ಜಮೀನುದಾರ ಕೇಂದ್ರಿತ ಸಮಾಜದಿಂದ ರೈತ ಕೇಂದ್ರಿತ ಸಮಾಜದೆಡೆಗೆ ನಮ್ಮ ನಡಿಗೆ

Update: 2018-02-26 18:32 GMT

ಭಾಗ - 3

18ನೇ ಶತಮಾನದ ಟಿಪ್ಪುಸುಲ್ತಾನ್

ಈ ಜಮೀನುದಾರಿ ವರ್ಗದ ನಿರ್ಮೂಲನಕ್ಕಾಗಿ ಟಿಪ್ಪುಸುಲ್ತಾನ್‌ಕೂಡ ಪರಿಶ್ರಮ ಪಟ್ಟ. ಅದಕ್ಕಾಗಿ ರಾಜ್ಯಾಧಿಕಾರ ಪಡೆದುಕೊಂಡ ಹೊಸದರಲ್ಲೇ ಪಾಳೆಯಗಾರರ ಮೇಲೆ ಹಿಡಿತ ಸಾಧಿಸಿದ. 200 ಪಾಳೆಯಗಾರರನ್ನು ನಿಷ್ಕ್ರಿಯಗೊಳಿಸಿ ಊಳಿಗಮಾನ್ಯ ಪದ್ಧತಿ ಕುಸಿಯುವಂತೆ ಮಾಡಿದ. ಉಳುವವನೇ ಭೂಮಿಯ ಒಡೆಯ ಎನ್ನುವ ರೀತಿಯಲ್ಲಿ ಭೂಮಿಯನ್ನು ರೈತಾಪಿ ಜನರಿಗೆ ಹಂಚಿದ. ಹೆಚ್ಚಿನ ಭೂಮಿ ರಾಜಪ್ರಭುತ್ವದ ಅಡಿಯಲ್ಲೇ ಉಳಿಯುತ್ತಿತ್ತು. ಈ ರೀತಿಯ ಕ್ರಾಂತಿಕಾರಿ ಚಟುವಟಿಕೆಗಳು ನಡೆಯುವಂತೆ ನೋಡಿಕೊಂಡಿದ್ದರಿಂದ ಪಾಳೆಯಗಾರರ ಆಟ ನಡೆಯಲಿಲ್ಲ. ರೈತರು ಮತ್ತು ಪ್ರಭುತ್ವದ ಮಧ್ಯೆ ಮಧ್ಯವರ್ತಿಗಳಾಗಿದ್ದವರನ್ನೆಲ್ಲ ಟಿಪ್ಪುಮೂಲೆಗುಂಪಾಗಿಸಿದ. ಉಳುವವನಿಗೆ ಭೂಮಿ ಹಂಚಿಕೆಯಾಗುವಾಗ ಆತನ ಜಾತಿ, ಮತ, ಪಂಥ ಮತ್ತು ಧರ್ಮಗಳು ಗಣನೆಗೆ ಬರುತ್ತಿರಲಿಲ್ಲ. ಇಂತಹ ಅತ್ಯಾಧುನಿಕ ಕೃಷಿ ನೀತಿಯನ್ನು ಟಿಪ್ಪುಜಾರಿಗೊಳಿಸಿದ್ದ. ಹೀಗೆ ರೈತರನ್ನು ಪಾಳೆಯಗಾರ ವ್ಯವಸ್ಥೆಯಿಂದ ಮುಕ್ತಗೊಳಿಸಿದ. ತನ್ನ ರಾಜ್ಯದಲ್ಲಿ ಜಹಗೀರದಾರರು ಇಲ್ಲದಂತೆ ಮಾಡಿದ. ಆತನ ಆಡಳಿತದ ಅವಧಿಯಲ್ಲಿ ಕೇವಲ ಎರಡು ಹಳ್ಳಿಗಳು ಮಾತ್ರ ಜಹಗೀರಿಗೆ ಒಳಪಟ್ಟಿದ್ದವು. ಇಂತಹ ಕ್ರಾಂತಿಕಾರಿ ಬದಲಾವಣೆ ಇಡೀ ದೇಶದಲ್ಲೇ ಪ್ರಥಮ ಬಾರಿಗೆ ನಡೆಯಿತು.ಜಹಗೀರನ್ನು ಹೆಚ್ಚಾಗಿ ಬ್ರಾಹ್ಮಣ ಮಠಗಳೇ ಹೊಂದಿದ್ದವು. ದೇವಸ್ಥಾನದ ಜಹಗೀರಿಗೆ ಒಳಪಟ್ಟ ಭೂಮಿಯನ್ನು ಟಿಪ್ಪುಸುಲ್ತಾನ್ ಶೂದ್ರರಿಗೆ ಹಂಚಿದ. ನಂಜನಗೂಡಿನಲ್ಲಿ 500 ಬ್ರಾಹ್ಮಣ ಮನೆಗಳಿದ್ದವು. ಅವು ಒಟ್ಟಾರೆ ವಾರ್ಷಿಕ 14,000 ಪಗೋಡಾಗಳಷ್ಟು ಆದಾಯ ತರುತ್ತಿದ್ದ ಜಮೀನನ್ನು ಹೊಂದಿದ್ದವು. ಅದೇ ಊರಿನಲ್ಲಿ 700 ಶೂದ್ರರ ಮನೆಗಳಿದ್ದವು. ಆ ಶೂದ್ರರು ಭೂಮಿಯಲ್ಲಿ ದುಡಿದರೂ ಊರ ಹೊರಗೆ ಬದುಕಬೇಕಾಗಿತ್ತು. ಟಿಪ್ಪುಬ್ರಾಹ್ಮಣರ ಅಧಿಕಾರವನ್ನು ಮೊಟಕುಗೊಳಿಸಿದ. ಅವರಿಗೆ ಕೇವಲ 100 ಪಗೋಡಾಗಳಷ್ಟು ಮಾಸಿಕ ನಿವೃತ್ತಿ ವೇತನ ನೀಡಿದ ಎಂದು ಇತಿಹಾಸಕಾರ ಬುಕಾನನ್ ದಾಖಲಿಸಿದ್ದಾನೆ. ಅದೇ ರೀತಿ ಮೂಡುಬಿದಿರೆಯಲ್ಲಿ ಜೈನ ಮಠದಡಿ 360 ಪಗೋಡಾಗಳಷ್ಟು ವಾರ್ಷಿಕ ಆದಾಯ ತರುತ್ತಿದ್ದ ಬಸದಿ ಭೂಮಿಯನ್ನು ಟಿಪ್ಪುಸಂಪೂರ್ಣ ವಶಪಡಿಸಿಕೊಂಡು ಅವರನ್ನು ವಾರ್ಷಿಕ 90 ಪಗೋಡಾಗಳ ವೇತನದ ಮೇಲೆ ಜೀವಿಸುವಂತೆ ಮಾಡಿದ. ಹೀಗೆ ಟಿಪ್ಪುರೈತರ ಪರವಾದ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ. ಊರ ಪಟೇಲರು ಮೇಲ್ಜಾತಿಯವರಾಗಿದ್ದು ರೈತರನ್ನು ಸುಲಿಯುವಲ್ಲಿ ಚಾಣಾಕ್ಷರಾಗಿದ್ದರು. ಟಿಪ್ಪುಅಯೋಗ್ಯ ಪಟೇಲರನ್ನು ತೆಗೆದುಹಾಕುವ ಮೂಲಕ ಮನೆತನದಿಂದ ಬಳುವಳಿಯಾಗಿ ಬರುತ್ತಿದ್ದ ಈ ಹುದ್ದೆಯನ್ನು ಬೇರೆಯವರು ಕೂಡ ಹೊಂದುವಂತೆ ಮಾಡಿದ. ಆ ಸ್ಥಾನಕ್ಕೆ ಕ್ರಿಯಾಶೀಲ ರೈತರನ್ನು ನೇಮಕ ಮಾಡಿದ. ಹುದ್ದೆಯನ್ನು ಕಳೆದುಕೊಂಡ ಪಟೇಲರು ಹೊಲದಲ್ಲಿ ಉಳುಮೆ ಮಾಡುವಂತೆ ಆದೇಶ ಹೊರಡಿಸಿದ. ಶಾನುಭೋಗರನ್ನು ಕರಣಿಕರ ಮಟ್ಟಕ್ಕೆ ಇಳಿಸಿದ. ಹೀಗೆ ಊಳಿಗಮಾನ್ಯ ಪದ್ಧತಿಯ ಪರಾವಲಂಬಿಗಳನ್ನು ಕಾರ್ಯೋನ್ಮುಖಗೊಳಿಸಿದ. ಇವರಾರೂ ಹಳ್ಳಿಯ ವ್ಯವಹಾರಗಳಲ್ಲಿ ಭಾಗಿಯಾಗದಂತೆ ನೋಡಿಕೊಂಡ. ಇವರಿಗೆಲ್ಲ ಭೂಮಿ ಕೊಡದೆ ವೇತನ ನಿಗದಿ ಪಡಿಸಿದ. ವೇತನದ ಬದಲಿಗೆ ಭೂಮಿ ಬಯಸುವ ಈ ಹೊಸ ಕರಣಿಕರಿಗೆ ಸಾಗುವಳಿಯಾಗದ ಜಮೀನು ನೀಡಿದ. ಇತರ ರೈತರಿಗೆ ಹಚ್ಚದೆ ತಾವೇ ಉಳುಮೆ ಮಾಡಬೇಕೆಂದು ಕಟ್ಟಪ್ಪಣೆ ಮಾಡಿದ. ಪಟೇಲರು ತಮ್ಮ ಭೂಮಿಯನ್ನು ತಾವೇ ಉಳುಮೆ ಮಾಡಬೇಕಿತ್ತು. ಒಂದು ವೇಳೆ ಬೇರೆ ರೈತರಿಗೆ ಹಚ್ಚಿದರೆ ಆ ಭೂಮಿಯನ್ನು ಸರಕಾರ ಮುಟ್ಟುಗೋಲು ಹಾಕುವಂತೆ ಕಾನೂನು ರೂಪಿಸಿದ. ಹೀಗೆ ತನ್ನ ರಾಜ್ಯದ ಜನರು ಕಾಯಕದ ಮೂಲಕ ಬದುಕುವಂತೆ ಮಾಡಿದ. ಇಂದು ಏನಾಗುತ್ತಿದೆ?

ಕೆರೆಗಳು ಬತ್ತಿಹೋಗಿ ರಿಯಲ್ ಎಸ್ಟೇಟ್ ದಂಧೆಯವರ ಪಾಲಾಗುತ್ತಿವೆ. ಗೋಮಾಳಗಳು ಮಾಯವಾಗಿ ಶ್ರೀಮಂತರ ಪಾಲಾಗುತ್ತಿವೆ. ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ಇಲ್ಲದಂತಾಗಿದೆ. ಬೆಳೆ ತೆಗೆಯುವುದಕ್ಕಾಗಿ ಭೂಮಿಯ ಮೇಲೆ ಅವರು ಹೂಡುವ ಹಣ ಕೂಡ ವಾಪಸಾಗದಂಥ ಸ್ಥಿತಿ ನಿರ್ಮಾಣವಾಗಿದೆ. ಕೃಷಿಕಾರ್ಮಿಕರಿಗೆ ಕೂಲಿ ಕೊಡುವ ಸಾಮರ್ಥ್ಯವನ್ನೂ ರೈತರು ಕಳೆದುಕೊಂಡಿದ್ದಾರೆ. ಹೊಲ ಗದ್ದೆಗಳಲ್ಲಿ ಕೆಲಸ ಮಾಡಲು ಕೂಲಿಕಾರರು ಸಿಗದಂಥ ಪರಿಸ್ಥಿತಿ ಉಂಟಾಗಿದೆ. ರೈತರ ಜಮೀನುಗಳು ಕಪ್ಪುಹಣದವರ ಫಾರ್ಮ್ ಗಳಾಗುತ್ತಿವೆ. ಅಧಿಕಾರದಲ್ಲಿ ಇದ್ದವರ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ಧನಿಕರು ನಿರಂತರವಾಗಿ ಅರಣ್ಯ ನಾಶ ಮಾಡುತ್ತಿದ್ದಾರೆ. ಸರಕಾರ ಗಳೇ ಕುಳಿತು ಬಹುರಾಷ್ಟ್ರೀಯ ಕಂಪೆನಿಗಳಿಗೆ ಜಮೀನು ಮತ್ತು ನೀರನ್ನು ಮಾರಾಟ ಮಾಡುತ್ತಿದ್ದು ಕೋಟ್ಯಂತರ ಜನರು ನೀರಿನ ಕೊರತೆಯಿಂದ ಬಳಲುವಂಥ ಪರಿಸ್ಥಿತಿ ಬಂದೊದಗಿದೆ. ಗಣಿಗಾರಿಕೆಯಂತೂ ಅವ್ಯಾಹತವಾಗಿ ನಡೆದಿದೆ. ಅಧಿಕಾರ ನಡೆಸುವವರು ಶೋಷಕರ ಜೊತೆಗೆ ಶಾಮೀಲಾಗಿರುವ ಇಂತಹ ನೂರಾರು ಘಟನೆಗಳು ನಮ್ಮ ದೇಶದಲ್ಲಿವೆ. ಎಲ್ಲೆಡೆ ಅಭದ್ರತೆ ಕಾಡುತ್ತಿದೆ. ಕೆಲವೇ ಜನರು ತಮ್ಮ ಆಸ್ತಿಯನ್ನು ಸಾವಿರಾರು ಪಟ್ಟು ಹೆಚ್ಚಿಸಿಕೊಳ್ಳುವಂತಹ ವಾತಾವರಣ ದೇಶದಲ್ಲಿ ನಿರ್ಮಾಣವಾಗಿದೆ. ಒಂದು ಅಂದಾಜಿನ ಪ್ರಕಾರ ಒಟ್ಟಾರೆ ಆರು ಲಕ್ಷ ಕೋಟಿಯಷ್ಟು ಹಣವನ್ನು ದೇಶದ ಬ್ಯಾಂಕುಗಳಿಗೆ ಮರುಪಾವತಿ ಮಾಡದ ಬಂಡವಾಳಶಾಹಿಗಳಿದ್ದಾರೆ. ಅವರಲ್ಲಿ ಅನೇಕರು ವಿದೇಶಗಳಿಗೆ ಓಡಿಹೋಗಿ ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಬ್ಯಾಂಕಿನಿಂದ ಪಡೆದ ಕೇವಲ 10 ಸಾವಿರ ರೂ. ಸಾಲ ತೀರಿಸಲಿಕ್ಕಾಗದೆ ಮತ್ತು ಬ್ಯಾಂಕಿನವರು ಕೊಡುವ ಮಾನಸಿಕ ಹಿಂಸೆಯನ್ನು ತಡೆದುಕೊಳ್ಳಲಿಕ್ಕಾಗದೆ ರೈತರು ಆತ್ಮಹತ್ಯೆ ಮಾಡಿಕೊಂಡು ಹೆಂಡತಿ ಮಕ್ಕಳನ್ನು ಅನಾಥ ಮಾಡುತ್ತಿದ್ದಾರೆ. ಇಂತಹ ದಾರುಣ ಸಂದರ್ಭಗಳು ಈ ದುಷ್ಟವ್ಯವಸ್ಥೆಯಲ್ಲಿ ಸಂಭವಿಸುತ್ತಲೇ ಇವೆ. ಎಲ್ಲೆಡೆ ನ್ಯಾಯ, ಅತ್ಯಾಚಾರ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿದೆ.

ಇವೆಲ್ಲವುಗಳ ಮಧ್ಯೆ ದೇಶದ ಕೋಮುವಾದಿ ಮತ್ತು ಉಗ್ರವಾದಿ ಶಕ್ತಿಗಳು ಜನರನ್ನು ಧರ್ಮದ ಹೆಸರಿನಲ್ಲಿ ಬೇರ್ಪಡಿ ಸುತ್ತಿವೆ. ಜನರು ವಾಸ್ತವ ಸ್ಥಿತಿಯ ವಿರುದ್ಧ ಸಿಡಿದೇಳದಂತೆ ಮಾಡುವುದಕ್ಕಾಗಿಯೇ ಜಾತಿ ಮತ್ತು ಕೋಮು ಸಂಘರ್ಷಗಳನ್ನು ಹುಟ್ಟು ಹಾಕಲಾಗುತ್ತಿದೆ. ಜಾತಿ ಜಾತಿಗಳ ಮಧ್ಯೆ ಮತ್ತು ಧರ್ಮ ಧರ್ಮಗಳ ಮಧ್ಯೆ ಅಪನಂಬಿಕೆ ಮತ್ತು ಅಸೂಯೆ ಹಳ್ಳಿಗಾಡು ಪ್ರದೇಶಗಳಲ್ಲಿ ಕೂಡ ವಿಪರೀತವಾಗಿ ಬೆಳೆದಿದೆ. ಇವೆಲ್ಲ ಭಾರತದಲ್ಲಿ ಧಾರ್ಮಿಕ ಫ್ಯಾಶಿಸಂಗೆ ದಾರಿ ಮಾಡಿಕೊಡುತ್ತಿವೆ. ಸುಳ್ಳು ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲದಾಗ ಫ್ಯಾಶಿಸ್ಟ್ ಸರ್ವಾಧಿಕಾರ ತರುವುದು ಅನಿವಾರ್ಯ ಎಂಬುವುದು ಭಾರತದಲ್ಲಿನ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳಿಗೆ ಗೊತ್ತಿದೆ. ಅಧಿಕಾರಕ್ಕಾಗಿ ಅವು ಧರ್ಮದ ಹೆಸರಿನಲ್ಲಿ ದೇಶದ ಜನರನ್ನು ಇಬ್ಭಾಗ ಮಾಡುವುದರಲ್ಲಿ ತಲ್ಲೀನವಾಗಿವೆ. ತಮ್ಮದೇ ಆದ ಧಾರ್ಮಿಕ ಸೈನ್ಯವನ್ನೂ ಅವು ಸಿದ್ಧಗೊಳಿಸುವಂತಹ ಸಾಮರ್ಥ್ಯ ವನ್ನು ಹೊಂದಿವೆ. ಇಡೀ ದೇಶವನ್ನೇ ಕುರುಕ್ಷೇತ್ರವನ್ನಾಗಿಸುತ್ತ ಭಾರತವನ್ನು ಮಹಾಭಾರತವನ್ನಾಗಿ ಮಾಡುವ ಉದ್ದೇಶವನ್ನು ಅವು ಹೊಂದಿವೆ.

ನಾವೆಲ್ಲ ಒಂದಾಗಿ ಏನು ಮಾಡಬೇಕು?

ಭಾರತದ ಆರು ಲಕ್ಷ ಹಳ್ಳಿಗಳ ಬದುಕನ್ನು ಹಸನಾಗಿಸುವ ಗುರಿಯನ್ನು ಇಟ್ಟುಕೊಂಡು ನಾವೆಲ್ಲ ಒಂದಾಗಿ ಪ್ರಚಲಿತ ದುಷ್ಟ ವ್ಯವಸ್ಥೆಗೆ ಪರ್ಯಾಯವಾಗಿ ಸರ್ವಜಾತಿಧರ್ಮ ಸಮಭಾವದ ರೈತಕೇಂದ್ರಿತ ಸಮಾಜದ ಪರಿಕಲ್ಪನೆಯೊಂದಿಗೆ ಜನಜಾಗೃತಿ ಮೂಡಿಸಿ ಕಾರ್ಯರೂಪಕ್ಕೆ ಬರುವಂತೆ ಮಾಡಿದಾಗ ಮಾತ್ರ ಮತ್ತೆ ನವಭಾರತದ ನಿರ್ಮಾಣ ಮಾಡಲು ಸಾಧ್ಯ.

ಮೊದಲನೆಯದಾಗಿ, ರೈತ ಕೇಂದ್ರಿತ ಸಮಾಜ ನಿರ್ಮಾಣ ಮಾಡಲು ನಮ್ಮ ಸಂವಿಧಾನವನ್ನು ಉಳಿಸಿಕೊಳ್ಳುವುದು ಅವಶ್ಯ ವಾಗಿದೆ. ಎರಡನೆಯದಾಗಿ, ರೈತ ಕೇಂದ್ರಿತ ಸಮಾಜ ನಿರ್ಮಾಣಕ್ಕೆ ನಮ್ಮ ಭಕ್ತಿಪಂಥದ ಪರಂಪರೆಯು ಬಹುಪಯುಕ್ತವಾದ ಸೌಹಾರ್ದದ ಮೌಲ್ಯಗಳನ್ನು ಒದಗಿಸುತ್ತದೆ. ನಮ್ಮ ಶರಣರು, ಸಂತರು, ಸೂಫಿಗಳು, ದಾಸರು ಮತ್ತು ತತ್ತ್ವಪದಕಾರರು ಸರ್ವಧರ್ಮ ಸಮಭಾವದ ಪರಂಪರೆಯನ್ನು ನಮಗೆ ಬಿಟ್ಟು ಹೋಗಿದ್ದಾರೆ. ಅವರು ಜಾತಿ ಮತ್ತು ಅಸ್ಪಶ್ಯತೆಯನ್ನು ಎಂದೂ ಒಪ್ಪಿಕೊಳ್ಳಲಿಲ್ಲ. ಗಾಂಧೀಜಿಯವರಿಗೆ ವೈಷ್ಣವಿ ಪಂಥದ ಹಿನ್ನೆಲೆ ಯಿದ್ದರೆ, ಅಂಬೇಡ್ಕರರಿಗೆ ಕಬೀರಪಂಥದ ಹಿನ್ನೆಲೆಯಿದೆ. ಸಹಸ್ರಾರು ಕೋಮುಗಲಭೆ ಮತ್ತು ಜಾತಿಸಂಘರ್ಷಗಳ ಮಧ್ಯೆ ಕೂಡ ನಮ್ಮ ದೇಶ ಇಂಥ ಭಕ್ತಿಪಂಥಗಳ ಜನ ಸಂಸ್ಕೃತಿಯಿಂದಲೇ ಒಂದಾಗಿ ಉಳಿದಿದೆ ಎಂಬ ಸತ್ಯವನ್ನು ನಾವೆಲ್ಲ ಅರಿತುಕೊಳ್ಳಲೇಬೇಕು ಮತ್ತು ಈ ಒಗ್ಗಟ್ಟನ್ನು ಉಳಿಸಿ ಬೆಳೆಸಲು ಶ್ರಮಿಸಲೇ ಬೇಕು. ಮೂರನೆಯದಾಗಿ, ಕೋಮುವಾದದ ಹೆಸರಿನಲ್ಲಿ ಜನರನ್ನು ಒಡೆದಾಳಲು ಬಯಸುವ ಫ್ಯಾಶಿಸ್ಟರು ದೇಶವನ್ನು ಆಳದಂತೆ ಜನಸಮುದಾಯವನ್ನು ಎಚ್ಚರಿಸುವ ತುರ್ತುಕಾರ್ಯದಲ್ಲಿ ತಲ್ಲೀನರಾಗಬೇಕು. ನಾಲ್ಕನೆಯದಾಗಿ ರೈತಕೇಂದ್ರಿತ ವ್ಯವಸ್ಥೆ ಎಂದರೆ ರೈತರು ಮತ್ತು ರೈತರ ಮೇಲೆ ಅವಲಂಬಿತರಾದ ಕಾಯಕಜೀವಿಗಳು ಜಾತಿ ಮತ ಪಂಥ ಮತ್ತು ಧರ್ಮವನ್ನೂ ಮೀರಿ ಒಂದಾಗುವಂತೆ ನೋಡಿಕೊಳ್ಳುವುದು. ಧಾರ್ಮಿಕ ಆಚರಣೆಗಳು ತಮ್ಮ ಮನೆಗೆ ಮತ್ತು ಧಾರ್ಮಿಕ ಸಮುದಾಯಕ್ಕೆ ಸೀಮಿತವಾಗುವಂತೆ ಜನಾಭಿಪ್ರಾಯ ಮೂಡಿಸುವುದು. ಭಾರತದ ‘ಧರ್ಮ’ ಎಂದರೆ ಪ್ರಜಾಪ್ರಭುತ್ವ ಮತ್ತು ಭಾರತೀಯರೆಲ್ಲರ ‘ಪವಿತ್ರಧರ್ಮಗ್ರಂಥ’ ಎಂದರೆ ಸಂವಿಧಾನ ಎಂಬ ಅರಿವು ಮೂಡಿಸುವುದು. ಪ್ರಜಾಪ್ರಭುತ್ವವು ಎಲ್ಲ ಧರ್ಮಗಳ ಜನರನ್ನು ರಕ್ಷಿಸುತ್ತದೆ. ಸಂವಿಧಾನವು ಎಲ್ಲ ಧರ್ಮಗಳಿಗೆ ಸಂಬಂಧಿಸಿದ ಧರ್ಮಗ್ರಂಥಗಳನ್ನು ಮತ್ತು ಎಲ್ಲ ಧರ್ಮಗಳ ಜನರ ಮಾನವಹಕ್ಕುಗಳನ್ನು ಎತ್ತಿ ಹಿಡಿಯುತ್ತದೆ ಎಂಬ ಸತ್ಯವನ್ನು ಪ್ರಚಾರ ಮಾಡುವುದು. ಅಸ್ಪಶ್ಯತೆ, ಜಾತಿಕ್ರೌರ್ಯ, ಕೋಮುವಾದ ಹಾಗೂ ಉಗ್ರವಾದ, ಬಂಡವಾಳಶಾಹಿಗಳ ಶೋಷಣೆ ಮತ್ತು ಸಾಮ್ರಾಜ್ಯಶಾಹಿಗಳ ಷಡ್ಯಂತ್ರಗಳ ವಿರುದ್ಧ ಜನಾಭಿಪ್ರಾಯ ಮೂಡಿಸುವುದು. ಐದನೆಯದಾಗಿ, ನಮ್ಮ ದೇಶದ ಪ್ರಮುಖ ಯೋಜನೆಗಳನ್ನು ಆಳುವ ಸರಕಾರ ಗ್ರಾಮಮುಖಿಯಾಗಿಸುವಂತೆ ಸತ್ಯಾಗ್ರಹ ಪ್ರಾರಂಭಿಸುವುದು. ರೈತರು ಸಾಲ ಮಾಡುವ ಸ್ಥಿತಿ ತರದೆ, ಆತನ ಉತ್ಪನ್ನಗಳಿಗೆ ಯೋಗ್ಯ ಬೆಲೆ ಬರುವಂತೆ ಸರಕಾರ ನೋಡಿಕೊಳ್ಳಬೇಕು ಎಂಬ ಹಕ್ಕೊತ್ತಾಯವನ್ನು ದೇಶದ ರೈತರು ಮಾಡುವ ಹಾಗೆ ಜನಾಂದೋಲವನ್ನು ರೂಪಿಸುವುದು.

ಕೊನೆಯದಾಗಿ ಮುಂದಿನ ಐದು ವರ್ಷಗಳಲ್ಲಿ ರೈತ ನಾಯಕತ್ವದ ಜನಮುಖಿ ಪಕ್ಷವನ್ನು ಕಟ್ಟಿ ಬೆಳೆಸಿ ರಾಜ್ಯವನ್ನೂ ದೇಶವನ್ನೂ ಆಳುವಂತೆ ಮಾಡುವಲ್ಲಿ ತಲ್ಲೀನರಾಗುವುದು. ಇದೆಲ್ಲ ಆಗದೆ ಹೋದರೆ ಮುಂದಿನ ಕೆಲವೇ ದಶಕಗಳಲ್ಲಿ ನಮ್ಮ ದೇಶ, ಇದ್ದ ಅರಣ್ಯವನ್ನೂ, ಮಳೆಯನ್ನೂ, ಅಂತರ್ಜಲವನ್ನೂ, ಫಲವತ್ತಾದ ಭೂಮಿಯನ್ನೂ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ಇವೆಲ್ಲವನ್ನು ಉಳಿಸಿಕೊಂಡು ದೇಶದ ಜನರನ್ನು ಕಾಪಾಡಲು ಸರ್ವೋದಯ ಪ್ರಜ್ಞೆಯ ರೈತ ಕೇಂದ್ರಿತ ಸಮಾಜ ನಿರ್ಮಾಣ ಮಾಡುವುದೊಂದೇ ನಮ್ಮ ಮುಂದಿರುವ ಪರಿಹಾರ ಮಾರ್ಗವಾಗಿದೆ.ಅದಕ್ಕಾಗಿ ರಾಜನೀತಿಯಿಂದ ಕೂಡಿದ ರಾಜಕೀಯ ಶಕ್ತಿಯಾಗಿ ಬೆಳೆಯಬೇಕಾಗಿದೆ.

ಭಾರತದ ಆರು ಲಕ್ಷ ಹಳ್ಳಿಗಳ ಬದುಕನ್ನು ಹಸನಾಗಿಸುವ ಗುರಿಯನ್ನು ಇಟ್ಟುಕೊಂಡು ನಾವೆಲ್ಲ ಒಂದಾಗಿ ಪ್ರಚಲಿತ ದುಷ್ಟ ವ್ಯವಸ್ಥೆಗೆ ಪರ್ಯಾಯವಾಗಿ ಸರ್ವಜಾತಿಧರ್ಮ ಸಮಭಾವದ ರೈತಕೇಂದ್ರಿತ ಸಮಾಜದ ಪರಿಕಲ್ಪನೆಯೊಂದಿಗೆ ಜನಜಾಗೃತಿ ಮೂಡಿಸಿ ಕಾರ್ಯರೂಪಕ್ಕೆ ಬರುವಂತೆ ಮಾಡಿದಾಗ ಮಾತ್ರ ಮತ್ತೆ ನವಭಾರತದ ನಿರ್ಮಾಣ ಮಾಡಲು ಸಾಧ್ಯ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News

ಪತನದ ಕಳವಳ