ಕಾಂಗ್ರೆಸ್ ಗೆ ರಾಜ್ಯಸಭೆಯಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಹೆಚ್ಚುವುದು ಬೇಕಿಲ್ಲ : ಕುಮಾರಸ್ವಾಮಿ

Update: 2018-03-05 16:38 GMT

ಮಂಗಳೂರು,ಮಾ.5: ಹಿಂಬಾಗಿಲಿನಲ್ಲಿ ಆರೆಸ್ಸೆಸ್ ಗೆ ಬೆಂಬಲ ನೀಡುತ್ತಾ ಮೇಲ್ನೋಟಕ್ಕೆ ಮುಸ್ಲಿಮರ ಪರ ಕಣ್ಣೀರು ಸುರಿಸುವ ದ್ವಿಮುಖ ನೀತಿಯನ್ನು ನಿಲ್ಲಿಸಿ. ಕಾಂಗ್ರೆಸ್ ನ ವಂಚನೆಗೆ ಇನ್ನು ಮುಂದೆ ಮುಸ್ಲಿಮರು ಬಲಿಯಾಗುವುದಿಲ್ಲ ಎಂದು ರಾಜ್ಯ ಜಾತ್ಯತೀತ ಜನತಾ ದಳದ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮುಸ್ಲಿಮರ ಬಗ್ಗೆ ಕಾಂಗ್ರೆಸ್ ನದ್ದು ಸದಾ ಮೊಸಳೆ ಕಣ್ಣೀರು. ಹಿಂದೆ ನಮ್ಮ ಪಕ್ಷದಿಂದ ಮುಸ್ಲಿಂ ಸಮುದಾಯಕ್ಕೆ ರಾಜ್ಯಸಭೆಯಲ್ಲಿ ಪ್ರಾತಿನಿಧ್ಯ ನೀಡಲು ಬಿಎಂ ಫಾರೂಖ್ ಅವರನ್ನು ನಿಲ್ಲಿಸಿದಾಗ ಕಾಂಗ್ರೆಸ್ ನವರು ನಮ್ಮ ಪಕ್ಷದ ಕೆಲವು ಶಾಸಕರಿಗೆ ಲಂಚ ಕೊಟ್ಟು ಪಕ್ಷಾಂತರ ಮಾಡಿಸಿ ಫಾರೂಖ್ ರನ್ನು ಸೋಲಿಸಿದರು. ಈ ಸಲ ಮತ್ತೆ ಫಾರೂಕ್ ರನ್ನೇ ನಾವು ರಾಜ್ಯಸಭೆ ಚುನಾವಣೆಗೆ ನಿಲ್ಲಿಸಿದ್ದೇವೆ. ಬಹಿರಂಗವಾಗಿ ಬೆಂಬಲ ನೀಡಿ ಎಂದು ಕಾಂಗ್ರೆಸ್ ಗೆ ಮನವಿ ಮಾಡಿದ್ದೇವೆ. ಆದರೆ ಕಾಂಗ್ರೆಸ್ ಗೆ ರಾಜ್ಯಸಭೆಯಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಹೆಚ್ಚುವುದು ಬೇಕಿಲ್ಲ. ಅದಕ್ಕಾಗಿ ಫಾರೂಖ್ ಸ್ಪರ್ಧೆಗೆ ಬೆಂಬಲ ನೀಡಲು ಹಿಂದೆ ಮುಂದೆ ನೋಡುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

ಕರಾವಳಿಯಲ್ಲಿ ಕೋಮುಗಲಭೆಗಳು ನಿರಂತರವಾಗಿ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಕೋಮು ಗಲಭೆಗಳು ಹೆಚ್ಚಾಗಿವೆ. ಆರೆಸ್ಸೆಸ್ ಮುಖಂಡರ ಜೊತೆಗೆ ಗುಪ್ತವಾಗಿ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿರುವುದೇ ಇದಕ್ಕೆ ಕಾರಣ. ಪ್ರಭಾಕರ ಭಟ್ಟ, ಜಗದೀಶ್ ಕಾರಂತ, ಅನಂತ ಕುಮಾರ್ ಹೆಗಡೆ ಮುಂತಾದವರು ಪ್ರತಿದಿನ ಕೋಮು ವೈಷಮ್ಯ ಹುಟ್ಟಿಸುವ ಹೇಳಿಕೆ ನೀಡಿದರೂ ಕಾಂಗ್ರೆಸ್ ಸರಕಾರ ಅವರನ್ನು ಬಂಧಿಸುವುದಿಲ್ಲ. ಎರಡೂ ಪಕ್ಷಗಳ ನಡುವೆ ಒಳ ಒಪ್ಪಂದ ಇದೆ ಎಂದು ಅವರು ಆರೋಪಿಸಿದರು.

ಕರಾವಳಿ ಜಿಲ್ಲೆಗಳಲ್ಲಿ ಸದಾ ಉದ್ರಿಕ್ತ ಸ್ಥಿತಿ ಇರುವುದರಿಂದ ಇಲ್ಲಿಗೆ ಹೊರಗಿನಿಂದ ಬಂಡವಾಳ ಹೂಡಿಕೆದಾರರು ಬರಲು ಹೆದರುತ್ತಿದ್ದಾರೆ. ಐಟಿ, ಬಿಟಿ ಗಳಲ್ಲಿ ಕೆಲಸ ಮಾಡಲೂ ತಜ್ಞರು ಹೆದರುತ್ತಾರೆ. ಕಾಂಗ್ರೆಸ್ ಕಾನೂನು ಶಿಸ್ತು ಪರಿಸ್ಥಿತಿ ನಿರ್ವಹಿಸಲು ಸಂಪೂರ್ಣ ವಿಫಲವಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಟಿಪ್ಪು ಜಯಂತಿ, ಬಹಮನಿ ಉತ್ಸವ ಮುಂತಾದ ಪ್ರಯೋಜನವಿಲ್ಲದ ಸಮಾರಂಭಗಳನ್ನು ನಡೆಸಿ ಮುಸ್ಲಿಮ್ ಯುವಕರನ್ನು ಪ್ರಚೋದಿಸಿ ಬೀದಿ ಕಾಳಗಕ್ಕೆ ಬಲಿಯಾಗಿಸುವುದು ಕಾಂಗ್ರೆಸ್ ರಾಜಕೀಯದ ಶೈಲಿ. ಆದರೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ನಿಜಕ್ಕೂ ಉಪಯೋಗ ಆಗುವ ಸಾಚಾರ್ ಸಮಿತಿ ವರದಿಯನ್ನು ಜಾರಿಗೊಳಿಸುತ್ತೇವೆ. ಆಲಿಘಡ್ ವಿವಿ ಮಾದರಿಯಲ್ಲಿ ಕರ್ನಾಟಕದಲ್ಲೂ ಒಂದು ವಿಶ್ವವಿದ್ಯಾಲಯ ಸ್ಥಾಪಿಸುತ್ತೇವೆ. ಮುಸ್ಲಿಮರ ಆರ್ಥಿಕ ಸಾಮಾಜಿಕ ಉನ್ನತಿಗೆ ಹೊಸ ಯೋಜನೆಗಳನ್ನು ರೂಪಿಸುತ್ತೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News