ಮುಗಿದ ಚಿತ್ರೋತ್ಸವ; ಮುಗಿಯದ ಪ್ರಶ್ನೆಗಳು
ಕಳೆದ ಒಂಬತ್ತು ಚಿತ್ರೋತ್ಸವಗಳಿಗೆ ಹೋಲಿಸಿದರೆ- ಈ ಬಾರಿ ಉತ್ತಮ ಹಾಗೂ ಗುಣಾತ್ಮಕ ಚಿತ್ರಗಳು ಸಾಕಷ್ಟಿದ್ದವು. ಬಹಳಷ್ಟು ಸಿನಿಪ್ರಿಯರ ಅಭಿಪ್ರಾಯವೂ ಅದೇ ಆಗಿತ್ತು. ಅದರಲ್ಲೂ ಚಿತ್ರೋತ್ಸವ ಉದ್ಘಾಟನೆಯ ದಿನ ಪ್ರದರ್ಶನಗೊಂಡ, ಫಿಕಾರ ಮತ್ತು ಪಿಕೊನೆ ನಿರ್ದೇಶನದ ‘ಇಟ್ಸ್ ದಿ ಲಾ’ ಎಂಬ ಇಟಲಿಯ ರಾಜಕೀಯ ವಿಡಂಬನಾತ್ಮಕ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಚರ್ಚೆಯನ್ನು ಹುಟ್ಟುಹಾಕಿತ್ತು.
10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಗಿದಿದೆ. ದೂರದ ದೇಶಗಳಿಂದ ಬಂದಿದ್ದ ಚಿತ್ರನಿರ್ದೇಶಕರು, ತಂತ್ರಜ್ಞರು, ನಟ-ನಟಿಯರು ಬೆಂಗಳೂರಿಗೆ ಬೆನ್ನು ಹಾಕಿ ತಮ್ಮ ತಮ್ಮ ಊರುಗಳತ್ತ ಹೆಜ್ಜೆ ಹಾಕಿದ್ದೂ ಆಗಿದೆ. ಇನ್ನು ಉಳಿದದ್ದು- ಈ ಚಿತ್ರೋತ್ಸವದಿಂದ ಕನ್ನಡ ಚಿತ್ರೋದ್ಯಮಕ್ಕೆ ಆದ ಲಾಭವೇನು, ಸಿನಿಪ್ರಿಯರಿಗೆ ದಕ್ಕಿದ್ದೇನು ಹಾಗೂ ಚಿತ್ರೋತ್ಸವಕ್ಕಾಗಿ ಸರಕಾರ ಕೊಟ್ಟ 10 ಕೋಟಿ ರೂ. ಖರ್ಚುವೆಚ್ಚಗಳೇನು ಎಂಬ ಪೋಸ್ಟ್ ಮಾರ್ಟಂ.
ಫೆ.22ರಂದು ನಡೆದ ಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಭವ್ಯ ವೇದಿಕೆ ನಿರ್ಮಿಸಲಾಗಿತ್ತು. ಮುಖ್ಯ ಆಕರ್ಷಣೆಗಾಗಿ ಹಿಂದಿ ಚಿತ್ರರಂಗದ ಅಭಿನೇತ್ರಿ ಕರೀನಾ ಕಪೂರ್ ಖಾನ್‌ರನ್ನು ಆಹ್ವಾನಿಸಲಾಗಿತ್ತು. ಗ್ಲ್ಯಾಮರ್ ಜಗತ್ತಿನಲ್ಲಿ ಇದೆಲ್ಲ ಇದ್ದದ್ದೆ. ಆದರೆ ಚಿತ್ರೋದ್ಯಮದ ಗಣ್ಯರೊಬ್ಬರು, ‘‘ನಮ್ಮವರಿಗೆ ನಾಯಕನಟಿಯೂ ಪರಭಾಷೆಯವರೇ ಆಗಬೇಕು. ಚಿತ್ರೋತ್ಸವದ ಉದ್ಘಾಟನೆಗೂ ಅವರೇ. ಆಕೆ ಹೀಗೆ ಬಂದು ಹಾಗೆ ಹೋಗಿ, ನಾಲ್ಕು ಮುತ್ತು ಉದುರಿಸಲಿಕ್ಕೆ ಪಡೆದ ಸಂಭಾವನೆ ಬರೋಬ್ಬರಿ 80 ಲಕ್ಷ. ಆಕೆಯ ಹಿಂದೆ ಬಂದ ಮೇಕಪ್‌ಮನ್‌ಗಳು, ಸಹಾಯಕರು ಅವರ ಖರ್ಚು ವೆಚ್ಚ 40 ಲಕ್ಷ. ಎಲ್ಲಾ ಸೇರಿ ಒಂದು ಕೋಟಿ ಇಪ್ಪತ್ತು ಲಕ್ಷ. ಕೆಲವೇ ನಿಮಿಷಗಳಿಗೆ! ನಮ್ಮವರೇ ಆದ ಹಿರಿಯ ಕಲಾವಿದರು ಸಾಕಷ್ಟು ಜನರಿದ್ದರಲ್ಲ? ಅವರನ್ನು ಗೌರವಿಸುವ ಮೂಲಕ ಕನ್ನಡದ ಘನತೆಯೂ ಹೆಚ್ಚಾಗುತ್ತಿತ್ತಲ್ಲ?’’ ಎಂದರು. ಮುಂದುವರಿದು, ‘‘ಇದೊಂದೇ ಅಲ್ಲ, ಚಿತ್ರಗಳ ಆಯ್ಕೆಯಲ್ಲೂ, ಪ್ರಶಸ್ತಿ ಹಂಚುವಲ್ಲೂ ಲಾಬಿ. ಅವರದೇ ಒಂದು ಗುಂಪು ಗರಿಷ್ಠ ಲಾಭ ಪಡೆದಿದೆ. ಇದೇ ಮೊದಲ ಬಾರಿಗೆ ಗಣನೀಯ ಸೇವೆ ಸಲ್ಲಿಸಿದ ಚಿತ್ರೋದ್ಯಮದ ಹಿರಿಯರಿಗೆ ಜೀವಮಾನ ಸಾಧನೆ ಪ್ರಶಸ್ತಿ ಹುಟ್ಟುಹಾಕಿದ್ದಾರೆ. ಪ್ರಶಸ್ತಿ ಫಲಕದ ಜೊತೆಗೆ 10 ಲಕ್ಷ ರೂ.ಗಳನ್ನು ನೀಡುತ್ತಿದ್ದಾರೆ. ಕೊಡಲಿ, ಒಳ್ಳೆಯದು. ಆದರೆ ಇನ್ನೂ ವಯಸ್ಸಿರುವ, ತಮಿಳಿನ ಮಣಿರತ್ನಂರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಏಕೆ, ನಮ್ಮವರೇ ಆದ ಹಿರಿಯ ನಿರ್ದೇಶಕ ಭಗವಾನ್ ಕಾಣಲಿಲ್ಲವೇ? ಈ ವರ್ಷ ಅವರು ನಿರ್ದೇಶಿಸಿದ ‘ಜೇಡರ ಬಲೆ’ ಚಿತ್ರಕ್ಕೆ 50 ವರ್ಷಗಳು ತುಂಬಿವೆ. ಕನ್ನಡ ಚಿತ್ರೋದ್ಯಮ ಕುಂಟುತ್ತಿದ್ದ ಕಾಲದಿಂದ ಇಲ್ಲಿಯವರೆಗೆ ಸೇವೆ ಸಲ್ಲಿಸುತ್ತಲೇ ಬಂದಿದ್ದಾರೆ. ಕೊಟ್ಟ ಕೊಡುಗೆಯೂ ಅಪಾರ. ಹಿರಿತನವೂ ಇದೆ. ಯಾವುದರಲ್ಲಿ ಕಡಿಮೆ ಇದೆ ಹೇಳಿ?’’ ಎಂದು ನಮನ್ನೇ ಪ್ರಶ್ನಿಸುತ್ತಾರೆ.
ಹೌದು, ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಆಯೋಜಿಸುವಾಗ ಇಂತಹ ಸಣ್ಣಪುಟ್ಟ ಅವಘಡಗಳು; ವಿವಾದ, ಅಭಿಪ್ರಾಯಭೇದ, ಪ್ರಶ್ನೆಗಳು ಸಹಜ. ಇಷ್ಟರ ನಡುವೆಯೂ ಚಿತ್ರೋತ್ಸವ ದಿಂದ ಕೆಲವರಿಗಾದರೂ ಲಾಭ, ಅನು ಕೂಲವಾಗಿದೆ ಎನ್ನುವುದು ಸುಳ್ಳಲ್ಲ.
ಈ ಬಾರಿಯ ಚಿತ್ರೋತ್ಸವದಲ್ಲಿ ಪ್ರಪಂಚದ 60 ದೇಶಗಳ, ಹಲವು ಭಾಷೆಗಳ, 150 ಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶಿಸಲಾಯಿತು. ಜೊತೆಗೆ ಚಿತ್ರೋತ್ಸವದಲ್ಲಿ ಸಿನಿ ಆಸಕ್ತರಿಗಾಗಿ ವಿಶೇಷ ಉಪನ್ಯಾಸ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲೂ ಅಂತಾ ರಾಷ್ಟ್ರೀಯ ಮಟ್ಟದ ಆಸ್ಟ್ರೇಲಿಯಾ ಛಾಯಾಗ್ರಾಹಕ ಟಾಂ ಕೋವನ್- ಕನ್ನಡದ ಹೊಸ ಅಲೆಯ ‘ಸಂಸ್ಕಾರ’ ಚಿತ್ರದ ಸಿನಿಮಾಟೋಗ್ರಾಫರ್. 1970ರಲ್ಲಿ ತೆರೆಕಂಡಿದ್ದ, ಪಟ್ಟಾಭಿರಾಮ ರೆಡ್ಡಿ ನಿರ್ದೇಶನ ಮಾಡಿದ್ದ ‘ಸಂಸ್ಕಾರ’ ಚಿತ್ರದ ಅನುಭವ ಮತ್ತು ಸವಾಲುಗಳ ಬಗ್ಗೆ ಟಾಂ ಕೋವನ್‌ರ ಉಪನ್ಯಾಸ ಸಿನೆಮಾಸಕ್ತರು ಅಗತ್ಯವಾಗಿ ಆಲಿಸಬೇಕಾದದ್ದಾಗಿತ್ತು. ಹಾಗೆಯೇ ಹಿಂದಿನ ಹಾಗೂ ಮುಂದಿನ 100 ವರ್ಷಗಳ ತಂತ್ರಜ್ಞಾನ ಹೇಗಿರಬಹುದು ಎಂಬ ವಿಷಯ ಕುರಿತು ಡಿಜಿಟಲ್ ಮ್ಯೂಸಿಕ್ ಸಂಸ್ಥಾಪಕ ಅರುಳ್‌ಮೂರ್ತಿ, ಚಿತ್ರ ನಿರ್ದೇಶಕ ಎಸ್.ಕೃಷ್ಣ, ಬಿ.ಎಸ್.ಶ್ರೀನಿವಾಸ್ ಎಂಬ ತಜ್ಞರ ಸಂವಾದ ಕಾರ್ಯಕ್ರಮವೂ ಉಪಯುಕ್ತವಾಗಿತ್ತು. ಇನ್ನು ಚಿತ್ರಕತೆ ರಚನಕಾರ್ತಿ ಕ್ಲಾರಿಡೊಬ್ಬಿನ್, ಚಿತ್ರನಿರ್ದೇಶಕ ರಾಕೇಶ್ ಓಂಪ್ರಕಾಶ್, ಸ್ವಪನ್ ಮಲ್ಲಿಕ್, ಭರತ್ ಬಾಲಗಣಪತಿ -ಹೀಗೆ ದೇಶ ವಿದೇಶದ ಚಿತ್ರ ನಿರ್ಮಾಣದ ವಿವಿಧ ವಿಭಾಗಗಳಲ್ಲಿ ನುರಿತ ತಂತ್ರಜ್ಞರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು ವಿಶೇಷವಾಗಿತ್ತು. ಒಟ್ಟಾರೆ ಸಿನೆಮಾ ಬಗ್ಗೆ ಆಸಕ್ತಿ ಇರುವವರಿಗೆ, ಕಲಿಕೆಯ ಹಂತದ ಕುತೂಹಲಿಗಳಿಗೆ, ಇನ್ನಷ್ಟು ಅರಿಯಬೇಕೆನ್ನುವ ಉದ್ಯಮದವರಿಗೆ ಚಿತ್ರೋತ್ಸವ ಸಾಕಷ್ಟು ಸರಕನ್ನು ಸರಬರಾಜು ಮಾಡಿತ್ತು. ಆದರೆ ನಗರದ ಬೇರೆ ಭಾಗದ ಜನಕ್ಕೆ ದೂರ ಎನಿಸುವ, ಸಾಮಾನ್ಯ ಜನರು ಕಾಲಿಡುವುದಕ್ಕೆ ಹೆದರುವ, ದುಬಾರಿ ಒರಾಯನ್ ಮಾಲ್‌ನ 11 ಸ್ಕ್ರೀನ್‌ಗಳಲ್ಲಿ ಚಿತ್ರ ಪ್ರದರ್ಶನ ವ್ಯವಸ್ಥೆ ಮಾಡಿದ್ದು ಹಲವರ ಅಸಮಾಧಾನಕ್ಕೆ ಗುರಿಯಾಗಿತ್ತು. ಅಲ್ಲಿ ಸಹಜವಾಗಿಯೇ ಇಂಗ್ಲಿಷ್ ಬಲ್ಲ ಎಲೀಟ್ ಕ್ಲಾಸ್ ಜನ ಹೆಚ್ಚಾಗಿದ್ದರು. ಒಂದಷ್ಟು ಹೊಸ ತಲೆಮಾರಿನ ಉತ್ಸಾಹಿ ತರುಣ-ತರುಣಿಯರು ಲವಲವಿಕೆಯಿಂದ ಓಡಾಡುತ್ತಿದ್ದರು. ವಯಸ್ಸಾದ ಹಿರಿಯರು ಮತ್ತು ಚಿತ್ರೋದ್ಯಮದ ಕೆಲವರು ಕಣ್ಣಿಗೆ ಬಿದ್ದರು. ಕನ್ನಡ ಚಿತ್ರೋದ್ಯಮದಲ್ಲಿ ದುಡಿಯುತ್ತಿರುವವರ ಸಂಖ್ಯೆ ಕಡಿಮೆ ಎಂದರೂ ಒಂದು ಸಾವಿರವಿರಬಹುದು. ವಾಣಿಜ್ಯ ಮಂಡಳಿ ಎರಡು ದಿನಗಳ ರಜೆಯನ್ನೂ ಘೋಷಿಸಿತ್ತು. ಆದರೂ ಅವರ ಭಾಗವಹಿಸುವಿಕೆ ಭಾರೀ ಕಡಿಮೆ ಇತ್ತು. ಗ್ರಾಮೀಣ ಭಾಗದವರಂತೂ ಇಲ್ಲವೇ ಇಲ್ಲ, ಬಿಡಿ.
‘ಬ್ಯೂಟಿ ಆ್ಯಂಡ್ ದ ಡಾಗ್ಸ್’
ಹಾಗೆ ನೋಡಿದರೆ, ಕಳೆದ ಒಂಬತ್ತು ಚಿತ್ರೋತ್ಸವಗಳಿಗೆ ಹೋಲಿಸಿದರೆ- ಈ ಬಾರಿ ಉತ್ತಮ ಹಾಗೂ ಗುಣಾತ್ಮಕ ಚಿತ್ರಗಳು ಸಾಕಷ್ಟಿದ್ದವು. ಬಹಳಷ್ಟು ಸಿನಿಪ್ರಿಯರ ಅಭಿಪ್ರಾಯವೂ ಅದೇ ಆಗಿತ್ತು. ಅದರಲ್ಲೂ ಚಿತ್ರೋತ್ಸವ ಉದ್ಘಾಟನೆಯ ದಿನ ಪ್ರದರ್ಶನಗೊಂಡ, ಫಿಕಾರ ಮತ್ತು ಪಿಕೊನೆ ನಿರ್ದೇಶನದ ‘ಇಟ್ಸ್ ದಿ ಲಾ’ ಎಂಬ ಇಟಲಿಯ ರಾಜಕೀಯ ವಿಡಂಬನಾತ್ಮಕ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಚರ್ಚೆಯನ್ನು ಹುಟ್ಟುಹಾಕಿತ್ತು. ರಾಜಕಾರಣ ಕೆಟ್ಟುಹೋಗಿದೆ, ಭ್ರಷ್ಟಾಚಾರ ಮಿತಿಮೀರಿದೆ, ಅದಕ್ಕೆ ಜನರೇ ಮುಖ್ಯ ಕಾರಣ ಎಂಬುದನ್ನು ಹಾಸ್ಯದ ಮೂಲಕ ದಾಟಿಸುವ ನಿರೂಪಣಾ ಶೈಲಿ ಭಿನ್ನವಾಗಿತ್ತು. ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸಲು, ಬದಲಾವಣೆ ತರಲು, ರಾಜಕೀಯಕ್ಕೆ ಹೊಸಬನಾದ ಪ್ರೊಫೆಸರ್ ಒಬ್ಬರನ್ನು ಗೆಲ್ಲಿಸಿ ಮೇಯರ್ ಮಾಡುತ್ತಾರೆ. ಹೊಸಮೇಯರ್ ಜಾರಿಗೊಳಿಸತೊಡಗಿದ ಕಾನೂನಿನ ಕಾಲುಗಳು ತಮ್ಮ ಮನೆಯಂಗಳಕ್ಕೇ ಬಂದು ನಿಂತಾಗ, ಗೆಲ್ಲಿಸಿದ ಜನರೇ ಸಿಡಿಮಿಡಿಗೊಳ್ಳುತ್ತಾರೆ. ‘‘ಕಾನೂನಿರಲಿ, ಊರಿಗೆ, ನಮಗಲ್ಲ’’ ಎಂಬ ಜನರ ಧೋರಣೆ ಮತ್ತು ಆತ್ಮವಂಚನೆ- ಹೇಳುವ ರೀತಿಯಿಂದ ಮನಗೆದ್ದಿತ್ತು. ಈ ಚಿತ್ರ ಮೋದಿ, ನೋಟು ಅಮಾನ್ಯೀಕರಣದ ಕಾನೂನು, ಜನರ ಕಷ್ಟ, ಎದುರಾದ ಟೀಕೆ- ನೆನಪಿಸಿದರೆ ಆಶ್ಚರ್ಯವಿಲ್ಲ.
ಹಾಗೆಯೇ ಮತ್ತೊಂದು- ‘ಬ್ಯೂಟಿ ಆ್ಯಂಡ್ ದ ಡಾಗ್ಸ್’ ಎಂಬ ಟ್ಯುನೀಶಿಯಾ ಚಿತ್ರ. ಬೆನ್ ಹನಿಯಾ ನಿರ್ದೇಶನದ ಈ ಸಿನೆಮಾದ ವಿಶೇಷವೆಂದರೆ, ಒಂಬತ್ತು ಅಧ್ಯಾಯಗಳನ್ನಾಗಿ ವಿಂಗಡಿಸಿ, ಪ್ರತೀ ಅಧ್ಯಾಯವನ್ನು ಒಂದೇ ಶಾಟ್‌ನಲ್ಲಿ ಚಿತ್ರೀಕರಿಸಿರುವುದು ಮತ್ತು ಇಡೀ ಚಿತ್ರ ಒಂದೇ ರಾತ್ರಿಯಲ್ಲಿ ನಡೆಯುವುದು. ಹರೆಯದ ಯುವತಿಯೊಬ್ಬಳನ್ನು ಕಾಯಬೇಕಾದ ಪೊಲೀಸರೇ ಅತ್ಯಾಚಾರವೆಸಗುವುದು, ತಪ್ಪಿತಸ್ಥರನ್ನು ಶಿಕ್ಷಿಸಲು ಕೇಸು ದಾಖಲಿಸಿಕೊಳ್ಳಲು ನಿರಾಕರಿಸುವ ಪೊಲೀಸ್ ವ್ಯವಸ್ಥೆಗೆ ಎದುರಾಗಿ ಆಕೆ ರಾತ್ರಿ ಇಡೀ ಹೋರಾಡುವುದು ಮತ್ತು ನ್ಯಾಯಕ್ಕಾಗಿ ಅಲೆದಾಡಿ ಹತಾಶಳಾಗುವುದು ಚಿತ್ರದ ತಿರುಳು. ಇದು ಟ್ಯುನೀಶಿಯಾದ ಇಂದಿನ ರಾಜಕೀಯ ಮತ್ತು ಸಾಮಾಜಿಕ ಬದುಕಿನ ರೂಪಕದಂತಿದೆ. ಹಾಗೆಯೇ ಟ್ಯುನೀಶಿಯಾದ ಮಹಿಳೆಯರ ಹಕ್ಕುಗಳಿಗಾಗಿ ಕಾನೂನಾತ್ಮಕ ಹೋರಾಟ ಮತ್ತು ಕ್ರಿಯಾಶೀಲ ವಾಗಿರುವ ಸಾಮಾಜಿಕ ಚಳವಳಿಗಳನ್ನು ಹಾಗೂ ಅಷ್ಟೇ ಪ್ರಬಲವಾದ ಧಾರ್ಮಿಕ ಮೂಲಭೂತ ವಾದವನ್ನೂ ಬಹಿರಂಗಗೊಳಿಸುತ್ತದೆ. ಈ ಚಿತ್ರವೂ ಕೂಡ, ಕೊನೆಯ ಶಾಟ್‌ನಲ್ಲಿ ನಮ್ಮ ದೇಶದ ‘ಭಕ್ತರ’ ಹಿಪೋಕ್ರಸಿಯನ್ನು ನೆನಪಿಸುತ್ತದೆ.
"ಏಪ್ರಿಲ್ಸ್ ಡಾಟರ್''
ಹಾಗೆಯೇ ‘ದಿ ಕೇಕ್ ಮೇಕರ್’ ಎಂಬ ಇಸ್ರೇಲಿ ಚಿತ್ರ, ‘ತೆಲ್ಮಾ’ ಎಂಬ ನಾರ್ವೆಯನ್ ಚಿತ್ರಗಳು-ಕಥಾವಸ್ತು, ಕುಶಲತೆ ಮತ್ತು ನಿರೂಪಣೆಯಿಂದ ಭಿನ್ನವಾಗಿದ್ದು, ನೋಡಬೇಕಾದ ಚಿತ್ರಗಳಾಗಿವೆ. ಕುತೂಹಲಕರ ಸಂಗತಿ ಎಂದರೆ, ಇವರೆಡೂ ಚಿತ್ರಗಳು ಸಲಿಂಗ ಪ್ರೇಮದ ಕಥಾವಸ್ತುವನ್ನು ಒಳಗೊಂಡಿರುವ ಚಿತ್ರಗಳು.
‘ದಿ ಕೇಕ್ ಮೇಕರ್’ ಓಫಿರ್ ರಾಲ್ ಗ್ರೇಜರ್ ನಿರ್ದೇಶನದ ಇಸ್ರೇಲ್ ಸಿನೆಮಾ. ಕೆಫೆ ನಡೆಸುವ ಥಾಮಸ್‌ಗೆ ಪರಿಚಯವಾಗುವ ವ್ಯಕ್ತಿ, ನಂತರ ಆತ್ಮೀಯವಾಗಿ ಪ್ರೇಮಿಯಾಗುತ್ತಾನೆ. ಅವರ ಸಂಬಂಧ ಗಟ್ಟಿಗೊಳ್ಳುತ್ತಿರುವಾಗಲೇ ಆತ ಅಪಘಾತದಲ್ಲಿ ಮೃತನಾಗುತ್ತಾನೆ. ಆತನ ವಿಳಾಸ ಹುಡುಕಿಕೊಂಡು ಬರ್ಲಿನ್‌ನಿಂದ ಜೆರುಸಲೇಂಗೆ ಬರುವ ಥಾಮಸ್, ಆತನ ನೆನಪಲ್ಲಿ, ಆತನ ಪತ್ನಿಯ ಕೆಫೆಯಲ್ಲಿಯೇ ಕೆಲಸಕ್ಕೆ ಸೇರುತ್ತಾನೆ. ಶಿಸ್ತಿನ ಕೆಲಸ, ವಿನಯವಂತ ನಡವಳಿಕೆ ಆಕೆಗೆ ಇಷ್ಟವಾಗಿ, ಗಂಡನಿಲ್ಲದ ಕೊರತೆಯನ್ನು ಆತನೊಂದಿಗೆ ಕೂಡುವ ಮೂಲಕ ಪರಿಹರಿಸಿಕೊಳ್ಳುತ್ತಾಳೆ. ಸಲಿಂಗಪ್ರೇಮಿಯಾದ ಆತ, ಆಕೆಯೊಂದಿಗೂ ಅಷ್ಟೇ ಸಹಜವಾಗಿ ವರ್ತಿಸುತ್ತಾನೆ. ನಿಧಾನವಾಗಿ ಆಕೆಗೆ, ನನ್ನ ಪತಿ ಸಲಿಂಗಕಾಮಿ, ಈತನೇ ನನ್ನ ಪತಿಯ ಪ್ರೇಮಿ ಎನ್ನುವುದು ತಿಳಿಯುತ್ತದೆ. ವಿಚಿತ್ರ ತೊಳಲಾಟ, ಮುಜುಗರಕ್ಕೆ ಒಳಗಾಗುತ್ತಾಳೆ. ಆತನನ್ನು ಕೆಲಸದಿಂದ ಬಿಡಿಸಿ ಹೊರಗಟ್ಟುತ್ತಾಳೆ. ಕೊನೆಗೊಂದು ದಿನ ಬರ್ಲಿನ್‌ಗೆ ಹೋಗಿ, ಆತನ ಕೆಫೆಯ ಮುಂದೆ ನಿಂತು ದೀರ್ಘವಾಗಿ ಉಸಿರೆಳೆದುಕೊಳ್ಳುತ್ತಾಳೆ- ಆ ಉಸಿರಿನಂತೆಯೇ ಅವನನ್ನೂ.
ಇವೆರಡೂ ಚಿತ್ರಗಳಿಗಿಂತ ಕೊಂಚ ಭಿನ್ನವಾಗಿರುವುದು- ‘ಏಪ್ರಿಲ್ಸ್ ಡಾಟರ್’ ಎಂಬ ಮೆಕ್ಸಿಕನ್ ಚಿತ್ರ. ಡೈವರ್ಸಿ ಅಮ್ಮ, ವಯಸ್ಸಿಗೆ ಬಂದ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದು, ಚಿಕ್ಕ ಮಗಳು ಪ್ರೀತಿಯಲ್ಲಿ ಬಿದ್ದು, ಗರ್ಭಿಣಿಯಾಗಿ, ಮಗು ಹೆತ್ತು ಬದುಕು ದುರ್ಬರವಾಗುವ ಕಥೆಯುಳ್ಳದ್ದು. ಮಗಳಿಗೆ ಬುದ್ಧಿ ಬರಲೆಂದು ಅಮ್ಮ ಮಗುವನ್ನು ಬೇರೊಂದು ಕಡೆ ಬಿಟ್ಟು ಬೆಳೆಸುತ್ತಿರುತ್ತಾಳೆ. ಮಗು ಬೇಕೆಂದು ಹಠಕ್ಕೆ ಬಿದ್ದ ಮಗಳು, ಅಮ್ಮನಿಗೇ ಲಾಯರ್ ನೋಟಿಸ್ ಕೊಡುವ ಮಾತಾಡುತ್ತಾಳೆ. ಈ ನಡುವೆ, ಅಮ್ಮ, ಕೆಲಸವಿಲ್ಲದ ಮಗಳ ಗಂಡನನ್ನು ಕರೆದುಕೊಂಡು ಹೋಗಿ ಮಗು ತೋರಿಸಿ, ಸಮಾಧಾನಿಸಿ, ತನ್ನ ಪ್ರೇಮಪಾಶಕ್ಕೆ ಕೆಡವಿಕೊಳ್ಳುತ್ತಾಳೆ. ನಂತರ ಅವರಿಬ್ಬರು ಸೇರಿ ಹೊಸ ಸಂಸಾರ ಹೂಡುತ್ತಾರೆ. ಖರ್ಚಿಗೆ ಕಾಸು ಬೇಕಾದಾಗ ತನ್ನ ಮಕ್ಕಳಿದ್ದ ಮನೆಯನ್ನೇ ಮಾರಲು ಮುಂದಾಗುತ್ತಾಳೆ. ಕೊನೆಗೆ ಮಗಳು ಅಮ್ಮ ಮತ್ತು ಗಂಡನ ಜಾಡು ಹುಡುಕಿ, ತನ್ನ ಮಗುವನ್ನು ಪಡೆದು, ಇಬ್ಬರಿಂದಲೂ ದೂರವಾಗುತ್ತಾಳೆ. ವಿಚಿತ್ರವೆಂದರೆ ಅಮ್ಮ ಯೋಗಪಟುವಾಗಿರುವುದು, ಫಿಗರ್ ಮೇಂಟೇನ್ ಮಾಡಲು, ಫಿಟ್ ಆಗಿರಲು, ತನ್ನನ್ನು ತಾನು ಅರಿಯಲು ಯೋಗ ಸಹಕಾರಿ ಎನ್ನುವುದು. ತನ್ನನ್ನು ತಾನು ಅರಿಯುವುದೇ ಸ್ವಾರ್ಥ ಎನ್ನುವುದನ್ನು ಸಿನೆಮಾ ಸೂಕ್ಷ್ಮವಾಗಿ ಹೇಳಿದಂತಿದೆ. ಯೋಗಕ್ಕೆ ಹೊಸ ಭಾಷ್ಯ ಬರೆದಿದೆ.
ಇವಲ್ಲದೆ ಲೆಬಲಾನಿನ ‘ದಿ ಇನ್‌ಸಲ್ಟ್’, ಟರ್ಕಿಯ ‘ಬ್ರೆಥ್’, ಚಿಲಿಯ ‘ಎ ಫೆಂಟಾಸ್ಟಿಕ್ ವುಮನ್’, ತುಳುವಿನ ‘ಪಡ್ಡಾಯಿ’, ಮಲಯಾಳಂನ ‘ಟೇಕ್ ಆಫ್’, ‘ಮರಾಠಿಯ ಮುಕ್ತಿ’ -ಒಟ್ಟಾರೆ ಈ ಬಾರಿಯ ಚಿತ್ರಗಳಲ್ಲಿ ಹಲವು ವಿಭಿನ್ನ ಕಥಾವಸ್ತುಗಳಿಂದ ಕೂಡಿದ್ದು, ಬುದ್ಧಿಗೆ ಸಾಣೆ ಹಿಡಿಯುವ ಚಿತ್ರಗಳಾಗಿದ್ದವು. ಅರಿಯುವುದು, ಅರಗಿಸಿಕೊಳ್ಳುವುದು ಬಹಳಷ್ಟಿತ್ತು. ಆದರೆ ಕನ್ನಡತನವನ್ನು, ಕನ್ನಡದ ಹಿರಿಮೆಯನ್ನು ಸಾರಬೇಕಾಗಿದ್ದ ಕನ್ನಡ ವಿಭಾಗದಲ್ಲಿ ಆಯ್ಕೆಯಾಗಿದ್ದ ಚಿತ್ರಗಳು ಕರ್ನಾಟಕದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುವಂತಿದ್ದವು ಎನ್ನುವುದು ಕನ್ನಡಿಗರ ಕೊರಗಾಗಿತ್ತು. ಪ್ರಶಸ್ತಿ ಹಂಚಿಕೆಯಲ್ಲೂ ಅದು ಇನ್ನಷ್ಟು ಎದ್ದು ಕಾಣುತ್ತಿತ್ತು.