ಸಿಬಿಎಸ್‌ಇ ಪರೀಕ್ಷೆ: ಕಂಪ್ಯೂಟರ್ ಬಳಸಲು ಅನುಮತಿ ನೀಡಿದ ಮಂಡಳಿ

Update: 2018-02-28 16:15 GMT

ಹೊಸದಿಲ್ಲಿ, ಫೆ.28: 2018ರ ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿ ಪರೀಕ್ಷೆಯಲ್ಲಿ ವಿಶೇಷ ಅಗತ್ಯದ ವಿದ್ಯಾರ್ಥಿಗಳು ಕಂಪ್ಯೂಟರ್ ಬಳಸಬಹುದು ಎಂದು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಂಗಳವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ. ಈ ಅಧಿಸೂಚನೆಯ ಪ್ರಕಾರ, ವೈದ್ಯರಿಂದ, ಮಾನಸಿಕತಜ್ಞರಿಂದ ಪ್ರಮಾಣೀಕೃತ ಮತ್ತು ಕಂಪ್ಯೂಟರ್ ಬಳಸಲು ಸಲಹೆ ನೀಡಲಾಗಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಕಂಪ್ಯೂಟರ್‌ಗಳನ್ನು ಬಳಸಬಹುದಾಗಿದೆ. ಆದರೆ ಈ ವಿದ್ಯಾರ್ಥಿಗಳು ತಮ್ಮದೇ ಲ್ಯಾಪ್‌ಟಾಪ್‌ಗಳನ್ನು ಪರೀಕ್ಷೆಗೆ ತರಬೇಕು ಎಂದು ಮಂಡಳಿಯು ಅಧಿಸೂಚನೆಯಲ್ಲಿ ತಿಳಿಸಿದೆ.

ವಿಶೇಷ ಅಗತ್ಯ ವಿದ್ಯಾರ್ಥಿಗಳಿಗೆ ಓದುಗ ಅಥವಾ ಬರವಣಿಗೆ ಸಹಾಯಕರನ್ನು ಒದಗಿಸುವ ನಿಬಂಧನೆಯನ್ನೂ ಅಧಿಸೂಚನೆಯಲ್ಲಿ ನೀಡಲಾಗಿದೆ. ಓದುಗ ಸಹಾಯಕರನ್ನು ಬಯಸುವ ವಿದ್ಯಾರ್ಥಿಗಳಿಗೆ ಓದುಗರನ್ನು ನೀಡಲಾಗುತ್ತದೆ. ಆದರೆ ಈ ಓದುಗರು ಕೇವಲ ಪ್ರಶ್ನೆಗಳನ್ನು ಮಾತ್ರ ಓದುತ್ತಾರೆ, ಅಲ್ಲದೆ ಅಂಥ ವಿದ್ಯಾರ್ಥಿಗಳಿಗೆ ವಿಶೇಷ ನಿಗಾವಣೆಯನ್ನೂ ಒದಗಿಸಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ವಿಶೇಷ ಅಗತ್ಯ ವಿದ್ಯಾರ್ಥಿಗಳು ಶೇ. 50 ಹಾಜರಾತಿ ಹೊಂದಿದ್ದರೂ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುವುದು. ಆದರೆ ಸಂಸ್ಥೆಯ ಮುಖ್ಯಸ್ಥರು ಸಿಬಿಎಸ್‌ಇ ಮುಖ್ಯ ಕಚೇರಿಗೆ ವಿಶೇಷ ಮನವಿಯನ್ನು ಕಳುಹಿಸಬೇಕಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

ವಿದ್ಯಾರ್ಥಿಗಳು ತಮ್ಮ ಕಂಪ್ಯೂಟರ್‌ಗಳನ್ನು ಉತ್ತರಗಳನ್ನು ಬರೆಯಲು, ಪ್ರಶ್ನೆಗಳನ್ನು ದೊಡ್ಡ ಗಾತ್ರಗಳಲ್ಲಿ ವೀಕ್ಷಿಸಲು ಮತ್ತು ಪ್ರಶ್ನೆಗಳನ್ನು ಆಲಿಸಲು ಮಾತ್ರ ಬಳಸಬಹುದಾಗಿದೆ. ಈ ಕಂಪ್ಯೂಟರ್‌ಗಳನ್ನು ಕೇಂದ್ರ ವರಿಷ್ಠಧಿಕಾರಿಯ ಮೇಲ್ವಿಚಾರಣೆಯಲ್ಲಿ ಕೇಂದ್ರದ ಕಂಪ್ಯೂಟರ್ ಶಿಕ್ಷಕರು ಪರಿಶೀಲನೆ ನಡೆಸುತ್ತಾರೆ. ಸಮಯದ ಅಭಾವವನ್ನು ಸರಿದೂಗಿಸುವ ಅಗತ್ಯಬಿದ್ದಲ್ಲಿ ವರಿಷ್ಠಾಧಿಕಾರಿಯು ಸೂಚಿಸುತ್ತಾರೆ. ಈ ಕಂಪ್ಯೂಟರ್‌ಗಳಿಗೆ ಯಾವುದೇ ಅಂತರ್ಜಾಲ ಸಂಪರ್ಕ ಹೊಂದಿರುವಂತಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News