ಪುಟ್ಟಣ್ಣಯ್ಯರ ಹಾದಿಯಲ್ಲಿ ನಡೆಯಲು ಅವಕಾಶ ನೀಡಿ: ಸುನೀತಾ ಪುಟ್ಟಣ್ಣಯ್ಯ

Update: 2018-03-05 15:55 GMT

ಮಂಡ್ಯ, ಮಾ.5: ಪುಟ್ಟಣ್ಣಯ್ಯ ಅವರ ಹಾದಿಯಲ್ಲಿ ನಡೆಯಲು ನಮಗೂ ಅವಕಾಶ ನೀಡಿ ಎನ್ನುವ ಮೂಲಕ ಶಾಸಕ, ರೈತ ಹೋರಾಟಗಾರ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರು ಪತ್ನಿ ಸುನೀತಾ ಅವರು ಮನವಿ ಮಾಡಿಕೊಳ್ಳುವ ಮೂಲಕ ಪರೋಕ್ಷವಾಗಿ ತಮ್ಮ ಕುಟುಂಬ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆಗಿಳಿಯುವ ಇಂಗಿತ ಹೊರ ಹಾಕಿದ್ದಾರೆ.

ತಾಲೂಕಿನ ದುದ್ದ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ದುದ್ದ ಹೋಬಳಿ ನಾಗರಿಕರು ಸೋಮವಾರ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಏರ್ಪಡಿಸಿದ್ದ ಹಸಿರು ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ನಿಮ್ಮ ಜತೆಗಿರುತ್ತೇವೆ. ನೀವೂ ನಮ್ಮ ಜತೆ ಸಹಕರಿಸಿ ಎಂದು ಜನತೆಯಲ್ಲಿ ಮನವಿ ಮಾಡಿದರು.

ಪುಟ್ಟಣ್ಣಯ್ಯನವರು ಹೋರಾಟದ ಜತೆಗೆ ಚಿಂತನೆ ಮಾಡುವುದನ್ನೂ ಹೇಳಿಕೊಟ್ಟಿದ್ದಾರೆ. ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದೇವೆ. ಪುಟ್ಟಣ್ಣಯ್ಯ ಅವರು ಶಾಸಕರಾದ ಬಳಿಕ ಆ ಪಕ್ಷ, ಈ ಪಕ್ಷವೆಂದು ತಾರತಮ್ಯ ಮಾಡದೆ ಪಕ್ಷಾತೀತವಾಗಿ ಕೆಲಸ ಮಾಡಿದ್ದರು. ರೈತರು ಉಳಿಯಬೇಕು. ನಾವೂ ಅವರ ಹಾದಿಯಲ್ಲಿ ನಡೆಯುತ್ತೇವೆ ಎಂದು ಅವರು ಹೇಳಿದರು.

ಪುಟ್ಟಣ್ಣಯ್ಯ ಅವರು ಈ ಭಾಗಕ್ಕೆ 103 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಗೆ ಸರಕಾರದ ಅನುಮೋದನೆ ಕೋರಿದ್ದರು. ಅವರು ಮೃತಪಟ್ಟ ದಿನವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿದ್ದರು. ಈ ಯೋಜನೆ ಜಾರಿಯಿಂದ ಸುಮಾರು 56 ಹಳ್ಳಿಗಳಿಗೆ ಕುಡಿಯುವ ನೀರು ದೊರೆಯಲಿದೆ ಎಂದು ಅವರು ತಿಳಿಸಿದರು.

ಮೇಲುಕೋಟೆ ಕ್ಷೇತ್ರ ಉಳಿಸಿಕೊಳ್ಳಬೇಕು:
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್ ಮಾತನಾಡಿ, ವಿಧಾನಸಭೆಯಲ್ಲಿ ಪುಟ್ಟಣ್ಣಯ್ಯ ಅವರು ಒಂದು ಶಕ್ತಿಯಾಗಿದ್ದರು, ಅಂತಹ ಶಕ್ತಿಯನ್ನು ಮತ್ತೆ ನಾವೇ ಸೃಷ್ಠಿ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ರೈತರ ಬದುಕು ಅತಂತ್ರವಾಗುತ್ತದೆ. ಹಾಗಾಗಿ ವಿಧಾನಸಭೆಗೆ ಹಸಿರು ಶಾಲು ಹೊದ್ದ ಶಾಸಕ ಇರಲೇಬೇಕು ಎಂದು ಪ್ರತಿಪಾದಿಸಿದರು.

ರೈತ ಪ್ರತಿನಿಧಿ ವಿಧಾನಸೌಧದಲ್ಲಿ ವಿಚಾರ ಪ್ರಸ್ತಾಪಿಸದಿದ್ದರೆ ರೈತರಿಗೆ ಉಳಿಗಾಲವಿಲ್ಲ. ವಿಶ್ವ ವ್ಯಾಪಾರ ಒಪ್ಪಂದ ಜಾರಿಗೆ ಬರುತ್ತಿದ್ದು, ಮುಂದಿನ ದಿನಗಳ ಕರಾಳವಾಗಲಿವೆ. ಆದ್ದರಿಂದ ರೈತರ ಧ್ವನಿಯಾಗಿ ಮೇಲುಕೋಟೆ ಕ್ಷೇತ್ರವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಸವಾಲಾಗಿದೆ ಎಂದು ಅವರು ಕರೆ ನೀಡಿದರು.

ಮೇಲುಕೋಟೆ ಕ್ಷೇತ್ರವನ್ನು ರೈತಸಂಘ ಉಳಿಸಿಕೊಳ್ಳಬೇಕಾಗಿದೆ. ಮಾ.8 ರಂದು ಪಾಂಡವಪುರ ಕ್ರೀಡಾಂಗಣದಲ್ಲಿ ಪುಟ್ಟಣ್ಣಯ್ಯ ಅವರ ನುಡಿನಮನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಬರುತ್ತಿದ್ದಾರೆ. ಅಂದು ಕ್ಷೇತ್ರದ ಜವಾಬ್ದಾರಿಯನ್ನು ಯಾರು ಹೊರಬೇಕು ಎಂಬುವುದು ತಿಳಿಯಲಿದೆ ಎಂದು ಹೇಳಿದರು.

ಶಾಸಕ ಎನ್.ಚಲುವರಾಯಸ್ವಾಮಿ ಮಾತನಾಡಿ, ಪುಟ್ಟಣ್ಣಯ್ಯನವರ ಬೆಲೆ, ವ್ಯಕ್ತಿತ್ವ, ಹೋರಾಟ, ಅವರ ಧ್ವನಿ ಕಳೆದುಕೊಂಡಾಗಲೇ ಎಲ್ಲರಿಗೂ ಅರಿವಾಗಿದೆ. ಪುಟ್ಟಣ್ಣಯ್ಯ ಪೂರ್ವಿಕರು ಸುಮಾರು 80 ಎಕರೆ ಆಸ್ತಿ ಹೊಂದಿದ್ದರು. ಈಗ ಅವರ ಬಳಿ ಇರುವುದು ಕೇವಲ 2 ಎಕರೆ ಮಾತ್ರ. ಐಶರಾಮಿ ಜೀವನಕ್ಕೆ ಜಮೀನು ಕಳೆದುಕೊಳ್ಳಲಿಲ್ಲ, ಸಮಾಜಕ್ಕಾಗಿ ತಮ್ಮ ಜಮೀನು ಕಳೆದುಕೊಂಡರು ಎಂದು ಸ್ಮರಿಸಿದರು.

ರೈತರ ಅಭ್ಯುದಯಕ್ಕೆ ಹೋರಾಟದ ಮೂಲಕ ಸ್ವಾಭಿಮಾನದ ಹೆಜ್ಜೆ ಇರಿಸಿದ್ದರು. ಶಾಸಕರಾಗಿ ವಿಧಾನಸಭೆಯಲ್ಲಿ ಮಾತನಾಡಲು ನಿಂತಾಗ ಉಳಿದ ಎಲ್ಲಾ ಶಾಸಕರು ಕಾಫಿ, ತಿಂಡಿ ಬಿಟ್ಟು ಕೇಳಲು ಕಾತರದಿಂದ ಕಾಯುತ್ತಿದ್ದರು. ದೇಶದ ಎಲ್ಲ ವರ್ಗದ ಸಮಸ್ಯೆಯನ್ನು ಸಮರ್ಥವಾಗಿ ಬಿಚ್ಚಿಡುವ ಶಕ್ತಿಯಿದ್ದುದು ಪುಟ್ಟಣ್ಣಯ್ಯ ಅವರಿಗೆ ಮಾತ್ರ ಎಂದು ಅವರು ಹೇಳಿದರು.

ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಮಹಿಳಾಧ್ಯಕ್ಷೆ ನಂದಿನಿ ಜಯರಾಂ, ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ, ಮಾಜಿ ಶಾಸಕರಾದ ಜಿ.ಬಿ.ಶಿವಕುಮಾರ್, ಎಚ್.ಬಿ.ರಾಮು, ಯುವ ಮುಖಂಡರಾದ ಪಚ್ಚೆ ನಂಜುಂಡಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಬೀರಗೌಡನಹಳ್ಳಿ ಹರ್ಷ, ಇತರ ಮುಖಂಡರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ತೆಂಗಿನ ಸಸಿ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News