ಶಿವಮೊಗ್ಗ: ಯುವತಿ ಆತ್ಮಹತ್ಯೆ ಪ್ರಕರಣ; ಆರೋಪಿಗಳಿಗೆ ಕಠಿಣ ಶಿಕ್ಷೆ

Update: 2018-03-05 11:10 GMT

ಶಿವಮೊಗ್ಗ, ಮಾ. 5: ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾದ ಪ್ರಕರಣದ ಆರೋಪಿಗಳಿಬ್ಬರಿಗೆ ಜಿಲ್ಲೆಯ ಸಾಗರದ 5 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. 

ಪ್ರಕರಣದ 1 ನೇ ಆರೋಪಿಯಾಗಿದ್ದ ಗುರುಮೂರ್ತಿಗೆ 5 ವರ್ಷ ಕಠಿಣ ಕಾರಾಗೃಹ ವಾಸ, 20 ಸಾವಿರ ರೂ. ದಂಡ ಹಾಗೂ 2 ನೇ ಆರೋಪಿಯಾಗಿದ್ದ ರಾಮಮೂರ್ತಿಗೆ 4 ವರ್ಷ ಕಠಿಣ ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶೆ ಮಹೇಶ್ವರಿ ಎಸ್. ಹಿರೇಮಠರವರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿ.ಜಿ.ಯಳಗೇರಿ ವಾದ ಮಂಡಿಸಿದ್ದರು. 

ಘಟನೆ ಹಿನ್ನೆಲೆ: ಸಾಗರ ತಾಲೂಕು ಕೆರೆ ಕರೂರು ಹೋಬಳಿ ವಳಗೆರೆ ಗ್ರಾಮದ ರವೀದ್ರ ಎಂಬುವರ ಪುತ್ರಿ ಸುಶ್ಮಿತಾ ಎಂಬವರು ಸಾಗರ ಪಟ್ಟಣದ ಮೆಟ್ರಿಕ್ ಪೂರ್ವ ಹಾಸ್ಟೆಲ್‍ನಲ್ಲಿದ್ದುಕೊಂಡು ಅಭ್ಯಾಸ ನಡೆಸುತ್ತಿದ್ದರು. ಇವರ ಸಹಪಾಠಿಯೋರ್ವಳು ಶಿಕ್ಷೆಗೊಳಗಾದ ರಾಮಮೂರ್ತಿಯನ್ನು ಪ್ರೀತಿಸುತ್ತಿದ್ದಳು. ಆತನ ಗುಣ - ನಡತೆ ಸರಿಯಿಲ್ಲ, ಆತನ ಸಹವಾಸ ಮಾಡದಂತೆ ಸುಶ್ಮಿತಾಳು ಸಹಪಾಠಿಗೆ ಕಿವಿಮಾತು ಹೇಳಿದ್ದಳು. ಈ ವಿಷಯ ತಿಳಿದ ರಾಮಮೂರ್ತಿಯು ಸುಶ್ಮಿತಾಳ ಮೇಲೆ ಆಕ್ರೋಶಗೊಂಡಿದ್ದ. ಅದನ್ನು ತನ್ನ ಸ್ನೇಹಿತ ಗುರುಮೂರ್ತಿಗೂ ತಿಳಿಸಿದ್ದ. ಆತ ನಿರಂತರವಾಗಿ ಸುಶ್ಮಿತಾಗೆ ಕರೆ ಮಾಡಿ, ನೀನು ಮದುವೆಯಾಗಬೇಕೆಂದಿರುವ ಹುಡುಗನನ್ನು ಕೊಲೆ ಮಾಡುತ್ತೆನೆ ಎಂದು ಬೆದರಿಕೆ ಹಾಕುತ್ತಿದ್ದ. 

ಈ ಕಿರುಕುಳದಿಂದ ಬೇಸತ್ತು, ಜೀವನದಲ್ಲಿ ಜಿಗುಪ್ಸೆಗೊಂಡ ಸುಶ್ಮಿತಾ 2016 ರ ಅಕ್ಟೋಬರ್ 5 ರಂದು ಡೆತ್‍ನೋಟ್‍ವೊಂದು ಬರೆದಿಟ್ಟು, ವಳಗೆರೆ ಗ್ರಾಮದ ಹೊರವಲಯ ಕಾಯಿಗೋಡು ಗುಡ್ಡದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಆತ್ಮಹತ್ಯೆಗೂ ಮುನ್ನ ತನಗೆ ಕಿರುಕುಳ ನೀಡಿದ್ದ ಗುರುಮೂರ್ತಿ ಬಗ್ಗೆ ಸವಿವರವಾಗಿ ಪ್ರಸ್ತಾಪಿಸಿದ್ದಳು. 

ಈ ಕುರಿತಂತೆ ಸುಶ್ಮಿತಾಳ ತಂದೆಯು ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ನಂತರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯಲ್ಲಿ ಮೃತ ಯುವತಿ ಬರೆದಿದ್ದ ಡೆತ್‍ನೋಟ್, ದೂರವಾಣಿ ಕರೆಯ ವೈಜ್ಞಾನಿಕ ಸಾಕ್ಷ್ಯ ಹಾಗೂ ಸಹಪಾಠಿಗಳ ಹೇಳಿಕೆಯ ಆಧಾರದಲ್ಲಿ ಆರೋಪಿಗಳಿಬ್ಬರ ಕೃತ್ಯ ದೃಢಪಟ್ಟಿತ್ತು. ಈ ಕಾರಣದಿಂದ ನ್ಯಾಯಾಲಯವು ಆರೋಪಿಗಳಿಬ್ಬರಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News