ಹಿರಿಯರ ಮೇಲೆ ಕಣ್ಣಿಡಲಿವೆ... ಸೆನ್ಸರ್‌ಗಳು

Update: 2018-03-06 18:38 GMT

ಮನೆಯಲ್ಲಿ ಒಂಟಿಯಾಗಿರುವ ವೃದ್ಧ ತಂದೆ ಅಥವಾ ತಾಯಿ ಅಥವಾ ಬಂಧುವನ್ನು ನೋಡಿಕೊಳ್ಳುವುದು ನಿಜಕ್ಕೂ ಚಿಂತೆಯನ್ನು ಹುಟ್ಟಿಸುತ್ತದೆ. ಆದರೆ ಮನೆಯಲ್ಲಿ ಒಂಟಿಯಾಗಿರುವ ನಿಮ್ಮ ತಾಯಿ ಬೆಳಗ್ಗೆಯಿಂದ ಹಾಸಿಗೆಯಿಂದ ಎದ್ದೇ ಇಲ್ಲ ಅಥವಾ ಬಿದ್ದು ಪೆಟ್ಟುಮಾಡಿಕೊಂಡಿದ್ದಾರೆ ಎನ್ನುವುದನ್ನು ನಿಮ್ಮ ಸ್ಮಾರ್ಟ್ ಫೋನ್ ತಾನಾಗಿಯೇ ನಿಮಗೆ ತಿಳಿಸುವಂತಿದ್ದರೆ?
ಮನೆಯಲ್ಲಿನ ಚಟುವಟಿಕೆಗಳ ಮೇಲೆ ನಿರಂತರ ನಿಗಾಯಿರಿಸುವ ಮತ್ತು ಸ್ಮಾರ್ಟ್ ಫೋನ್‌ಗಳಿಗೆ ಎಚ್ಚರಿಕೆಯ ಸಂದೇಶಗಳನ್ನು ರವಾನಿಸುವ ಸೆನ್ಸರ್‌ಗಳು ಈಗ ಮನೆಯಿಂದ ಹೊರಗಿದ್ದೇ ಮನೆಯಲ್ಲಿ ಒಂಟಿಯಾಗಿರುವ ವ್ಯಕ್ತಿಗಳನ್ನು ಗಮನಿಸುವುದನ್ನು ಸಾಧ್ಯವಾಗಿಸುತ್ತಿವೆ. ಇಂತಹ ಸುಧಾರಿತ ಸೆನ್ಸರ್‌ಗಳನ್ನು ಇತ್ತೀಚೆಗೆ ಆಸ್ಟ್ರೇಲಿಯಾದ ಬಾರ್ಸಿಲೋನಾದಲ್ಲಿ ನಡೆದ ವಿಶ್ವದ ಅತಿದೊಡ್ಡ ಮೊಬೈಲ್ ಫೋನ್‌ಗಳ ಮೇಳ ‘ಮೊಬೈಲ್ ವರ್ಲ್ಡ್ ಕಾಂಗ್ರೆಸ್’ನಲ್ಲಿ ಪ್ರದರ್ಶಿಸಲಾಗಿದೆ.
ಹಿರಿಯ ವ್ಯಕ್ತಿಗಳ ಕಾಳಜಿಯನ್ನು ವಹಿಸುವ ತಂತ್ರಜ್ಞಾನ ಉದ್ಯಮ ವೇಗವಾಗಿ ಬೆಳೆಯುತ್ತಿದ್ದು, 2020ರ ವೇಳೆಗೆ ಅಮೆರಿಕವೊಂದರಲ್ಲೇ ಅದರ ಗಾತ್ರ ವಾರ್ಷಿಕ 20 ಶತಕೋಟಿ ಡಾಲರ್‌ಗಳನ್ನು ಮೀರಲಿದೆ.
ವಿಶ್ವದಲ್ಲಿ ಹಿರಿಯರ ಸಂಖ್ಯೆ ಹೆಚ್ಚುತ್ತಿರುವುದರಿಂದ ಈ ಕ್ಷೇತ್ರದಲ್ಲಿ ತಂತ್ರಜ್ಞಾನ ಉದ್ಯಮವು ಹೆಚ್ಚಿನ ಆಸಕ್ತಿಯನ್ನು ತಳೆಯುತ್ತಿದೆ. 2008ರಲ್ಲಿ ಸೆನ್ಸರ್‌ಗಳ ಅಭಿವೃದ್ಧಿ ಆರಂಭಗೊಂಡಿದ್ದು, ಪ್ರಾರಂಭಿಕ ಹಂತದಲ್ಲಿ ದುಬಾರಿಯಾಗಿದ್ದ ಅವುಗಳ ಬೆಲೆಗಳು ಕೂಡ ಈಗ ಇಳಿದಿವೆ.
ಮೇಳದಲ್ಲಿ ಲಂಡನ್‌ನ ಸ್ಟಾರ್ಟ್‌ಅಪ್ ವೋಲ್ಟಾವೇರ್ ಅನಾವರಣಗೊಳಿಸಿರುವ ವ್ಯವಸ್ಥೆಯಲ್ಲಿ ಸೆನ್ಸರ್‌ನ್ನು ಮನೆಯ ಮುಖ್ಯ ಫ್ಯೂಸ್ ಬಾಕ್ಸ್ ನಲ್ಲಿ ಅಳವಡಿಸಲಾಗುತ್ತದೆ. ಇದು ವೈ-ಫೈ ಮೂಲಕ ವಿದ್ಯುತ್ ಬಳಕೆಯ ದತ್ತಾಂಶಗಳನ್ನು ಕ್ಲೌಡ್ ಆಧಾರಿತ ಸರ್ವರ್‌ಗೆ ರವಾನಿಸುತ್ತದೆ ಮತ್ತು ಅಲ್ಲಿ ಈ ದತ್ತಾಂಶಗಳು ವಿಶ್ಲೇಷಿಸಲ್ಪಡುತ್ತವೆ.
ಉದಾಹರಣೆಗೆ ಮನೆಯಲ್ಲಿ ಒಂಟಿಯಾಗಿರುವ ವೃದ್ಧ ವ್ಯಕ್ತಿ ಮಾಮೂಲಿನಂತೆ ಬೆಳಗ್ಗೆ ಹಾಸಿಗೆಯಿಂದ ಎದ್ದು ಕಾಫಿ ಅಥವಾ ಟೀ ಮಷಿನ್‌ನ್ನು ಚಾಲೂ ಮಾಡಿರದಿದ್ದರೆ ಈ ವ್ಯವಸ್ಥೆಯು ಚಟುವಟಿಕೆಯ ಕೊರತೆಯನ್ನು ಗುರುತಿಸುತ್ತದೆ ಮತ್ತು ಆ ವ್ಯಕ್ತಿಯ ಹೊಣೆಯನ್ನು ಹೊತ್ತಿರುವರ ಸ್ಮಾರ್ಟ್ ಫೋನ್‌ಗೆ ಟೆಕ್ಸ್ಟ್ ಸಂದೇಶವನ್ನು ರವಾನಿಸುತ್ತದೆ.
ಸದ್ಯ ಬ್ರಿಟನ್ ಮತ್ತು ಇಟಲಿಯ ಎರಡು ಎಲೆಕ್ಟ್ರಿಕಲ್ ಕಂಪೆನಿಗಳು ಪ್ರಾಯೋಗಿಕ ನೆಲೆಯಲ್ಲಿ ಈ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸುತ್ತಿವೆ.
‘‘ಮನೆಗಳಲ್ಲಿ ಒಂಟಿಯಾಗಿರುವ ಹಿರಿಯರ ಮೇಲೆ ನಿಗಾಯಿಡಲು ಕ್ಯಾಮರಾ ಬಳಸುವುದಾದರೆ ಅಂತಹ ಹಲವಾರು ಕ್ಯಾಮರಾಗಳು ಅಗತ್ಯವಾಗುತ್ತವೆ, ಹೀಗಾಗಿ ಅದು ದುಬಾರಿಯಾಗುತ್ತದೆ. ಆದರೆ ಪ್ರತೀ ಮನೆಗೆ ನಮ್ಮ ಒಂದು ಸಿಸ್ಟಮ್‌ನ್ನು ಮಾತ್ರ ಅಳವಡಿಸಬಹುದಾದ್ದರಿಂದ ತುಂಬ ಮಿತವ್ಯಯಕಾರಿಯಾಗುತ್ತದೆ’’ ಎನ್ನುತ್ತಾರೆ ವೋಲ್ಟಾವೇರ್‌ನ ಅಧ್ಯಕ್ಷ ಸೆರ್ಗಿ ಒಗರ್ಡೊನವ್.

 ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಇಸ್ರೇಲ್‌ನ ವಯ್ಯರ್ ಕಂಪೆನಿಯು ಪ್ರದರ್ಶಿಸಿದ ನೂತನ ಸೆನ್ಸರ್ ಮನೆಯ ಕೋಣೆಯಲ್ಲಿ ಒಂಟಿಯಾಗಿರುವ ಹಿರಿಯ ವ್ಯಕ್ತಿಯ ಮೇಲೆ ನಿಗಾಯಿರಿಸಲು ರೇಡಿಯೊ ತರಂಗಗಳನ್ನು ಬಳಸುತ್ತದೆ. ಅವರು ಕುಳಿತುಕೊಂಡಿದ್ದಾರೆಯೇ, ನಿಂತಿದ್ದಾರೆಯೇ ಅಥವಾ ಹಾಸಿಗೆಯಲ್ಲಿ ಮಲಗಿದ್ದಾರೆಯೇ ಎನ್ನುವುದನ್ನು ಈ ಸೆನ್ಸರ್ ತಿಳಿಸುತ್ತದೆ. ಅಷ್ಟೇ ಏಕೆ, ಅವರು ಉಸಿರಾಡುತ್ತಿದ್ದಾರೆಯೇ ಇಲ್ಲವೇ ಎನ್ನುವುದನ್ನೂ ತಿಳಿಸುತ್ತದೆ. ಹಿರಿಯ ವ್ಯಕ್ತಿ ನೆಲದಲ್ಲಿ ಬಿದ್ದಿದ್ದರೆ ಅಥವಾ ಉಸಿರಾಡುವುದನ್ನು ನಿಲ್ಲಿಸಿದ್ದರೆ ಅವರ ಕೇರ್‌ಟೇಕರ್ ಸ್ಮಾರ್ಟ್‌ಫೋನ್‌ಗೆ ಸೆನ್ಸರ್‌ನಿಂದ ತಕ್ಷಣ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ. ಈ ಸೆನ್ಸರ್ ರೇಡಿಯೊ ತರಂಗಗಳನ್ನು ಅವಲಂಬಿಸಿ ಕೆಲಸ ಮಾಡುವುದರಿಂದ ಮನೆಯ ಕೇಂದ್ರಭಾಗ ದಲ್ಲಿ ಕೇವಲ ಒಂದು ಸೆನ್ಸರ್‌ನ್ನು ಅಳವಡಿಸಿದರೆ ಸಾಕು. ಅದು ಇತರ ಕೋಣೆಗಳಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಗೋಡೆಗಳ ಮೂಲಕ ‘ನೋಡುತ್ತದೆ’
ಹೋಮ್ ಮಾನಿಟರಿಂಗ್ ಸಿಸ್ಟಮ್ ಅಥವಾ ಮನೆಗಳಲ್ಲಿ ಚಟುವಟಿಕೆಗಳ ಮೇಲೆ ಕಣ್ಣಿರಿಸುವ ತಂತ್ರಜ್ಞಾನ ವ್ಯವಸ್ಥೆಗಳು ಖಾಸಗಿ ತನವನ್ನು ಉಲ್ಲಂಘಿಸುತ್ತಿವೆ ಎಂಬ ಕಳವಳಗಳು ವ್ಯಕ್ತವಾಗಿವೆ ಯಾದರೂ, ಹೆಚ್ಚಿನ ಪ್ರಕರಣ ಗಳಲ್ಲಿ ಹಿರಿಯರೇ ತಮಗೆ ಈ ವ್ಯವಸ್ಥೆಯು ಬೇಕೆಂದು ಕೋರಿಕೊಳ್ಳುತ್ತಾರೆ ಮತ್ತು ಅಗತ್ಯವಿಲ್ಲದಿದ್ದಾಗ ಅದನ್ನು ಅವರು ಬಂದ್ ಮಾಡುತ್ತಾರೆ ಎಂದು ಸೆನ್ಸರ್ ತಯಾರಕರು ಪ್ರತಿಪಾದಿಸುತ್ತಾರೆ.
ಅಲ್ಲದೆ ಕ್ಯಾಮರಾ ಆಧಾರಿತ ಮಾನಿಟರಿಂಗ್ ಸಿಸ್ಟಮ್‌ಗಳಂತೆ ಈ ಸೆನ್ಸರ್‌ಗಳು ಚಿತ್ರಗಳನ್ನು ಸೆರೆ ಹಿಡಿಯುವುದಿಲ್ಲ, ಹೀಗಾಗಿ ಬಾತ್‌ರೂಮ್‌ನಂತಹ ಖಾಸಗಿ ಸ್ಥಳಗಳಿಗೆ ಅವು ಅತ್ಯಂತ ಸೂಕ್ತವಾಗಿದೆ ಎನ್ನುತ್ತಾರೆ ವಯ್ಯರ್‌ನ ನಿರ್ದೇಶಕ ಮ್ಯಾಲ್ಕ್‌ಂ ಬೆರ್ಮನ್.
ಸ್ವೀಡನ್‌ನ ಡೋರೊ ಕಂಪೆನಿಯು ತಯಾರಿಸಿರುವ ಸೆನ್ಸರ್ ಮನೆಗಳಲ್ಲಿ ಒಂಟಿಯಾಗಿರುವ ಹಿರಿಯರು ಬಿದ್ದರೆ ಅವರ ಹಿತೈಷಿಗಳ ಸ್ಮಾರ್ಟ್‌ಫೋನ್‌ಗೆ ಸಂದೇಶವನ್ನು ರವಾನಿಸುತ್ತದೆ. ಅಷ್ಟೇ ಏಕೆ, ಮನೆಯಲ್ಲಿಯ ಫ್ರಿಝ್‌ನ್ನು ತೆರೆದಿಟ್ಟಿದ್ದರೂ ಅದು ಎಚ್ಚರಿಕೆಯನ್ನು ನೀಡುತ್ತದೆ. ಹಿರಿಯರಿಗಾಗಿರುವ ಈ ತಂತ್ರಜ್ಞಾನ ಇನ್ನಷ್ಟು ಅಭಿವೃದ್ಧಿಗೊಳ್ಳುತ್ತಿದ್ದು ಹಿರಿಯ ವ್ಯಕ್ತಿಗಳು ಕೆಳಗೆ ಬೀಳುವ ಅಪಾಯವಿದ್ದಲ್ಲಿ ಅದನ್ನು ಮೊದಲೇ ಗ್ರಹಿಸಿ ಎಚ್ಚರಿಕೆಯ ಸಂದೇಶಗಳನ್ನು ರವಾನಿಸುವ ಸೆನ್ಸರ್‌ಗಳೂ ಶೀಘ್ರವೇ ಬರಲಿವೆ.
 ಕೆನಡಾದ ಸ್ಟಾರ್ಟ್ ಅಪ್ ಏರಿಯಲ್, ವ್ಯಕ್ತಿಯೋರ್ವ ನಡೆದಾಡಿದಾಗ ವೈ-ಫೈ ಸಂಕೇತಗಳಲ್ಲಿ ಉಂಟಾಗುವ ವ್ಯತ್ಯಯಗಳನ್ನು ಗುರುತಿಸುವ ಮೂಲಕ ಆ ವ್ಯಕ್ತಿಯ ವರ್ತನೆಯ ಮೇಲೆ ನಿಗಾಯಿರಿಸುವ ಸಿಸ್ಟಮ್‌ನ್ನು ರೂಪಿಸಿದೆ. ಇದು ಇಂತಹ ಮಾಹಿತಿಯನ್ನು ತನ್ನ ಆ್ಯಪ್‌ನ ಮೂಲಕ ಕೇರ್‌ಟೇಕರ್‌ಗೆ ರವಾನಿಸುತ್ತದೆ.

 

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News

ಜಗದಗಲ
ಜಗ ದಗಲ