ಮಗಳ ಸಾವಿನ ಸುದ್ದಿ ತಿಳಿದರೂ ಕರ್ತವ್ಯನಿಷ್ಠೆ ಮೆರೆದ ಈ ಪೊಲೀಸ್ ಸಿಬ್ಬಂದಿ ಮಾಡಿದ್ದೇನು?

Update: 2018-03-02 14:59 GMT

ಮೀರತ್, ಮಾ.2: ಮಗಳು ಸಾವಿಗೀಡಾಗಿದ್ದಾಳೆ ಎಂಬ ಸುದ್ದಿ ತಿಳಿದ ನಂತರವೂ ಸಾಯುತ್ತಿರುವ ಅಪರಿಚಿತ ವ್ಯಕ್ತಿಯನ್ನು ರಕ್ಷಿಸುವುದೇ ತನ್ನ ಪ್ರಥಮ ಆದ್ಯತೆ ಎಂದು ನಿರ್ಧರಿಸಿ ಪೊಲೀಸ್ ಮುಖ್ಯ ಪೇದೆಯೊಬ್ಬರು ಕರ್ತವ್ಯನಿಷ್ಠೆ ಮೆರೆದ ಘಟನೆ ಉತ್ತರ ಪ್ರದೇಶದ ಸಹರನ್ಪುರದಲ್ಲಿ ನಡೆದಿದೆ. ಫೆಬ್ರವರಿ 23ರಂದು ರಾತ್ರಿ 9 ಗಂಟೆಯ ಸುಮಾರಿಗೆ ಪೊಲೀಸ್ ಮುಖ್ಯ ಪೇದೆ 57ರ ಹರೆಯದ ಭುಪೇಂದ್ರ ತೋಮರ್ ಎಂದಿನಂತೆ ತನ್ನ ತಂಡದೊಂದಿಗೆ ಉತ್ತರ ಪ್ರದೇಶ 100 (ತುರ್ತು ಸ್ಪಂದನೆ) ವಾಹನದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದರು.

ತಂಡವು ಬಡ್ಗಾಂವ್‌ನಲ್ಲಿ ಗಸ್ತು ತಿರುಗುತ್ತಿದ್ದ ವೇಳೆ, ವ್ಯಕ್ತಿಯೊಬ್ಬ ಗಂಭೀರವಾಗಿ ಹಲ್ಲೆಗೊಳಗಾಗಿ ರಸ್ತೆಯಲ್ಲಿ ಬಿದ್ದಿದ್ದಾನೆ ಎಂದು ಕರೆಯೊಂದು ಬಂದಿತ್ತು. ಇದೇ ವೇಳೆ ಭುಪೇಂದ್ರ ಮೊಬೈಲ್ ಫೋನ್‌ಗೆ ಬಂದ ಕರೆಯಲ್ಲಿ ಅವರ 27ರ ಹರೆಯದ ಮಗಳು ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದಾಳೆ ಎಂದು ಆಚೆಯ ಕಡೆಯಿಂದ ವ್ಯಕ್ತಿ ತಿಳಿಸಿದ್ದರು. ಈ ಸುದ್ದಿಯಿಂದ ಭುಪೇಂದ್ರ ಒಂದರೆ ಕ್ಷಣ ಆಘಾತಕ್ಕೊಳಗಾದೂ ತಾನು ಕರ್ತವ್ಯದಲ್ಲಿದ್ದೇನೆ ಎಂಬುದನ್ನು ಮಾತ್ರ ಅವರು ಮರೆಯಲಿಲ್ಲ. ಅವರ ಸಹೋದ್ಯೋಗಿಗಳು ತಕ್ಷಣವೇ ಮನೆಗೆ ಹೋಗುವಂತೆ ಭುಪೇಂದ್ರಗೆ ಸಲಹೆ ನೀಡಿದರೂ ಅದಕ್ಕೊಪ್ಪದ ಪ್ರಾಮಾಣಿಕ ಪೇದೆ ಮೊದಲು ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ನಂತರವೇ ಮಡಿದ ಮಗಳ ಮುಖ ನೋಡುವುದಾಗಿ ತಿಳಿಸಿದ್ದಾರೆ.

ಕೂಡಲೇ ವಾಹನದ ಜೊತೆ ಸ್ಥಳಕ್ಕೆ ಧಾವಿಸಿದ ಪೊಲೀಸರ ತಂಡ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಭುಪೇಂದ್ರ ತೋಮರ್ ತಮ್ಮ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಪಶುವೈದ್ಯರಾಗಿದ್ದ ಆ ವ್ಯಕ್ತಿಯ ಜೀವ ಉಳಿದಿದೆ. ಈ ಕುರಿತು ಮಾತನಾಡಿದ ಭುಪೇಂದ್ರ, ‘ಸತ್ತವರನ್ನು ಬಿಡು, ಬದುಕುಳಿದಿರುವವರನ್ನು ರಕ್ಷಿಸು’ ಎಂಬುವುದು ನಾನು ಪಾಲಿಸುವ ಧ್ಯೇಯವಾಗಿದೆ. ನಾನು ಏನೋ ಅತ್ಯದ್ಭುತ ಕೆಲಸ ಮಾಡಿದ್ದೇನೆ ಎಂದು ನನಗನಿಸುವುದಿಲ್ಲ ಎಂದು ದುಃಖದ ಮಡುವಿನಲ್ಲಿರುವ ಪೊಲೀಸ್ ಪೇದೆ ತಿಳಿಸುತ್ತಾರೆ. ಭುಪೇಂದ್ರ ತೋಮರ್ ಅವರ ಮಗಳಾದ ಜ್ಯೋತಿ ವಿವಾಹವು ಒಂದು ವರ್ಷ ಹಿಂದಷ್ಟೇ ಸೌರಭ್ ಕಕ್ರನ್ ಎಂಬಾತನೊಂದಿಗೆ ನಡೆದಿತ್ತು. ಆಕೆ ಮೀರತ್‌ನ ಬಕ್ಸಾರ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ದುರದೃಷ್ಟಕರ ದಿನಂದು ಶೌಚಾಲಯದಲ್ಲಿ ಪ್ರಜ್ಞಾಹೀನಳಾಗಿ ಬಿದ್ದ ಜ್ಯೋತಿ ಅಲ್ಲೇ ಸಾವನ್ನಪ್ಪಿದ್ದರು. ಆಕೆಯ ಅನಿರೀಕ್ಷಿತ ಸಾವಿನಿಂದ ಇಡೀ ಕುಟುಂಬ ಆಘಾತಕ್ಕೊಳಗಾಗಿತ್ತು. ಭುಪೇಂದ್ರದ ಆದರ್ಶದಾಯಕ ಕಾರ್ಯಕ್ಕೆ ಇಡೀ ಪೊಲೀಸ್ ಇಲಾಖೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದು ಪೊಲೀಸ್ ಪ್ರಧಾನ ನಿರ್ದೇಶಕರಾದ ಒ.ಪಿ ಸಿಂಗ್ ಇತ್ತೀಚೆಗೆ ಭುಪೇಂದ್ರರನ್ನು ಭೇಟಿ ಮಾಡಿ ಕುಟುಂಬಕ್ಕೆ ಎಲ್ಲಾ ರೀತಿಯ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಅದಲ್ಲದೆ ಭುಪೇಂದ್ರ ಅವರನ್ನು ಪೊಲೀಸ್ ಇಲಾಖೆಯ ಹಲವು ಹಿರಿಯ ಅಧಿಕಾರಿಗಳು ವೈಯಕ್ತಿಕವಾಗಿ ಸನ್ಮಾನಿಸಿ ಗೌರವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News