ಸೊರಬ: ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮ

Update: 2018-03-04 13:21 GMT

ಸೊರಬ,ಮಾ.4 : ಜನಪ್ರತಿನಿಧಿಯಾದವರು ತಾಲೂಕಿನ ಅಭಿವೃದ್ದಿಗಾಗಿ ಅನುದಾನ ತರುವ ನಿಟ್ಟಿನಲ್ಲಿ ಸಂಬಂಧಪಟ್ಟ ಮಂತ್ರಿಗಳಲ್ಲಿ ವಿನಮ್ರವಾಗಿ ಮನವಿ ಮಾಡಿಕೊಳ್ಳಬೇಕಾಗಿದ್ದು, ಆ ನಿಟ್ಟಿನಲ್ಲಿ ಅಭಿವೃದ್ದಿಗಾಗಿ ಹೆಚ್ಚಿನ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಶಾಸಕ ಮಧುಬಂಗಾರಪ್ಪ ತಿಳಿಸಿದರು. 

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದಿಂದ ಕೈಗೊಳ್ಳುವ ವಿವಿಧ ಕ್ಷೇತ್ರಗಳಲ್ಲಿನ ಕೆಲಸಗಳು ಸುಲಭವಾಗಿ ಆಗುತ್ತದೆ. ಆದರೆ ರೈತರ ಯಾವುದೇ ಕೆಲಸಗಳಾಗದಿರುವುದು ಖೇದಕರ ಸಂಗತಿಯಾಗಿದೆ. ರೈತರ ಹಿತ ಕಾಯುವಲ್ಲಿ ಸರ್ಕಾರಗಳು ವಿಫಲವಾಗಿದ್ದು, ಸಹಕಾರಿ ಸಂಘಗಳು, ಕೃಷಿ ಮಾರುಕಟ್ಟೆಗಳಿಂದ ರೈತರಿಗೆ ಅನುಕೂಲವಾಗಿದೆ. ಎಪಿಎಂಸಿಯಲ್ಲಿ ಹೆಚ್ಚಿನ ವಹಿವಾಟು ನಡೆದಷ್ಟು ಲಾಭ ಕಂಡುಕೊಳ್ಳಬಹುದಾಗಿದೆ. ಸರ್ಕಾರದಿಂದ ಎಪಿಎಂಸಿಗೆ ಸಿಗಬಹುದಾದ ಅನುದಾನಗಳ ಸಮರ್ಪಕ ಮಾಹಿತಿಗಾಗಿ ತಾಲೂಕಿನಿಂದ ಒಬ್ಬರು ರಾಜ್ಯ ಸಮಿತಿಗೆ ಸದಸ್ಯರಾಗುವುದರಿಂದ ಅನುಕೂಲವಾಗಿದ್ದು, ತಾಲೂಕಿನ ಎಪಿಎಂಸಿ ಅಧ್ಯಕ್ಷರನ್ನು ರಾಜ್ಯ ಸಮಿತಿಗೆ ಸದಸ್ಯರನ್ನಾಗಿ ನೇಮಿಸುವಲ್ಲಿ ಯಶಸ್ವಿಯಾಗಿದ್ದರ ಪರಿಣಾಮ ಇಂದು ತಾಲೂಕಿನಾದ್ಯಂತ ಎಪಿಎಂಸಿಗೆ ಕೋಟ್ಯಾಂತರ ರೂಪಾಯಿಗಳ ಅನುದಾನ ತರಲು ಸಾಧ್ಯವಾಗಿದೆ ಎಂದು ಹೇಳಿದರು. 

ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲವೆಂಬುದನ್ನು ರಾಜ್ಯ ಹಾಗು ಕೇಂದ್ರ ಸರ್ಕಾರಗಳು ಅರ್ಥಮಾಡಿಕೊಳ್ಳಬೇಕು. ತಂಬಾಕು ಮಿಶ್ರಣದೊಂದಿಗೆ ಅಡಿಕೆಯನ್ನು ಗುಟ್ಕಾ ರೂಪದಲ್ಲಿ ಮಾರಾಟಮಾಡುವುದನ್ನು ನಿಷೇಧಿಸುವುದಕ್ಕೆ ಅಭ್ಯಂತರವಿಲ್ಲ. ರೈತರಿಗೆ ಆದಾಯ ತಂದು ಕೊಡುವ ಬೆಳೆ ಅಡಿಕೆಯಾಗಿದ್ದು, ಅಡಿಕೆಯನ್ನೇ ನಿಷೇಧಿಸುವ ಪ್ರಯತ್ನಕ್ಕೆ ಮುಂದಾದರೆ ರೈತರ ಪರವಾಗಿ ನಿಂತು ಉಗ್ರ ಹೋರಾಟಕ್ಕೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.

ಎಪಿಎಂಸಿ ಅಧ್ಯಕ್ಷ ಎಲ್.ಜಿ.ರಾಜಶೇಖರ್ ಮಾತನಾಡಿ, ಕೇಂದ್ರ ಸರ್ಕಾರ ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ ನಂತರ ಅದನ್ನು ಹಿಂಪಡೆದಿರುವುದು ರೈತರಿಗೆ ನಿರಾಶೆಯುಂಟುಮಾಡಿದೆ. ಶಾಸಕ ಮಧುಬಂಗಾರಪ್ಪನವರ ಪ್ರಯತ್ನದಿಂದಾಗಿ ಜಿಲ್ಲೆಯಲ್ಲಿಯೇ ಸೊರಬ ಎಪಿಎಂಸಿಗೆ ಅತೀಹೆಚ್ಚು ಅನುದಾನ ಸಿಕ್ಕಿದ್ದು, ಎಪಿಎಂಸಿಯ ಅಭಿವೃದ್ದಿಗಾಗಿ ಕಾರ್ಯಗಳು ನಡೆಯುತ್ತಿವೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ವೀರೇಶ್ ಕೊಟಗಿ, ಶಿವಲಿಂಗೇಗೌಡ, ರಾಜೇಶ್ವರಿ ಗಣಪತಿ, ತಾರಾಶಿವಾನಂದಪ್ಪ, ಎಪಿಎಂಸಿ ಉಪಾಧ್ಯಕ್ಷ ಎಚ್.ಕೆ.ಜಯಶೀಲ ಗೌಡ, ತಾಪಂ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಸದಸ್ಯರಾದ ನಾಗರಾಜ್ ಚಂದ್ರಗುತ್ತಿ, ಜ್ಯೋತಿನಾರಾಯಣಪ್ಪ, ಪಪಂ ಅಧ್ಯಕ್ಷೆ ಬೀಬಿ ಝುಲೇಖಾ, ಉಪಾಧ್ಯಕ್ಷೆ ರತ್ನಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಚಿ ಹನುಮಂತಪ್ಪ, ಮ್ಯಾಮ್ಕೋಸ್ ಸದಸ್ಯ ಅಶೋಕ್ ನಾಯಕ್, ಎಪಿಎಂಸಿ ಉಪ ನಿರ್ದೇಶಕಿ ವಿಜಯಲಕ್ಷ್ಮೀ, ಕಾರ್ಯದರ್ಶಿ ಎಂ.ವಿ.ಶೈಲಜಾ, ಸದಸ್ಯರಾದ ಚೌಟಿ ಚಂದ್ರಶೇಖರ್ ಪಾಟೀಲ್, ಕೆ.ಅಜ್ಜಪ್ಪ, ಜೆ.ಪ್ರಕಾಶ್, ಶಾಂತಮ್ಮ, ಫಯಾಜ್ ಅಹಮದ್, ಸರಸ್ವತಿ ಪ್ರಶಾಂತ್, ನೀಲಕಂಠ ಗೌಡ, ವೈ.ಎಂ.ನಾಗರಾಜ್, ಎ.ಪಿ.ದಯಾನಂದ ಗೌಡ, ಎಚ್.ಬಿ.ಶಿವರಾಜ್ ಗೌಡ, ಜಯಶೀಲಪ್ಪ, ಕೆಜಿ.ಲೋಲಾಕ್ಷಮ್ಮ, ಡಿ.ಬಿ.ಅಣ್ಣಪ್ಪ, ಎಚ್.ಸಿ. ಚಂದ್ರಶೇಖರಪ್ಪ ಗೌಡ, ಟಿ.ಬಿ.ರಾಜೇಂದ್ರ ನಾಯ್ಕ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News