ಬದುಕು ಹಸನಾಗಬೇಕಾದರೆ ಸಾಹಿತ್ಯ ಅವಶ್ಯಕ: ಮಳಲಿ ವಸಂತಕುಮಾರ್

Update: 2018-02-28 18:29 GMT

ಹಾಸನ,ಫೆ.28: ಮನುಷ್ಯನ ಬದುಕು ಹಸನಾಗಬೇಕಾದರೆ ಸಾಹಿತ್ಯ ಅವಶ್ಯಕವಾಗಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಪ್ರಮುಖವಾಗಿದೆ ಎಂದು ಪ್ರಸಿದ್ಧ ಸಾಹಿತಿ ಮಳಲಿ ವಸಂತಕುಮಾರ್ ಅಭಿಪ್ರಾಯಪಟ್ಟರು.

ತಾಲೂಕಿನ ಸಾಲಗಾಮೆ ಹೋಬಳಿ ಯಲಗುಂದ ಎಸ್.ವಿ. ರಂಗಣ್ಣ ಪ್ರಧಾನ ವೇದಿಕೆ, ಶ್ರೀ ಸಿದ್ದರಾಮೇಶ್ವರ ಮಹಾದ್ವಾರದಲ್ಲಿ ಬುಧವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವೈಚಾರಿಕತೆ ಮತ್ತು ಸಂಸ್ಕೃತಿ ಇದ್ದರೆ ಅದೆ ಸಾಹಿತ್ಯವಾಗುತ್ತದೆ. ಸಾಹಿತ್ಯ ಸಮ್ಮೇಳನಗಳು ಗ್ರಾಮೀಣ ಭಾಗದಲ್ಲಿ ನಡೆಯಬೇಕು. ಕಾರಣ ಗ್ರಾಮೀಣರಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಕವಿಗಳ ಬಗ್ಗೆ ಹೆಚ್ಚು ಅಭಿಮಾನವಿದೆ. ಜತೆಗೆ ಕನ್ನಡ ಸಂಸ್ಕತಿಯ ನಿಜವಾದ ಅರ್ಥ ಗ್ರಹಿಸಲು ಉತ್ತಮ ಅವಕಾಶ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಾನಪದ ಸಾಹಿತ್ಯಕ್ಕೆ ಕವಿರಾಜ ಮಾರ್ಗ ಬರೆದ ನಪತುಂಗ ಮೊದಲುವಾಗಿ ಪರಿಗಣಿಸಿ ಪ್ರಾಧಾನ್ಯತೆ ನೀಡಿದ್ದಾನೆ. ಕನ್ನಡ ನಾಡಿನ ಜನ ಉದ್ದೇಶ ಪೂರ್ವಕವಾಗಿ ಓದದಿದ್ದರೂ ಉತ್ತಮ ಸಾಹಿತ್ಯ ರಚನೆ ಮಾಡಿದ್ದಾರೆ. ಅದೇ ಜಾನಪದ ಸಾಹಿತ್ಯ. ಇದು ಗ್ರಾಮೀಣ ಭಾಗದ ಸಂಸ್ಕತ, ಕಲೆ, ಆಚಾರ ವಿಚಾರಗಳಿಗೆ ಇಂಪು ನೀಡುತ್ತದೆ. ಜಾನಪದ ಸಾಹಿತ್ಯಕ್ಕೆ ಆದಿ, ಅಂತ್ಯವೆಂಬುದುಇಲ್ಲ. ಜತೆಗೆ ಸಂಭ್ರುದ್ಧವಾಗಿರುವ ಶರಣ ಸಾಹಿತ್ಯ ಓದಿದರೆ ಸಾಕು ಅದು ವ್ಯಕ್ತಿಯನ್ನು ಸಂಸ್ಕತಿಯ ಸಂಪನ್ನನಾಗಿ ಮಾಡುತ್ತದೆ ಎಂದರು.

ಬದುಕು ಹಸನ ಮಾಡುವ ಸಾಹಿತ್ಯ 12ನೇ ಶತಮಾನದ ವರೆಗೂ ರಾಜರ ಆಸ್ಥಾನದಲ್ಲಿ ಆಶ್ರಯ ಪಡೆದಿತ್ತು, ಅಲ್ಲಿಯವರೆಗೂ ರಚಿಸಲ್ಪಡುತ್ತಿದ್ದ ಸಾಹಿತ್ಯ ಜನಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಆದರೆ 12ನೇ ಶತಮಾನದಲ್ಲಿ ಬಸವಣ್ಣ ಹಾಗೂ ವಚನಕಾರರ ಆಗಮನದಿಂದ ಅವರು ರಚಿಸಿದ ವಚನಗಳು ಎಲ್ಲಾರಿಗೂ ಅರ್ಥವಾಗುವಂತಿದ್ದವು ಎಂದು ಹೇಳಿದರು. ಭಾಷಾಭಿಮಾನದಿಂದ ಮತ್ತೊಂದು ಭಾಷೆಯನ್ನು ಧ್ವೇಷ ಮಾಡಬಾರದು. ಮೊದಲು ನಮ್ಮ ನಾಡ ಭಾಷೆ ನಂತರ ಇತರೆ ಭಾಷೆಯಾಗಿರಬೇಕು ಎಂದು ಕರೆ ನೀಡಿದರು..

ಸಮ್ಮೇಳನದ ಅಧ್ಯಕ್ಷ ಸಾಹಿತಿ ಗೊರೂರು ಅನಂತರಾಜು :
5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಾಹಿತಿ ಗೊರೂರು ಅನಂತರಾಜು ಉದ್ದೇಶಿಸಿ ಮಾತನಾಡುತ್ತಾ, ನಾವು ಚರಿತ್ರೆ ಕಾಲದಿಂದ ಅವಲೋಕಿಸಿದಾಗ ಕವಿ ಸಾಹಿತಿಗಳಿಂದ ಹೊರತಾದ ನಾಡು ಬೇರೊಂದಿಲ್ಲ. ಕರ್ನಾಟಕ ಇತಿಹಾಸದಲ್ಲಿ ಚಾಲುಕ್ಯ, ರಾಷ್ಟ್ರಕೂಟ, ಮೊಗಲ, ಗಂಗ, ಕದಂಬ, ಹೊಯ್ಸಳ, ಮೈಸೂರು ಅರಸರು ಬಾಳಿ ಬದುಕಿದ ನೆಲದ ಚೇತನವಾಗಿ ಕವಿಕಾವ್ಯ ಪಂಡಿತರನ್ನು ಕಾಣುತ್ತೇವೆ. ಇಂದಿಗೂ ಅವರ ಕಾವ್ಯೋಧ್ಯಾನ ದಲ್ಲಿ ವಿಹಂಗಮವಾಗಿ ವಿಹರಿಸುತ್ತಲೇ ಇದ್ದೇವೆ. ಕರ್ನಾಟಕ ರಾಜ್ಯದಲ್ಲೇ ಅತ್ಯಂತ ಹಿತಕರವಾದ ಹವಾಗುಣವನ್ನು ಹೊಂದಿ, ಬಡವರ ಊಟಿ ಎಂದೇ ಪ್ರಸಿದ್ಧಿ ಪಡೆದಿರುವ ಹಾಸನ ಜಿಲ್ಲೆಯ ಪ್ರಾಕೃತಿಕಸವಲತ್ತುಗಳ ದೃಷ್ಟಿಯಿಂದ ನೋಡಿದಾಗಲೂ ಸಂಪದ್ಭರಿತ ವಾಗಿದೆ. ಹೇಮಾವತಿ ನದಿಯು ಈ ಜಿಲ್ಲೆಯ ಮುಖ್ಯ ನದಿಯಾಗಿ ಕೃಷಿಕರ ಬಾಳಿನ ವರಪ್ರಸಾದವಾಗಿ ಜಿಲ್ಲೆಯ ಜನರ ಜೀವನಾಡಿಯಾಗಿದೆ ಎಂದರು.

ನಮ್ಮೂರು ಗೊರೂರಿಗೆ ಐತಿಹಾಸಿಕ ಹಿನ್ನೆಲೆ ಇದೆ. ಧಾರ್ಮಿಕ ಪರಂಪರೆ ಇದೆ. ಡಾ. ಗೊರೂರರ ಸಮಕಾಲೀನ ಸ್ವಾತಂತ್ರ್ಯ ಹೋರಾಟಗಾರರು, ವಿದ್ವಾಂಸರು ಆದ ಸಾಹುಕಾರ್ ಸಂಪತ್ ಅಯ್ಯಂಗಾರ್ ಅವರ ರಾಮಾಂಕಿತ ಉಂಗುರ ಮತ್ತು ಕಾಲ ಪರಿಚಯ, ಹನುಮಂತನು ಲಂಕೆಗೆ ಹೋದ ದಾರಿ ಕೃತಿಗಳು ಕಿರಿದಾಗಿದ್ದರೂ ಮಹತ್ವದ ಮಾಹಿತಿಯಿಂದ ಹಿರಿದಾಗಿವೆ. ಡಾ. ಗೊರೂರರ ಮೆರವಣಿಗೆ ಕಾದಂಬರಿಯಲ್ಲಿ ಗೊರೂರು ಮಾದರಿ ಗ್ರಾಮವೆಂದು ಕರೆಸಿಕೊಳ್ಳಲು ಕಾರಣವಾದ ಗುಡಿ ಕೈಗಾರಿಕೆ ಸ್ಥಾಪನೆ ಬಗ್ಗೆ ಸುದರ್ಶನ ಎಂಬ ತಮ್ಮದೇ ಪಾತ್ರದ ಮೂಲಕ ಚಿತ್ರಿಸಿದ್ದಾರೆ ಎಂದರು.

ಪ್ರಬುದ್ದ ಮಾನವನ ಅನುಪಮ ಸೃಷ್ಟಿಯೆಂದರೆ ಗ್ರಂಥಗಳು. ಸಹಸ್ರಾರು ಮೇದಾವಿಗಳ ಅನುಭವ ಸಾರವನ್ನು ಮುಂದಿನ ಪೀಳಿಗೆಗೆ ಕಾಯ್ದಿಟ್ಟು ಹಂಚಿ ಸ್ಪಂದನಕ್ಕೆ ಗುರಿ ಮಾಡುವ ಸಾಧನೆಗಳೇ ಗ್ರಂಥಗಳು. ಗ್ರಂಥಗಳು ಇನ್ನೂ ಹುಟ್ಟದಿರುವ ಜನಾಂಗದ ಆಸ್ತಿ ಎಂದು ಜೋಸೆಫ್ ಎಡಿಸನ್ ಸಾರಿದ್ದಾನೆ. ಗ್ರಂಥಗಳು ಬಾಳನ್ನು ಬೆಳಗಿಸುವ ಅಮೃತ ಸಂಜೀವಿನಿ, ಜೀವಿಗಳಿಗೆ ಆಹಾರವಿದ್ದಂತೆ ಗ್ರಂಥಗಳು ಎಂದು ಡಾ. ಡಿವಿಜಿರವರು ಬರೆಯುತ್ತಾರೆ. ಭಗವಂತನ ಅವತಾರ ನರರೂಪದಲ್ಲಿ ಮಾತ್ರವಲ್ಲದೆ ಕೃತಿಯ ರೂಪದಲ್ಲೂ ದೊರೆಯಬಲ್ಲವೆಂದು ಪಂಪ ಕವಿ ಕುವೆಂಪು ಅವರ ಮಾತು ನಿತ್ಯಸತ್ಯವಾಗಿದೆ. ಈ ಸತ್ಯವನ್ನು ಅರಿತೇ ನಾನು ಪುಸ್ತಕಗಳನ್ನು ಓದುತ್ತಾ, ನಾನು ಕೂಡ ಬರೆಯಬೇಕೆಂಬ ತುಡಿತದಲ್ಲಿ ನಾನಾ ಸಾಹಸಗಳನ್ನು ಮಾಡಿದ್ದೇನೆ. ಪತ್ರಿಕೆಗಳಿಗೆ ವರದಿ ಬರೆದಿದ್ದೇನೆ. ಕಥೆ, ಕವಿತೆ, ಲೇಖನ, ವ್ಯಕ್ತಿ ಪರಿಚಯ, ನಾಟಕ ವಿಮರ್ಶೆ, ಕೃತಿ ವಿಮರ್ಶೆ ಹೀಗೆ ಬರೆಯುತ್ತಾ ಬರುವಲ್ಲಿ ನನ್ನ ಬರಹಗಳನ್ನು ಪ್ರಕಟಿಸಿ ಒಬ್ಬ ಸಾಹಿತಿಯಾಗಿ ರೂಪಿಸಿದ ಪತ್ರಿಕೆಗಳನ್ನು ಮರೆಯುವುದುಂಟೇ ಎಂದು ನೆನಪಿಸಿದರು.

ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನು ಕವಿರಾಜಮಾರ್ಗದಲ್ಲಿ ಕಾವೇರಿಯಿಂದ ಮಾ ಗೋದಾವರಿ ವರಮಿರ್ಪ ನಾಡದಾ ಕನ್ನಡದೊಳ್ ಎಂಬುದಾಗಿ ಕನ್ನಡನಾಡಿನ ವಿಸ್ತಾರ ಚೆಲುವು ವರ್ಣಿಸಿದ್ದಾನೆ. ಗೋದಾವರಿಯು ಮಹಾನದಿ ಉತ್ತರದ ಕೊನೆಯ ನಾಸಿಕ್ ಜಿಲ್ಲೆಯ ನದಿ. ಕದಂಬರು ಕನ್ನಡದ ಮೊದಲ ಅರಸರು (ಕ್ರಿ.ಶ.345-519). ಹಾಸನ ಜಿಲ್ಲೆಯ ಹಲ್ಮಿಡಿಯಲ್ಲಿ ದೊರೆತಿರುವ ಕ್ರಿ.ಶ.450ರ ಕಾಲದ ಹಲ್ಮಿಡಿ ಶಾಸನ ಮೊತ್ತ ಮೊದಲ ಕನ್ನಡ ಗದ್ಯ ಶಾಸನ. ಈ ಶಾಸನ ಹಲ್ಮಿಡಿಯ ವೀರಭದ್ರ ದೇವಾಲಯದಲ್ಲಿತ್ತು. 1930ರಲ್ಲಿ ಶಾಸನತಜ್ಞರು ಬೆಳಕಿಗೆ ತಂದರು. ಬನವಾಸಿಯ ಕದಂಬರ ಕಾಕುಸ್ಥವರ್ಮನ ಹೆಸರಿನಲ್ಲಿ ಅವನ ಮಗ ಶಾಂತಿವರ್ಮನ ಆಳ್ವಿಕೆಯ ಅವಧಿಯಲ್ಲಿ ಹಾಕಿಸಿದ ದಾನಶಾಸನ. 1936ರಲ್ಲಿ ಮೂಲಶಾಸನವನ್ನು ಪ್ರಾಚ್ಯವಸ್ತು ಸಂಶೋಧನ ಇಲಾಖೆಗೆ ರವಾನಿಸಲಾಯಿತು. ಪ್ರಸ್ತು ಬೇಲೂರು ತಾಲ್ಲೂಕು ಹಲ್ಮಿಡಿಯಲ್ಲಿ ಶಾಸನದ ಪ್ರತಿಕೃತಿ ಮಂಟಪವನ್ನು ನಿರ್ಮಿಸಲಾಗಿದೆ. ಹಲ್ಮಿಡಿ ಶಾಸನದಿಂದ ಮುಂದಕ್ಕೆ 19ನೆಯ ಶತಮಾನದವರೆಗೆ ಸುಮಾರು 30 ಸಾವಿರಕ್ಕೂ ಮೇಲ್ಪಟುಕರ್ನಾಟಕ ಶಾಸನಗಳು ದೊರೆಕಿವೆ ಎಂದರು.

ಹಾಸನ ತಾಲೂಕು ಸಾಲಗಾಮೆ ಹೋಬಳಿ ಯಲಗುಂದ ಗ್ರಾಮದಿಂದ 2 ಕಿ.ಮೀ. ದೂರದಲ್ಲಿರುವ ಶ್ರೀರಾಮದೇವರಹಳ್ಳವು ಪವಿತ್ರ ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿ ಹೊಂದಿದೆ. ರಾಜ್ಯ ಅರಣ್ಯ ವಲಯದಲ್ಲಿ ಎರಡು ಘಟ್ಟಗಳ ನಡುವೆ ಸುಮಾರು 250 ಅಡಿ ಆಳದಲ್ಲಿರುವ ಶ್ರೀ ರಾಮದೇವರಹಳ್ಳವು ಹಸಿರು ವನಸಿರಿಗಳ ನಡುವೆ ಕಂಗೊಳಿಸುತ್ತಿರುವ ಪ್ರಶಾಂತ ತಾಣವಾಗಿದೆ. ಹಿಂದೆ ಶಂಖಾರಣ್ಯವೆಂದು ಕರೆಯಲ್ಪಟ್ಟ ಈ ಪ್ರದೇಶದಲ್ಲಿ ರಾಜ್ಯ ಅರಣ್ಯ ಇಲಾಖೆಯು ಅಭಿವೃದ್ಧಿಪಡಿಸಿರುವ ಹಸಿರಿನ ಅರಣ್ಯವು ಈ ಕ್ಷೇತ್ರಕ್ಕೆ ಪ್ರಾಕೃತಿಕ ಮೆರುಗು ನೀಡಿದೆ. 1750 ಹೆಕ್ಟೇರ್ ವಿಸ್ತೀರ್ಣವಿರುವ ರಾಮದೇವರಹಳ್ಳ ರಕ್ಷಿತ ಅರಣ್ಯವನ್ನು ಪೂರ್ವಪ್ರಸ್ಥಭೂಮಿ ಮತ್ತು ಅರಣ್ಯೀಕರಣ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಅರಣ್ಯದಲ್ಲಿ ಸ್ವಾಭಾವಿಕವಾಗಿ ಬೆಳೆದಿರುವ 20 ಸಾವಿರ ಶ್ರೀಗಂಧದ ಗಿಡಗಳನ್ನು ಸಂರಕ್ಷಿಸಲು ಅರಣ್ಯದ ಸುತ್ತಲೂ ತಂತಿ ಬೇಲಿ ನಿರ್ಮಿಸಲಾಗಿದೆ. ಭೂಸಾರ ಸಂರಕ್ಷಣೆಗಾಗಿ ಚೆಕ್ ಡ್ಯಾಂಗಳನ್ನು ನಿರ್ಮಿಸಿರುವ ಕಾರಣ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ ಎಂದರು.

ನಂತರ ವಿಚಾರಗೋಷ್ಠಿಗಳು, ಕವಿಗೋಷ್ಠಿಗಳು ಯಶಸ್ವಿಯಾಗಿ ನಡೆಯಿತು. ರೋಹನ್ ಅಯ್ಯಾರ್ ಅವರ ಗೀತ ಗಾಯನ ಗ್ರಾಮಸ್ಥರಲ್ಲಿ ರೋಮಾಂಚನ ಉಂಟು ಮಾಡಿತು. ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಸಾವಿರಾರು ಸುತ್ತ ಮುತ್ತಲ ಗ್ರಾಮಸ್ಥರು ಆಗಮಿಸಿದ್ದರು. 

ಕಾರ್ಯಕ್ರಮದಲ್ಲಿ ಶಿರಾ ತಾಲೂಕಿನ ಶೀಡ್ಲಕೋಣ ವಾಲ್ಮೀಕಿ ಮಠದ ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ರವಿನಾಕಲಗೂಡು, ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, 4ನೇ ಕಸಾಪ ಸಮ್ಮೇಳನಾಧ್ಯಕ್ಷ ಹಂಪನಹಳ್ಳಿ ತಿಮ್ಮೇಗೌಡ, ಶಿವಣ್ಣ, ಯಲಗುಂದ ಗ್ರಾಪಂ ಅಧ್ಯಕ್ಷೆ ರೇಖಾ ಯೋಗೇಶ್‍ನಾಯಕ್, ಕಸಾಪ ತಾಲೂಕು ಅಧ್ಯಕ್ಷ ಜಿ.ಓ. ಮಹಾಂತಪ್ಪ, ಹೋಬಳಿ ಅಧ್ಯಕ್ಷ ಗೌಡಗೆರೆ ಪ್ರಕಾಶ್, ಬೆಸ್ಟ್ ಕಾಲೇಜು ವೈ.ಹೆಚ್. ಈಶ್ವರಪ್ಪ, ಕಸಾಪ ಗೌರವ ಕಾರ್ಯದರ್ಶಿ ಕಲ್ಲಹಳ್ಳಿ ಹರೀಶ್, ಗೌರವ ಕಾರ್ಯದರ್ಶಿ ಸೋಮನಾಯಕ್, ಸತ್ತಿಗರಹಳ್ಳಿ ಮಹೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿ. ಕೃಷ್ಣ, ಸಂಶೋಧಕ ವತ್ಸ ಎಸ್. ವಟಿ, ಸಾಹಿತಿ ಸುಶೀಲಸೋಮಶೇಖರ್, ಕಲಾವತಿ, ನಿಟ್ಟೂರು ಸ್ವಾಮಿ, ಹರಳಹಳ್ಳಿ ರಂಗಸ್ವಾಮಿ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News