ಹನೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ

Update: 2018-02-28 16:44 GMT

ಹನೂರು,ಫೆ.28: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ಸಿಂಗಾನಲ್ಲೂರು ಹಾಲು ಶಿತಲೀಕರಣ ಕೇಂದ್ರದ ಮುಂಭಾಗ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಹಾಗೂ ರೈತರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ರಾಜೇಂದ್ರ ಮಾತನಾಡಿ, ಹಾಲು ಒಕ್ಕೂಟ ರೈತರಿಂದ ಹಾಲನ್ನು ಖರೀದಿಸಿ ಹೆಚ್ಚಿನ ಲಾಭವನ್ನು ಗಳಿಸುತ್ತಿದೆ. ಆದರೆ ಒಕ್ಕೂಟ ನಷ್ಟದಲ್ಲಿದೆ ಎಂದು ಕುಂಟು ನೆಪ ಹೇಳಿ ರೈತರಿಂದ ಖರೀದಿಸುವ ಹಾಲಿನ ಬೆಲೆಯನ್ನು ಇಳಿಕೆ ಮಾಡಿದೆ. ಇದರಿಂದ ಹಾಲು ಉತ್ಪಾದಕರು ನಷ್ಟವನ್ನು ಅನುಭವಿಸುತ್ತಿದ್ದಾರೆ. ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ 110ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಈ ಭಾಗದಲ್ಲಿ ಬಹುತೇಕ ರೈತರು ಹೈನುಗಾರಿಕೆಯನ್ನು ಅವಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಒಕ್ಕೂಟದ ವತಿಯಿಂದ ಹಾಲು ಉತ್ಪಾದಕರಿಗೆ ಸಮರ್ಪಕ ಸೌಲಭ್ಯಗಳು ಸಿಗುತ್ತಿಲ್ಲ. ಅಲ್ಲದೇ ವಿತರಿಸುವ ಪಶು ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ. ಬಹುತೇಕ ಡೇರಿಗಳಲ್ಲಿ ನಿಗದಿತ ಅವಧಿಯಲ್ಲಿ ಹಣ ಸಂದಾಯವಾಗುತ್ತಿಲ್ಲ. ಹಾಲಿನ ಗುಣಮಟ್ಟದ ಪರಿಶೀಲನೆ ಅವೈಜ್ಞಾನಿಕದಿಂದ ಕೂಡಿದೆ. ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಡೇರಿಗಳಿಲ್ಲ. ಇದರಿಂದ ಇಲ್ಲಿನ ಹಾಲು ಉತ್ಪಾದಕರು ಹಾಲನ್ನು ಮಾರಾಟ ಮಾಡಬೇಕಾದರೆ ಸಮೀಪದ ಡೇರಿಗಳಿಗೆ ಪ್ರತಿನಿತ್ಯ ಅಲೆಯುವಂತಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿಂದ ರೈತರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಈ ದಿಸೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸಂಬಂಧಪಟ್ಟವರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. 

ಬೇಡಿಕೆಗಳು: ಸರ್ಕಾರದಿಂದ ಸಿಗುವ ಸಹಾಯಧನ ಹಾಲು ಉತ್ಪಾದಕರಿಗೆ ಸಮರ್ಪಕವಾಗಿ ದೊರೆಯಬೇಕು. ಒಕ್ಕೂಟ ಗಳಿಸುವ ಲಾಭದಲ್ಲಿ ಬೋನಸ್ ನೀಡಬೇಕು. ಪಶು ಆಹಾರವನ್ನು ಸಬ್ಸಿಡಿ ರೂಪದಲ್ಲಿ ನೀಡಬೇಕು. ಕಾಲಕಾಲಕ್ಕೆ ಎಸ್‍ಎನ್‍ಎಫ್ ದರ ನಿಗಧಿಪಡಿಸಬೇಕು. ಒಕ್ಕೂಟದ ಮೂಲಕ ಉತ್ಪಾದಕರಿಗೆ ಸಾಲ ಸೌಲಭ್ಯ ನೀಡಬೇಕು. ಪಶುಗಳಿಗೆ ಸಮರ್ಪಕ ವೈದ್ಯಕೀಯ ಸೇವೆ ಒದಗಿಸಬೇಕು. ನೂತನ ಹಾಲಿನ ಡೇರಿ ಸ್ಥಾಪನೆಗೆ ಅವಕಾಶ ಕಲ್ಪಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ಆಗಮಿಸಿ ಪ್ರತಿಭಟನಕಾರರಿಂದ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮಾತನಾಡಿದ ಅವರು, ನಿಮ್ಮ ಕೆಲವು ಬೇಡಿಕೆಗಳು ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಒಕ್ಕೂಟದ ವತಿಯಿಂದ ಕೈಗೊಳ್ಳಬೇಕಾದ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು. 

ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಸಿದ್ದಪ್ಪ, ತಾಲೂಕು ಅಧ್ಯಕ್ಷ ಪ್ರಸಾದ್, ಮುಖಂಡರಾದ ಕೆ.ಪಿ. ಶಿವಕುಮಾರಸ್ವಾಮಿ, ಮಂಜುನಾಥ್, ಪ್ರಭು ಹಾಗೂ ಇನ್ನಿತರರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News