಲರ ಜೀವನವನ್ನು ಸಮರ್ಪಕಗೊಳಿಸುವತ್ತ ಮುನ್ನಡೆದಿದೆ ಎಂದರು.

ಎಲ್ಲರ ಜೀವನಕ್ಕೂ ಧಾರ್ಮಿಕತೆ ಬೇಕು. ಎಲ್ಲರಿಗೂ ಧಾರ್ಮಿಕತೆಯ ನಿಯಂತ್ರಣವಿದೆ. ಸಮಕಾಲೀನ ತಜ್ಞರ ನವೀನ ವಚನಗಳ ನಡುವೆಯೂ ಮೂಲ ವಚನ ಸಾಹಿತ್ಯ ಎಲ್ಲೂ ತನ್ನ ಸತ್ವವನ್ನು ಕಳೆದುಕೊಂಡಿಲ್ಲ. ವಚನಗಳ ತಿರುಳು ಅರಿಯುವ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿಯಾಗಬೇಕು. ಅಂತರಂಗದ ಶುದ್ಧಿಯೊಂದಿಗೆ ಪರರ ಬಗ್ಗೆ ಕಾಳಜಿ ವಹಿಸುವಂತಾಗಬೇಕು ಎಂದು ಅಭಿಪ್ರಾಯಿಸಿದರು.

ಜಾತೀಯತೆಯ ವಿಷಬೀಜ ಬಿತ್ತುವ ಮೂಲಕ ಸಮಾಜವನ್ನು ಛಿದ್ರಗೊಳಿಸುವ ಕಾರ್ಯ ಇಂದಿಗೂ ನಡೆಯುತ್ತಿದೆ. ಈ ಬಗ್ಗೆ 12ನೇ ಶತಮಾನದಲ್ಲಿಯೇ ಬಸವಣ್ಣನವರು ತಮ್ಮ ವಚನಗಳ ಮೂಲಕ ಎಚ್ಚರಿಸಿದ್ದರು. ಇಂತಹ ಕ್ರಾಂತಿಕಾರಕ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಾತ್ಯತೀತ ರಾಷ್ಟ್ರದಲ್ಲಿ ಜಾತೀಯತೆ: ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೊಡ್ಲಿಪೇಟೆ ಕೊರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಜಗತ್ತಿನ ಮೊದಲ ಸಂವಿಧಾನವೇ ಅನುಭವ ಮಂಟಪ. ವಚನಗಳ ಮೂಲಕ ಸಮಾನತೆಗಾಗಿ ಕ್ರಾಂತಿ ನಡೆದು ಶತಮಾನಗಳು ಕಳೆದರೂ ಇಂದಿಗೂ ಸಮಾಜದಲ್ಲಿ ಅಸಮಾನತೆಯನ್ನು ಕಾಣುತ್ತಿದ್ದೇವೆ. ಜಾತ್ಯತೀತ ರಾಷ್ಟ್ರದಲ್ಲಿ ಜಾತೀಯತೆಯೇ ಎಲ್ಲಡೆ ಪಸರಿಸಿದೆ. 1ನೇ ತರಗತಿಗೆ ಪ್ರವೇಶ ಪಡೆಯುವ ಸಂದರ್ಭವೇ ಜಾತಿ ಕಾಲಂ ತುಂಬಬೇಕಿದೆ. ಸಮಾನತೆಯ ಸಮಾಜ ನಿರ್ಮಾಣವಾದಾಗ ಮಾತ್ರ ಬಸವಾದಿ ಶರಣರ ಆಶಯಗಳು ಈಡೇರಿದಂತಾಗುತ್ತದೆ ಎಂದರು.

ತೊರೆನೂರು ವಿರಕ್ತ ಮಠಾಧೀಶರಾದ ಶ್ರೀ ಮಲ್ಲೇಶ ಸ್ವಾಮೀಜಿ ಮಾತನಾಡಿ, ಅನುಭವ ಮಂಟಪದ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಮುಂದಾದ ಬಸವಣ್ಣ ಸೇರಿದಂತೆ ಇತರ ದಾರ್ಶನಿಕರ ಆಶಯಗಳು ಅನುಷ್ಠಾನಗೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸಮಾಜ ಸುಧಾರಣೆಯ ಆಶಯ ಹೊಂದಿದ್ದ ಬಸವ ತತ್ವವೇ ಇಂದು ಜಾತಿಗಳಾಗಿ ರೂಪುಗೊಂಡು, ತಮ್ಮ ತಮ್ಮಲ್ಲೇ ಹೆಚ್ಚುಗಾರಿಕೆಗೆ ಪ್ರಯತ್ನಿಸುತ್ತಿರುವದು ದುರಂತ ಎಂದು ಅಭಿಪ್ರಾಯಿಸಿದರು.

ಸ್ನಾತಕ್ಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಪಿ.ಎಲ್. ಧರ್ಮ ಮಾತನಾಡಿ, ಕೇವಲ ಪಠ್ಯಗಳಿಂದ ಜೀವನ ಮೌಲ್ಯ ಲಭಿಸುವದಿಲ್ಲ. ಶ್ರೀಮಂತಿಕೆಯ ಅಹಂಕಾರಕ್ಕೆ ವಚನ ಸಾರವೇ ಮದ್ದು. ವಚನ ಸಾಹಿತ್ಯ ವಾಸ್ತವಿಕತೆಯನ್ನು ಸಾರುತ್ತಿದ್ದು, ಇವುಗಳನ್ನು ಯುವಜನಾಂಗ ಅರ್ಥೈಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಸರ್ವಾಧ್ಯಕ್ಷರಾದ ಕುವೆಂಪು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಸಿ.ಎಂ. ಧರ್ಮಪ್ಪ ಮಾತನಾಡಿ, ರೂಢೀಗತ ಸಂಪ್ರದಾಯದ ವಿರುದ್ಧ ಬಂಡಾಯ ಸಾರಿದ ವಚನಕಾರರು ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವ ಮೂಲಕ ಕ್ರಾಂತಿಯ ಸಂಕ್ರಮಣ ಕಾಲಕ್ಕೆ ಭಾಷ್ಯ ಬರೆದರು ಎಂದು ನೆನಪಿಸಿದರಲ್ಲದೇ, ಕಲ್ಯಾಣ ಕ್ರಾಂತಿಯ ಸಂದರ್ಭ ಕೋಟ್ಯಾಂತರ ವಚನಗಳು ನಾಶವಾದವು ಎಂದು ವಿಷಾಧಿಸಿದರು.

ಮತ್ತೋರ್ವ ಅತಿಥಿ, ಜಿ.ಪಂ. ಮಾಜೀ ಅಧ್ಯಕ್ಷ ವಿ.ಎಂ. ವಿಜಯ ಮಾತನಾಡಿ, ವೇದ, ಶಾಸ್ತ್ರ, ಆಗಮ, ಶ್ರೇಣೀಕೃತ ಸಮಾಜದ ವಿರುದ್ಧ ಬಂಡೆದ್ದು,  ಮಾನವರೆಲ್ಲರೂ ಒಂದೇ ಎಂಬ ಸಂದೇಶ ಸಾರುವದರೊಂದಿಗೆ ಹೆಣ್ಣಿಗೂ ಸಮಾಜದಲ್ಲಿ ಸಮಾನತೆಯನ್ನು ಕಲ್ಪಿಸಲು ಶ್ರಮಿಸಿದ ಬಸವಾದಿ ಶರಣರ ವಚನಗಳು ಪುರುತ್ಥಾನಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಆಶಯ ನುಡಿಯನ್ನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಅವರು, ಪರಿಷತ್‍ನಿಂದ ರಾಜ್ಯಾದ್ಯಂತ ವಿಚಾರ ಗೋಷ್ಠಿ ನಡೆಯುತ್ತಿದ್ದು, ವೈಚಾರಿಕ ಧರ್ಮದ ಪ್ರತಿಪಾದಕರಾಗಿದ್ದ ಶರಣ ಸಾಹಿತ್ಯದ ಬಗ್ಗೆ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ನಾತಕ್ಕೋತ್ತರ ಕೇಂದ್ರದ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಪರಿಷತ್‍ನ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ಕನ್ನಡ ಉಪನ್ಯಾಸಕ ಜಮೀರ್ ಅಹಮ್ಮದ್ ಸ್ವಾಗತಿಸಿ ನಿರೂಪಿಸಿದರು. ಉಪನ್ಯಾಸಕಿ ಹೇಮಲತಾ ವಂದಿಸಿದರು.
ಕದಳಿ ಮಹಿಳಾ ವೇದಿಕೆ ಸದಸ್ಯರಿಂದ ವಚನ ಗಾಯನ, ಮಂಜು ಭಾರ್ಗವಿ ಅವರಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News