ಕರ್ನಾಟಕ ಚುನಾವಣೆ : ಉವೈಸಿ - ಜೆಡಿಎಸ್ ದೋಸ್ತಿ ?

Update: 2018-03-07 17:15 GMT

ಬೆಂಗಳೂರು,ಮಾ.7: ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಈಗ ಹೈದರಾಬಾದ್ ಮೂಲದ, ಸಂಸದ ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಮ್ ಪಕ್ಷದೊಂದಿಗೆ ಕೈಜೋಡಿಸುತ್ತಿದೆಯೇ? ಪಕ್ಷದ ಮೂಲಗಳ ಪ್ರಕಾರ ಹೌದು. 

ಅಸದುದ್ದೀನ್ ಕರ್ನಾಟಕ ಚುನಾವಣಾ ಕಣಕ್ಕೆ ತಮ್ಮ ಅಭ್ಯರ್ಥಿಗಳನ್ನು ಇಳಿಸುತ್ತಾರೆ ಎಂದು ಈಗಾಗಲೇ ಸುದ್ದಿಯಿದೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ಸಾಕಷ್ಟು ನಡೆದಿವೆ. ಈಗ ಅವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು ಹೊಸ ಸುದ್ದಿ ಬಂದಿದೆ. ಮೂಲಗಳ ಪ್ರಕಾರ ಜೆಡಿಎಸ್ ಹಾಗು ಉವೈಸಿ ನಡುವೆ ಮಾತುಕತೆ ನಡೆಯುತ್ತಿದೆ. ಅಸದುದ್ದೀನ್ ದೊಡ್ಡ ಸಂಖ್ಯೆಯ ಸೀಟುಗಳನ್ನು ತನ್ನ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂದು ಕೇಳಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. 

ಮೂರ್ನಾಲ್ಕು ಸೀಟುಗಳನ್ನು ಉವೈಸಿ ಪಕ್ಷಕ್ಕೆ ಬಿಟ್ಟು ಕೊಟ್ಟು ಉಳಿದೆಡೆ ಉವೈಸಿ ಪಕ್ಷದ ಪರ ನಿಲ್ಲುವಂತೆ ಮಾಡುವುದು ಜೆಡಿಎಸ್ ಲೆಕ್ಕಾಚಾರ ಎಂದು ಹೇಳಲಾಗಿದೆ. ಹೈದರಾಬಾದ್ ಕರ್ನಾಟಕ ಭಾಗದ ಜೆಡಿಎಸ್ ಅಭ್ಯರ್ಥಿಗಳೂ ಉವೈಸಿ ಜೊತೆ ಮೈತ್ರಿ ಮಾಡಿಕೊಂಡರೆ ತಮಗೆ ಲಾಭವಿದೆ ಎಂದು ಪಕ್ಷದ ನಾಯಕತ್ವವನ್ನು ಆಗ್ರಹಿಸಿದ್ದಾರೆ ಎಂದು ಹೇಳಲಾಗಿದೆ. 

ಉವೈಸಿಗೆ ಅಲ್ಪಸಂಖ್ಯಾತರಲ್ಲಿ ಜನಪ್ರಿಯತೆ ಇದೆ. ವೈಯಕ್ತಿಕ ವರ್ಚಸ್ಸೂ ಇದೆ. ಆದರೆ ಕರ್ನಾಟಕದಲ್ಲಿ ಅವರ ಪಕ್ಷ  ಸಂಘಟನೆಯಾಗಿಲ್ಲ. ತಳಮಟ್ಟದಲ್ಲಿ ಕಾರ್ಯಕರ್ತರಿಲ್ಲ.  ಹಾಗಾಗಿ ಅವರು ಇಲ್ಲಿ ಸ್ಪರ್ಧಿಸಿದರೆ ಅದರಿಂದ ಬಿಜೆಪಿಗೆ ಲಾಭ ಎಂದು ವಿಶ್ಲೇಷಿಸಲಾಗುತ್ತಿತ್ತು. ಅವರು ಬಿಜೆಪಿ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದೂ ಆರೋಪಿಸಲಾಗಿತ್ತು. ಈಗ ಅವರು ಜೆಡಿಎಸ್ ಜೊತೆ ದೋಸ್ತಿ ಮಾಡಿಕೊಳ್ಳುವ ಮಾತು ಪ್ರಬಲವಾಗಿ ಕೇಳಿ ಬರುತ್ತಿದೆ. ಅಂತಿಮವಾಗಿ ಏನಾಗಲಿದೆ ಎಂದು ಇಬ್ಬರ ನಡುವಿನ ಮಾತುಕತೆ ಪೂರ್ಣಗೊಂಡ ಬಳಿಕವೇ ಸ್ಪಷ್ಟವಾಗಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News