ಬಿಎಸ್ಪಿ ಜೊತೆ ಜೆಡಿಎಸ್ ಮೈತ್ರಿ ನಿಷ್ಪ್ರಯೋಜಕ: ಝಮೀರ್ ಅಹ್ಮದ್

Update: 2018-02-26 18:40 GMT

ಮದ್ದೂರು, ಫೆ.26: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಜತೆ ಜೆಡಿಎಸ್ ಮೈತ್ರಿಯಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ಜೆಡಿಎಸ್ ಬಂಡಾಯ ಶಾಸಕ ಝಮೀರ್ ಅಹಮದ್ ಹೇಳಿದ್ದಾರೆ.

ಪಟ್ಟಣದ ರಾಂ-ರಹೀಂ ನಗರದಲ್ಲಿ ರವಿವಾರ ತಡರಾತ್ರಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 25ರಿಂದ 30 ಸ್ಥಾನಗಳಲ್ಲಿ ಗೆಲ್ಲುವುದೇ ಕಷ್ಟ ಎಂದರು. ರಾಜ್ಯದಲ್ಲಿ ಬಿಎಸ್‌ಪಿ ಕಳೆದ ಚುನಾವಣೆಯಲ್ಲಿ 1 ಸಾವಿರಕ್ಕಿಂತ ಹೆಚ್ಚು ಮತ ಯಾವ ಕ್ಷೇತ್ರದಲ್ಲೂ ಪಡೆದಿಲ್ಲ. ಹಾಗಾಗಿ ಬಿಎಸ್‌ಪಿ-ಜೆಡಿಎಸ್ ಮೈತ್ರಿ ಪ್ರಯೋಜನವಿಲ್ಲ. ಮಾಸ್ ಲೀಡರ್ ಸಿದ್ದರಾಮಯ್ಯ ಅವರನ್ನು ಸೋಲಿಸುವುದು ಕಷ್ಟ. 160ಕ್ಕೂ ಹೆಚ್ಚು ಸ್ಥಾನ ಪಡೆದು ಕಾಂಗ್ರೆಸ್ ಸರಕಾರ ಮತ್ತೆ ಅಸ್ತಿತ್ವಕ್ಕೆ ಬರುವುದು ನಿಶ್ಚಿತ ಎಂದು ಅವರು ಹೇಳಿದರು.

ಸೋತರೆ ತಲೆ ಕತ್ತರಿಸಿಕೊಳ್ಳುತ್ತೇನೆ: ನನ್ನ ವಿರುದ್ಧ ದೇವೇಗೌಡ ಸೇರಿದಂತೆ ಜಮ್ಮು ಕಾಶ್ಮೀರದ ಫಾರೂಕ್ ಅಬ್ದುಲ್ ಅವರನ್ನು ತಂದು ನಿಲ್ಲಿಸಿದರೂ ನನ್ನ ಗೆಲುವು ನಿಶ್ಚಿತ. ನಾನೇನಾದರೂ ಚಾಮರಾಜಪೇಟೆಯಲ್ಲಿ ಸೋತರೆ ನನ್ನ ತಲೆ ಕತ್ತರಿಸಿ ಮಾಧ್ಯಮಕ್ಕೆ ಕೊಡುತ್ತೇನೆ ಎಂದು ಜಮೀರ್ ಸವಾಲು ಹಾಕಿದರು.

ಕುಮಾರಸ್ವಾಮಿ ಅವರ ರೀತಿ ಕ್ಷೇತ್ರ ಬದಲಾವಣೆ ಮಾಡುವ ಜಾಯಮಾನ ನನ್ನದಲ್ಲ. ಮುಂದಿನ ಚುನಾವಣೆಯಲ್ಲೂ ಚಾಮರಾಜಪೇಟೆ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ನಾಗಮಂಗಲ ಶಾಸಕ ಎನ್.ಚಲುವರಾಯ ಸ್ವಾಮಿ ಮಾತನಾಡಿ, ಬಂಡಾಯ ಜೆಡಿಎಸ್ ಶಾಸಕರು ಈಗಾಗಲೇ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದೇವೆ. ಮಾ.23ರ ರಾಜ್ಯಸಭೆ ಚುನಾವಣೆ ನಂತರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರುತ್ತೇವೆ ಎಂದರು.

ಮಾಜಿ ಶಾಸಕರಾದ ಕಲ್ಪನಾ ಸಿದ್ದರಾಜು ಹಾಗೂ ಮಧು ಜಿ. ಮಾದೇಗೌಡ ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗದೆ ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಶ್ರಮಿಸಬೇಕು. ಈ ವಿಚಾರದಲ್ಲಿ ಯಾವುದೇ ಒಡಕು ಬೇಡ ಎಂದು ಅವರು ಸಲಹೆ ನೀಡಿದರು.

ನಮ್ಮ ಪತಿ, ಮಾಜಿ ಶಾಸಕ ಎಂ.ಎಸ್. ಸಿದ್ದರಾಜು ಮುಸ್ಲಿಂ ಭಾಂದವರೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದರು. ಹಲವಾರು ಸಂದರ್ಭದಲ್ಲಿ ಮುಸ್ಲಿಮರು ನನ್ನ ಪತಿ ಪರವಾಗಿ ನಿಂತಿದ್ದಾರೆ ಎಂದು ಭಾವುಕರಾದರು.

ಮಧು ಜಿ. ಮಾದೇಗೌಡ, ಜಿಲ್ಲಾ ಕಾಂಗ್ರೆಸ್ ಸಿ.ಡಿ. ಗಂಗಾಧರ್, ಜಿಪಂ ಸದಸ್ಯ ಎ. ರಾಜೀವ್, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ.ನಂಜೇಗೌಡ ಮಾತನಾಡಿದರು.

ಇದೇ ಸಂದರ್ಭದಲ್ಲಿ ಹಲವಾರು ಜೆಡಿಎಸ್ ಬೆಂಬಲಿಗರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಕಾಂಗ್ರೆಸ್‌ನ ರೈತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್. ಮೋಹನ್ ಕುಮಾರ್, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ದೇಶಹಳ್ಳಿ ಗೌತಮ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಕುಮಾರ್, ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಕಾರ್ಯದರ್ಶಿ ಇಮ್ತಿಯಾಝ್‌ವುಲ್ಲಾ ಖಾನ್, ತಾಲೂಕು ಅಧ್ಯಕ್ಷ ಮುನಾವರ್ ಪಾಷ, ಜಿಲ್ಲಾ ಕಾರ್ಯದರ್ಶಿ ಸೈಯ್ಯದ್ ಕಬೀರ್ ಅಹಮದ್, ತಾಲೂಕು ಅಧ್ಯಕ್ಷ ಮನ್ಸೂರ್ ಪಾಷ, ಮುಖಂಡರಾದ ಫಯಾಜ್ ಖಾನ್, ಮಾಚಹಳ್ಳಿ ಕುಮಾರ್, ಸಿದ್ದು, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News