ಮಂಡ್ಯ: ಜಿಲ್ಲೆಯ ಕೇರಳಿಗರು ಕನ್ನಡ ಭಾಷೆ ಕಲಿಯಬೇಕು; ಜೆ.ಅಲೆಕ್ಸಾಂಡರ್

Update: 2018-03-05 17:33 GMT

ಮಂಡ್ಯ, ಮಾ.5: ಜಿಲ್ಲೆಯಲ್ಲಿರುವ ಕೇರಳಿಗರು ಇಲ್ಲಿನ ಕನ್ನಡ ಭಾಷೆಯನ್ನು ಕಲಿತು, ತಮ್ಮ ಮಕ್ಕಳಿಗೂ ಕನ್ನಡ ನಾಡುನುಡಿ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು ಎಂದು ಮಾಜಿ ಸಚಿವ ಜೆ.ಅಲೆಕ್ಸಾಂಡರ್ ಸಲಹೆ ನೀಡಿದ್ದಾರೆ.

ನಗರದ ಕಲಾಮಂದಿರದಲ್ಲಿ ರವಿವಾರ ರಾತ್ರಿ ನಡೆದ ಸುವರ್ಣ ಕೇರಳ ಸಂಘದ ಮೊದಲ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಷ್ಟು ಮಂದಿ ಕೇರಳಿಗರು ಮಂಡ್ಯ ಜಿಲ್ಲೆಯಲ್ಲಿರುವುದು ತಿಳಿದಿರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಕುವೆಂಪು, ಚನ್ನವೀರ ಕಣವಿ ಮುಂತಾದ ಕವಿಗಳು, ಸಾಹಿತಿಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದು, ಇಂತಹ ಭಾಷೆಯನ್ನು ಕೇರಳಿಗರು ಕಲಿಯಬೆಕು. ಜತೆಗೆ, ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಅವರು ಹೇಳಿದರು.

ಜಿಲ್ಲೆಯ ಜನರ ಜತೆ ಬೆರೆತು ತಮ್ಮ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಇರುವ ಗೌರವವನ್ನು ಹಂಚಿಕೊಳ್ಳಬೇಕೆಂದ ಅವರು, ಓರ್ವ ಮಲೆಯಾಳಿ ಕರ್ನಾಟಕದ ಸಚಿವ ಸಂಪುಟದಲ್ಲಿ ಮಂತ್ರಿಯಾಗಲು ಕನ್ನಡಿಗರ ವಿಶಾಲ ಹೃದಯವೇ ಕಾರಣವೆಂದು ಶ್ಲಾಘಿಸಿದರು.

ಸಂಘದ ಅಧ್ಯಕ್ಷರಾದ ರಾಜನ್ ಜೇಕಬ್ ಅವರ ಕಾರ್ಯವನ್ನು ಶ್ಲಾಘಿಸಿದ ಅವರು, ಈ ಸಂಘ ನುಡಿಯುವುದೆಲ್ಲ ಮಧುರವಾಗಿರಲಿ, ಇದರ ಚಿಂತನೆ ಎಲ್ಲ ಬೆಳಕಿನಿಂದ ತುಂಬಿರಲಿ ಮತ್ತು ಸೇವೆಯ ಮೂಲಕ ಹೆಚ್ಚು ಹೆಚ್ಚು ಜನರ ಮನಸ್ಸಿನಲ್ಲಿ ಉಳಿಯುವಂತಾಗಲಿ ಎಂದು ಹಾರೈಸಿದರು.

ಡಾ.ಅನಿಲ್ ಥಾಮಸ್, ಶಂಕರನಾರಾಯಣ್, ರಾಜನ್ ಜೇಕಬ್, ಶ್ರೀದೇವಿ ಉನ್ನಿ, ವಾಲ್ಸನ್, ಸುರೇಶ್‍ಬಾಬು, ಚಂದ್ರನ್, ಶ್ರೀದೇವಿ, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News