29ರಲ್ಲಿ 21 ರಾಜ್ಯಗಳಲ್ಲಿ ಬಿಜೆಪಿಯದ್ದೇ ಆಡಳಿತ: ‘ಕೈ’ ಜಾರಲಿದೆಯೇ ಮೇಘಾಲಯ ?

Update: 2018-03-03 15:34 GMT

ಹೊಸದಿಲ್ಲಿ, ಮಾ. 3: ತ್ರಿಪುರದಲ್ಲಿ ಕಳೆದ 25 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಸಿಪಿಎಂ ಅನ್ನು ಬಿಜೆಪಿ ಈ ಚುನಾವಣೆಯಲ್ಲಿ ಪರಾಭವಗೊಳಿಸಿದೆ. ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ತನ್ನ ಮಿತ್ರ ಪಕ್ಷವಾದ ಎನ್‌ಡಿಪಿಪಿಯೊಂದಿಗೆ ಸೇರಿ ಸರಕಾರ ರೂಪಿಸುವ ಸಾಧ್ಯತೆ ಇದೆ. ಇದರೊಂದಿಗೆ ದೇಶದ 29 ರಾಜ್ಯಗಳಲ್ಲಿ 21 ರಾಜ್ಯಗಳ ನಿಯಂತ್ರಣ ಬಿಜೆಪಿಯ ತೆಕ್ಕೆ ಸೇರಲಿದೆ. ಪ್ರಸ್ತುತ ಕೇವಲ ನಾಲ್ಕು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರ ಇದೆ. ಅದು ಪಂಜಾಬ್, ಕರ್ನಾಟಕ, ಮೇಘಾಲಯ ಹಾಗೂ ಮಿಝೊರಾಂ. ಆದಾಗ್ಯೂ, ಮೇಘಾಲಯದಲ್ಲಿ ಎನ್‌ಪಿಪಿ ಕಾಂಗ್ರೆಸ್ ಪ್ರಬಲ ಪ್ರತಿಸ್ಪರ್ಧಿಯಾಗಿದೆ. ಒಂದು ವೇಳೆ ಎನ್‌ಪಿಪಿ ಬಿಜೆಪಿಯನ್ನು ಬೆಂಬಲಿಸಿದರೆ ಮೇಘಾಲಯದಲ್ಲೂ ಬಿಜೆಪಿ ಅಡಳಿತ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ. ಭಾರತದಲ್ಲಿ ಇದುವರೆಗೆ ಯಾವುದೇ ಒಂದು ರಾಜಕೀಯ ಪಕ್ಷ ಕೂಡ ಇಷ್ಟೊಂದು ಸಂಖ್ಯೆಯ ರಾಜ್ಯಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿಲ್ಲ. 24 ವರ್ಷಗಳ ಹಿಂದೆ ಕಾಂಗ್ರೆಸ್ 18 ರಾಜ್ಯಗಳ ನಿಯಂತ್ರಣ ಪಡೆದುಕೊಂಡಿತ್ತು. 2014 ಮೇಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿರುವುದು ರಾಜ್ಯಗಳಲ್ಲಿ ಬಿಜೆಪಿಯ ವಿಜಯ ವಿಸ್ತರಿಸಲು ಕಾರಣವಾಯಿತು ಎನ್ನಲಾಗುತ್ತಿದೆ.

ಮತ್ತೆ ಮತ್ತೆ ಬಿಜೆಪಿಯ ಗೆಲುವು ನರೇಂದ್ರ ಮೋದಿ ಅವರ 2014 ಲೋಕಸಭೆ ಚುನಾವಣೆ ಸಂದರ್ಭದ ಘೋಷಣೆಯಾದ ‘ಕಾಂಗ್ರೆಸ್ ಮುಕ್ತ ಭಾರತ’ವನ್ನು ಮತ್ತೆ ದೃಢೀಕರಿಸಿದೆ. ಎರಡು ತಿಂಗಳ ಹಿಂದೆ ಬಿಜೆಪಿ ಗುಜರಾತ್‌ನಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಂಡಿತ್ತು ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ನಿಂದ ಅಧಿಕಾರವನ್ನು ಕಿತ್ತುಕೊಂಡಿತ್ತು.

ಮೇಘಾಲಯದಲ್ಲಿ ಕಾಂಗ್ರೆಸ್ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವ ಸಾಧ್ಯತೆ ಇರುವಂತೆ ಅಲ್ಲಿ ಸರಕಾರ ರೂಪಿಸುವ ಸಾಧ್ಯತೆ ಪರಿಶೀಲಿಸಲು ಕಾಂಗ್ರೆಸ್‌ನ ಇಬ್ಬರು ಹಿರಿಯ ನಾಯಕರು ಮೇಘಾಲಯಕ್ಕೆ ದೌಡಾಯಿಸಿದ್ದಾರೆ. ಮೇಘಾಲಯದಲ್ಲಿ ಸರಕಾರ ರೂಪಿಸಲು ಸ್ವತಂತ್ರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ನ ಹಿರಿಯ ನಾಯಕರಾದ ಅಹ್ಮದ್ ಪಟೇಲ್ ಹಾಗೂ ಕಮಲ್ ನಾಥ್ ಇಂದು ಶಿಲ್ಲಾಂಗ್‌ಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೇಘಾಲಯದಲ್ಲಿ ಪ್ರಸ್ತುತ ಕಾಂಗ್ರೆಸ್ ಆಡಳಿತ ಇದೆ. ಅದು ಇಲ್ಲಿ ಅತಿ ದೊಡ್ಡ ಏಕೈಕ ರಾಜಕೀಯ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಪಟೇಲ್ ಹಾಗೂ ನಾಥ್ ಶಿಲ್ಲಾಂಗ್‌ಗೆ ಅಪರಾಹ್ನ ತಲುಪಿದ್ದಾರೆ. ಅವರು ಅಲ್ಲಿ ನಿರ್ಗಮನ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೇರಿದಂತೆ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News