ಹೊಸರೂಪದಲ್ಲಿ ಮತ್ತೆ ಬರಲಿದೆ ಗ್ರಾಹಕರ ನೆಚ್ಚಿನ ನೋಕಿಯಾ 8110
ಬಾರ್ಸಿಲೋನಾ,ಫೆ.28: 1990ರ ದಶಕದಲ್ಲಿ ವಿಶ್ವಾದ್ಯಂತ ಮೊಬೈಲ್ ಬಳಕೆದಾರರ ನೆಚ್ಚಿನ ಆಯ್ಕೆಯಾಗಿದ್ದ ನೋಕಿಯಾ 8110 ‘ಸ್ಲೈಡರ್’ ಫೋನ್ ಮರುಜನ್ಮವೆತ್ತಲು ಸಜ್ಜಾಗಿದೆ. ಕಳೆದ ವರ್ಷ ಮೊಬೈಲ್ ಫೋನ್ ಮಾರುಕಟ್ಟೆಗೆ ಮರು ಪದಾರ್ಪಣೆ ಮಾಡಿದ ನಂತರ ಗಳಿಸಿರುವ ಜನಪ್ರಿಯತೆಯ ಲಾಭವನ್ನೆತ್ತಲು ಮುಂದಾಗಿರುವ ನೋಕಿಯಾ ಫೋನ್ ತಯಾರಕರು ತಮ್ಮ ಉತ್ಪನ್ನಗಳ ಶ್ರೇಣಿಯನ್ನು ವಿಸ್ತರಿಸುತ್ತಿದ್ದು, ಇದೇ ಮೊದಲ ಬಾರಿಗೆ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ್ನು ಮತ್ತು 8110 ‘ಸ್ಲೈಡರ್’ ಫೋನ್‌ನ ರಿಮೇಕ್ ರೂಪವನ್ನು ಹೊರತರುತ್ತಿದ್ದಾರೆ. 8110 ‘ಸ್ಲೈಡರ್’ 4ಜಿ ತಂತ್ರಜ್ಞಾನವನ್ನು ಹೊಂದಿರಲಿದೆ.
ಹೊಸ ಅವತಾರದ 8110 ‘ಸ್ಲೈಡರ್’ ಕ್ಲಾಸಿಕ್ ಬ್ಲಾಕ್ ಮತ್ತು ಬನಾನಾ ಯೆಲ್ಲೋ ಬಣ್ಣಗಳಲ್ಲಿ ಲಭ್ಯವಿದ್ದು, ಮೂಲಫೋನ್‌ನಂತೆ ಕರ್ವಡ್ ಬಾಡಿಯನ್ನು ಹೊಂದಿರಲಿದೆ. ಕೆಳಗೆ ಜಾರುವ ಕೀಬೋರ್ಡ್ ಕವರ್ ಇದ್ದು, ಫೋನ್‌ನ್ನು ಅನ್‌ಲಾಕ್ ಮಾಡಲು ಮತ್ತು ಕರೆಗಳಿಗೆ ಉತ್ತರಿಸಲು ಬಳಕೆಯಾಗುತ್ತದೆ. ಇದು ಫೀಚರ್ ಫೋನ್ ಆಗಿರುವುದರಿಂದ ಗೂಗಲ್ ಅಸಿಸ್ಟಂಟ್, ಗೂಗಲ್ ಮ್ಯಾಪ್ಸ್ ಮತ್ತು ಫೇಸ್‌ಬುಕ್ ನಂತಹ ಕಡಿಮೆ ಸಂಖ್ಯೆಯ ಆ್ಯಪ್‌ಗಳು ಲಭ್ಯವಿವೆ. ಆದರೆ ವಾಟ್ಸಾಪ್,ಟ್ವಿಟರ್ ಅಥವಾ ಸ್ನಾಪ್‌ಚಾಟ್ ಇದರಲ್ಲಿ ದೊರೆಯುವುದಿಲ್ಲ.
ಈ 4ಜಿ ರೆಡಿ ಫೋನ್ ಈ ವರ್ಷದ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, 79 ಯುರೋ ಅಥವಾ 97 ಡಾ.(ಸುಮಾರು 6,300 ರೂ.) ಬೆಲೆಯನ್ನು ಹೊಂದಿರಲಿದೆ.
ನೋಕಿಯಾದ ಉತ್ಪಾದನಾ ಪರವಾನಿಗೆಯನ್ನು ಹೊಂದಿರುವ ಎಚ್‌ಎಂಡಿ ಗ್ಲೋಬಲ್ ಇತ್ತೀಚಿಗೆ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ನೂತನ ನೋಕಿಯಾ 8110 ‘ಸ್ಲೈಡರ್’ ಫೋನ್‌ನ್ನು ಅನಾವರಣಗೊಳಿಸಿದೆ.
ಹೊಸರೂಪದ 8110 ಜೊತೆಗೆ ಆರಂಭಿಕ ಹಂತದ ನೋಕಿಯಾ 1, ಮಧ್ಯಮ ಶ್ರೇಣಿಯ ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 6ರ ಹೊಸ ಆವೃತ್ತಿಯನ್ನೂ ಕಂಪನಿಯು ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆ.