ಗೌರಿ ಲಂಕೇಶ್ ಹತ್ಯೆ ಪ್ರಕರಣ: ಹಿಂದೂ ಜಾಗರಣ ವೇದಿಕೆ ಮುಖಂಡ ಮತ್ತೆ ವಶಕ್ಕೆ
ಬೆಂಗಳೂರು, ಮಾ.2: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಹಿಂದೂ ಜಾಗರಣಾ ವೇದಿಕೆ ಮುಖಂಡ ನವೀನ್ ಎಂಬಾತನನ್ನು ಸಿಟ್ ತನಿಖಾಧಿಕಾರಿಗಳು ಮತ್ತೆ ಏಳು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಡ್ಯದ ಮದ್ದೂರು ತಾಲೂಕಿನ ಕದಲೂರು ಗ್ರಾಮದ ನವೀನ್ ಕುಮಾರ್‌ನನ್ನು ಫೆ.18ರಂದು ಸಿಸಿಬಿ ಪೊಲೀಸರು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ವಶಕ್ಕೆ ಪಡೆದಿದ್ದರು. ಬಳಿಕ ಸಿಟ್ ತನಿಖಾಧಿಕಾರಿಗಳು ನ್ಯಾಯಾಲಯದ ಅನುಮತಿ ಮೇರೆಗೆ 9 ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಇದಾದ ನಂತರ ಪುನಃ ಆರೋಪಿ ನವೀನ್‌ನನ್ನು ಏಳು ದಿನಗಳ ಕಾಲ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎನ್ನಲಾಗಿದೆ.
ಪಾಯಿಂಟ್ 32ನ 15 ಜೀವಂತ ಗುಂಡುಗಳನ್ನು ಜಪ್ತಿ ಮಾಡಿರುವ ಹಿನ್ನೆಲೆಯಲ್ಲಿ ಆರೋಪಿ ನವೀನ್‌ನನ್ನು ಹೆಚ್ಚಿನ ವಿಚಾರಣೆಗೊಳಪಡಿಸುವ ಸಲುವಾಗಿ ಶುಕ್ರವಾರ ಈತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಶಂಕಿತ ಆರೋಪಿ ಮೇಲೆ ಕಣ್ಣಿಟ್ಟಿದ್ದ ಸಿಟ್ ತನಿಖಾಧಿಕಾರಿಗಳು, ಈತನ ದೂರವಾಣಿ ಕರೆಗಳ ಪರಿಶೀಲನೆ ನಡೆಸಿದ್ದರು. ಈ ವೇಳೆ ಈತ ಬಂದೂಕು ಹಾಗೂ ಜೀವಂತ ಗುಂಡುಗಳ ಕುರಿತು ಮಾತನಾಡುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಆರೋಪಿಯನ್ನು ವಶಕ್ಕೆ ಪಡೆದು, ಗೌರಿ ಲಂಕೇಶ್ ಹತ್ಯೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಆರೋಪಿ ನವೀನ್‌ಕುಮಾರ್‌ಗೆ ಸನಾತನ ಸಂಸ್ಥೆ, ಹಿಂದೂ ಯುವ ಸೇನಾದಂತಹ ಕಟ್ಟಾ ಹಿಂದೂಪರ ಸಂಘಟನೆಗಳೊಂದಿಗೆ ಸಂಪರ್ಕವಿದೆ ಎನ್ನಲಾಗಿದೆ.
ಸಿಕ್ಕಿದ್ದು ಹೇಗೆ?
ಫೆ.18ರ ಸಂಜೆ 6 ಗಂಟೆ ಸುಮಾರಿಗೆ ಪಿಸ್ತೂಲ್‌ನೊಂದಿಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ (ಮೆಜೆಸ್ಟಿಕ್)ಗೆ ಬಂದಿದ್ದ ನವೀನ್‌ನನ್ನು ಸಿಸಿಬಿ ಪೊಲೀಸರು ನಾಡಪಿಸ್ತೂಲ್, ಪಾಯಿಂಟ್ 32 ರಿವಾಲ್ವರ್‌ನ ಐದು ಜೀವಂತ ಗುಂಡುಗಳನ್ನು ಜಪ್ತಿ ಮಾಡಿ ಸಂಬಂಧಪಟ್ಟ ಉಪ್ಪಾರಪೇಟೆ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದರು.