ಪಂಚಮ ಸ್ಕೂಲ್ ಒಂದು ಉಡುಗೊರೆ

Update: 2018-03-03 12:46 GMT

ಚೌಡಯ್ಯನವರು ಯಾವುದೋ ಒಂದು ತುಡಿತಕ್ಕೆ ಒಳಗಾಗಿ ಅಂದಿನ ಸಮಾಜದಲ್ಲಿ ಊಹಿಸಲಾಗದ, ವಾನವೀಯ ಸಮಾನತೆಯನ್ನು ಸಾರುವ ಒಂದು ಅಪೂರ್ವ ಕಾರ್ಯವನ್ನು ಎಸಗಿದರು. ಅದೇ ಅರಸೀಕೆರೆಯಲ್ಲಿ ಪಂಚಮ ಮಕ್ಕಳಿಗಾಗಿ ಅವರು ಕಟ್ಟಿಸಿದ ಕನ್ನಡ ಪ್ರೈಮರಿ ಶಾಲೆ. 1916ರಲ್ಲಿ ಪ್ರಾರಂಭಗೊಂಡ ಈ ಕನ್ನಡ ಪಂಚಮ ಶಾಲೆಗೆ ಇಂದು 102 ವರ್ಷಗಳು ತುಂಬಿವೆ. ಶತಮಾನದ ಹಿಂದೆ ನಡೆದ ಈ ಶಾಲೆಯ ಪ್ರಾರಂಭೋತ್ಸವವೂ ಸಹ ಅತಿಶಯವಾದುದ್ದು. ಅಂದಿನ ಪ್ರಖ್ಯಾತ ದಿವಾನರೂ ಇಂಜಿನಿಯರ್ ಆಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು ಪಂಚಮ ಶಾಲೆಯನ್ನು ಉದ್ಘಾಟಿಸಿದರು.

ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ಆಶ್ರಿತರನ್ನು ಕಾಪಾಡು... ಹೀಗೆ ಮುಂದುವರಿಯವುದು ಕನ್ನಡದ ಒಂದು ಪ್ರಾಚೀನ ಶಾಸನ. ಈ ಉಕ್ತಿಯ ಆಶಯದಂತೆ ನಡೆದುಕೊಂಡು ಬಾಳಿ ಬದುಕಿದವರು ನಮ್ಮೆಲ್ಲರ ಹಿರಿಯರು. ಈ ಮಾತನ್ನು ಸ್ಪಷ್ಟಪಡಿಸುವಂತೆ ಇಂದಿಗೂ ಅನೇಕ ನಗರ, ಊರುಗಳಲ್ಲಿ ಪಳೆಯುಳಿಕೆಗಳಾಗಿ ಧರ್ಮಛತ್ರಗಳು, ಹೆರಿಗೆ ಆಸ್ಪತ್ರೆಗಳು, ಹಾಸ್ಟೆಲ್ ಇತ್ಯಾದಿಗಳು ಕಂಡುಬರುತ್ತವೆ. ಇವು ನಮ್ಮ ಹಿರಿಯರು ಪುಣ್ಯಕಾರ್ಯವೆಂದು ತಿಳಿದು ಪರೋಪಕಾರದ ದೃಷ್ಟಿಯಿಂದ ಮಾಡುತ್ತಿದ್ದ ಸತ್ಕಾರ್ಯಗಳು.

ಒಂದು ಶತಮಾನದ ಹಿಂದೆ ನನ್ನ ಮುತ್ತಜ್ಜ ಸಾಹುಕಾರ್ ಎಂ. ಚೌಡಯ್ಯನವರು ಇದೇ ಪರಂಪರೆಗನುಸಾರವಾಗಿ ಹಾಸನ ಜಿಲ್ಲೆಯ ಅರಸೀಕೆರೆಯ ಮುಖ್ಯ ರಸ್ತೆ ಬಿ.ಎಚ್. ರೋಡಿನಲ್ಲಿ ಕಟ್ಟಿಸಿದ ‘ಪಂಚಮ ಸ್ಕೂಲ್’ ಎಂಬ ಕನ್ನಡ ಶಾಲೆ ಇಂದಿಗೂ ಅಬಾಧಿತವಾಗಿ ನಡೆದುಕೊಂಡು ಬಂದಿದೆ. ಈ ಶಾಲೆಯ ಹೆಚ್ಚುಗಾರಿಕೆ ಇರುವುದೇ ಇದನ್ನು ಕಟ್ಟಿದ್ದು ಯಾರಿಗಾಗಿ ಎನ್ನುವುದರಲ್ಲಿ.

ಇದಕ್ಕೆ ಪೂರಕವಾಗಿ ಮೊದಲು ಚೌಡಯ್ಯನವರ ಜೀವನ ಗಾಥೆಯನ್ನು ಸ್ಥೂಲವಾಗಿ ಹೇಳ ಬಯಸುತ್ತೇನೆ. ಮೈಸೂರಿನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಚೌಡಯ್ಯನವರು ವ್ಯಾಪಾರದಲ್ಲಿ ನಷ್ಟ ಅನುಭವಿಸಿದರು. ಆನಂತರ ಅವರ ಹಿತೈಷಿ ಕುಂಚಟಿಗರ ಮಲ್ಲಣ್ಣನವರ ಸಲಹೆಯಂತೆ ಅರಸೀಕೆರೆಗೆ ಬರುವಂತಾಯ್ತು. ಆ ಕಾಲದಲ್ಲಿ ಕಾಲ್ನಡಿಗೆಯಲ್ಲಿ ಮೈಸೂರಿಂದ ಅರಸೀಕೆರೆಗೆ ಚೌಡಯ್ಯನವರು ಪ್ರಯಾಣ ಬೆಳೆಸಿದರು. ಮೊದಲಿಗೆ ಅರಸೀಕೆರೆಯಲ್ಲಿದ್ದ ಅಬ್ಕಾರಿ ಕಂಟ್ರಾಕ್ಟ್ ದಾರರಿಂದ ಷಿಕ್ಮಿ ಅಂಗಡಿ ಗುತ್ತಿಗೆಗೆ ತೆಗೆದುಕೊಂಡರು. ಎರಡನೆಯದಾಗಿ ಅರಸೀಕೆರೆ ಪಕ್ಕದಲ್ಲಿರುವ ಬೆಂಡೆಕೆರೆ ಎಂಬ ಸ್ಥಳದ ಕೆರೆ ಕಟ್ಟುವ ಕೆಲಸವನ್ನು ಹಿಡಿದರು. ಆನಂತರ ಹಿಂದಿರುಗಿ ನೋಡಲೇ ಇಲ್ಲ. ಅರಸೀಕೆರೆಯೇ ಅವರ ಕರ್ಮಭೂಮಿ ಆಯ್ತು ಮತ್ತು ಹಾಸನಕ್ಕೂ ವಿಸ್ತರಿಸಿತು. ಒಬ್ಬ ಪ್ರತಿಷ್ಠಿತ ವ್ಯಕ್ತಿಯಾಗಿ, ಪ್ರಸಿದ್ಧ ಅಬ್ಕಾರಿ ಕಂಟ್ರಾಕ್ಟ್‌ರಾಗಿ ಸಮಾಜದಲ್ಲಿ ಒಳ್ಳೆಯ ಸ್ಥಾನವನ್ನು ಗಳಿಸಿದರು. ಅಂದಿನ ಹಿರಿಯ ವ್ಯಕ್ತಿಗಳ ಸಖ್ಯ, ಮುಂದೆ ಕರ್ನಾಟಕದ ಪ್ರತಿಷ್ಠಿತ ವ್ಯಕ್ತಿಗಳಾಗುವಂತಹವರಿಗೆ ಮಾರ್ಗದರ್ಶನ ಮಾಡುವಂತಹ ಸ್ಥಾನವನ್ನು ತಮ್ಮ ವ್ಯಕ್ತಿತ್ವದ ಹಿರಿಮೆಯಿಂದ ಸಾಧಿಸಿದರು. ಇದಕ್ಕೆ ನಿದರ್ಶನವಾಗಿ ಒಂದು ವಿಷಯವನ್ನು ಪ್ರಸ್ತಾಪಿಸಬಹುದೆಂದು ಕಾಣುತ್ತದೆ. ಅಬ್ಕಾರಿ ಕೆಲಸದ ಜಾಡನ್ನೇ ಹಿಡಿದು ಅರಸೀಕೆರೆಗೆ ಬಂದವರು ಶ್ರೀ ಕೆ. ವೆಂಕಟಸ್ವಾಮಿಯವರು. ಇವರಿಗೆ ಅಬ್ಕಾರಿ ಮನೆತನದ ಕಸುಬಾಗಿದ್ದಿತು. ಇವರಿಗೆ ಚೌಡಯ್ಯನವರು ಸಮಯೋಜಿತ ಸಲಹೆಗಳನ್ನು ಕೊಡುತ್ತ ಪ್ರೊತ್ಸಾಹ ಕೊಟ್ಟರು. ವೆಂಕಟಸ್ವಾಮಿಯವರು ಪರಿಶ್ರಮದಿಂದ ಬೆಳೆದದ್ದು ಮಾತ್ರವಲ್ಲ ಇಂದು ಕರ್ನಾಟಕದ ಹೆಸರಾಂತ ಪತ್ರಿಕೆಯಾದ ಪ್ರಜಾವಾಣಿಯ ಸ್ಥಾಪಕರಲ್ಲಿ ಒಬ್ಬರಾದರು. ವೆಂಕಟಸ್ವಾಮಿಯವರು ಬರೆದಿರುವ ‘ನನ್ನ ಕಥೆ’ ಎಂಬ ಅವರ ಆತ್ಮ ಕತೆಯಲ್ಲಿ ಚೌಡಯ್ಯನವರ ಸಮಯೋಚಿತ ಸಲಹೆ, ಮಾರ್ಗದರ್ಶನಗಳನ್ನು ವಿಶೇಷವಾಗಿ ಸ್ಮರಿಸಿದ್ದಾರೆ.

 ಚೌಡಯ್ಯನವರು ಅಂದಿನ ಸಮಾಜದಲ್ಲಿ ಒಂದು ಗಣ್ಯಸ್ಥಾನವನ್ನು ಗಳಿಸಿಕೊಂಡ ಮೇಲೆ ಅನೇಕ ದಾನಧರ್ಮ, ಜನಹಿತ ಕಾರ್ಯಗಳಲ್ಲಿ ನಿರತರಾದರು. ತಮಗಾಗಿ ಕೆಲಸ ಮಾಡುತ್ತಿದ್ದ ಜನರ ಕಷ್ಟ ಕಾಲದಲ್ಲಿ ಸಾಲ ಕೊಡುವುದು ಇತ್ಯಾದಿ ಮಾಡುತ್ತಿದ್ದರು. ಚೌಡಯ್ಯನವರು ಮತ್ತು ಸಾಲದ ಬಗ್ಗೆ ಒಂದು ರೋಚಕ ಸಂಗತಿ. ಒಮ್ಮೆ ನಾನು ಅರಸೀಕೆರೆಯ ನಮ್ಮ ಮನೆಯಲ್ಲಿ ಚಿಕ್ಕ ಹುಡುಗಿಯ ಕುತೂಹಲಕ್ಕೆ ತಕ್ಕಂತೆ ಹಳೆಯ ಕಾಲದ ಬೀರು, ಪೆಟ್ಟಿಗೆಗಳ ಅಜಮಾಯಿಶಿ ನಡೆಸುತ್ತಿದ್ದೆ. ಬೀಗ ಹಾಕದ ಒಂದು ದೊಡ್ಡ ಟ್ರಂಕಿನೊಳಗೆ ಏನೋ ಇರಬಹುದೆಂದು ಟ್ರಂಕಿನ ಮುಚ್ಚಳ ತೆರೆದೆ. ಅಲ್ಲಿದ್ದುದೇನು? ಯಾವುದೋ ಹಳೆ ಜಮಾನದ ಕೆಂಚು ಬಣ್ಣ ಹಿಡಿದ ಕಾಗದಗಳು. ಪ್ರತೀ ಕಾಗದದ ತುಂಬಾ ಏನೊ ಬರೆದಿರುತ್ತಿತ್ತು. ಮೋಡಿ ಅಕ್ಷರಗಳು, ಒಂದು ಪದವನ್ನೂ ಓದಲಾಗಲಿಲ್ಲ. ಆದರೆ ಕೆಲವು ಕಾಗದಗಳ ಮೇಲೆ ಬರೆದಿದ್ದ ‘ಮುಂದಿನ ಜನ್ಮಕ್ಕೆ!’ ಎಂಬ ಬರಹ ಸ್ಫುಟವಾಗಿತ್ತು. ನನ್ನ ಅಜ್ಜಿಯವರನ್ನ ಈ ಕಾಗದಗಳ ಬಗ್ಗೆ ಪ್ರಶ್ನಿಸಿದೆ. ಚೌಡಯ್ಯನವರ ಸೊಸೆಯಾದ ನನ್ನ ಅಜ್ಜಿ, ‘‘ಅವು ನಿನ್ನ ಮುತ್ತಾತನಿಂದ ಸಾಲ ತೆಗೆದುಕೊಂಡವರಿಂದ ಬರೆಸಿಕೊಂಡ ಸಾಲ ಪತ್ರಗಳು. ಕೆಲವರು ಪಡೆದ ಸಾಲದ ಹಣವನ್ನು ತೀರಿಸುತ್ತಿದ್ದರು. ತುಂಬಾ ಬಡವರಾದ ಜನರಿಗೆ ಸಾಲ ತೀರಿಸಲು ಅಸಾಧ್ಯವಾದಾಗ ಅವರಿಂದ ಬರಬೇಕಾದ ಹಣವನ್ನು ಮನ್ನಾಮಾಡಿ ಪತ್ರದ ಮೇಲೆ ಮಾತ್ರ ‘ಮುಂದಿನ ಜನ್ಮಕ್ಕೆ!’ ಎಂದು ಬರೆದಿಡುತ್ತಿದ್ದರು ಅಂತಹದೊಂದು ಪತ್ರ ನಿನಗೆ ಸಿಕ್ಕಿದೆ’’ ಎಂದು ಹೇಳಿದಾಗ ನಾನು ಅಚ್ಚರಿಗೊಂಡೆ. ಇಂತಹ ವರ್ಣರಂಚಿತ ವ್ಯಕ್ತಿತ್ವದ ಚೌಡಯ್ಯನವರು ಅಂದಿನ ಪ್ರಸಿದ್ಧ ಸಂಗೀತ ವಿದ್ವಾಂಸರಾಗಿದ್ದ ಬಿಡಾರಂ ಕೃಷ್ಟಪ್ಪನವರ ಪರಮ ಸ್ನೇಹಿತರೂ, ಶಿಷ್ಯರೂ ಆಗಿದ್ದರು. ಮುತ್ತಾತ ಚೌಡಯ್ಯನವರು ಹಾಗೂ ನನ್ನ ತಂದೆಯವರು ಬಿಡಾರಂ ಕೃಷ್ಣಪ್ಪನವರಿಂದ ಸಂಗೀತ ಕಲಿತದ್ದೇ ಒಂದು ಕುತೂಹಲಕರ ವಿಷಯ. ಕೃಷ್ಣಪ್ಪನವರು ಮೈಸೂರಿ ನಲ್ಲಿ ರಾಮಮಂದಿರ ಕಟ್ಟಿದಾಗ ಚೌಡಯ್ಯನವರದ್ದೇ ಅತ್ಯಂತ ಹೆಚ್ಚಿನ ದೇಣಿಗೆ.

ಹೀಗಿದ್ದ ಚೌಡಯ್ಯನವರು ಯಾವುದೋ ಒಂದು ತುಡಿತಕ್ಕೆ ಒಳಗಾಗಿ ಅಂದಿನ ಸಮಾಜದಲ್ಲಿ ಊಹಿಸಲಾಗದ, ವಾನವೀಯ ಸಮಾನತೆಯನ್ನು ಸಾರುವ ಒಂದು ಅಪೂರ್ವ ಕಾರ್ಯವನ್ನು ಎಸಗಿದರು. ಅದೇ ಅರಸೀಕೆರೆಯಲ್ಲಿ ಪಂಚಮ ಮಕ್ಕಳಿಗಾಗಿ ಅವರು ಕಟ್ಟಿಸಿದ ಕನ್ನಡ ಪ್ರೈಮರಿ ಶಾಲೆ.

 1916ರಲ್ಲಿ ಪ್ರಾರಂಭಗೊಂಡ ಈ ಕನ್ನಡ ಪಂಚಮ ಶಾಲೆಗೆ ಇಂದು 102 ವರ್ಷಗಳು ತುಂಬಿವೆ. ಶತಮಾನದ ಹಿಂದೆ ನಡೆದ ಈ ಶಾಲೆಯ ಪ್ರಾರಂಭೋತ್ಸವವೂ ಸಹ ಅತಿಶಯವಾದುದ್ದು. ಅಂದಿನ ಪ್ರಖ್ಯಾತ ದಿವಾನರೂ ಇಂಜಿನಿಯರ್ ಆಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು ಪಂಚಮ ಶಾಲೆಯನ್ನು ಉದ್ಘಾಟಿಸಿದರು. ಉದ್ಘಾಟನೆ ಟೇಪು ಕತ್ತರಿಸಿದಂತೆ ಅಲ್ಲ. ಶಾಲೆಯ ಬಾಗಿಲಿಗೆ ಬೆಳ್ಳಿಯ ಬೀಗ ಹಾಕಿತ್ತು! ಸರ್.ಎಂ.ವಿ.ಯವರು ಬಂಗಾರದ ಬೀಗದ ಕೈಯಿಂದ ಬೆಳ್ಳಿ ಬೀಗವನ್ನು ತೆರೆಯುವುದರೊಂದಿಗೆ ಶಾಲೆಯ ಉದ್ಘಾಟನೆ ಆಯಿತು. ಇಂತಹ ವಿನೂತನ ಪ್ರಾರಂಭೋತ್ಸವವನ್ನು ಯೋಜಿಸಿದ್ದ ಚೌಡಯ್ಯನವರನ್ನು ಸರ್.ಎಂ.ವಿಯವರು ಕುತೂಹಲದಿಂದ ‘‘ಚೌಡಯ್ಯನವರೇ, ನಿಮಗೆ ಈ ಪಂಚಮ ಮಕ್ಕಳಿಗಾಗಿ ಶಾಲೆ ತೆರೆಯುವ ಮನಸ್ಸು ಹೇಗೆ ಉಂಟಾಯಿತು’’ ಎಂದು ಕೇಳಿದರು. ಆಗ ಚೌಡಯ್ಯನವರು ‘‘ಮಹಾಸ್ವಾಮಿ ನಮಗೆಲ್ಲಾ ಅಷ್ಟೋ ಇಷ್ಟೋ ಓದು ಬರಹ ಗೊತ್ತಿದೆ. ಈ ಮಕ್ಕಳಿಗೆ ಅಕ್ಷರ ಜ್ಞಾನ ಬೇಡವೇ? ಇವರೂ ಸಹ ವಿದ್ಯೆ ಕಲಿತು ಬುದ್ಧಿವಂತರಾಗಲಿ ಎಂದು ನನ್ನ ಮನಸ್ಸು ಹೀಗೆ ಹೇಳಿತು. ಅದರಂತೆ ನಾನು ಮಾಡಿದೆ. ನಾನು ಪಡೆದದ್ದನ್ನು ಕೊಂಚವಾದರೂ ಹಿಂದಿರುಗಿಸೋಣ ಎಂದು ಅನ್ನಿಸಿ ಹೀಗೆ ಮಾಡಿದೆ’’ ಎಂದು ಹೇಳಿದರು.

ನೂರ ಎರಡು ವರ್ಷಗಳ ಹಿಂದೆ ಪಂಚಮರಿಗಾಗಿ ಮಿಡಿದ ಚೌಡಯ್ಯನವರು ಕಟ್ಟಿಸಿದ ಶಾಲೆಯ ಮುಖ್ಯದ್ವಾರದಲ್ಲಿ ‘‘ಪಂಚಮ ಸ್ಕೂಲ್ ಗಿಫ್ಟ್ ಬೈ ಎಂ.ಚೌಡಯ್ಯ’’ ಎಂಬ ಸುವರ್ಣಾಕ್ಷರ ಫಲಕ 102 ವರ್ಷಗಳ ಚಳಿ ಮಳೆ ಲೆಕ್ಕಿಸದೆ ವಿರಾಜಮಾನವಾಗಿದೆ. ಇಂದು ಈ ಶಾಲೆ ಸರಕಾರಿ ಕನ್ನಡ ಶಾಲೆಯಾಗಿ ಅರಸೀಕೆರೆಯ ಹೆದ್ದಾರಿ ಬಿ.ಎಚ್. ರಸ್ತೆಯಲ್ಲಿದ್ದು ಮಕ್ಕಳಿಂದ ತುಂಬಿದೆ. ಚೌಡಯ್ಯನವರಿಂದ ಕೊಡಲ್ಪಟ್ಟ ‘ಪಂಚಮ ಸ್ಕೂಲ್’ ಇಂದಿಗೆ ನೂರು ವರ್ಷಗಳನ್ನು ಜಯಪ್ರದವಾಗಿ ಕಂಡಿರುವುದಕ್ಕೆ ಕಾರಣ ಅರಸೀಕೆರೆಯ ಮಹಾಜನತೆ ಈ ಕನ್ನಡ ಶಾಲೆಗೆ ನಿರಂತರವಾಗಿ ಮಕ್ಕಳನ್ನು ಕಳುಹಿಸುತ್ತಿರುವುದು ಹಾಗೂ ಸಂಬಂಧಪಟ್ಟವರ ಕಾಳಜಿ. ಈ ಎಲ್ಲ ಅಂಶಗಳು ಊಹಿಸಲಾಗದ ಕಾಲಘಟ್ಟದಲ್ಲಿ ಪಂಚಮ ಮಕ್ಕಳಿಗಾಗಿ ಪ್ರಾರಂಭಿಸಿದ ಈ ಶಾಲೆಯ ಶತಮಾನೋತ್ಸವಕ್ಕೆ ಬಹುಮುಖ್ಯ ಕಾರಣ ಎಂದೆನಿಸುತ್ತದೆ.

Writer - ಪದ್ಮಾ ಶ್ರೀರಾಮ

contributor

Editor - ಪದ್ಮಾ ಶ್ರೀರಾಮ

contributor

Similar News