ಪ್ರಧಾನಿ ಮೋದಿಗೆ ಜ್ಞಾನದ ಕೊರತೆ ಇದೆ: ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್

Update: 2018-03-03 15:33 GMT

ಮೈಸೂರು,ಮಾ.3: ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅತ್ಯಂತ ಲಘುವಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಜ್ಞಾನದ ಕೊರತೆ ಇದೆ ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಬಿಜೆಪಿ ಮಂದಿ ಮಾತನಾಡೋದು ಆತಂಕ ತಂದಿದೆ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಬಸ್ ಸ್ಟಾಂಡ್ ಗಳಲ್ಲಿ ಮಾತನಾಡುವ ರೀತಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಮಾನ ಮರ್ಯಾದೆ ಇಲ್ಲ. ಅವರು ಹಲ್ಲೆಗೊಳಗಾದ ವಿದ್ವತ್ ನನ್ನು ಬಿಜೆಪಿ ಕಾರ್ಯಕರ್ತ ಎಂದು ಹೇಳುತ್ತಾರೆ. ಇವರಿಗೆ ನಾಚಿಕೆಯಾಗಬೇಕು. ಇಂತಹ ಕಚಡಾ ಕೆಲಸ ಮಾಡಬಾರದು ಎಂದು ಹರಿಹಾಯ್ದರು.

ನರೇಂದ್ರ ಮೋದಿ ಮಾತಿನಿಂದ ಅವರ ನೈಜತೆ ಬಯಲಾಗಿದೆ. ನರೇಂದ್ರ ಮೋದಿ ಅವರಿಗೆ ಜ್ಞಾನ ತೀರ ಕಡಿಮೆಯಾಗಿದೆ. ಚರಿತ್ರೆಯ ಜ್ಞಾನ ಕಡಿಮೆ ಇದೆ. ತಾಂತ್ರಿಕ ವಿಚಾರದಲ್ಲಿ ಚರ್ಚೆ ಮಾಡಲು ಮೋದಿ ಅಸಮರ್ಥರಾಗಿದ್ದಾರೆ ಎಂದ ಅವರು, ಸಂಸತ್ ನಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆ ವೇಳೆ ಮೋದಿ ನುಣುಚಿಕೊಂಡರು. ಜವಹರಲಾಲ್ ನೆಹರು 20 ನೇ ಶತಮಾನದ ದೊಡ್ಡ ವ್ಯಕ್ತಿತ್ವ. ಅವರ ಕುರಿತು ವಿಮರ್ಶೆ ಮಾಡಲು ಪ್ರಧಾನಿ ಸೂಕ್ತ ವ್ಯಕ್ತಿ ಅಲ್ಲ ಎಂದು ಟೀಕಿಸಿದರು.

ಖರ್ಗೆ ಮೇಲೆ ದಾಳಿ ಮಾಡಿ ಲಘುವಾಗಿ ಮಾತನಾಡಿದರು. ಕರ್ನಾಟಕ ಸರ್ಕಾರದ ಬಗ್ಗೆ ಮೋದಿ ಮಾಫಿಯಾ ಸರ್ಕಾರ ಅಂತಾ ಹೇಳುತ್ತಾರೆ. ಮಾಫಿಯಾ ಅನ್ನೊ ಪದವನ್ನ ಮೋದಿ ಬಳಸಬಹುದೆ? ನವಾಜ್ ಶರೀಫ್ ಮಗಳ ಮದುವೆಗೆ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಗೆ ಹೇಳದೆ ಹೋಗಿದ್ದರು ಎಂದು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News