ಶ್ರೀರಂಗಪಟ್ಟಣ: ರವೀಂದ್ರ ಶ್ರೀಕಂಠಯ್ಯ ಜೆಡಿಎಸ್ ಸೇರ್ಪಣೆ

Update: 2018-03-03 18:11 GMT

ಶ್ರೀರಂಗಪಟ್ಟಣ, ಮಾ.3: ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ನಡೆದ ಕುಮಾರಪರ್ವ ಸಮಾವೇಶದಲ್ಲಿ ಯುವ ಮುಖಂಡ ರವೀಂದ್ರ ಶ್ರೀಕಂಠಯ್ಯ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ನೆರೆದಿದ್ದ ಸಹಸ್ರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗಲಿರುವ ರವೀಂದ್ರ ಅವರಿಗೆ ಜೆಡಿಎಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದ ತೊಡಕಿನಿಂದ ರವೀಂದ್ರ ಮೌನವಾಗಿಲ್ಲದಿದ್ದರೆ 2008ರಲ್ಲೇ ರಮೇಶ್‍ಬಾಬು ಮನೆ ಸೇರುತ್ತಿದ್ದರು. ಹಗಲು, ರಾತ್ರಿ ಸುತ್ತಿ ರಮೇಶ್‍ಬಾಬು ಗೆಲ್ಲಿಸಿದೆ. ಆದರೆ, ಆ ಕುಟುಂಬಕ್ಕೆ ನಮ್ಮಿಂದಾದ ಸಹಾಯ ಇನ್ನೂ ಗೊತ್ತಾಗುತ್ತಿಲ್ಲ ಎಂದು ಅವರು ಹೇಳಿದರು.

ನಮ್ಮ ಕುಟುಂಬದಿಂದ ಇಬ್ಬರೇ ಸ್ಪಧೆ: 
ಮುಂದಿನ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಸ್ಪರ್ಧಿಸೋದು ಇಬ್ಬರು ಮಾತ್ರವೆಂದ ಕುಮಾರಸ್ವಾಮಿ, ನಮ್ಮ ಕುಟುಂಬಕ್ಕಿಂತ ಲಕ್ಷಾಂತರ ಕಾರ್ಯಕರ್ತರು ಮುಖ್ಯ. ನಮ್ಮ ಕುಟುಂಬ ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಜಗತ್ತಿನ 8ನೆ ಅದ್ಭುತ ಅಲ್ಲ, ಅದರ ಹೆಸರಿನಲ್ಲಿ ಮಾಡಿದ ಲೂಟಿ ಜಗತ್ತಿನ 8ನೆ ಅದ್ಭುತ. ಸರಕಾರದ ಸಾಧನೆಗಳ ಜಾಹಿರಾತಿಗಾಗಿ ರಾಜ್ಯ ಸರಕಾರ ಕೋಟ್ಯಂತರ ರೂ. ಹಣ ವ್ಯಯ ಮಾಡಲಾಗುತ್ತಿದೆ. ಆದರೆ, ರೈತರು ಸೇರಿದಂತೆ ಯಾವ ಜನರ ಉದ್ಧಾರವೂ ಕಾಂಗ್ರೆಸ್ ಸರಕಾರದಿಂದ ಆಗಿಲ್ಲ ಎಂದು ಅವರು ಟೀಕಿಸಿದರು.

ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವವರಿಗೆ ಈ ಜನಸಮೂಹವೇ ಉತ್ತರ ನೀಡಲಿದೆ. ನಿಮ್ಮ ಅಭಿಮಾನವನ್ನು ಮರೆಯಲು ಸಾಧ್ಯವಿಲ್ಲ. ಜೆಡಿಎಸ್‍ಗೆ ಪೂರ್ಣ ಪ್ರಮಾಣದ ಅಧಿಕಾರಕೊಡಿ ಎಂದು ಅವರು ನೆರೆದಿದ್ದವರಲ್ಲಿ ಮನವಿ ಮಾಡಿದರು.

ಜೆಡಿಎಸ್ ರಾಷ್ಟ್ರೀಯ ವರಿಷ್ಠ ಎಚ್.ಡಿ.ದೇವೇಗೌಡ, ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕರಾದ ಎಲ್.ಆರ್.ಶಿವರಾಮೇಗೌಡ, ಕೆ.ಸುರೇಶ್‍ಗೌಡ, ಪ್ರಭಾವತಿ ಜಯರಾಂ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಯುವ ಘಟಕದ ಅಧ್ಯಕ್ಷ ಅಶೋಕ್ ಜಯರಾಂ, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News