ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರ ಹೆಚ್ಚಿನ ಒತ್ತನ್ನು ನೀಡಿದೆ: ಶಾಸಕ ನರೇಂದ್ರ

Update: 2018-03-03 17:20 GMT

ಹನೂರು,ಮಾ.3 : ಹನೂರು ಕ್ಷೇತ್ರ ಧಾರ್ಮಿಕ ಕ್ಷೇತ್ರಗಳ ಪುಣ್ಯಸ್ಥಳ. ಇಲ್ಲಿ ಮಲೆಮಹದೇಶ್ವರ ದೇಗುಲ, ರಂಗನಾಥಸ್ವಾಮಿ ದೇಗುಲ, ಶಿವನಸಮುದ್ರದ ಮಾರಮ್ಮ ದೇಗುಲ, ಶಿವನ ದೇವಾಲಯದ, ಸೇರಿದಂತೆ ಇನ್ನಿತರ ಅನೇಕ ಪ್ರಸಿದ್ಧ ದೇಗುಲಗಳಿದ್ದು, ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಬೆಳೆಸುತ್ತಿದೆ. ಈ ದಿಸೆಯಲ್ಲಿ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸಿದ್ದರಾಮಯ್ಯರ ಸರ್ಕಾರ ಹೆಚ್ಚಿನ ಒತ್ತನ್ನು ನೀಡಿದೆ ಎಂದು ಶಾಸಕ ಆರ್ ನರೇಂದ್ರ ರಾಜೂಗೌಡ ತಿಳಿಸಿದರು 

ಸಮೀಪದ ಬಂಡಳ್ಳಿ ಗ್ರಾಮದಲ್ಲಿ ನವೀಕರಗೊಂಡ ಶ್ರೀ ಚೆನ್ನಿಗರಾಯಸ್ವಾಮಿ ದೇಗುಲದ ಜೀರ್ಣೋದ್ಧಾರದ ಉದ್ಘಾಟನೆಯನ್ನು ಶಾಸಕ ಆರ್. ನರೇಂದ್ರ ಶನಿವಾರ ನೆರವೇರಿಸಿದರು.

ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಕಳೆದ 600 ವರ್ಷದ ಹಿಂದೆ ಚೋಳರ ಕಾಲದಲ್ಲಿ ನಿರ್ಮಿಸಲಾಗಿದ್ದ ಶ್ರೀ ಚೆನ್ನಿಗರಾಯಸ್ವಾಮಿ ದೇಗುಲವು ತನ್ನದೇ ಆದ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ದೇಗುಲವು ಸಂಪೂರ್ಣ ಶಿಥಿಲಾವಸ್ಥೆಯ ಹಂತ ತಲುಪಿತ್ತು. ಕುಸಿದು ಬೀಳುವ ಸ್ಥಿತಿಯಿಲ್ಲಿತ್ತು. ಗ್ರಾಮಸ್ಥರು ಕಳೆದ ವರ್ಷದ ಹಿಂದೆ ದೇಗುಲವನ್ನು ನವೀಕರಣಗೊಳಿವಂತೆ ಒತ್ತಾಯಿಸಿದ್ದರು. ಈ ದಿಸೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಅವರ ಗಮನಕ್ಕೆ ತರಲಾಗಿದ್ದು, ಪ್ರಾಚೀನ ಪುರತತ್ವ ಇಲಾಖೆಯಿಂದ 48 ಲಕ್ಷ ರೂ ಅನುದಾನ ಬಿಡುಗಡೆಯಾಗಿತ್ತು. ಈ ನಿಟ್ಟಿನಲ್ಲಿ ದೇಗುಲವನ್ನು ನವೀಕರಗೊಳಿಸಲಾಗಿದ್ದು, ಐತಿಹಾಸಿಕ ದೇಗುಲವನ್ನು ರಕ್ಷಿಸಿದಂತಾಗಿದೆ ಎಂದು ತಿಳಿಸಿದರು. 

ಧಾರ್ಮಿಕ ಕೇಂದ್ರಗಳಿಗೆ ಹೆಚ್ಚಿನ ಒತ್ತು: ಈ ದಿಸೆಯಲ್ಲಿ ಕಳೆದ 5 ವರ್ಷದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದೂಗಳ ದೇವಾಲಯಕ್ಕೆ ಕೋಟ್ಯಾಂತರ ರೂ ಅನುದಾನ ದೊರೆತಿದೆ. ಚರ್ಚ್‍ಗಳಿಗೆ 3.75 ಕೋಟಿ ರೂ ಹಾಗೂ ಮಸೀದಿ, ದರ್ಗಾ, ಸ್ಮಶಾನ ಅಭಿವೃದ್ಧಿಗೆ 3 ಕೋಟಿ ರೂ ಅನುದಾನ ನೀಡಲಾಗಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಸೌರ್ಹದತೆಯ ಸಂಕೇತವನ್ನು ಸೂಚಿಸುವ ಚೆನ್ನಿಗರಾಯಸ್ವಾಮಿ ದೇಗುಲವನ್ನು 48 ಲಕ್ಷ ರೂ ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ ಎಂದು ತಿಳಿಸಿದರು. 

ತಾಪಂ ಸದಸ್ಯ ಜವಾದ್ ಆಹಮದ್ ಮಾತನಾಡಿ, ಪ್ರಾಚೀನ ದೇಗುಲಗಳು ಐತಿಹಾಸಿಕ ಹಿನ್ನಲೆ ಹಾಗೂ ಸ್ಥಳದ ಮಹತ್ವವನ್ನು ತಿಳಿಸುವ ದೇಗುಲಗಳಾಗಿವೆ. ಆದುದರಿಂದ ಇಂತಹ ದೇಗುಲಗಳನ್ನು ಕಾಲಕಾಲಕ್ಕೆ ಪುನಶ್ಚೇತನಗೊಳಿಸುವುದರ ಮೂಲಕ ದೇಗುಲಗಳ ಅಭಿವೃದ್ಧಿಗೆ ಹಾಗೂ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಸಮಾರಂಭಕ್ಕೂ ಮುನ್ನಾ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಕಾರ್ಯಗಳು ದೇಗುಲದಲ್ಲಿ ಜರುಗಿದವು.

ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಡಿ.ಲೇಖಾ, ಮರಗದಮಣಿ, ಶಿವಮ್ಮ, ಚಾಮುಲ್ ಅಧ್ಯಕ್ಷ ಗುರುಮಲ್ಲಪ್ಪ, ನಿರ್ದೇಶಕ ನಂಜುಂಡಸ್ವಾಮಿ, ಹನೂರು ಪಪಂ ಉಪಾಧ್ಯಕ್ಷ ಬಸವರಾಜು, ಗ್ರಾಪಂ ಅಧ್ಯಕ್ಷರಾದ ಜಾನ್‍ಪೌಲ್, ರಾಚಪ್ಪ, ಮುಖಂಡರಾದ ಚಿಕ್ಕತಮ್ಮಯ್ಯ, ನಾರಾಯಣರಾಜ್ ಹಾಗೂ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News