ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯ ಸ್ವಾಲವಂಬನೆ ಸಾಧಿಸಿದೆ: ಸಚಿವ ಡಿ.ಕೆ.ಶಿವಕುಮಾರ್

Update: 2018-03-02 17:20 GMT

ಶಿವಮೊಗ್ಗ,ಮಾ.2: ರಾಜ್ಯ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು, ಯಾವುದೇ ಹೊಸ ಉದ್ಯಮ ಬಂದರೂ, ಒಂದು ವಾರದ ಒಳಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಶಕ್ತರಿದ್ದೇವೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಅವರು ಶುಕ್ರವಾರ ನಗರದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸೇರಿದಂತೆ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಪಾವಗಡದಲ್ಲಿ 2000 ಮೆಗಾ ವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಘಟಕವನ್ನು 13 ಸಾವಿರ ಎಕರೆ ಪ್ರದೇಶದಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆರಂಭಿಸಿರುವುದು ದಾಖಲೆಯಾಗಿದೆ. ಇಲ್ಲಿ ಯಾವುದೇ ಜಮೀನು ಖರೀದಿ, ಸ್ವಾಧಿನಪಡಿಸುವಿಕೆ ಇಲ್ಲದೆ ಇಷ್ಟು ಬೃಹತ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ತಾಲೂಕುಗಳಲ್ಲಿ ಕನಿಷ್ಟ 20 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಯೋಜನೆ ರೂಪಿಸಲಾಗಿದ್ದು, ಈಗಾಗಲೇ 105 ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ. ಇದರಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮತ್ತು ವಿತರಣಾ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರೈತರಿಗೆ ಪ್ರತಿದಿನ 7ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. 7 ಗಂಟೆ ವಿದ್ಯುತ್ ಪೂರೈಕೆಯಲ್ಲಿ ವಿಫಲರಾದರೆ ದಂಡ ಕಟ್ಟಬೇಕಾಗಿದೆ ಎಂದರು. ಗ್ರಾಹಕರು ಮತ್ತು ಅಧಿಕಾರಿಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸಲಾಗಿದ್ದು, ಕಳೆದ ನಾಲ್ಕುವರೆ ವರ್ಷಗಳಲ್ಲಿ ಯಾವುದೇ ಚ್ಯುತಿ ಬಾರದಂತೆ ಗ್ರಾಹಕರಿಗೆ ವಿದ್ಯುತ್ ನೀಡಲಾಗಿದೆ ಎಂದು ಸಚಿವರು ಹೇಳಿದರು.

ವೇತನ ಪರಿಷ್ಕರಣೆ: ಕರ್ನಾಟಕ ವಿದ್ಯುತ್ ನಿಗಮದ ನೌಕರರಿಗೆ ಶೇ.26ರಷ್ಟು ವೇತನದಲ್ಲಿ ಹೆಚ್ಚಳ ಮಾಡಲು ನಿರ್ಧಾರ ಕೈಗೊಳ್ಳಲಾಗಿದ್ದು, ಶನಿವಾರ ಈ ಕುರಿತಾಗಿ ಆದೇಶ ಹೊರಡಿಸಲಾಗುವುದು ಎಂದು ಅವರು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಲೈನ್‍ಮ್ಯಾನ್‍ಗಳು ಹಾಗೂ ಇಂಜಿನಿಯರ್ ಗಳು ಸೇರಿದಂತೆ ಒಟ್ಟು 735 ಖಾಲಿ ಹುದ್ದೆಗಳನ್ನು ತುಂಬಲಾಗಿದ್ದು, ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 23ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮಾತನಾಡಿ, ಇಡೀ ರಾಜ್ಯಕ್ಕೆ ವಿದ್ಯುತ್ ನೀಡಿದ ಜಿಲ್ಲೆ ನಮ್ಮದು. ಶರಾವತಿ ಯೋಜನೆಯಲ್ಲಿ ಇಲ್ಲಿನ ಜನತೆ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಆದರೆ ಸರ್ಕಾರ ಅವರ ತ್ಯಾಗವನ್ನು ಮರೆತಿಲ್ಲ ಎಂದು ಹೇಳಿದರು.

ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿವರು ಈ ಸಂದರ್ಭದಲ್ಲಿ ಶಿವಮೊಗ್ಗ ನಗರದಲ್ಲಿ 1665ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ, 840 ಲಕ್ಷ ರೂ. ವೆಚ್ಚದಲ್ಲಿ ಮುಖ್ಯ ಇಂಜಿನಿಯರ್ ಕಚೇರಿ ಸಂಕೀರ್ಣ, ಮಂಡ್ಲಿಯಲ್ಲಿ 95 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನಗರ ಉಪವಿಭಾಗದ ಶಂಕುಸ್ಥಾಪನೆ ನೆರವೇರಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ವಿಜಯ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಮೇಯರ್ ಬಾಬು ಏಳುಮಲೈ, ಕಾಡಾ ಅಧ್ಯಕ್ಷ ಸುಂದರೇಶ್, ಸೂಡಾ ಅಧ್ಯಕ್ಷ ಇಸ್ಮಾಯಿಲ್ ಖಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News