ಡಿಜಿಟಲ್ ಕನ್ನಡ ಕಲಿಕೆ ಮತ್ತು ಬಳಕೆ ಕಬ್ಬಿಣದ ಕಡಲೆಯೇ?

Update: 2018-03-03 13:37 GMT

‘‘ಅಂತರ್ಜಾಲದಲ್ಲಿ ಕನ್ನಡಕ್ಕೆ ಯೂನಿಕೋಡ್ ಎಂಬ ಕ್ಯೂ ಬೇಕಿಲ್ಲ’’ ಎಂಬ ಲೇಖನ ಕನ್ನಡದ ಪ್ರಮುಖ ದಿನಪತ್ರಿಕೆಯಲ್ಲಿ ಓದಿ ಅಚ್ಚರಿಯಾಯಿತು. ಲೇಖನದ ಕುರಿತು ಫೇಸ್‌ಬುಕ್ ಕಮೆಂಟುಗಳನ್ನು ಗಮನಿಸುವುದು ಅಗತ್ಯ. ‘‘ಕನ್ನಡ ಭಾಷೆ ಬೆಳವಣಿಗೆಗೆ ಯುನಿಕೋಡ್ ಅಡ್ಡಿ’’ ಎಂದು ಈ ಲೇಖನವು ತಿಳಿಸುತ್ತದೆ. ಕನ್ನಡದ್ದಷ್ಟೇ ಅಲ್ಲ, ವಿಶ್ವದ ಎಲ್ಲ ಆಂಗ್ಲಯೇತರ ಭಾಷೆಗಳೂ ಅದಕ್ಕೆ ಸಮಾನವಾಗಿ ಬೆಳೆಯಬೇಕೆಂದೇ ಯುನಿಕೋಡ್‌ನ್ನು ರೂಪಿಸಿದ್ದು ಎಂಬ ನನ್ನ ಅಲ್ಪ ತಿಳಿವಳಿಕೆಯನ್ನೇ ಈ ಲೇಖನವು ಉಲ್ಲಟಪಲ್ಲಟಗೊಳಿಸಿದೆ! ಕನ್ನಡದ ಪ್ರಮುಖ ಪತ್ರಿಕೆಯಲ್ಲಿ ಈ ಲೇಖನವು ಬಂದಿರುವುದರಿಂದ ಬಲ್ಲವರು ಇದರ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಬಹುದು... ಎಂದು ಕನ್ನಡ ತಂತ್ರಜ್ಞಾನಾಸಕ್ತ ಪತ್ರಕರ್ತ ಶ್ರೀ ಬೇಳೂರು ಸುದರ್ಶನ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದರು. ಪ್ರತಿಕ್ರಿಯಿಸಿದ ಶ್ರೀವತ್ಸ ಜೋಶಿಯವರು: ‘‘ಕಂಪ್ಯೂಟರ್‌ನಲ್ಲಿ, ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಲಿಪಿಗಳ ಸದ್ಯದ ತೊಂದರೆ, ಅವುಗಳಿಂದ ಈ ಲೇಖಕನಿಗಾಗಿರುವ ಹತಾಶೆ ಅರ್ಥವಾಗುವಂಥದ್ದೇ. ಅದನ್ನು ತೋಡಿಕೊಳ್ಳಬೇಕೆಂದು ಬರೆಯಲು ಹೊರಟಿದ್ದಿರಬಹುದು. ಆದರೆ, ಅಂಥ ತೊಂದರೆಗಳನ್ನು ನಿವಾರಿಸುವ ದೃಷ್ಟಿಯಿಂದಲೇ ಅಭಿವೃದ್ಧಿಯಾಗಿರುವ ಯೂನಿಕೋಡ್ ಬೇಕಾಗಿಲ್ಲ ಎಂದರೆ ಈ ಲೇಖಕನ ಗೊಂದಲ ದ್ವಿಗುಣವಾಗುತ್ತದೆ. ಅಧ್ಯಯನ ಮಾಡದೆ, ಬಾಲಿಶ ರೀತಿಯಲ್ಲಿ ಬರೆದಿರುವ ಲೇಖನವಿದು.’’ ಎಂದಿದ್ದಾರೆ. ಕನ್ನಡ ತಂತ್ರಾಂಶ ತಜ್ಞ ಡಾ.ಯು.ಬಿ.ಪವನಜ : ‘‘ಈ ಲೇಖನ ಬರೆದವರಿಗೆ ನುಡಿ ಎಂಬ ತಂತ್ರಾಂಶಕ್ಕೂ ಯುನಿಕೋಡ್ ಎಂಬ ಶಿಷ್ಟತೆಗೂ ಇರುವ ವ್ಯತ್ಯಾಸವೇ ಗೊತ್ತಿಲ್ಲ. ಒಂದು ವಿಷಯದ ಬಗ್ಗೆ ಲೇಖನ ಬರೆಯುವಾಗ ಅದರ ಬಗ್ಗೆ ಸ್ವಲ್ಪ ಸಂಶೋಧನೆ ಮಾಡಬೇಕು ಎಂಬ ಪ್ರಜ್ಞೆಯೇ ಇಲ್ಲ ಎಂಬುದು ವೇದ್ಯವಾಗುತ್ತದೆ. ಪತ್ರಿಕೆಯ ಸಂಪಾದಕರು ಯಾಕೆ ಇಂತಹ ಅರೆಬೆಂದ ಲೇಖನಗಳನ್ನು ಪ್ರಕಟಿಸುತ್ತಾರೆ?’’ ಎಂದಿದ್ದಾರೆ.

ವಿಷಯ ತಜ್ಞತೆ ಇರದವರು ಲೇಖನ ಬರೆಯಹೊರಟರೆ ಆಗುವ ಪರಿಣಾಮಗಳಿಗೆ ಉಲ್ಲೇಖಿತ ಲೇಖನವು ಉತ್ತಮ ಉದಾಹರಣೆ. ಪತ್ರಿಕೆಯ ಸಂಪಾದಕರಿಗೂ ಎಲ್ಲವೂ ತಿಳಿದಿರಲೇಬೇಕೆಂದಿಲ್ಲವಲ್ಲ. ಡಿಜಿಟಲ್ ಲೋಕದಲ್ಲಿ ಇಂಗ್ಲಿಷೇತರ ಭಾಷೆಗಳನ್ನು ಜಾಗತಿಕ ಮಟ್ಟದಲ್ಲಿ ಸಮರ್ಥವಾಗಿ ಅಳವಡಿಸಿ ಬಳಸುವಂತಾಗಬೇಕು ಎನ್ನುವ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ ಯೂನಿಕೋಡ್ ಶಿಷ್ಟತೆಯನ್ನು ರೂಪಿಸಲಾಗಿದೆ. ಶಿಷ್ಟತೆಯಲ್ಲಿ ಲೋಪದೋಷಗಳಿದ್ದರೆ ಅದನ್ನು ಸರಿಪಡಿಸುವುದು ತಜ್ಞರ ಹೊಣೆಗಾರಿಕೆ. ಆದರೆ, ಇಂತಹ ಶಿಷ್ಟತೆ ಕನ್ನಡಕ್ಕೆ ಅಗತ್ಯವೇ ಇಲ್ಲ ಎನ್ನುವುದು ಸರಿಯಲ್ಲ. ಇಂದು ಸ್ಮಾರ್ಟ್ ಫೋನುಗಳಲ್ಲಿ ಕನ್ನಡದ ಲಿಪಿಗಳ ಬಳಕೆ ಆರಂಭಗೊಂಡಿರುವುದೇ ಈ ಯೂನಿಕೋಡ್ ಶಿಷ್ಟತೆಯ ಅಳವಡಿಕೆಯಿಂದ. ಈ ಹಿನ್ನೆಲೆಯಲ್ಲಿ ‘ಡಿಜಿಟಲ್ ಕನ್ನಡ’ ಅಂಕಣದ ಉದ್ದೇಶವನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವುದು ಅಗತ್ಯವಿದೆ. ‘‘ಜನಸಾಮಾನ್ಯರ ನಿತ್ಯಜೀವನದಲ್ಲಿ ಸ್ಮಾರ್ಟ್ ಫೋನ್ ಎಂಬ ಪುಟ್ಟ ಗ್ಯಾಜೆಟ್ ತನ್ನ ಇಡೀ ಜಗತ್ತಿನ ‘ವಿಶ್ವರೂಪದರ್ಶನ’ವನ್ನೇ ಮಾಡಿಸಿದೆ. ತಂತ್ರಜ್ಞಾನ ಸೀಮಿತ ಸೌಲಭ್ಯಗಳ ಕಾರಣ ಇಲೆಕ್ಟ್ರಾನಿಕ್ ಸಾಧನಗಳಲ್ಲಿ ಭಾಷೆಗಳ ಲಿಪಿಯನ್ನು ಬಳಸುವುದು ಕಷ್ಟಕರ ಎಂಬ ಅಭಿಪ್ರಾಯಗಳು ಇತ್ತು. ಇಂದಿನ ಆಧುನಿಕ ತಂತ್ರಜ್ಞಾನದ ಸಂದರ್ಭದಲ್ಲಿ ಕಂಪ್ಯೂಟರ್, ಸ್ಮಾರ್ಟ್‌ಫೋನು, ಐ-ಪ್ಯಾಡ್ ಇತ್ಯಾದಿ ಇಲೆಕ್ಟ್ರಾನಿಕ್ ಸಾಧನಗಳಲ್ಲಿ ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವುದು ಇಂದು ಒಂದು ಸವಾಲಾಗಿ ಉಳಿದಿಲ್ಲ. ಇಂಗ್ಲಿಷ್‌ನಷ್ಟೇ ಸಮರ್ಥವಾಗಿ ಇಂದು ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳನ್ನು ಸುಲಭವಾಗಿ ಬಳಸಬಹುದು. ಅಷ್ಟರಮಟ್ಟಿಗೆ ತಂತ್ರಜ್ಞಾನ ಸೌಲಭ್ಯಗಳಿವೆ. ಆದರೆ, ಈ ಕುರಿತು ಹೆಚ್ಚಿನವರಿಗೆ ಮಾಹಿತಿಯಿಲ್ಲ. ಗ್ಯಾಜೆಟ್‌ಗಳ ಭಾಷೆ ಕೇವಲ ಇಂಗ್ಲಿಷ್ ಎಂಬುದು ನಮ್ಮ ಭ್ರಮೆಯಾಗಿದೆ. ಲಭ್ಯವಿರುವ ಸೌಕರ್ಯಗಳು ಏನೇನು, ಅವನ್ನು ಹೇಗೆ ಅಳವಡಿಸಿಕೊಳ್ಳುವುದು, ಬಳಸುವುದು ಹೇಗೆ, ಸಮಸ್ಯೆಗಳಿದ್ದರೆ ಸರಿಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದು ಕಲಿಯುವುದೇ ‘ಡಿಜಿಟಲ್ ಕನ್ನಡ’ ಕಲಿಕೆ

ಕಲಿಕೆ ಕ್ರಮಬದ್ಧವಾಗಿದ್ದರೆ ಕನ್ನಡ ಬಳಕೆಯೂ ಸಹ ಸುಲಭವಾಗುತ್ತದೆ. ಆದರೆ, ಮಾಹಿತಿಯ ಕೊರತೆ ಇದ್ದಾಗ, ಅಥವಾ ಮಾಹಿತಿ ಹುಡುಕಾಟದ ಕನಿಷ್ಠ ಪ್ರಯತ್ನವನ್ನೂ ಮಾಡದಿದ್ದಾಗ ಡಿಜಿಟಲ್ ಕನ್ನಡದ ಕಲಿಕೆ ಮತ್ತು ಬಳಕೆ ಕಬ್ಬಿಣದ ಕಡಲೆ ಎನಿಸುತ್ತದೆ. ಕನ್ನಡಕ್ಕೆ ತಂತ್ರಜ್ಞಾನದ ಬಳಕೆಯ ಪ್ರಚಾರ ಮತ್ತು ಪ್ರಸಾರ ಹೆಚ್ಚಬೇಕೆಂಬ ಉದ್ದೇಶದಿಂದ ಡಿಜಿಟಲ್ ಗ್ಯಾಜೆಟ್‌ಗಳಲ್ಲಿ ಕನ್ನಡದ ಸಮರ್ಥ ಅಳವಡಿಕೆಯ ಕುರಿತಾಗಿ ಸಮಗ್ರ ಮಾಹಿತಿಯನ್ನು ಈ ‘ಡಿಜಿಟಲ್ ಕನ್ನಡ’ ಅಂಕಣದಲ್ಲಿ ನೀಡಲಾಗುತ್ತಿದೆ.

ಕನ್ನಡ ತಂತ್ರಜ್ಞಾನ ಕುರಿತ ಪ್ರಮುಖ ಬರಹಗಾರ ಶ್ರೀ ಟಿ.ಜಿ.ಶ್ರೀನಿಧಿ ಹೀಗೆ ಹೇಳುತ್ತಾರೆ : ‘‘ಮಾಹಿತಿ ತಂತ್ರಜ್ಞಾನ ಎಂದಕೂಡಲೇ, ಅದರಿಂದ ನಮ್ಮ ಭಾಷೆಗೆ ತೊಂದರೆಯಾಗಿದೆ ಅಥವಾ ಆಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಇದು ಕೊಂಚಮಟ್ಟಿಗೆ ನಿಜವೂ ಹೌದು. ಪ್ರಪಂಚದಲ್ಲಿರುವ ಸಾವಿರಾರು ಭಾಷೆಗಳ ಬಳಕೆ ಕಡಿಮೆಯಾಗುತ್ತಿದೆ. ಅಂತಹ ಭಾಷೆಗಳಿಗೆ ಶಿಕ್ಷಣ ವ್ಯವಸ್ಥೆಯಲ್ಲ್ಲಿ ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲೂ ಪ್ರಾಮುಖ್ಯ ದೊರಕದಿದ್ದರೆ ಅವುಗಳ ಬಳಕೆ ಇನ್ನಷ್ಟು ಕಡಿಮೆಯಾಗುವುದು, ಬೆಳವಣಿಗೆ ಕುಂಠಿತವಾಗುವುದು ಸಹಜವೇ ಹೌದು. ಇಂದಿನ ಬದುಕಿನಲ್ಲಿ ಮಾಹಿತಿ ತಂತ್ರಜ್ಞಾನದ ಪಾತ್ರ ಮಹತ್ವದ್ದು. ಬೆಳಗಿನಿಂದ ರಾತ್ರಿಯವರೆಗೆ ಒಂದಲ್ಲ ಒಂದು ರೂಪದಲ್ಲಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ನಾವೆಲ್ಲ ಬಳಸುತ್ತಲೇ ಇರುತ್ತೇವೆ. ಈ ವ್ಯವಹಾರವನ್ನೆಲ್ಲ ನಮ್ಮ ಭಾಷೆಯಲ್ಲೇ ನಡೆಸುವಂತಾದರೆ ಭಾಷೆ-ತಂತ್ರಜ್ಞಾನಗಳೆರಡರ ವ್ಯಾಪ್ತಿಯೂ ಹೆಚ್ಚುತ್ತದೆ, ಎರಡೂ ಪರಸ್ಪರ ಪೂರಕವಾಗಿ ಬೆಳೆಯುತ್ತವೆ. ತಂತ್ರಜ್ಞಾನದ ಇತ್ತೀಚಿನ ಸವಲತ್ತುಗಳೆಲ್ಲ ನಮ್ಮ ಭಾಷೆಯಲ್ಲೂ ದೊರಕುವಂತೆ ಆಗುವವರೆಗೆ ಬಳಕೆದಾರರಾದ ನಾವು ಮಾಡಬೇಕಾದ ಕೆಲಸಗಳೂ ಬೇಕಾದಷ್ಟಿವೆ. ಈಗಾಗಲೇ ಲಭ್ಯವಿರುವ ಸವಲತ್ತುಗಳ ಬಗ್ಗೆ ತಿಳಿದುಕೊಳ್ಳುವುದು, ಆ ಸವಲತ್ತುಗಳನ್ನು ಬಳಸುವುದು ಹಾಗೂ ಅವನ್ನು ನಮ್ಮ ಆಪ್ತರಿಗೆ ಪರಿಚಯಿಸುವುದು ಇಂತಹ ಕೆಲಸಗಳ ಪೈಕಿ ಪ್ರಮುಖವಾದದ್ದು. ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವ ಪುಸ್ತಕ, ಪತ್ರಿಕೆ ಹಾಗೂ ಜಾಲತಾಣಗಳನ್ನು ಪ್ರೋತ್ಸಾಹಿಸುವುದು ಇಲ್ಲಿ ನಾವು ಮಾಡಬಹುದಾದ ಇನ್ನೊಂದು ಕೆಲಸ. ಅಗತ್ಯ ತಾಂತ್ರಿಕ ಜ್ಞಾನವಿರುವವರು ಹೊಸ ಸವಲತ್ತುಗಳನ್ನು ರೂಪಿಸುವ, ಲಭ್ಯ ಸವಲತ್ತುಗಳನ್ನು ಕನ್ನಡೀಕರಿಸುವ ಅಥವಾ ಕನಿಷ್ಠಪಕ್ಷ ತಮ್ಮ ಜ್ಞಾನವನ್ನು ಇತರರೊಡನೆ ಅವರ ಭಾಷೆಯಲ್ಲೇ ಹಂಚಿಕೊಳ್ಳುವ ಪ್ರಯತ್ನವನ್ನೂ ಮಾಡಬಹುದು’’

ಬೆಂಗಳೂರಿನ ಸುರಾನಾ ಕಾಲೇಜು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬೆಳವಣಿಗೆ ಕುರಿತಾಗಿ ವಿಷಯತಜ್ಞರಿಂದ ಪರಿಚಯಾತ್ಮಕ ಕಾರ್ಯಾಗಾರಗಳನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಈ ಕಾರ್ಯಾಗಾರಗಳು ಇತರ ಕಾಲೇಜುಗಳಿಗೆ ಮಾದರಿ ಎನಿಸುವ ರೀತಿಯಲ್ಲಿವೆ. ಈ ಅಂಕಣಕಾರ ಸೇರಿದಂತೆ ಹಲವು ಲೇಖಕರು ರಚಿಸಿರುವ ‘‘ಕಂಪ್ಯೂಟರ್ ಮತ್ತು ಕನ್ನಡ’’ ಪುಸ್ತಕವು ಕಂಪ್ಯೂಟರಿನಲ್ಲಿ ಕನ್ನಡವನ್ನು ಅಳವಡಿಸಿ ಬಳಸುವ ವಿಧಿವಿಧಾನಗಳನ್ನು ವಿವರಿಸುವ ಸಂಕ್ಷಿಪ್ತ ಕೈಪಿಡಿಯಾಗಿದೆ. ಸುರಾನ ಕಾಲೇಜಿನ ವತಿಯಿಂದ ಪದವಿ ವಿದ್ಯಾರ್ಥಿಗಳಿಗಾಗಿಯೇ ಇದನ್ನು ಪ್ರಕಟಿಸಲಾಗಿದೆ. ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳ ತಂತ್ರಜ್ಞಾನಗಳು ಉದ್ಯೋಗದ ಕ್ಷೇತ್ರದಲ್ಲಿ ಹೇಗೆ ಹೊಸಹೊಸ ಅವಕಾಶವನ್ನು ತೆರೆದಿಟ್ಟಿವೆ ಎಂಬುದನ್ನು ಈ ಸಾಲಿನ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ವಿಷದೀಕರಿಸಲಾಯಿತು. ಇದಕ್ಕೆ ಪೂರಕ ಮಾಹಿತಿ ನೀಡುವ ‘ನುಡಿಯ ನಾಳೆಗಳು’ ಎಂಬ ಶ್ರೀ ಟಿ.ಜಿ.ಶ್ರೀನಿಧಿ ವಿರಚಿತ ಕಿರುಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಕನ್ನಡ ಭಾಷೆಯಲ್ಲೂ ಬಳಸಬಹುದಾದ ತಂತ್ರಜ್ಞಾನದ ಸವಲತ್ತುಗಳು ಹಾಗೂ ಅವು ನಮ್ಮೆದುರು ತೆರೆದಿಟ್ಟಿರುವ ಹೊಸ ಸಾಧ್ಯತೆಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಈ ಪುಸ್ತಕಕ್ಕೆ ‘ನಮ್ಮ ಭಾಷೆ ಮತ್ತು ತಂತ್ರಜ್ಞಾನ’ ಎಂಬ ಉಪಶೀರ್ಷಿಕೆಯಿದೆ. ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‌ಗಳಲ್ಲಿ ಕನ್ನಡ ಭಾಷಾ ಬಳಕೆ, ಕನ್ನಡ ತಂತ್ರಜ್ಞಾನವೆಂದರೆ ಕೇವಲ ಟೈಪಿಂಗ್ ಮಾತ್ರವಲ್ಲ ಎಂಬ ಆಸಕ್ತಿಕರ ವಿಷಯಗಳ ಕುರಿತು ಸರಳವಾದ ಭಾಷೆಯಲ್ಲಿ ವಿದ್ಯಾರ್ಥಿಗಳ ಗಮನವನ್ನು ಸೆಳೆಯಲಾಗಿದೆ. ಕನ್ನಡದಲ್ಲಿಯೇ ಪ್ರೋಗ್ರಾಮಿಂಗ್ ಮಾಡಬಹುದಾದ ತಂತ್ರಾಂಶಗಳು, ಕನ್ನಡದ ಮಾತುಗಳನ್ನು ಅಕ್ಷರಗಳನ್ನಾಗಿಸುವ ತಂತ್ರಾಂಶ, ಕನ್ನಡ ಪಠ್ಯವನ್ನು ಓದಿ ಹೇಳುವ ತಂತ್ರಜ್ಞಾನ ಇವುಗಳ ಕುರಿತಾಗಿಯೂ ಲೇಖನಗಳಿವೆ. ತಂತ್ರಜ್ಞಾನದಲ್ಲಿ ಕನ್ನಡದ ಕುರಿತಾಗಿ ವಿದ್ಯಾರ್ಥಿಗಳು ಮಾಡಬಹುದಾದ ಕೆಲಸಗಳತ್ತ ಪುಸ್ತಕದಲ್ಲಿ ಗಮನಸೆಳೆಯಲಾಗಿದೆ. ಈ ಪುಸ್ತಕಗಳನ್ನು ಇ-ಜ್ಞಾನ ಡಾಟ್ ಕಾಂ. (http://www.ejnana.com) ಜಾಲತಾಣದ ಆನ್‌ಲೈನ್ ಖರೀದಿಯ ಮೂಲಕ ಪಡೆದುಕೊಳ್ಳಬಹುದು.

Writer - ಡಾ. ಎ. ಸತ್ಯನಾರಾಯಣ

contributor

Editor - ಡಾ. ಎ. ಸತ್ಯನಾರಾಯಣ

contributor

Similar News