ಆರೆಸ್ಸೆಸ್ ಸಮವಸ್ತ್ರದಲ್ಲಿ ಮಾಜಿ ಸೇನಾ ಮುಖ್ಯಸ್ಥ, ಹಾಲಿ ಕೇಂದ್ರ ಸಚಿವ ಜ.ವಿಕೆ ಸಿಂಗ್

Update: 2018-03-02 11:43 GMT

ಹೊಸದಿಲ್ಲಿ,ಮಾ.2: ತನ್ನ ಜನ್ಮದಿನಾಂಕ ಕುರಿತು ಸುದೀರ್ಘ ಕಾನೂನು ಹೋರಾಟದಲ್ಲಿ ಸೋಲನ್ನಪ್ಪಿದ ಬಳಿಕ 2014ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡು ಬಳಿಕ ಕೇಂದ್ರದಲ್ಲಿ ಸಹಾಯಕ ಸಚಿವರಾಗಿರುವ ಭೂಸೇನೆಯ ಮಾಜಿ ಮುಖ್ಯಸ್ಥ ಜ.ವಿ.ಕೆ.ಸಿಂಗ್ ಅವರು ಇದೀಗ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. ಭಾರತೀಯ ಸೇನೆಯಲ್ಲಿ ತನ್ನ 42 ವರ್ಷಗಳ ವೃತ್ತಿಜೀವನದುದ್ದಕ್ಕೂ ಆಲಿವ್ ಗ್ರೀನ್ ಸಮವಸ್ತ್ರ ಧರಿಸಿದ್ದ ಸಿಂಗ್ ಅವರು ಆರೆಸ್ಸೆಸ್ ಸಮವಸ್ತ್ರವನ್ನು ಧರಿಸಿರುವ ಚಿತ್ರಗಳಿಗೆ ಭಾರೀ ಟೀಕೆಗಳು ವ್ಯಕ್ತವಾಗಿವೆ.

ಆರೆಸ್ಸೆಸ್ ನಿಷೇಧಿತ ಸಂಘಟನೆಯಲ್ಲ, ಹೀಗಾಗಿ ಆರೆಸ್ಸೆಸ್ ಸಮವಸ್ತ್ರವನ್ನು ಧರಿಸುವುದು ಮಾಜಿ ಸೇನಾನಿ ಸಿಂಗ್ ಅವರ ವೈಯಕ್ತಿಕ ಆಯ್ಕೆಯಾಗಿದೆ ಎಂದು ಕೆಲವರು ವಾದಿಸುತ್ತಿದ್ದರೆ, ಇದು ಆರೆಸ್ಸೆಸ್‌ನ ಸಿದ್ಧಾಂತಗಳಿಗೆ ವಿರುದ್ಧವಾಗಿರುವ ಸೇನೆಯ ಮೌಲ್ಯಗಳು ಮತ್ತು ಸಂಪ್ರದಾಯಗಳ ರಾಜಾರೋಷ ಉಲ್ಲಂಘನೆಯಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ಪೂರ್ವ ನಿದರ್ಶನವು ಸಶಸ್ತ್ರ ಪಡೆಗಳಲ್ಲಿ ಬಹುಸಂಖ್ಯಾತ ರಾಷ್ಟ್ರೀಯವಾದಕ್ಕೆ ಉತ್ತೇಜನ ನೀಡಬಹುದು ಎಂಬ ಭೀತಿಯೂ ವ್ಯಕ್ತವಾಗಿದೆ.

ಅತ್ಯಂತ ಹೆಚ್ಚು ಪದಕಗಳನ್ನು ಗಳಿಸಿರುವ ಹಾಲಿ ಸೇನಾಧಿಕಾರಿಗಳ ಪೈಕಿ ಓರ್ವರಾಗಿರುವ ಕರ್ನಲ್ ಸೌರಭ್ ಸಿಂಗ್ ಶೇಖಾವತ್ ಅವರು ವೀಡಿಯೊವೊಂದ ರಲ್ಲಿ ಸೇನೆಯಲ್ಲಿನ ಜಾತ್ಯತೀತ ಸಂಸ್ಕೃತಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದರು. ಈ ಮಾದರಿಯನ್ನು ದೇಶದಲ್ಲಿ ಅನ್ವಯಿಸಿದರೆ ಹೆಚ್ಚಿನೆಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಶೇಖಾವತ್ ತನ್ನ ಮಾತಿನ ಕೊನೆಯಲ್ಲಿ ಹೇಳಿದ್ದರು. ವಿಪರ್ಯಾಸವೆಂದರೆ ನಿವೃತ್ತ ಯೋಧ ರಘುರಾಮನ್ ಅವರು ಈ ವೀಡಿಯೊವನ್ನು ಶೇರ್ ಮಾಡಿಕೊಂಡಿರುವ ಸಂದರ್ಭದಲ್ಲಿಯೇ ಸಿಂಗ್ ಅವರು ಆರೆಸ್ಸೆಸ್ ಸಮವಸ್ತ್ರ ಧರಿಸಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಫೆ.26ರಂದು ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದ್ದ ಆರೆಸ್ಸೆಸ್‌ನ ‘ರಾಷ್ಟ್ರೋದಯ ಸಮ್ಮೇಳನ’ದಲ್ಲಿ ಸಿಂಗ್ ಅವರು ಸಂಘದ ಸಮವಸ್ತ್ರವನ್ನು ಧರಿಸಿರುವ ಚಿತ್ರಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಸಿಂಗ್ ಸೇರಿದಂತೆ ಪೂರ್ವ ಉತ್ತರ ಪ್ರದೇಶದ ಹಲವಾರು ಕೇಂದ್ರ ಸಚಿವರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಸಿಂಗ್ ಅವರು ನಿವೃತ್ತಿಯ ಬಳಿಕ ಭಾರತೀಯ ಸೇನೆಯ ಅತ್ಯುಚ್ಚ ಹುದ್ದೆಯ ಘನತೆಯನ್ನು ತಗ್ಗಿಸಿದ್ದಾರೆ ಎಂದು ವಾಯುಪಡೆಯ ನಿವೃತ್ತ ಅಧಿಕಾರಿ ಹಾಗು ಸಬ್ಕಾ ಸೈನಿಕ್ ಸಂಘರ್ಷ ಸಮಿತಿಯ ಕಾರ್ಯಕಾರಿ ಸದಸ್ಯ ನಳಿನ್ ತಲ್ವಾರ್ ಕಟುವಾಗಿ ಟೀಕಿಸಿದ್ದಾರೆ. ಸೇನೆಯ ನಿವೃತ್ತ ಮುಖ್ಯಸ್ಥರು ಆರೆಸ್ಸೆಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡಿರುವದು ಹತಾಶೆಯನ್ನುಂಟು ಮಾಡುವ ಮತ್ತು ನಾಚಿಕೆಗೇಡಿನ ವಿಷಯವಾಗಿದೆ. ಅವರು ತನ್ನ ಹೆಸರಿನಲ್ಲಿ ‘ಜನರಲ್’ಪದವನ್ನು ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಅವರು ಕಿಡಿಕಾರಿದ್ದಾರೆ. ಅವರು ತನ್ನ ಸಾರ್ವಜನಿಕ ಜೀವನದಲ್ಲಿ ತಟಸ್ಥತೆಯನ್ನು ಕಾಯ್ದುಕೊಳ್ಳದಿದ್ದರೆ ನಿವೃತ್ತ ಮತ್ತು ಹಾಲಿ ಸೇನಾಧಿಕಾರಿಗಳು ಮತ್ತು ಯೋಧರು ಅವರಿಗೆ ಸಾಲ್ಯೂಟ್ ಮಾಡಬಾರದು ಎಂದಿದ್ದಾರೆ.

ಆರೆಸ್ಸೆಸ್ ಸಮವಸ್ತ್ರವನ್ನು ಧರಿಸುವ ಮೂಲಕ ಸಿಂಗ್ ಅವರು ತನ್ನ ಸೇನಾ ಸಮವಸ್ತ್ರಕ್ಕೆ ಅವಮಾನವನ್ನುಂಟು ಮಾಡಿದ್ದಾರೆ ಎಂದು ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ ಟ್ವೀಟಿಸಿದ್ದಾರೆ. ಟ್ವಿಟರ್‌ನಲ್ಲಿ ಇತರ ಹಲವು ಅಭಿಪ್ರಾಯಗಳೂ ಇದನ್ನೇ ಧ್ವನಿಸಿವೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News