ಜಾತ್ಯತೀತ ಪಕ್ಷಗಳ ಚುನಾವಣಾ ಹೊಂದಾಣಿಕೆ ಅಗತ್ಯ: ಅಫ್ಸರ್ ಕೊಡ್ಲಿಪೇಟೆ

Update: 2018-03-05 17:30 GMT

ಮಂಡ್ಯ, ಮಾ.5: ಮುಂಬರುವ ಚುನಾವಣೆಯಲ್ಲಿ ಕೋಮುವಾದಿಗಳಿಗೆ ಅಧಿಕಾರ ಸಿಗದಂತೆ ಜಾತ್ಯತೀತ ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ ಎಂದು ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.

ಪಕ್ಷದ ವತಿಯಿಮದ ನಗರದಲ್ಲಿ ಏರ್ಪಡಿಸಿದ್ದ  ರಾಜಕೀಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಹೊರತುಪಡಿಸಿ ಜಾತ್ಯತೀತ ಪಕ್ಷಗಳ ಜತೆ ಎಸ್‍ಡಿಪಿಐ ಚುನಾವಣಾ ಹೊಂದಾಣಿಕೆಗೆ ಸಿದ್ದವಾಗಿದೆ ಎಂದರು.

ಕೇವಲ ಬಿಜೆಪಿ ಸೋಲಿಸಿ ಇನ್ನೊಂದು ಪಕ್ಷ ಗೆಲ್ಲಿಸುವುದು ಮೂರ್ಖತನ. ಈ ನಿಟ್ಟಿನಲ್ಲಿ ಸಮಾನ ಮನಸ್ಕ ಸಂಘಸಂಸ್ಥೆಗಳು ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಸಹ ಚುನಾವಣಾ ಪೂರ್ವ ಯೋಜನೆ ರೂಪಿಸಬೇಕಾಗಿದೆ ಎಂದು ಅವರು ಹೇಳಿದರು.

ಎಸ್‍ಡಿಪಿಐ ಜಾತ್ಯತೀತ ಮನಸ್ಥಿತಿಯ ಪಕ್ಷಗಳ ಜತೆ ಚುನಾವಣಾ ಪೂರ್ವ ಹೊಂದಾಣಿಕೆಗೆ ಸಿದ್ದವಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದರೊಂದಿಗೆ ಎಸ್‍ಡಿಪಿಐ ಈ ಬಾರಿ ರಾಜ್ಯದಲ್ಲಿ ತನ್ನ ರಾಜಕೀಯ ನೆಲೆಯನ್ನು ಕಂಡುಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎಸ್‍ಡಿಪಿಐ ಕನಿಷ್ಠ 50 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಈಗಾಗಲೇ 5 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯಾಗಿದೆ. ಮಂಡ್ಯ ಸೇರಿದಂತೆ 25 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸದ್ಯದಲ್ಲೇ ಘೋಷಿಸಲಿದ್ದೇವೆ ಎಂದು ಅವರು ತಿಳಿಸಿದರು.

ಶೋಷಿತ ಸಮುದಾಯದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರವಿಲ್ಲದೇ ಮಾಡುವ ಎಲ್ಲಾ ಪ್ರಯತ್ನಗಳು ವ್ಯರ್ಥ ಎಂದು ಅಫ್ಸರ್ ಅಭಿಪ್ರಾಯಪಟ್ಟರು. 

ಇದುವರೆಗೆ ಅಧಿಕಾರ ನಡೆಸಿದ ಪಕ್ಷಗಳ ಸರಕಾರ ಶೋಷಿತರಿಗೆ ನ್ಯಾಯ ಕೊಡಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಅದರಲ್ಲೂ ಮುಸ್ಲಿಂ ಸಮುದಾಯದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರ ಕೊಡುಗೆ ನಗಣ್ಯ ಎಂದು ಅವರು ಆರೋಪಿಸಿದರು.

ರಾಜ್ಯದ ಕಾಂಗ್ರೆಸ್ ಸರಕಾರ ರಂಗನಾಥ್ ಮಿಶ್ರ ವರದಿ ಜಾರಿ, ವಕ್ಫ್ ಆಸ್ತಿಯ ಸಂರಕ್ಷಣೆಗೆ ಸರ್ವೆ ಇತರ ಭರವಸೆಗಳನ್ನು ನೀಡಿತು. ಆದರೆ, ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಅವರು ಟೀಕಿಸಿದರು.

ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಮುಹಮ್ಮದ್ ತಾಹೇರ್, ಕಾರ್ಯದರ್ಶಿ ಆಸ್ಗರ್, ಪಿಎಫ್‍ಐ ಜಿಲ್ಲಾಧ್ಯಕ್ಷ ಎಂ.ಎಸ್.ರಫೀಕ್, ನೂರಾನಿ ಮಸೀದಿ ಅಧ್ಯಕ್ಷ ಆರ್.ಮುಮ್ತಾಜ್ ಖಾನ್, ಸಫ್ದರಿಯ ಮಸೀದಿ ಅಧ್ಯಕ್ಷ ಫಾರೂಕ್ ಅಹ್ಮದ್, ವಕೀಲಾರದ ಲಕ್ಷ್ಮಣ್ ಚೀರನಹಳ್ಳಿ, ಜಗನ್ನಾಥ್, ನ್ಯಾಷನಲ್ ವುಮೆನ್ಸ್ ಫ್ರಂಟ್ ಜಿಲ್ಲಾ ಸಂಚಾಲಕಿ ರೆಶ್ಮಾಭಾನು, ಕಾವೇರಿ ಕಣಿವೆ ರೈತ ಒಕ್ಕೂಟದ ಎಂ.ಬಿ.ನಾಗಣ್ಣಗೌಡ, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News