ತುಮಕೂರು: ಸ್ಮಾರ್ಟ್ ಟಾಯ್ಲೇಟ್‍ಗೆ ಶಾಸಕರಿಂದ ಚಾಲನೆ

Update: 2018-03-03 10:50 GMT

ತುಮಕೂರು,ಮಾ.03: ಸ್ಮಾರ್ಟ್ ಸಿಟಿ ತುಮಕೂರು ನಗರದ ಬಿ.ಹೆಚ್. ರಸ್ತೆಯ ಟೌನ್‍ಹಾಲ್ ಸರ್ಕಲ್ ಸಮೀಪ ಸ್ಮಾರ್ಟ್ ಅತ್ಯಾಧುನಿಕ ಸೌಲಭ್ಯವಿರುವ ಇ–ಟಾಯ್ಲೆಟ್‍ನ್ನು ನಗರದ ಶಾಸಕರಾದ ಡಾ. ರಫೀಕ್ ಅಹಮ್ಮದ್ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಸ್ಮಾರ್ಟ್ ಸಿಟಿಯ ಅಧ್ಯಕ್ಷರಾದ ಶಾಲಿನಿ ರಜನೀಶ್  ಉದ್ಘಾಟಿಸಿದರು. 

ತುಮಕೂರು ನಗರದ ಬಿ.ಹೆಚ್.ರಸ್ತೆಯ ಟೌನ್‍ಹಾಲ್ ಸರ್ಕಲ್‍ನ ಬಸ್ ನಿಲ್ದಾಣದ ಪಕ್ಕದಲ್ಲಿಯೇ ಸ್ಮಾರ್ಟ್ ಶೌಚಾಲಯವನ್ನು ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾಗಿದ್ದು, ಇದರಲ್ಲಿ ಎಲ್ಲಾ ಸೌಲಭ್ಯಗಳು ಆಧುನಿಕತೆಯಿಂದ ಕೂಡಿದ್ದು, ಹೈಟೆಕ್ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಚಿಕ್ಕದಾಗಿದ್ದರೂ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿರುವ ಇ-ಟಾಯ್ಲೆಟ್ ಬಳಸಲು ಮೊದಲಿಗೆ 2 ರೂಪಾಯಿಯನ್ನು ಟಾಯ್ಲೆಟ್‍ನ ಮುಂಬಾಗಿಲಿನಲ್ಲಿ ಅಳವಡಿಸಿರುವ ಯಂತ್ರಕ್ಕೆ ಹಾಕಬೇಕು. ನಂತರ ಶೌಚಾಲಯದ ಬಾಗಿಲು ತೆರೆದುಕೊಳ್ಳುತ್ತದೆ. ಇಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 

ಇ-ಶೌಚಾಲಯಗಳನ್ನು ಉದ್ಘಾಟಿಸಿ ಮಾತನಾಡಿದ ಶಾಸಕರಾದ ಡಾ ರಫೀಕ್ ಅಹಮ್ಮದ್, ಸಾರ್ವಜನಿಕ ಅನುಕೂಲಕ್ಕಾಗಿ ಸ್ಮಾರ್ಟ್ ಸಿಟಿ ವತಿಯಿಂದ ಈ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಇ-ಶೌಚಾಲಯದ ಸೌಲಭ್ಯವನ್ನು ತುಮಕೂರಿನ ಜನರು ಸದುಪಯೋಗಪಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇನ್ನಷ್ಟು ಶೌಚಾಲಯಗಳನ್ನು ತುಮಕೂರು ನಗರದಲ್ಲಿ ನಿರ್ಮಿಸಲಾಗುವುದು ಎಂದರು. 

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ಇ-ಶೌಚಾಲಯವು ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು, ಪರಿಸರ ಸ್ನೇಹಿಯಾಗಿದೆ. ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ, ಹೈಟೆಕ್ ಪಾದಚಾರಿ ಮಾರ್ಗ, ರಸ್ತೆ, ಉದ್ಯಾನವನ, ಸಂಚಾರಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು. 

ಸ್ಟೈನ್‍ಲೆಸ್ ಸ್ಟೀಲ್‍ನಿಂದ ನಿರ್ಮಿತ ಘಟಕ, ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಘಟಕಗಳು, ನಾಣ್ಯ ಹಾಕಿ ಉಪಯೋಗಿಸುವ ಸೌಲಭ್ಯ, ಸ್ವಯಂ ಚಾಲಿತ ಬಾಗಿಲು, ನೀರು ಮತ್ತು ವಿದ್ಯುತ್‍ನ ಬಳಕೆಗೆ ಸೆನ್ಸಾರ್ ಅಳವಡಿಸಿರುವುದು, ಒಳಾಂಗಣ ವಾಶ್ ಬೇಸಿನ್, ಶೌಚಾಲಯ ಬಳಕೆಯಲ್ಲಿರುವುದನ್ನು ತೋರಿಸುವ ಸೂಚಕ, ಧ್ವನಿ ಮಾರ್ಗದರ್ಶಿ,ಸೂಚಕ, ನೀರಿನ ಪ್ರಮಾಣ ಸೂಚಕ, ಸ್ವಯಂಚಾಲಿತ ಸ್ವಚ್ಛತೆ, ಮಹಿಳೆಯರ ಶೌಚಾಲಯದಲ್ಲಿ ವಿಶೇಷ ಸೌಕರ್ಯಗಳನ್ನು ಕಲ್ಪಿಸಲಾಗಿದೆ. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ರಾಜ್, ಸ್ಮಾರ್ಟ್ ಸಿಟಿ ಪ್ರಧಾನ ವ್ಯವಸ್ಥಾಪಕರು ಸ್ವಾಮಿ ಸೇರಿದಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News