ಮಡಿಕೇರಿ: ಕಾಜೂರು ಉರೂಸ್‍ಗೆ ಮಾ.11 ರಂದು ಚಾಲನೆ

Update: 2018-03-07 11:00 GMT

ಮಡಿಕೇರಿ, ಮಾ.7: ಪುಣ್ಯಶುಹದಾಕಳ್ ಅವರ ಹೆಸರಿನಲ್ಲಿ ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಉರೂಸ್ ಗರಗಂದೂರಿನ ಕಾಜೂರು ಗ್ರಾಮದಲ್ಲಿ ಮಾ.11 ಮತ್ತು 12 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗರಗಂದೂರಿನ ಜಮಾಅತ್ ಮತ್ತು ಉರೂಸ್ ಕಮಿಟಿಯ ಸದಸ್ಯರಾದ ಮುಸ್ತಫ ಸಖಾಫಿ, ಮಾ.9 ರಂದು ಜುಮಾ ನಮಾಜಿನ ಬಳಿಕ ಜಮಾಅತ್‍ನ ಉಪಾಧ್ಯಕ್ಷರಾದ ಎಂ.ಕೆ. ಮುಸ್ತಫಾ ಅವರ ಧ್ವಜಾರೋಹಣದೊಂದಿಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಮಾ.11 ರಂದು ಸಂಜೆ 7 ಗಂಟೆಗೆ ವಯನಾಡಿನ ಬಶೀರ್ ಅಬ್ದುಲ್ಲಾ ಸಖಾಫಿ ಅವರ ನೇತೃತ್ವದಲ್ಲಿ ನಾರಿಯತ್ ಸ್ವಲಾತ್ ವಾರ್ಷಿಕೋತ್ಸವ, ಬುರ್ಧಾ ಮಜ್ಲಿಸ್ ಹಾಗೂ ಮತಪ್ರಭಾಷಣ ನಡೆಯಲಿದ್ದು, ಮಾಸ್ಟರ್ ಶಮ್ಮಾಸ್ ಕಾಂದಪುರಂ “ಇಶಲ್ ವಿರುನ್ನ್” ನಡೆಸಿಕೊಡಲಿದ್ದಾರೆ.

ಅಂದು ರಾತ್ರಿ 8 ಗಂಟೆಗೆ ರಾಫಿ ಅಹ್‍ಸನಿ “ದಾರಿ ತಪ್ಪುತ್ತಿರುವ ಯುವ ಸಮೂಹ” ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಉಪ ಖಾಝಿ ಕೆ.ಎ. ಮಹಮ್ಮೂದ್ ಮಸ್ಲಿಯಾರ್ ಎಡಪಾಲ, ಗರಗಂದೂರು ಜಮಾಅತ್ ಅಧ್ಯಕ್ಷ ಕೆ. ಹನೀಫ್, ಸದರ್ ಮುಅಲ್ಲೀಂ ಸಿದ್ದೀಕ್ ಫಾಳಿಲಿ ಮತ್ತು ಸ್ವಲಾತ್ ಕಮಿಟಿ ಅಧ್ಯಕ್ಷ ಸುಲೈಮಾನ್ ಸಖಾಫಿ ಪಾಲ್ಗೊಳ್ಳಲಿದ್ದಾರೆ. 

ರಾತ್ರಿ 10 ಗಂಟೆಗೆ ಎರುಮಾಡು ತಂಙಳ್ ಸಯ್ಯದ್ ಇಲ್ಯಾಸ್ ಖಾಮಿಲ್ ಸಖಾಫಿ ಅಲ್ ಹೈದ್ರೋಸಿ ಅವರ ನೇತೃತ್ವದಲ್ಲಿ ನಾರಿಯತ್ ಸ್ವಲಾತ್ ದ್ಸಿಕ್ರ್ ದುಆ ಮಜ್ಲಿಸ್ ನಡೆಯಲಿದೆ ಎಂದರು.

ಮಾ.12 ರಂದು ಬೆಳಿಗ್ಗೆ 10 ಗಂಟೆಗೆ ಜಮಾಅತ್‍ನ ಪ್ರಧಾನ ಕಾರ್ಯದರ್ಶಿ ಎ.ಅಬ್ದುಲ್‍ರೆಹಮಾನ್ ಅವರ ಅಧ್ಯಕ್ಷತೆಯಲ್ಲಿ ಮೌಲೂದ್ ಪಾರಾಯಣದೊಂದಿಗೆ ಸಾರ್ವಜನಿಕ ಸಮಾರಂಭ ನಡೆಯಲಿದ್ದು, ಉದ್ಘಾಟನೆಯನ್ನು ಖತೀಬರಾದ ಅಬ್ದುಲ್ ರಝಾಕ್ ಸಅದಿ ನೆರವೇರಿಸಲಿದ್ದಾರೆ. ಟಿ.ವಿ. ಆಟಕೋಯ ತಂಙಳ್ ಆದೂರ್ ಹಾಗೂ ಎರುಮಾಡು ತಂಙಳ್ ಆಶೀರ್ವಚನ ನೀಡಲಿದ್ದಾರೆ. ರಾಜ್ಯದ ಸುನ್ನಿ ವಿದ್ವಾಂಸ ಅಬೂ ಸೂಫಿಯಾನ್ ಮದನಿಯವರು ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದ ಮುಸ್ತಫ ಸಖಾಫಿ, ಅಂದು ಮಧ್ಯಾಹ್ನ 3 ಗಂಟೆಗೆ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉರೂಸ್ ಸಮಿತಿಯ ಅಧ್ಯಕ್ಷರಾದ ಕೆ.ಹನೀಫ್, ಕಾರ್ಯದರ್ಶಿ ಎ.ಅಬ್ದುಲ್ ರೆಹಮಾನ್, ಸದಸ್ಯರಾದ ಸಿ.ಎಂ.ಉಮರ್ ಹಾಗೂ ಟಿ.ಎ.ಯೂಸುಫ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News