ಪತಿಯ ಸೇವೆ ಮಾಡುವುದು ನಿಜವಾದ ಸ್ತ್ರಿ ಧರ್ಮವಲ್ಲ: ಜ.ನ.ತೇಜಶ್ರೀ

Update: 2018-03-07 12:27 GMT

ಹಾಸನ, ಮಾ.7: ಪತಿಯ ಸೇವೆ ಮಾಡುವುದು ನಿಜವಾದ ಸ್ತ್ರಿ ಧರ್ಮವಲ್ಲ ಎಂದು ಸಾಹಿತಿ ಜ.ನ.ತೇಜಶ್ರೀ ಅಭಿಪ್ರಾಯಪಟ್ಟರು. 

ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ(ಸ್ವಾಯತ್ತ) ಸಭಾಂಗಣದಲ್ಲಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಆಯೋಜಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನ್ಯೂಯಾರ್ಕ್‍ನಲ್ಲಿ ಲಿಂಗ ತಾರತಮ್ಯದ ವಿರುದ್ದ ಆರಂಭವಾದ ಕಾರ್ಯ ಪ್ರವೃತ್ತಿಯನ್ನು ವಿಶ್ವದಾದ್ಯಂತ ಇಂದು ಮಹಿಳಾ ದಿನವೆಂದು ಆಚರಣೆ ಮಾಡಲಾಗುತ್ತಿದೆ. ಸ್ತ್ರೀ ಧರ್ಮವೆಂದರೇನು? ಎಂಬ ಪ್ರಶ್ನೆಯನ್ನು ಮೊದಲು ಸಮಾಜದಲ್ಲಿ ಎತ್ತಿದವರು ರಾಜರಾಂ ಮೋಹನ್ ರಾಯ್ ಅವರು ಎಂದರು.

ಪ್ರಸ್ತುತ ಸಮಾಜದಲ್ಲಿ ಮಹಿಳೆ ಸಬಲಳಾಗಿದ್ದು, ಆಕೆ ಏನೇ ಸಾಧನೆ ಮಾಡಬೇಕಿದ್ದಲ್ಲೂ ಅದಕ್ಕೆ ಪುರುಷನ ಮೊರೆ ಹೋಗಬೇಕಾಗಿದೆ. ಆದ ಕಾರಣ ಸ್ತ್ರಿ ಪುರುಷನ ಕೈಗೊಂಬೆಯಂತೆ ವರ್ತಿಸುತ್ತಿದ್ದು, ಪುರುಷನನ್ನು ಅವಲಂಬಿಸಿರುವುದು ಕಣ್ಮುಂದೆ ಗೋಚರಿಸುತ್ತಿದೆ. ಸತಿಸಹಗಮನ ಪದ್ಧತಿ ತೊಲಗಿದ್ದರೂ ಮಹಿಳೆಯರ ಸ್ಥಿತಿಗತಿಗಳು ಇಂದಿಗೂ ಸುಧಾರಣೆಯಾಗಿಲ್ಲ. ಇದಕ್ಕೆ ಇಂಬು ನೀಡುವಂತೆ ಸಮಾಜದಲ್ಲಿ ಅನೇಕ ಬಾಲ್ಯವಿವಾಹಗಳಂತಹ ಕೃತ್ಯಗಳು ನಡೆಯುತ್ತಲೇ ಇವೆ. 21ನೇ ಶತಮಾನದಲ್ಲಿ ನಾವುಗಳು ಜೀವಿಸುತ್ತಿದ್ದರೂ ನಮ್ಮ ದೇಶದಲ್ಲಿ ಬಾಲ್ಯವಿವಾಹದ ಪ್ರಮಾಣ ಕೇವಲ ಇಳಿಮುಖವಾಗಿದೆಯೇ ಹೊರತಾಗಿ ಸಂಪೂರ್ಣವಾಗಿ ಬಾಲ್ಯವಿವಾಹ ನಿಷೇಧವಾಗಿಲ್ಲ. ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧವಾದರೂ ಎಲ್ಲಾ ಆಸ್ಪತ್ರೆಗಳಲ್ಲಿಯೂ ಈ ಕಾರ್ಯ ನಡೆಯುತ್ತಲೇ ಇದೆ ಮತ್ತು ತಂದೆ ತಾಯಂದಿರು ಹೆಣ್ಣು ಮಗು ಜನಿಸಿದರೆ ಬೇಸರ ಪಡುವ ಸ್ಥಿತಿ ಇಂದಿಗೂ ನಿಂತಿಲ್ಲ. ಈ ಅನಿಷ್ಠ ಪದ್ಧತಿಗಳು ತೊಲಗಿದಾಗ ಮಹಿಳಾ ದಿನಾಚರಣೆ ಸಾರ್ಥಕತೆ ಕಂಡುಕೊಳ್ಳುತ್ತದೆ ಎಂದು ತಿಳಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ವಿಭಾಗದ ಮುಖ್ಯಸ್ಥ ಪ್ರೊ.ಎನ್.ಎಂ.ಲಕ್ಷ್ಮಣ್ ಅವರು, ದಶಕಗಳ ಹಿಂದೆ ಜಗತ್ತಿನಲ್ಲಿ ಶೇ.99ರಷ್ಟು ಪ್ರಾಣಿಗಳು ಶೇ.1ರಷ್ಟು ಮನುಷ್ಯರು ಭೂಮಿ ಮೇಲಿದ್ದರು. ಆದರೆ ಈಗ ಅದಕ್ಕೆ ಬದಲಾಗಿ ಶೇ.99ರಷ್ಟು ಮನುಷ್ಯರು ಶೇ.1ರಷ್ಟು ಪ್ರಾಣಿಗಳಿರುವುದನ್ನು ನೋಡಬಹುದು. ಅಂತೆಯೇ ಭಾರತದಲ್ಲಿ ಶೇ.65ಕ್ಕೂ ಹೆಚ್ಚು ಸಾಕ್ಷರತಾ ಪ್ರಮಾಣವನ್ನು ಮಹಿಳೆಯರಲ್ಲಿ ಕಾಣಬಹುದಾಗಿದೆ. ಆದರೂ ಮಹಿಳೆ ಒಂದಲ್ಲ ಒಂದು ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾಳೆ. ಇದರಿಂದ ಹೊರಬಂದು ಪುರುಷನಷ್ಟೇ ಮಹಿಳೆಯೂ ಸರಿ ಸಮಾನಳು ಎಂಬುದು ಎಲ್ಲೆಡೆಗೂ ತಿಳಿಯಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಜಿ.ಕೃಷ್ಣೇಗೌಡ ಅವರು, ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಇಲ್ಲಿಯವರೆಗೆ ಮಹಿಳೆಯರ ಸ್ಥಾನಮಾನ ಏರಿಳಿತವಾಗುತ್ತಿರುವುದನ್ನು ನೋಡಬಹುದು. ಆದರೂ ಧೃತಿಗೆಡದ ಮಹಿಳೆ ಎಲ್ಲಾ ಕ್ಷೇತ್ರದಲ್ಲಿಯೂ ತನ್ನನ್ನು ತೊಡಗಿಸಿಕೊಂಡು ಅಭಿವೃದ್ಧಿ ಹೊಂದುತ್ತಿದ್ದಾಳೆ. ಅಷ್ಟೇ ಅಲ್ಲದೇ ಪ್ರತಿ ಕ್ಷೇತ್ರದಲ್ಲಿಯೂ ಪುರುಷರಿಗಿಂತ ಮೇಲುಗೈ ಸಾಧಿಸುತ್ತಿರುವುದನ್ನು ಮನಗಾಣಬಹುದು. ಇದನ್ನು ಪ್ರತಿಯೊಬ್ಬರೂ ವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರೊ.ಶಿವಣ್ಣ, ಪ್ರೊ.ಮಂಜಮ್ಮ, ಪ್ರೊ.ಎಂ.ಬಿ.ಇರ್ಷಾದ್, ಉಪನ್ಯಾಸಕಿ ಎ.ವಿ.ರಶ್ಮಿ ಅರಕಲಗೂಡು ಹಾಗೂ ಪ್ರೊ.ಸೀಮಾ ಉಪಸ್ಥಿತರಿದ್ದು, ಉಪನ್ಯಾಸಕರಾದ ರಾಮಚಂದ್ರ, ಬನುಮ ಗುರುದತ್, ಉಮೇರ ಖಾನಂ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News